ಶನಿವಾರ, ಡಿಸೆಂಬರ್ 19, 2009

ಇರುಳ ದೀಪಕ್ಕೆ ನಮನ

[ಅರ್ಪಣೆ : ಕನಸಿಗೆ ರೆಕ್ಕೆ ಕಟ್ಟಿ, ಬಿದ್ದಾಗ ಹೆಗಲ ತಟ್ಟಿ, ಮನಸಿಗೆ ಹುರುಪ ತುಂಬಿ, ತನ್ನುಸಿರ ತುಂಬಾ ನನ್ನನ್ನೇ ಲಾಲಿಸಿ, ಒಲವಿನ ಪೈರು ಬೆಳೆಸಿದ ನನ್ನಿರುಳ ದೀಪ ಅಮ್ಮನಿಗೆ...]

ಅಮ್ಮ...,

ಜೀವನ ಪ್ರೀತಿಯಾ ಕೂಪ, ದಾರಿ ತೋರುವಾ ಸ್ತೂಪ
ಆ ದೇವಿಯಾ ನಿಜ ರೂಪ, ನೀನೊಂದು ಇರುಳ ದೀಪ...

ನಿನ್ನ ಬಗ್ಗೆ ಬರೆಯಲು ಬಹಳಷ್ಟು ಸಲ ನಾನು ಹವಣಿಸಿದ್ದಿದೆ. ಅನುಭೂತಿಯೊಂದರ ಬಗ್ಗೆ ಶಬ್ದಗಳಲ್ಲಿ ವರ್ಣಿಸಲಾರದೆ ನಾನೊಬ್ಬ ಬಾವಿಯೊಳಗಿನ ಕಪ್ಪೆಯಂತೆ ಅನಿಸುತ್ತಿತ್ತು. ಲೇಖನಿ ಹಿಡಿದು ಕುಳಿತಾಗಲೆಲ್ಲ ತೇವವಾದ ಕಣ್ಣುಗಳೊಂದಿಗೆ ಎದುರಿನ ಕಾಗದ, ಮಂಜಿನಲ್ಲಿ ಮುಸುಕಿದ ವಿಸ್ತಾರವಾದ ಬಯಲೊಂದರಂತೆ ಅನಿಸುತ್ತಿತ್ತು.

ತಾನು ನೊಂದು ತಿಳಿ ಬೆಳಕ ಬೀರುತಿದೆ ಒಂದು ಇರುಳ ದೀಪ ನಿಶ್ಚಲದ ಮೂರ್ತ ರೂಪ...

ಧಾರವಾಹಿ ಮುಕ್ತದ ಹಾಡಿನಿಂದ ಸ್ಪೂರ್ತಿಗೊಂಡು ಇರುಳ ದೀಪವೆಂಬ ಹೆಸರನ್ನು ನಿನಗೆ ಅನ್ವರ್ಥವಾಗಿ ಇಟ್ಟಿದ್ದಂತೂ ನಿಜ. H.S.Venkateshamurthy ಆ ಸಾಲುಗಳನ್ನು ಸ್ವತಂತ್ರತೆ(ಮುಕ್ತತೆ)ಯ ಬಗ್ಗೆ ಬರೆದಿರಬಹುದಾದರೂ, ಇರುಳ ದೀಪ ಎನ್ನುವ ಶಬ್ದ ಕೇಳಿದಾಗ ಮಾತ್ರ ಅಮ್ಮನನ್ನೇ ನೆನೆಸುವಂತಿತ್ತು. ನೀನು ಅನಿರ್ವಚನೀಯ ಎನ್ನುವುದು ನಿಜವಾದ್ರು, ನಿನ್ನ ವರ್ಚಸ್ಸಿಗೆ ಸಮೀಪವಾದ ಪದಪುಂಜಗಳನ್ನು, ನನ್ನೆದೆಯ ಮಿಡಿತಕ್ಕೆ ತಕ್ಕಂತೆ ಆರಿಸಿದ್ದೇನೆ.

ಜೀವದೊಳು ಜೀವ ಇರುವಾಗಲೇ ನೀ ನನಗೆ ಮುದ್ದು ಮಾಡುತ್ತಿದ್ದಿಯಲ್ಲ...
ನಿನ್ನ ಜೀವನ ಪ್ರೀತಿಯನ್ನು ಅಲ್ಲೇ ನೀ ಧಾರೆ ಎರೆದಿದ್ದೀಯಲ್ಲಾ...
ಅಲ್ಲೇ ಜೊಗುಳವನ್ನೂ ಹಾಡಿದ್ದೀಯಲ್ಲಾ...

ನೀನು ಖಾರ ತಿಂದ್ರೆ, ನನಗೂ ಖಾರವಾಗಬಹುದೆಂದು ನಿನಗಿಷ್ಟವಾದ ಖಾರವನ್ನೂ ತಿನ್ನುವುದು ಬಿಟ್ಟಿರಲಿಲ್ಲವೇ...?
ನಾನು ಚೆನ್ನಾಗಿ ಮಲಗಿರಬಹುದೇ, ಇಲ್ಲಾ... ಆಟವಾಡುತ್ತಿರಬಹುದೇ ಎಂದು ನೀ ಎಲ್ಲೆಂದರಲ್ಲಿ ಯೋಚಿಸುತ್ತಿರಲಿಲ್ಲವೇ...?
ನೀನು ಪುಟ್ಟಾ... ಎಂದು ಹೆಸರಿಟ್ಟು ಕೂಗಿದಾಗ ನಾನೂ ಹೂಂ ಗುಟ್ಟುತ್ತಿರಲಿಲ್ಲವೇ...

ನಿನ್ನೆದುರಿಗೆ ಬಂದ ನಂತರವಂತೂ ರಾಜ ಕುಮಾರನಂತೆ ನನ್ನ ಬೆಳೆಸಿದ್ದೀಯಲ್ಲಾ...
ನೀನುಣಿಸುತ್ತಿದ್ದ ಅಮೃತವದು ನನ್ನ ಸಿರಗಳಲ್ಲಿನ ಜೀವಕ್ಕೆ ಕಾರಣೀಭೂತವಾದುದು...
ನೀನು ಹೇಳುತ್ತಿದ್ದ ರಾಮಾಯಣ, ಮಹಾಭಾರತ ಕಥೆಯಂತು ಹಾಗೇ ನನ್ನ ಮನಸ್ಸಿನಲ್ಲಿ ಅಚ್ಚಳಿಯದೆ ಕುಳಿತಿದೆ ಅಮ್ಮಾ...

ನಾನು ಕೆಟ್ಟದಾಗಿ ಗಲೀಜು ಮಾಡಿದಾಗ, ಚೊಕ್ಕದಾಗಿ ಸ್ನಾನ ಮಾಡಿಸಿ...
ಕಣ್ಣ ತೀದಿ, ಹಣೆಯಲೊಂದು ತಿಲಕವಿರಿಸಿ, ಜೊತೆಗೊಂದು ದೃಷ್ಟಿ ಬೊಟ್ಟನ್ನೂ ಇಟ್ಟು...
ನಾನು ಪುಟ್ಟದಾಗಿ ನಕ್ಕಾಗ, ಕೆನ್ನೆಯ ಮೇಲೊಂದು ಹನಿ ಮುತ್ತನಿಟ್ಟು...

ನನ್ನ ಜೊತೆ ಆಟವಾಡಿ, ಊಟಮಾಡಿಸಿ, ಜೊತೆಯಲ್ಲೇ ಇದ್ದು ನನ್ನೆಲ್ಲ ಇಷ್ಟಗಳನ್ನು ಪೂರೈಸಿದ್ದೀಯಲ್ಲಾ...
ನನಗೆ ಹುಷಾರಿಲ್ಲದಾದಾಗ ನಿದ್ದೆಗೆಟ್ಟು ಕಣ್ಣಿಗೆ ಎಣ್ಣೆ ಹಾಕಿ ಕಾದಿದ್ದೀಯಲ್ಲ...
ಆಟವಾಡಿ ಮೈ ಕೈ ಗಾಯ ಮಾಡಿಕ್ಕೊಂಡಾಗ ಸುಶ್ರೂಷಿಸಿದವಳು ನೀನಲ್ಲವೇ...?

ಅಕ್ಕನ ಜೊತೆ ಜಗಳವಾದಾಗ ಸಂಧಾನವನ್ನೂ ಮಾಡಿಸುತ್ತಿದ್ದೀಯಲ್ಲಾ...
ನನಗಿಷ್ಟವಾದ ತಿಂಡಿಗಳನ್ನೇ ಮಾಡಿ ಸದಾ ನನ್ನ ಖುಶಿಗೊಳಿಸುತ್ತಿದ್ದವಳು ನೀನಲ್ಲವೇ...?
ಆ ದಿನ ನದೀದಡದಲ್ಲಿ ಗೇರುಬೀಜ(ಗೋಡಂಬಿ) ಸುಟ್ಟುಕೊಟ್ಟಿದ್ದಂತೂ ನೆನೆಯಲಾರದೆ ಇರಲಾರೆ ಅಮ್ಮಾ...

ಕಾಲೇಜು ದಿನಗಳಲ್ಲಿ ಬೆಳಿಗ್ಗೆ ಬೇಗನೆ ಹೋಗಬೇಕೆಂಬ ಕಾರಣಕ್ಕೆ, ನೀನು ನಾಲ್ಕು ಗಂಟೆಗೇ ಎದ್ದು ತಿಂಡಿ ಮಾಡುತ್ತಿದ್ದುದು ನೆನಪಾಗುತ್ತಮ್ಮಾ...
ಕೊಳೆಯಾದ ನನ್ನ ಬಟ್ಟೆಗಳನ್ನು, ಒಂದು ದಿನವೂ ನೀನು ಬೇಸರಿಸದೆ ಒಗೆದು ಹಾಕಿದ್ದೀಯಲ್ಲಾ...
ದೂರದೂರಿಗೆ ಕಾಲೇಜು ಸೇರುವಾಗ ಖುಶಿಯಾಗಿ ಕಳುಹಿಸಿದಳ ಮನಸಿನೊಳು ಬಿಕ್ಕುತ್ತಿದ್ದದ್ದು ನನಗೆ ಕೇಳಿಸುತ್ತಿತ್ತಮ್ಮಾ...

ಇರುಳಲ್ಲೇ ನಿಂತು ನೀ ನನ್ನ ಬಾಳಿನ ಬೆಳಕಿಗೆ ಕಾರಣವಾದೆ...
ಅಮ್ಮಾ..., ಈ ಋಣ ಯಾವ ಜನುಮದಲಿ ತೀರಿಸಲಮ್ಮಾ...?
ನೀ ಇರುಳ ದೀಪ...

ಬುಧವಾರ, ಡಿಸೆಂಬರ್ 9, 2009

ಎಂಜಿ ರೋಡಿನಲ್ಲಿ ಹೃದಯ ಮೀಟಿದವರಾರು...?

[ಅರ್ಪಣೆ : ನನ್ನ ಬ್ಲಾಗ್ ನಲ್ಲಿ ಹೊಸ ಬರಹಗಳನ್ನು ಕಾಣದಿರುವುದಕ್ಕೆ, ನನ್ನನ್ನು ಕಟಕಟೆಯಲ್ಲಿ ನಿಲ್ಲಿಸಿ, ಬರೆಯಲೇ ಬೇಕೆಂದು ತಾಕೀತು ಮಾಡಿ, ಬರಹಕ್ಕೆ ಉತ್ತಮ ತಳಹದಿಯನ್ನೂ ಶೀರ್ಷಿಕೆಯನ್ನೂ ನೀಡಿ, ಮಿತ್ರರಲ್ಲೊಬ್ಬರ ಕಥೆಯನ್ನೂ ಬರೆಯಲು ಅನುಮತಿಯನ್ನು ದೊರಕಿಸಿ ಕೊಟ್ಟ ನನ್ನ ಮೂವರು ಮಿತ್ರರಿಗೆ...]

ಅಮ್ಮಣ್ಣೀ...,

ಯಾಕೋ ನಿನ್ನ ಮದುವೆ ಕಳೆದ ನಂತರ ನನ್ನ ಮನಸು ಅಲ್ಲೋಲ-ಕಲ್ಲೋಲವಾಗಿದೆ. ನಿನ್ನ ಮದುವೆಯ ದಿನ ನಾನು ಬಂದಿದ್ದೆ ನಿಜ. ಆದರೆ ನನ್ನ ಮನ ನಿರ್ಭಾವುಕವಾಗಿತ್ತು. ಆ ರಾತ್ರಿ ಮನೆಗೆ ಹಿಂತಿರುಗಿದವನಿಗೆ ತಡೆಯಲಾಗಲಿಲ್ಲ, ಕಣ್ಣೀರ ಕೋಡಿ ಹರಿಸಿದ್ದೆ. ಮುಂದೆರಡು ದಿನಗಳ ತನಕ ಎಲ್ಲವೂ ಚೆನ್ನಗೇ ಇತ್ತು. ಆಮೇಲೆ ನನಗೆ ಮಂಕು ಕವಿದಿತ್ತು. ಮನಸು ಮುದುಡಿತ್ತು. ಕೆಲವೊಮ್ಮೆ ಭಾವೋತ್ಕಟತೆಗೆ ಸಿಲುಕಿ ಮನೆಯವರಿಗೆ, ಗೆಳೆಯರಿಗೆ ಕಿರಿಕಿಕಿಯಾಗುತ್ತಿತ್ತಂತೆ. ಮನೆಗೆ ಬಂದ ಬಂಧುಗಳೆಡೆಯಲ್ಲಿ ನನ್ನ ಮನೆಯವರು ಪೇಚಿಗೂ ಸಿಲುಕಿದ್ದರಂತೆ, ನನ್ನಿಂದಾಗಿ! ನೀನು ಬೇಸರಿಸದಿರು ಅಮ್ಮಣ್ಣೀ... ಸುಮಾರು ಒಂದು-ವರೆ ತಿಂಗಳಷ್ಟು ಕಾಲ ಡಾಕ್ಟರ್ ಸುಬ್ರಹ್ಮಣ್ಯಮ್ ಕೊಟ್ಟ ಔಷಧಿ ತೆಗೆದುಕ್ಕೊಂಡ ನಂತರ, ಈವಾಗ ನಾನು ಚೆನ್ನಾಗೇ ಇದ್ದೇನೆ...ಈಗ ನಿನಗೆ ಅರ್ಥವಾಗಿರ ಬೇಕು, ನಾನ್ಯಾಕೆ ಇಷ್ಟು ದಿನ ಈ ಬ್ಲಾಗ್ ಅಪ್ ದೇಟ್ ಮಾಡಿಲ್ಲಾ ಅಂತ.

ನನ್ನ ಬರಹದ ಶೀರ್ಷಿಕೆಯನ್ನು"ಎಂಜಿ ರೋಡಿನಲ್ಲಿ ಹೃದಯ ಮೀಟಿದವರಾರು?" ಅಂತ ಇರಿಸಬೇಕೆಂದು ಮಿತ್ರ ಕೂಟದಿಂದ ಅಪ್ಪಣೆಯಾಗಿತ್ತು. ಯಾಕೋ ಕೆಲವು ಒತ್ತಡಗಳಿಂದ ಬರೆಯಲಾಗಲಿಲ್ಲ, ಮಿತ್ರ ಕೂಟದಿಂದಲೇ ಒಬ್ಬರನ್ನು ಕಥಾ ನಾಯಕನ್ನ್ನಾಗಿ ಆಯ್ಕೆ ಮಾಡಿದ್ದೂ ಆಯ್ತು. ಆತನಿಗೆ ಮದುವೆಯ ವಯಸ್ಸು. ಹಾಗೆಂದು ತಪ್ಪಾಗಿ ಗ್ರಹಿಸದಿರಿ. ಈತನಿಗೆ ಅದರ ಹುಚ್ಚೇನೂ ಇಲ್ಲ! ಊರಿಂದ ಅವನ ಅಮ್ಮ ಫೋನ್ ಮಾಡಿ, ಹುಡುಗಿಯೊಬ್ಬಳ ವಿವರ ನೀಡಿ, ಆಕೆಯನ್ನು ನೋಡಿ ಬರಬೇಕೆಂದು ಹೇಳಿದ್ದರು. ಸರಿ, ಶನಿವಾರ ಬೆಳಿಗ್ಗೆ ಆಕೆಯ ಆಫೀಸಿನ ಮೆಟ್ಟಿಲಲ್ಲಿ ಕುಳಿತು ಈತ ಕಾದದ್ದೇ ಕಾದಿದ್ದು... ಸುಮಾರು ಹುಡುಗಿಯರು ಬಂದು ಹೋಗುತ್ತಿದ್ದರಂತೆ. ಆಕೆಯ ಮುಖ ದರ್ಶನ ಆಗಿರಲಿಲ್ಲ. ಒಬ್ಬನೇ ಹೊಗಿದ್ದರಿಂದ ಆಫೀಸಿನ ಒಳಗೆ ಹೋಗಿ ಆಕೆಯ ಬಗ್ಗೆ ಕೇಳಲು ಯಾಕೋ ಅಳುಕಾಗಿ, ಆಕೆಯನ್ನು ನೋಡದೇ 11 ಗಂಟೆಗೇ ಹಿಂತಿರುಗಿ ಬಂದಿದ್ದ. ನಾನು ಫೋನು ಮಾಡಿ "OKನಾ...?" ಅಂತ ಕೇಳಿದಾಗೆ "NOT OK" ಅಂದ. "ಯಕೋ? ಚೆನ್ನಾಗಿಲ್ವಾ?" ಅಂತ ಕೇಳಿದ್ರೆ, "ಅವಳು ಯಾರು ಅಂತಾನೇ ಗೊತ್ತಾಗಿಲ್ಲ..." ಅಂತ ಹಲ್ಲು ಕಿಸೀತಿದ್ದ. ಅನಿವಾರ್ಯವಾಗಿ ಆಕೆಯ ಆಫೀಸಿನೆಡೆಗಿನ ಎರಡನೆಯ ಸವಾರಿಯಲ್ಲಿ ಆತನೊಂದಿಗೆ ನಾನು ಹೊರಡಬೇಕಾಯಿತು. ಜೊತೆಗೊಬ್ಬರಿದ್ದುದರಿಂದ ಆತ ಸ್ವಲ್ಪ ಧೈರ್ಯ ತಾಳಿ, ಆಕೆಯ ಆಫೀಸ್ ನೊಳಗೆ ಹೋಗಿ, ಅಕೆಯನ್ನು ಮಾತನಾಡಿಸಿದ್ದು, ಆಕೆಯ ನಗುವಿನಲ್ಲಿ ಆತ ಪುಳಕಿತ ಗೊಂಡಿದ್ದು... ಆಕೆಯ ಅನನ್ಯವಾದ ಕಂಗಳಲ್ಲಿ ಆತ ಹೊಳಪ ಕಂಡಿದ್ದು... ಆಕೆಯ ಸರಳತೆಯ ಸಮ್ಮೋಹನದಲ್ಲಿ ಆತ ಕ್ಲೀನ್ ಆಗಿ ಬೌಲ್ಡ್ ಆದದ್ದು... ಆಕೆಯ ಮಾತಿನ ಹೊನಪಲ್ಲಿ, ಆತ ವೀಣೆಯ ಇಂಪನ್ನು ಕೇಳಿದ್ದು... ಹಿಂತಿರುಗಿ ಬರುವಾಗ ಆತ ತುಂಬಾ excite ಆಗಿರುವುದರಿಂದ ಬೈಕ್ ರೈಡ್ ಮಾಡಲು ನನಗೊಪ್ಪಿಸಿ, ಆತ ಕನಸು ಕಾಣುತ್ತಿದ್ದುದು...!!

ನಾನು ಅಂದ್ಕೊಳ್ತಿದ್ದೆ, ಅಮ್ಮಣ್ಣಿ... ನೀನು ದೂರವಾದಾಗಿನಿಂದ ಬರಿದಾದ ಆ ಸ್ಥಾನಕ್ಕೆ ಯಾರಾದ್ರು ತುಂಬ ಬೇಡ್ವಾ.. ಅಂತ... ಎಷ್ಟು ದಿನ ಅಂತ ಹೀಗೆ ನಿನ್ನ ತೆರವನ್ನು ನಾ ಸಹಿಸಲಿ?

ಕಳೆದ ಸೋಮವಾರ, ಕೆಲಸವೆಲ್ಲ ಮುಗಿಸಿ ಆಫೀಸಿನಿಂದ ಮನೆ ಕಡೆ ಹೋಗುವವನಿದ್ದಾಗ, ಅಚಾನಕ್ ಆಗಿ ನನ್ನ ಇ-ಮೇಲ್ ಗೆಳತಿಯಿಂದ ಫೋನ್ ಕಾಲ್. "ನಾನು ಗಾಂಧೀಬಜಾರಲ್ಲಿದ್ದೇನೆ. ಸಾಧ್ಯವಾದರೆ ಮೀಟ್ ಮಾಡೋಣ ಅಂತ". ಆಕೆ ಬರಹಗಾರ್ತಿ. ಆಕೆಯ ಅಕ್ಷರಗಳೇ ಮುದ್ದು ಮುದ್ದು. ಮೊಲದ ಮರಿಯಷ್ಟು ಮುದ್ದು... ಆಕೆಯ ಮಾತಿನ ಮೋಡಿಯೇ ಹಾಗೆ, ಆಗ ತಾನೇ ಅರಳಿದ ಮಲ್ಲಿಗೆಯ ಮೊಗ್ಗಿನಂತೆ... ಹಾಗೇ ಬೈಕ್ ಗೆ ಪೆಟ್ರೊಲ್ ಹಾಕ್ಕೊಂಡು ಗಾಂಧೀಬಜಾರ್ ಕಡೆ ಬಂದ್ರೆ, ಲೇಡೀಸ್ ವೇರ್ ಹೌಸ್ ಹತ್ರ, ನನ್ನ ಗೆಳತಿಯ ಜೊತೆ, ನನ್ನ ಗೆಳತಿಯ-ಗೆಳತಿಯೂ ಇದ್ದುದು ಒಂದು ಥರ ಮುಜುಗರ, ಖುಷಿ, ಈರ್ಷೆ ಎಲ್ಲವನ್ನೂ ನೀಡೀತು...


ನನ್ನ ಗೆಳತಿ ಜೀನ್ಸ್ ಮತ್ತು ಪಿಂಕ್ T-shirt ನಲ್ಲಿ ಕಂಗೊಳಿಸುತ್ತಿದ್ದರೆ, ಆಕೆಯ ಗೆಳತಿ ಶ್ವೇತವರ್ಣದ ಚೂಡಿಯಲ್ಲಿ ಮಲ್ಲಿಗೆಯ ಕಂಪಿನ ಜೊತೆ ಬಂದಿದ್ದಳು...
ನನ್ನ ಗೆಳತಿಯದು ಶುಭ್ರನಗು(ಖಂಡಿತವಾಗ್ಲೂ ಆಕೆ ಸ್ಮಿತವದನೆಯೇ!), ಆಕೆಯ ಗೆಳತಿಯದು ಮುಗ್ಧವಾದ ನಗು...
ನನ್ನ ಗೆಳತಿಯೋ ಮಾತಿನಲಿ ಬಲು ಚತುರೆ ಹಾಗೂ ಚಟಾಕಿ ಹಾರಿಸುವವಳಾದರೆ, ಆಕೆಯ ಗೆಳತಿ ಸ್ನೇಹಿತರ ಹೃದಯದ ಮಿಡಿತಕ್ಕೆ ಸ್ಪಂದಿಸುವ ನಂದಾದೀಪದಂತಿದ್ದಳು...
ನನ್ನ ಗೆಳತಿ ಅತ್ತ ಇತ್ತ ಕಣ್ಣ ಹೊರಳಿಸಿ, ಮರಿ ಜಿಂಕೆಯಂತೆ ಪುಟಿಯುತ್ತಿದ್ದರೆ, ಆಕೆಯ ಗೆಳತಿ ಒಲವಿನ ತೋರಣ ಕಟ್ಟಿ, ರೆಕ್ಕೆ ಬಿಚ್ಚಿ ಹಾರುವ ಪಾತರಗಿತ್ತಿಯಂತೆ ಕಂಡಳು...

ನನ್ನ ಗೆಳತಿಯ ಮಾತಿನ ಮೋಡಿಗೆ ನಾ ಮರುಳಾದರೆ, ಆಕೆಯ ಗೆಳತಿಯ ಕುಡಿ ನೋಟಕ್ಕೆ ನಾ ಸೋತೆ...
ನನ್ನ ಗೆಳತಿಯ ಪಿಕಿಲಾಟದ ವೈಖರಿಗೆ ನಾ ಮರುಳಾದರೆ, ಆಕೆಯ ಗೆಳತಿಯ ತುಟಿಯಂಚಿನ ನಗುವಿಗೆ ನಾ ಸೋತೆ...
ನನ್ನ ಗೆಳತಿಯ ಹೆಜ್ಜೆಯ ಮಿಡಿತಕ್ಕೆ ನಾ ಮರುಳಾದರೆ, ಆಕೆಯ ಗೆಳತಿಯ ಗೆಜ್ಜೆಯ ಸದ್ದಿಗೆ ನಾ ಸೋತೆ...
ನನ್ನ ಗೆಳತಿಯ ಹೃದಯವಂತಿಕೆಗೆ ನಾ ಮರುಳಾದರೆ, ಆಕೆಯ ಗೆಳತಿಯ ಮನಸಿನ ಆರ್ಧ್ರತೆಗೆ ನಾ ಸೋತೆ...

ಅಮ್ಮಣ್ಣೀ..., ಸಣ್ಣವರಿದ್ದಾಗ ಹುಡುಕುವ ಆಟ ಆಡುವಾಗ ನಮ್ಮನೆ ಅಟ್ಟಕ್ಕೆ ಹತ್ತಿ, ಕೆಳಗಿಳಿಯುವಾಗ ನೀನು ಜಾರಿ ಬಿದ್ದು, ಏಣಿಯ ಮೆಟ್ಟಿಲು ಮುರಿದು, "ತಕಟ್ ಧಂ..." ಅಂತ ದೊಡ್ಡ ಸದ್ದಾಗಿ, ಅಮ್ಮ "ಏನದು ಸದ್ದು?" ಅಂತ ಬೈದು, ಬಿದ್ದಿದ್ದು ನೀನು ಅಂತ ಗೊತ್ತಾದಾಗ "ತಕಟ್ ಧಿಮ್ಮಿ.. ಸ್ವಲ್ಪ ಮೆಲ್ಲಗೆ ಇಳೀ ಬಾರ್ದಾ..." ಅಂತ ಸಮಧಾನಿಸಿದ್ದು ಎಲ್ಲ ನೆನಪಾಗ್ತಿದೆ... ಆಮೇಲೆ "ತಕಟ್ ಧಿಮ್ಮಿ..." ಅಂತನೇ ನಿನ್ನನ್ನು ಎಲ್ಲರೂ ಕರೆಯತೊಡಗಿದ್ದು, ವಿಪರ್ಯಾಸ...!

ಹಾಗೇಯೇ ಈವಾಗ ಯಾರೋ ನನ್ನೆದೆಯ ಮೆಟ್ಟಿಲನ್ನು "ತಕಟ್ ಧಂ..." ಅಂತ ಮುರಿದುಬಿಟ್ಟಿದ್ದಾರೆ. ಆಕೆಯನ್ನೂ, ನಾ ತಕಟ್ ಧಿಮ್ಮಿ ಅಂತಾನೇ ಕರೆಯಲೇ?


ಸಂಜೆಯ ಮಬ್ಬಿನ ಬೆಳಕಿನಲಿ
ನನ್ನ ಹೃದಯಕ್ಕೆ ಸದ್ದಿಲ್ಲದೆ
ಯಾರೋ ಲಗ್ಗೆ ಇಡುತ್ತಿದ್ದಾರಲ್ಲಾ...

ನನ್ನ ಹೃದಯ-ವೀಣೆಯ ತಂತಿಯನ್ನು
ನನ್ನ ಅನುಮತಿ ಇಲ್ಲದೆ
ಯಾರೋ ಮೀಟುತ್ತಿದ್ದಾರಲ್ಲಾ...

ಸೋಮವಾರ, ಸೆಪ್ಟೆಂಬರ್ 7, 2009

ನನ್ನ ಕಣ್ಣಿನೊಳಗೆ ನೀ ಇಣುಕಿ ನೋಡಬಹುದಿತ್ತಲ್ಲ?


ಆಗ ನಾನು ೭-೮ನೇ ತರಗತಿಲ್ಲಿದ್ದಿರಬೇಕು. ಅದೊಂದು ಆಗಸ್ಟ್ ತಿಂಗಳ ಶನಿವಾರ. ಶಾಲೆಯಲ್ಲಿ ಸ್ವತಂತ್ರೊತ್ಸವದ ಅಂಗವಾಗಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ದೇಶಭಕ್ತಿ ಗೀತೆ ಹಾಡಿ ಅಮ್ಮಣ್ಣಿ ಬಹುಮಾನ ಪಡೆದು ಬೀಗಿದ ದಿನ. ಅದೇ ಸ್ಪರ್ದೆಯಲ್ಲಿ ನಾನೂ ಹಾಡಿದ್ದರೂ, ಮಳೆಗಾಲ ಆದಿಯಲ್ಲಿ ಮಳೆಯ ಮುನ್ಸೂಚನೆ ಪಡೆದ ಕಪ್ಪೆಗಳು ವಟಗುಟ್ಟುವಂತೆ ಕೇಳಿಸುವ ನನ್ನ ಧ್ವನಿಯಿಂದ ತೀರ್ಪುಗಾರರೆಲ್ಲ ಮುಖ ಸಿಂಡರಿಸಿದ್ದು ನೆನಪಿದೆ. ಅಮ್ಮಣ್ಣೀ..., ನೀ ಪಡೆದ ಬಹುಮಾನವನ್ನು ನನಗೆ ತೋರಿಸಿ ತುಂಟ ನಗೆ ನಕ್ಕಿದ್ದಕ್ಕೆ ನನಗೆ ವಿಪರೀತ ಕಿರಿ ಕಿರಿ ಎನಿಸಿ ನಿನ್ನ ಜೊತೆ ಮತನಾಡದೇ ಠೂ ಬಿಟ್ಟಿದ್ದು ನೆನಪಾಗ್ತಿದೆ... ಒಂದು ವಾರ ನಿನ್ನ ಬಿಟ್ಟು ನಾನೊಬ್ಬನೇ ಶಾಲೆಗೆ ಹೋಗುವುದು, ಬರುವುದು ಮಾಡ್ತಿದ್ದೆ. ಆ ಒಂದು ವಾರ ನಾ ಹೇಗೆ ಕಳೆದೆ ಎಂದು ಮಾತ್ರ ಕೇಳಬೇಡ... ರಾತ್ರಿ ತಲೆದಿಂಬಿನೊಳಗೆ ಕಣ್ಣೀರ ಕೋಡಿ ಹರಿಸ್ತಿದ್ದೆ.
ಒಂದು ವಾರದ ನಂತರದ ಒಂದು ಶನಿವಾರ ಬೆಳಿಗ್ಗೆ ೮ರ ಹೊತ್ತಿಗೆ ನನ್ನ ಮನೆಗೆ ಬಂದಿದ್ದೆ. ನಾನು ಮಲಗೇ ಇದ್ದೆ. ಅಮ್ಮ ಬಂದು ಹೊದಿಕೆ ಕಿತ್ತು "ಹೊತ್ತು ನೆತ್ತಿಗೇರಿದೆ... ತಕಟ್ ಧಿಮ್ಮಿ ಬಂದಿದ್ದಾಳೆ... ಅವಳ್ ಎಷ್ಟು ಬೇಗ ಏಳ್ತಾಳೆ ನೋಡು... ". ನನ್ನಮ್ಮ ಇಟ್ಟ ಹೆಸರಲ್ವಾ ಅದು? ತಕಟ್ ಧಿಮ್ಮಿ...ನನ್ನಮ್ಮ ಮಾತ್ರವಲ್ಲ ಇನ್ನೂ ಹಲವರು ಹಾಗೇ ಕರಿತಿದ್ರು ನಿನ್ನ...ಸೀದ ನನ್ನ ಕೋಣೆಗೆ ಬಂದವಳೇ ಕೈಯಲ್ಲಿದ್ದ ಕುಂಟಾಂಗಿರ ಹಣ್ಣು(ನೇರಳೆ ಹಣ್ಣಿನ ಹಾಗೇ, ಗಾತ್ರದಲ್ಲಿ ಚಿಕ್ಕದು) ತೋರಿಸಿ "ಕೋಪಾನಾ...?" ಅಂದೆ.ಮುಖ ಆಚೆ ಮಾಡಿ ಮಗ್ಗಲು ತಿರುಗಿಸಿದೆ... ಆಮೇಲೆ ನೀ ನನ್ನ ಪಕ್ಕದಲ್ಲಿ ಕುಳಿತು ಕಂಬನಿ ಮಿಡಿದಾಗ ಆರ್ದ್ರವಾದವನು ನಾನು... ಇನ್ನೂ ಹಲ್ಲುಜ್ಜದಿದ್ದರೂ, ನೀ ಕೊಟ್ಟ ಕುಂಟಾಂಗಿರ ಹಣ್ಣಿನ ರುಚಿ ನೋಡಿದ್ದು ನೆನಪಾಗ್ತಿದೆ...
ಸ್ವಲ್ಪ ಹೊತ್ತು ಅದೂ ಇದೂ ಮಾತಾಡಿ ಸಿಟ್ಟೆಲ್ಲ ಇಳಿಸಿದ ಮೇಲೆ ಮೆಲ್ಲನೆ ನನ್ನ ಕೈ ಹಿಡಿದೆಳೆದು ದೇರಳೆ ಬೆಟ್ಟಕ್ಕೆ ಹೋಗಿ ನೆಲ್ಲಿಕ್ಕಾಯಿ ತರೋಣ ಅನ್ನುವ ಪ್ಲಾನ್ ಹಾಕಿದ್ದು ನೀನೇ ಅಲ್ವಾ...? ಮತ್ತೊಂದೆರಡು ನಿಮಿಷಕ್ಕೆ ಪ್ರಾತರ್ವಿಧಿಗಳನ್ನು ಮುಗಿಸಿ ಜೊತೆಗೇ ಕುಳಿತು ತಿಂಡಿ ತಿಂದದ್ದು, ಅಮ್ಮನಲ್ಲಿ ನಮ್ಮ ಪ್ಲಾನ್ ಹೇಳಿದಾಗ ಬೈಸಿಕ್ಕೊಂಡದ್ದು, ನಾನು ಅಮ್ಮನಲ್ಲಿ ಮುನಿಸಿಕ್ಕೊಂಡದ್ದು, ಆಮೇಲೆ ಅಮ್ಮ ದೇರಳೆ ಬೆಟ್ಟಕ್ಕೆ ಹೋಗಲು ಒಪ್ಪಿಗೆ ಕೊಟ್ಟಿದ್ದು...
೩ ಕಿಲೋಮೀಟರ್ ಗಳ ನಡಿಗೆಯ ನಂತರ ಬೆಟ್ಟದಲ್ಲಿರುವ ನೆಲ್ಲಿಕ್ಕಾಯಿ ಮರಗಳ ಮೇಲೆ ಹತ್ತಿ ಸಾಧ್ಯವಾದಷ್ಟು ಕಾಯಿಗಳನ್ನು ಕೊಯ್ದು ಖುಶಿ ಪಟ್ಟೆವು. ಇನ್ನೇನು ಹೊರಡಬೇಕುನ್ನುವಾಗ ಪಕ್ಕದಲ್ಲೇ ಪೊದೆಗಳಂಚಿನಲ್ಲಿ ಹಾವೊಂದು ಕಂಡು, ನಿನ್ನ ಕೈ ಹಿಡಿದೆಳೆದದ್ದು...ಬೆಟ್ಟ ಕೆಳಗಿಳಿಯುವಾಗ ನೀನು ಜಾರಿ ಬಿದ್ದದ್ದು, ಕೈ ಕಾಲಿಗೆ ಪರಚಿದ ಗಾಯ ಮಡ್ಕೊಂಡದ್ದು... ಕೈಹಿಡಿದೆಬ್ಬಿಸಿದಾಗ ನನ್ನ ತೋಳಿಗಾಸರೆಯಾಗಿ ನಿಂತು ಸುಧಾರಿಸಿಕ್ಕೊಂಡದ್ದು...
ಮುಂದೊಂದು ದಿನ ಶಾಲೆಗೆ ಜೊತೆಯಲ್ಲಿ ಹೋಗುವಾಗ ಕಾಲು ದಾರಿಯ ಪಕ್ಕದಲ್ಲೇ ಇದ್ದ ದೊಡ್ಡ ಮರವೊಂದರಲ್ಲಿದ್ದ ಬಳ್ಳಿಯಲ್ಲಿ ಕಂಡ ನೀಲಿ ಬಣ್ಣದ ಹೂವನ್ನು ನೀನು ಆಸೆ ಪಟ್ಟದ್ದು...ನಾನು ಅದು ಹೇಗೋ ಮರ ಹತ್ತಿ ಆ ಹೂವ ಕೊಯ್ದು ನಿನ್ನ ಮುಡಿಗೇರಿಸಿದ್ದು...!
ಸ್ವಾರಸ್ಯವೆಂದರೆ... ಆ ಮರ ಹತ್ತಿ, ಹೂವ ಕಿತ್ತಿದ್ದೆ... ಆದರೆ ಪಕ್ಕದಲ್ಲೇ ಜೇನುಗೂಡೊಂದು ಇತ್ತು...ಅವುಗಳಿಗೇನೂ ನೋವಾಗಿರಬೇಕು... ಮೂರ್ನಾಲ್ಕು ಜೇನು ಹುಳಗಳು ನನ್ನ ಮುಖಕ್ಕೆ ಮುತ್ತಿಕ್ಕಿದ್ದವು. ಅದು ಹೇಗೋ ಮರದಿಂದ ಕೆಳಗಿಳಿದಾಗ ನನ್ನ ಮುಖ ಊದಿಕ್ಕೊಂಡಿತ್ತು, ಸ್ವಲ್ಪ ಸಮಯದ ನಂತರ ಕಣ್ ರೆಪ್ಪೆ ಗಳೆರಡೂ ಮುಚ್ಚುವಷ್ಟು ಮುಖ ಊದಿಕ್ಕೊಂಡಿತ್ತು... ಆ ನೋವಿನಲ್ಲಿ ಹೂವನ್ನು ನಿನಗೆ ಕೊಟ್ಟೆನೋ ಇಲ್ಲವೋ ಅಂತ ನನಗೆ ಸರಿಯಾಗಿ ನೆನಪಿಲ್ಲ ಅಮ್ಮಣ್ಣೀ...
ಆ ನೋವಿನಂತೆ ಈಗ, ನೀ ನನ್ನ ಅರ್ಥ ಮಾಡದೆ ಹೋದೆಯಲ್ಲ ಅನ್ನುವ ನೋವು ಕಾಡುತ್ತಿದೆ ಅಮ್ಮಣ್ಣೀ...

ನಿನ್ನಲ್ಲಿ ನೇರವಾಗಿ ನಾ ಹೇಳದಿರಬಹುದು...
ಆದರೂ, ನನ್ನ ಉಸಿರೊಳಗೆ ನೀ ಹುಡುಕಬಹುದಿತ್ತಲ್ಲ್ಲ?
ನನ್ನ ಮಾತಲ್ಲಿ ನೀ ಕಾಣದಿರಬಹುದು...
ಆದರೂ, ನನ್ನ ಕಣ್ಣೊಳಗೆ ನೀ ಇಣುಕಿ ನೋಡಬಹುದಿತ್ತಲ್ಲ?

ಭಾನುವಾರ, ಆಗಸ್ಟ್ 23, 2009

ಒಂಟಿತನದ ಕಾವಲಲ್ಲಿ...


ರಾಜರಾಜೇಶ್ವರಿ ದೇವಸ್ಥಾನದ ಪಕ್ಕದ ಬೀದಿಯಲ್ಲಿರುವ ವಿಶ್ವನಿಕೇತನ ಸಭಾಭವನ. ಮಂಗಳವಾರದ ಬೆಳಿಗ್ಗೆ ೯:೦೦ ರ ಮಂಗಳಕರಮಯ ಸಮಯ. ಅಮ್ಮಣ್ಣಿ ಇನ್ನೂ ಹಸೆಮಣೆಯ ಮೇಲೆ ಬಂದಿರಲಿಲ್ಲ, ಶ್ವೇತವರ್ಣದ ಪಂಚೆಯುಟ್ಟು, ಮೈ ಮೇಲೆ ಧೋತಿ ಮತ್ತು ತಲೆ ಮೇಲೆ ಪೇಟ ತೊಟ್ಟಿದ್ದ ವಿಕಾಸ್ ಒಬ್ಬರೇ ಕುಳಿತು ಪುರೋಹಿತರು ಮಾಡಿಸುತ್ತಿದ್ದ ಹೋಮದ ಧೂಪ ತಿನ್ನುತ್ತಾ ಎಡಗೈ ಬೆರಳುಗಳನ್ನು ಸುರುಟಿಕ್ಕೊಂಡು ಬಾಯಿ ಮೇಲೆ ಇಟ್ಟು ಮೆಲ್ಲನೆ ಕೆಮ್ಮುತ್ತಿದ್ರು. ಗಂಡು ಮತ್ತು ಹೆಣ್ಣಿನ ಕುಟುಂಬದವರು ಮತ್ತು ಆತ್ಮೀಯರು ಮಾತ್ರ ಬಂದಿದ್ದರು. ಬಹುಶ: ಊಟದ ಹೊತ್ತಿಗೆ ಮಿಕ್ಕವರೆಲ್ಲಾ ಬರಬಹುದು. ಪರಿಚಿತರಾದ ಅನೇಕರಲ್ಲಿ ಕುಶಲೋಪರಿ ನಡೆಸಿ, ಹಿಂದಿನ ಸಾಲಿನಲ್ಲಿ ಗೆಳೆಯ ಗಣೇಶನ ಜೊತೆ ಮಂದಸ್ಮಿತನಾಗಿ ಕುಳಿತಿದ್ದೆ. ಅದೂ ಇದೂ ಅಂತ ಮಾತಾಡುತ್ತಿದ್ದೆವು. ನನ್ನ ಮತ್ತು ಅಮ್ಮಣ್ಣಿಯ ಒಡನಾಟ ಒಳಪಟ್ಟಂತೆ ಬಹುತೇಕ ನನ್ನ ಅಂತರಂಗದ ವಿಶಯಗಳು ಆತ್ಮೀಯ ಗೆಳೆಯ ಗಣೇಶನಿಗೆ ಗೊತ್ತು.
ನಮ್ಮ ಮಾತುಕತೆಯ ನಡುವೆ ಹೊರ ಹೋಗೋಣ ಅಂತ ಹೇಳಿದೆ. ಅವನಿಗೆ ನನ್ನ ಮನದ ಇಂಗಿತ ಅರ್ಥ ಆಗಿದ್ದರಿಂದ ಅವನೇ ಮೊದಲು ಎದ್ದು ಹೊರ ಹೋಗಲು ಅನುವಾದ, ಜೊತೆಗೆ ನಾನೂ. ಹಿಂದಿನ ದಿನ ಹಿತವಾಗಿ ಮಳೆ ಬಂದಿದ್ದರಿಂದ ಧೂಳಿಲ್ಲದ ರಸ್ತೆ ಮೇಲೆ ವಾಹನಗಳು ಓಡಾಡುತ್ತಿದ್ದವು.
"ಬಾಲ್ಕನಿ ಮೇಲೆ ಹೋಗೋಣವಾ?" ಗಣೇಶ ನನ್ನನ್ನು ಕೇಳಿದ. ನಾನು ಹೂಂಗುಟ್ಟಿದೆ.
ಬಾಲ್ಕನಿಯ ಮೇಲೆ ಐದಾರು ಪ್ಲಾಸ್ಟಿಕ್ ಕುರ್ಚಿಗಳು, ಯಾರೋ ಬೆಳಗಿನ ತಿಂಡಿ ಕಾಫಿ ಕುಡಿದ ಪ್ಲೇಟುಗಳು, ಹಗುರವಾಗಿ ಯಾರ ಪರಿವೆಯೂ ಇಲ್ಲದೆ ಮನ ಬಂದಲ್ಲಿಗೆ ಹಾರಾಡುವ ಮೋಡಗಳ ನಡು ನಡುವೆ ಆವಾಗಾವಾಗ ಇಣುಕುವ ಸೂರ್ಯನ ಕಿರಣ, ಯಾವ ಉದ್ವೇಗವೂ ಇಲ್ಲದೆ ಹದವಾಗಿ ಬೀಸುವ ಗಾಳಿ.ಕಣ್ಣಳತೆಯ ದೂರದ ಮಾಧ್ಯಮಿಕ ಶಾಲೆಯೊಂದರಲ್ಲಿ ಸಮವಸ್ತ್ರದಲ್ಲಿದ್ದ ೨೦೦ ರಷ್ಟಿದ್ದ ಮಕ್ಕಳ ಗುಂಪೊಂದು ಸಾಲಾಗಿ ನಿಂತು ಅದೇನೋ ಗುನುಗುತ್ತಿತ್ತು. ಕಿವಿ ನಿಮಿರಿಸಿದೆ, ಆದರೂ ಅರ್ಥವಾಗಲಿಲ್ಲ; ಪ್ರತಿಜ್ನೆ ಇರಬಹುದೇನೋ.
ಕುರ್ಚಿಯಲ್ಲಿ ಕುಳಿತಾಗ ಪಕ್ಕದಲ್ಲೇ ಕಂಬಕ್ಕೆ ಅಲಂಕಾರಕ್ಕಾಗಿ ಇರಿಸಿದ್ದ ಬಳ್ಳಿಯೊಂದು ನನ್ನ ಕಿವಿಯ ಕೆಳಭಾಗಕ್ಕೆ ಕೆನ್ನೆಯನ್ನು ಸವರಿ, ಏನೋ ಒಂಥರಾ ಮುದ ನೀಡಿತು. ನನ್ನ ಮನದ ದುಗುಡವನ್ನು ನೇವರಿಸಿ ಸಾಂತ್ವನ ನೀಡಿದಂತೆ, ಆ ಕ್ಷಣಕ್ಕೆ ಆ ಬಳ್ಳಿಯ ಮೇಲೆ ಆಪ್ಯಾಯಮಾನವಾಗಿ, ಚಳಿಗಾಲದ ಮುಂಜಾವುಗಳಲ್ಲಿ ಎಲೆಯ ಮೇಲಿನ ಮಂಜಿನ ಹನಿಯಂತೆ ಎಡಗಣ್ಣಿನ ಅಂಚಿನಿಂದ ಒಂದೇ ಒಂದು ಹನಿ ಮೆಲ್ಲನೆ ಜಿನುಗಿತು.
ಆಗ ನಾನು ಏಳನೇ ತರಗತಿ. ನನ್ನ ಮತ್ತು ನಿನ್ನ ಮನೆ ಒಂದೆರಡು ಫರ್ಲಾಂದು ದೂರ ಮಾತ್ರವಿದ್ದುದರಿಂದ ಒಂದುವರೆ ಕಿಲೋಮೀಟರ್ ದೂರದ ಶಾಲೆಗೆ ನಾವಿಬ್ಬರೂ ಜೊತೆಯಾಗಿ ನಡೆದು ಹೋಗುವ ರೂಢಿಯಾಗಿತ್ತು. ತಿಂಗಳ ಯಾವುದೆಂದು ನೆನಪಾಗುತ್ತಿಲ್ಲ, ಅದೊಂದು ಶುಕ್ರವಾರ. ಮಿಕ್ಕೆಲ್ಲ ದಿನಗಳಲ್ಲಿ ಶಾಲಾ ಸಮವಸ್ತ್ರ ಕಡ್ಡಾಯವಾದ್ದರಿಂದ, ಶುಕ್ರವಾರ ಮಾತ್ರ ಬಣ್ಣದ ವಸ್ತ್ರಗಳ ಮೊರೆ ಹೋಗಬಹುದಿತ್ತು. ನೀನು ಆವತ್ತು ಬಿಳೀ ಬಣ್ಣದ ಚೂಡಿದಾರ-ಧಾರಿಯಾಗಿ ಹೊರಟಿದ್ದಿ. ಉದ್ದನೆಯ ಕೇಶಕ್ಕೆ ಎರಡು ಜಡೆಯ ಹಾಕಿ ಮೇಲಗಡೆ ನಸು ಕೆಂಪು ಗುಲಾಬಿಯೋ ಇಲ್ಲಾ ಕಡು ಹಳದಿ ಸೇವಂತಿಗೆ ಹೂವೋ; ಹೂದೋಟದಲ್ಲಿ ಹೂವೇ ಇಲ್ಲದ ಸಮಯದಲ್ಲಿ ಸುವಾಸನೆಯುಳ್ಳ ಪಾಚದ ಎಲೆಯನ್ನು ಮುಡಿಸಿ, ಮಳೆಗಾಲದಲ್ಲಿ ಕೇದಗೆಯ ಹೂವನ್ನು ಒಂದು ಸಲ ಮಡಚಿ ಕ್ಲಿಪ್ ಮಾಡಿ ನಿನ್ನಮ್ಮ ನಿನ್ನ ಮುಡಿಗೇರಿಸುತ್ತಿದ್ದರು. ಅಲ್ವಾ?
ಎಂದಿನಂತೆ ಅಂದೂ ಜೊತೆಯಾಗೇ ಹೊರಟಿದ್ದೆವು. ಸುಬ್ಬಾ ಭಟ್ಟರ ತೋಟದ ಪಕ್ಕದ ದಾರಿ ಕಳೆದು ದಿಣ್ಣೆಯನ್ನು ಏರಿ, ರಸ್ತೆ ಪಕ್ಕದ ಪೇರಳೆ ಮರದಲ್ಲಿ ಕಾಯಿ ಇದೆಯೇ ಎಂದು ದಿಟ್ಟಿಸಿ ನೋಡಿ ಮುಂದಕ್ಕೆ ಶಾಂತಕ್ಕನ ಮನೆಯ ಪಕ್ಕದ ತಿರುವಿಗೆ ತಲುಪಿದ್ದೆವು. ಬಹುಶ: ಅರ್ಧ ದಾರಿ ಕ್ರಮಿಸಿದ್ದೆವೇನೋ, ಇದ್ದಕ್ಕಿದ್ದಂತೆ ನೀನು ಹೊಟ್ಟೆ ನೋವಾಗುತ್ತಿದೆಯೆಂದು ಹೇಳಿ ಅಳುತ್ತಿದ್ದಾಗ, ಮನೆಲೆಕ್ಕ(Home Work)ವನ್ನು ಮಾಡದ್ದಕ್ಕಾಗಿ ದೇಸಾಯಿ ಮೇಷ್ಟ್ರ ಬೆತ್ತದ ರುಚಿಯ ಗುಂಗಿನಲ್ಲಿದ್ದ ನಾನು ನಿನ್ನ ನೋಡಿದಾಗ, ಕಿಬ್ಬೊಟ್ಟೆಯ ಕೆಳಗೆ ಕೆಂಪನೆಯ ಚಿತ್ತಾರದಿಂದ ನಿನ್ನ ಬಟ್ಟೆಗಳೆಲ್ಲ ಕಂಗೊಳಿಸಿ, ಬಿಳಿ ಬಣ್ಣದ ಮೇಲೆ ರೌದ್ರತೆಯ ನರ್ತನವಾಡಿದಂತೆ ಅನಿಸಿತ್ತು.
"ಹಾ... ಏನಾಯ್ತು?.. ಅಬ್ಬಾ.. ತುಂಬಾ ರಕ್ತ... ಬಿದ್ದು ಬಿಟ್ಯಾ...?" ಅಂತ ನಾ ದಿಗಿಲಲ್ಲಿ ಕೇಳಿದಾಗ, ಕುಕ್ಕರಗಾಲಲ್ಲೇ ಕುಳಿತು, ಬಾಯಿ ಮೇಲೆ ಬೆರಳಿಟ್ಟು, ಶಬ್ದ ಮಾಡದಂತೆ ಸೂಚಿಸಿದ್ದಿ.
ಒಂದೆರಡು ನಿಮಿಷಗಳ ನಂತರ ಎದ್ದು ನಿಂತು "ನನ್ನನ್ನು ಮನೆ ತನಕ ಬಿಟ್ಟು ಬಿಟ್ತೀಯಾ...?" ಎಂದಿದ್ದೆಯಲ್ಲ.
"ಸರಿ... ಏನಾಯ್ತು? ಬಿದ್ದು ಬಿಟ್ಯಾ? ತುಂಬಾ ನೋಯ್ತಾ ಇದೆಯಾ...? ಶಂಕರ ವೈದ್ಯರಲ್ಲಿ...." ಎನ್ನುವ ಮೊದಲೇ ನನ್ನ ಮಾತನ್ನು ತುಂಡರಿಸಿ
"ಏನೂ ಆಗಿಲ್ಲ... ನಿಂಗೆ ಅದೆಲ್ಲ ಅರ್ಥ ಆಗಲ್ಲ... ನನ್ನನ್ನು ಮನೆ ತನಕ ಬಿಡ್ತೀಯಾ...?"
ಆಮೇಲೆ ನಿನ್ನನ್ನ ಹಿಂಬಾಲಿಸಿದೆ. ಆದ್ರೆ ಹಿಂತಿರುಗುವಾಗ ಯಾವಾಗಿನ ದಾರಿ ಬಿಟ್ಟು, ದೇವಯ್ಯನ ಮನೆಯ ಪಕ್ಕದ ಓಣಿಯಲ್ಲಿ ಇಳಿದು ಮತ್ತೆ ರಾಮಣ್ಣನ ತೋಟದಲ್ಲೇ ಆಗಿ ಸುಬ್ಬಾ ಭಟ್ಟರ ತೋಟಕ್ಕೆ ತಲುಪಿದಾಗ ಪುನಹ ಕೇಳಿದೆ.
"ಏನಾಯ್ತು...? "
"ಅದೆಲ್ಲ ನಿಂಗೆ ಅರ್ಥ ಆಗಲ್ಲ... ಸುಮ್ನೆ ಬಾ ನನ್ ಜೊತೆ"
ಅರ್ಥವಾಗಲ್ಲ ಅಂದೆಯಲ್ಲ. ಯಾಕೆ ಅರ್ಥ ಆಗಲ್ಲ? ಕ್ರಿಕೆಟ್ ನಲ್ಲಿ ವೈಡ್ ಬಾಲ್ ಅಂದ್ರೆ ಏನು ಅಂತ ನಿನಗೆ ನಾನೇ ಕಲಿಸಿ ಕೊಟ್ಟಿದ್ದಲ್ಲವಾ? ಲೆಕ್ಕದಲ್ಲಿ ಭಾಗಾಕರವನ್ನು ನಿನಗೆ ನಾನೇ ತಾನೇ ಹೇಳಿ ಕೊಟ್ಟದ್ದು? ಅಂಥ ನನಗೆ ಅರ್ಥವಾಗದಿರುವುದು ಏನಿದೆ?
ನಿನ್ನ ಮನೆ ತಲುಪಿದಾದ ನಿನ್ನಮ್ಮ ನನ್ನನ್ನು ಪಕ್ಕಕ್ಕೆ ಕರೆದು "ಯಾರಲ್ಲೂ ಹೇಳಬೇಡ ಹೀಗಾಯಿತೆಂದು..." ಎಂದರು.
ಹೇಗಾಯಿತೆಂದು ಕೇಳೋಣವೆನಿಸಿದರೂ ಕೇಳಲಿಲ್ಲ. ಒಳಗಡೆ ಹೋಗಿ ಬಾಳೆ ಎಲೆಯೊಂದರಲ್ಲಿ ಹೋಳಿಗೆ ತಂದು ನನ್ನ ಕೈಯಲ್ಲಿರಿಸಿ ತಲೆ ನೇವರಿಸಿ ಕಳಿಸಿ ಕೊಟ್ಟಿದ್ದರು ನಿನ್ನಮ್ಮ.
ಶಾಲೆಗೆ ಹೋದಾಗಲೂ ಏನೋ ಒಂದು ಗೋಜಲು ಗೋಜಲು. ಯಾಕೆ ಎಲ್ಲ ಮುಚ್ಚಿಡುತ್ತಿದ್ದಾರೆ? ಮಲಗಿದಾಗಲೂ ನಿದ್ರೆ ಬಾರದೆ, ನಿನಗೇನಾಗಿರಬಹುದೆಂದು ಸಂಕಟ ಪಟ್ಟು ಅಡುಗೆ ಮನೆಯಲ್ಲಿ ಪಾತ್ರೆ ತೊಳೆಯುತ್ತಿದ್ದ ಅಮ್ಮನಲ್ಲಿ ವಿಷಯ ಹೇಳಿದಾಗ, ಬಲಕೈಯನ್ನು ಸೀರೆಯ ಸೆರಗಲ್ಲಿ ಒರಸಿ ನನ್ನ ತಲೆಯ ನೇವರಿಸಿ "ಮುಂದೆ ದೊಡ್ಡವನಾದಾಗ ನಿನಗೆಲ್ಲ ಅರ್ಥವಾಗುತ್ತೆ..." ಎಂದು ನಸು ನಕ್ಕು, ಪಾತ್ರೆ ತೊಳೆಯುವುದರಲ್ಲೇ ಮಗ್ನರಾದರು.
ಆ ರಾತ್ರೆ ಇಡೀ ನಿದ್ರೆ ಬರದೆ ಚಡಪಡಿಸುತ್ತಿದ್ದೆನು. ಆವತ್ತು ನನಗೆ ಪ್ರಪ್ರಥಮವಾಗಿ ಒಂಟಿಯೆಂದೆನಿಸಿತ್ತು. ಯಾರೂ ನನ್ನ ಬಳಿ ಮಾತನಾಡ ಬಯಸುತ್ತಿಲ್ಲವೆಂದೆನಿಸಿತ್ತು.
ಇಂದು ಪುನಹ ಹಾಗೇ ಒಂಟಿಯೆಂದೆನಿಸುತ್ತಿದೆ ಅಮ್ಮಣ್ಣೀ...

ಒಂಟಿಕಾಲ ಮೇಲಿನಲ್ಲಿ
ತುಂಬಿ ಬಂದ ನೋವಿನಲ್ಲಿ
ಒಂಟಿತನದ ಕಾವಲಲ್ಲಿ
ನಂದುವುದೇತಕೀ ದೀಪವು?

ಉಸಿರ ದನಿ ಕೇಳದಿರದು
ಉಗುಳು ನುಂಗಿ ಬದುಕುತಿಹುದು
ಬತ್ತಿ ಹೋದ ಗಂಟಲಲ್ಲಿ
ಒತ್ತಿ ಒತ್ತಿ ನೆನೆಯುತಿಹುದು

ಆಸರೆಯ ಅರಸುತಿಹೆನು
ಕಿರು ಬೆರಳೇ ಸಾಕು
ಹಕ್ಕಿಗೆ ಹಾರಾಡುವ ಆಸೆ
ಮರಿ ಚಿಗುರ ಕನಸೇ?

ಗುರುವಾರ, ಜುಲೈ 30, 2009

ನಿನ್ನ ಕಂದಮ್ಮಗಳು ನನ್ನನ್ನೇನಾದ್ರು ’ಮಾಮಾ’ ಅಂತ ಕರೆದರೆ...?




ನಿನ್ನೆ ಬಳುಕುವ ಹಾದಿಯ ಆ ತಿರುವಿನಲ್ಲಿ ಬರುತ್ತಿದ್ದಾಗ ಅನಿರೀಕ್ಷಿತವಾಗಿ ನೀನು ಸಿಕ್ಕಿದ್ದೆಯಲ್ಲ... ಸಿಕ್ಕಿದ ತಕ್ಷಣ ಒಂದು ಮುಗುಳು ನಗೆ... ವಾವ್... ಕೊಚ್ಚೆ ತಳದ ತಟಾಕದಲ್ಲಿ, ನೈದಿಲೆ ಅರಳಿದಾಗ ಚಂದ್ರಮ ಹೇಗೆ ಸಂಭ್ರಮಿಸುತ್ತನೋ ಹಾಗೇ ಏನೇನೋ ಕಾರಣಗಳಿಂದ ನಾನು ತೀರ ದುಗುಡದಲ್ಲಿದ್ದರೂ ಆ ನಗುವ ಕಂಡು ಪುಳಕಿತಗೊಂಡಿದ್ದೆ... ಕೆನ್ನೆಯ ಕೆಂಪು ರಂಗಿನಿಂದಲೇ ನೀನು ತುಂಬಾ ಸಂಭ್ರಮದಲ್ಲಿರುವುದು ತಿಳಿಯುತ್ತಿತ್ತು.
"ತುಂಬಾ ಖುಶಿಯಲ್ಲಿದ್ದೀಯಲ್ಲ... ಎನ್ ವಿಶೇಷ ?" ಅಂತ ಕೇಳಿದ್ದಕ್ಕೆ ಸಣ್ಣದಾಗಿ ಕಣ್ಣು ಮುಚ್ಚಿ, ತುಟಿ ಮತ್ತು ಹುಬ್ಬುಗಳನ್ನು ಕಂಪಿಸಿಕ್ಕೊಂಡು ನಿನ್ನ ಅಂತರಂಗದ ಸೌಂದರ್ಯವನ್ನೆಲ್ಲಾ ಮುದ್ದು ಮುಖದಲ್ಲಿ ಹೊರ ಸೂಸಿದ್ಯಲ್ಲಾ... ಅಬ್ಬಾ.. ಆಗ ನಾನು ನನ್ನನ್ನೇ ಮರೆತಿಲ್ಲ ಅಂತ ಅನ್ನುವುದಾದರೂ ಹೇಗೆ...?
"ಮದ್ವೆ ಆಗ್ತಿದ್ದೇನೆ... ವಿಕಾಸ್ ಅಂತ... ಹಾಸನದವರು... ಲಂಡನ್ ನಲ್ಲಿ ಇದಾರೆ..." ಆಮೇಲೆ ನಾನೂ ಮಾತನಾಡಲಿಲ್ಲ... ನೀನೂ... ಹಾಗೇ ಮೂರ್-ನಾಲ್ಕು ನಿಮಿಷ... !
"ನಿಂಗೆ ನಾನೇ ಹುಡುಗಿ ಹುಡುಕಿ ಕೊಡ್ತೇನೆ ಮಾರಾಯ... ಎಂಥ ಹುಡುಗಿ ಬೇಕು ಹೇಳು...?!" ಅಂತ ನಗ್ತಾ ಕೇಳಿದ್ಯಲ್ಲ...(ನಿಜವಾಗ್ಲೂ ನಕ್ಕು ಬಿಟ್ಯಾ?... ಯಕೋ ಗೊತ್ತಾಗ್ತಿಲ್ಲ...)
ಮನಸ್ಸಿನಲ್ಲಿ ಏನೇನೋ ಹೇಳ್ಬೇಕೂಂತ ಆಯ್ತು ಕಣೇ... ಆದ್ರೆ ಅದ್ಯಾವ್ದೂ ಮಾತುಗಳಾಗಿ ಬರಲಿಲ್ಲ...

ಮೀನಿನಂತ ಕಣ್ಣುಳ್ಳವಳು... ಬೆಣ್ಣೆಯಂತ ಕೆನ್ನೆಯವಳು... ಗುಲಾಬಿಯ ಎಸಳಿನಂತ ತುಟಿಯವಳು... ಹಲಸಿನ ಹಣ್ಣಿನ ಸಣ್ಣ ಸೋಳೆಯ ಹಾಗಿರುವ ಮೂಗಿನವಳು... ಉದುರುವ ಮಂಜಿನ ಹಾಗೆ ಮಾತನಾಡಬಲ್ಲವಳು... ಉರಿಯುವ ಬೆಂಕಿಯಂತೆ ನನ್ನ ಪ್ರೀತಿಸುವವಳು... ನದಿಯ ಹರಿಯುವ ನೀರಿನಂತೆ ಓಡಾಡಬಲ್ಲವಳು... ನನ್ನೆದೆಗೆ ಒರಗಿ ನನ್ನ ಕೆಡಕುಗಳನ್ನು ಹೆಕ್ಕಿ ತೆಗೆಯುವವಳು... ಒಲುಮೆಯಿಂದ ನನ್ನೆದೆಯ ಗುಬ್ಬಚ್ಚಿ ಗೂಡಿಗೆ ಅನನ್ಯ ಪ್ರೀತಿ ತುಂಬುವವಳು... ನನ್ನನ್ನು ಪ್ರೀತಿಸಿ ಕೊಲ್ಲುವವಳು... ನನ್ನ ಉಸಿರ ಮಿಡಿತಕ್ಕೆ ನಾಚಿ ನೀರಾಗುವವಳು... ನನ್ನೆದೆಯ ಕೊಳದಲ್ಲಿ ಮೀನಾಗುವವಳು... ಹೀಗಿರಿವವರು ಬೇಕು...ಇದಾರಾ? ಅಂತ ಕೇಳೋಣಾ ಅಂದ್ಕೊಂಡ್ರೂ ಮಾತುಗಳಾಗಲಿಲ್ಲ ಅಮ್ಮಣ್ಣೀ...

ಆಮೇಲೆ ಒಂದೆರಡು ಫರ್ಲಾಂಗು ನಡೆದು ರಂಗಣ್ಣನ ಹೋಟೆಲ್ ನಲ್ಲಿ ಕಾಫಿ ಹೀರಿ ಬೀಳ್ಕೊಡುವವರೆಗೂ ಮೌನ. ಕೇವಲ ಒಂದು ’ಬೈ’ ಯಲ್ಲಿ ನಮ್ಮ ಭೇಟಿಯ ಪರ್ಯವಸಾನ.ಅದೆಷ್ಟೋ ವರ್ಷ ನಾವಿಬ್ರೂ ಜೊತೆಯಾಗಿ ಶಾಲೆ ಕಾಲೇಜುಗಳಿಗೆ ಹೋದವರು... ಹೇಳದೆಯೇ ಅರ್ಥಮಾಡಿಕ್ಕೊಂಡವರು...
ಅಲ್ಲಾ... ಅರ್ಥ ಆಗದೇ ಹೋಯಿತೇ...?
ಇಲ್ಲ... ಅರ್ಥವಾಗಿತ್ತು... ಅರ್ಥ ಆಗದಿದ್ದರೆ, ಮತ್ಯಾಕೆ, ಭೇಟಿಯಾದಾಗ ಒಂದೆರಡು ನಿಮಿಷ ಬಿಟ್ರೆ, ಮತ್ತೆಲ್ಲ ನಾವಿಬ್ರೂ ಮೌನವಾಗಿದ್ದುದು...? ... ನಿಜವಾಗ್ಲೂ ಅರ್ಥವಾಗಿತ್ತು... ಅಲ್ವಾ ಅಮ್ಮಣ್ಣಿ...?

ಈವಾಗ ನೀನ್ ಸಿಗಲ್ಲಾಂತ ನನೇನು ದು:ಖ ಪಡ್ತಿಲ್ಲ... ಆದ್ರೆ ನಿನ್ನ ಬಗೆಗಿನ ಅನುಭೂತಿ ಇದೆಯಲ್ಲ... ಅದು ಸಾಕು... ಯಾವತ್ತಾದ್ರು ಒಂದು ಮೆಸ್ಸೇಜ್ ಬಂದ್ರೆ, ನನ್ನ ಮುಖ ಅರಳ್ಬಹುದು... ಯಾವಗಾದ್ರು ಒಂದು ಮಿಸ್ಡ್ ಕಾಲ್ ಬಂದ್ರೆ, ನಾನಿನ್ನೂ ನಿಂಗೆ ನೆನಪಿದ್ದೇನಲ್ಲಾ ಅಂತ ಖುಶಿಪಡ್ಬಹುದು...ಯಾವುದಾದ್ರು ಮದ್ವೆ-ಮುಂಜಿಯಲ್ಲಿ ನನ್ನ ಕಣ್ಣುಗಳು ನಿನ್ನ ಹುಡುಕಬಹುದು... ಆಗ ನಿನ್ನ ಕಂಕುಳಲ್ಲೊಂದು ಸಣ್ಣ ಪುಟ್ಟನೋ, ಪುಟ್ಟಿಯೋ ಕಂಡಾಗ ನಾನು ಹಿರಿ ಹಿರಿ ಹಿಗ್ಗಬಹುದು... ನಿನ್ನ ಕಂದಮ್ಮಗಳು ನನ್ನನ್ನೇನಾದ್ರು ’ಮಾಮಾ’ ಅಂತ ಕರೆದರೆ, ಪ್ರೀತಿಯಿಂದ ಅವುಗಳ ತಲೆ ನೇವರಿಸಿ ಚಾಕೋಲೇಟ್ ಕೊಡಿಸಬಹುದು...

ನೀನು ಮದುವೆ ಆದ್ರೂ ನಿನ್ ಮೇಲಿನ ಪ್ರೀತಿ ಕಮ್ಮಿ ಆಗಲ್ಲ... ನೀನು ಸದಾ ಹಾಗೇ, ಬೆಚ್ಚನೆ ನನ್ನ ಕನಸಲ್ಲಿ ಬರಬಹುದು... ನಂಗೇನೂ ಬೇಜಾರಾಗಲ್ಲ ಅಮ್ಮಣ್ಣೀ... ನಿನ್ ಬಗ್ಗೆ ಅನನ್ಯ ಪ್ರೀತಿ ನನ್ನೆದೆಯ ತುಂಬಾ ಹರಡಿ ಬಿಡ್ತೇನೆ... ಅಲ್ಲಿ, ನೀನಿಲ್ಲಾಂತ ದು:ಖ ಇರಲ್ಲ... ಆದ್ರೆ, ನೀನಿರ್ತಿದ್ರೆ ಏನೇನ್ ಮಾಡ್ತಿದ್ದೆ ಅನ್ನೋ ಕಲ್ಪನೆಗಳು ಹಚ್ಚ ಹಸಿರಾಗಿರುತ್ತೆ... ನಿನ್ನ ಬಗ್ಗೆ ಅಭಿಮಾನ ಇರುತ್ತೆ.. ನಿನ್ನ ಬಗ್ಗೆ ಕಾಳಜಿ ಇರುತ್ತೆ...

ಸೋಮವಾರ, ಜುಲೈ 27, 2009

ಬಾಗಿಲಿಗೆ ಮಾತ್ರ ನೀ ಯಾಕೆ ಬೀಗ ಜಡಿದೆ...?


[ಅರ್ಪಣೆ : ಬರೆಯಲಾರದ ನನ್ನ ಬರೆಸಿಯೇ ತೀರುವೆನೆಂಬ ಹುಂಬಿಗೆ ಬಿದ್ದು, ಛಾಯಾಚಿತ್ರ ಕಳಿಸಿ ಪ್ರಚೊದಿಸಿ, ಯಶವ ಗಳಿಸಿದ ಆತ್ಮೀಯ ಸ್ನೇಹಿತ ವಿಷ್ಣುವಿಗೆ]



ಮನದಲ್ಲಿ ಜೋಕಾಲಿ
ಮುಗಿಲೆಲ್ಲ ನಸು ನೀಲಿ
ಹಸಿರ ಹಾದಿಯ ಅಂಚಿನಲಿ
ಸದಾ ನಿನ್ನ ಛಾಯೆಯಿರಲಿ

ಅಂಗೈಯೊಳಗೆ ಕಿರುಬೆರಳ
ಕನಸ ಕಂಡಿರುವ ನನ್ನ ಮನ
ನಿನ್ನ ಕಣ್ಣಂಚಿಗಿನ ಹನಿಯ
ಒರತೆ ಕಾಣದಿದ್ದೀತೇ?

ದಾಟಲಾರದ ಪ್ರವಾಹವೇನಿದೆ
ಬಂಧನವ ಹೊಕ್ಕುಳಲಿ ತೇಲಿ ಬಿಟ್ಟು
ಮಳೆಯ ಕರಿ ಮುಗಿಲು ಕವಿದಂತೆ
ನಿನ್ನಿರುಳ ನೀನೇ ಮುಸುಕಿದಂತೆ

ಹೂ ಬಿಡದ ಹಸುರಿಲ್ಲ
ಹರಿಯಲಾಗದ ನೀರಿದೆಯೇ?
ತಿಳಿಯಾಗದ ಕೊಳವಿಲ್ಲ
ತಿಳಿಸಲಾಗದ ಮಾತು ಮಾತ್ರ ಇದೆಯೇ?

ಮನಸೆಲ್ಲ ಮುದುಡಿ
ಮನೆಯ ಗೋಡೆಗಳೆಲ್ಲ ಒಡೆದು
ಬಾಗಿಲಿಗೆ ಮಾತ್ರ ನೀ
ಯಾಕೆ ಬೀಗ ಜಡಿದೆ...?

ಸೋಮವಾರ, ಜೂನ್ 22, 2009

ನನ್ನೆದೆಯ ಕದ ತೆರೆದು ಸ್ವಲ್ಪ ಇಣುಕಿ ನೋಡು


ನಾನು ಎಷ್ಟೊಂದು ಕನಸುಗಳನ್ನು ಕಟ್ಟಿಕ್ಕೊಂಡಿದ್ದೆ ಗೊತ್ತಾ...?
ಬೀದಿಯ ಹಾದಿಯಲಿ ನಡೀವಾಗ, ಊಟ ಮಾಡುವಾಗ, ಸ್ನಾನ ಮಾಡುವಾಗ, ಅಷ್ಟೇಕೆ ದೈನಂದಿನ ಎಲ್ಲ ಚಟುವಟಿಕೆಗಳಲ್ಲಿ ನನ್ನೊಳಗೆ ನೀನಿರ್ತಿದ್ದೆ...
ಬೆಳಿಗ್ಗೆ ಎದ್ದಾಗ ಅಂದ್ಕೊಳ್ತಿದ್ದೆ...ನೀನಿರ್ತಿದ್ರೆ ನನ್ನೆದುರಿಗೆ, ಒಂದು ಕಾಫಿ ಕಪ್ ಹಿಡಿದು... ಓಹ್...
ನಿನ್ನೆ ರಾತ್ರೆ ನಾನು ಮತ್ತು ಅಮ್ಮ ಹೋಟೆಲ್ ಗೆ ಹೋಗಿದ್ದಾಗ ನೆನಪಾಗಿತ್ತು.... ನೀನಿದ್ದಿದ್ರೆ ನನ್ ಜೊತೆ, ಲಲ್ಲೆಗೆರೆದು ಕಾಡಿ
ಇನ್ನೊಂದು ಐಸ್-ಕ್ರೀಮ್ ತಿನ್ಬೇಕು ಅಂತಿದ್ದೆ...
ನಾನು ಶೇವಿಂಗ್ ಮಾಡುವ ಸಮಯದಲ್ಲೇನಾದ್ರು ನೀನು ಪಕ್ಕದಲ್ಲಿದ್ರೆ, ಶೇವಿಂಗ್ ಕ್ರೀಂನಿಂದ ಆವರಿಸಿಕ್ಕೊಂಡ ನನ್ನ ಗಲ್ಲವನ್ನು ನಿನ್ನ ಕೆನ್ನೆಗೆ ತಾಗಿಸಿ ನಿನ್ನಿಂದ ಒಂದೆರಡು ಒದೆ ಇಸ್ಕೊಳ್ ಬೇಕು...!
ಬೆಳಿಗ್ಗೆ ಸ್ನಾನ ಮಾಡಿ ಬಂದು ನನ್ನ ತಲೆಯನ್ನು ಜೋರಾಗಿ ಆಚೆ-ಈಚೆ ತಿರುಗಿಸಿ ಕೂದಲಿನ ನೀರನ್ನೆಲ್ಲಾ ನಿನ್ ಮೇಲೆ ಎರಚಿಕ್ಕೊಂಡು ನಿನ್ನಿಂದ ಬೈಸ್ಕೋಬೇಕು... ನೀನು ಬೈದಿದ್ದಕ್ಕೆ ಮುಸ್ಸಂಜೆ ತನಕ ನಿಮ್ಮೇಲೆ ಹುಸಿ ಮುನಿಸ ತೋರಬೇಕು... ನನಗಿಷ್ಟವಾದ "ಮುನಿಸು ತರವೇ.. ಮುಗುದೇ..." ಹಾಡು ಹಾಡಿ ನೀ ನನ್ನ ಮುದಗೊಳಿಸಿದಾಗ, ನನ್ನೆದೆಗೆ ನಿನ್ನ ಮುಖವಾನಿಸಿ ಅಪ್ಪಿ ನಿನ್ನ ಹಣೆಗೊಂದು ಚುಂಬನವೀಯಬೇಕು...
ನೀನೇನಾದ್ರು ಕೆಲಸ ಮಾಡುವಾಗ ನಿನ್ನ ಹಿಂದಿನಿಂದ ಬಂದು ನಿನ್ನನ್ನೆಳೆದು ನವಿರಾಗಿ ನಿನ್ನ ಕತ್ತಿಗೆ ಮುತ್ತಿಕ್ಕಬೇಕು...
ನೀ ಅಡುಗೆ ಮಾಡುವಾಗ ನಿನ್ನ ಜಡೆ ಎಳೆಯಬೇಕು...
ನಿನ್ನ ಮುದ್ದು ಮೊಗವನ್ನು ನನ್ನೆದೆಯಲ್ಲಿ ಹುದುಗಿಸಿ, ನಿನ್ನ ಕೆನ್ನೆ ನೇವರಿಸಿ ನನ್ನ ಪ್ರೀತಿಯನ್ನು ಹಂಚಬೇಕು....
ನಿನ್ನನ್ನು ಆವಾಗಾವಾಗ ರೇಗಿಸ್ಕೊಂಡು... ನೀನು ಮುನಿಸು ತೋರಿಸಿದಾಗ ನಿನ್ನನ್ನು ಲಲ್ಲೆ ಗೆರೆಯಬೇಕು... ನಿನ್ನ ಸೆರಗ ಹಿಡಿದು
ರಂಪ ಮಾಡಬೇಕು...
ಸಂಜೆ ನಾ ಆಫೀಸಿಂದ ಬರುವಾಗ ತಡವಾದ್ರೆ, ನೀ ಮುನಿಸದಂತೆ ಒಂದು ಮೊಳ ಮಲ್ಲಿಗೆ ಹೂವನ್ನು ತಂದು ನಿನ್ನ ಮುಡಿಗೇರಿಸಿ, ಸಿಹಿ ಮುತ್ತೊಂದನ್ನು ಇಸ್ಕೊಳ್ಬೇಕು....
ನಿನ್ನ ಮಡಿಲಲ್ಲಿ ನಾ ಮಲಗಿದಾಗ, ನೀನು ಹಾಡುವ ಲಾಲಿ ಹಾಡಿನ ಮಧುರ ಲಯಕ್ಕೆ ನಾ ಮಾರು ಹೋಗಿ ಇಂದ್ರಿಯಗಳ ಎಲ್ಲೆ ಮೀರಿ
ನಿದ್ದೆ ಮಾಡ್ಬೇಕು...
ನೀ ಮಾಡುವ ಕಾಫಿ, ಟೀಗೆ ಸಕ್ಕರೆ ಕಮ್ಮಿಯೆಂದು ಕಾಫಿ ಜೊತೆ ನಿನ್ನ ತುಟಿಯಿಂದ ತಸು ಸಕ್ಕರೆ ಹೀರಬೇಕು...!

ದೂರದಿಂದ ಇಬ್ಬನಿಯ
ಇಳೆಯಂತೆ ಹೋಗದಿರು
ನನ್ನೆದೆಯ ಕದ ತೆರೆದು
ಸ್ವಲ್ಪ ಇಣುಕಿ ನೋಡು

ಸೋಮವಾರ, ಮೇ 25, 2009

ಬದುಕು


ಅಕ್ಕ ತುರಾತುರಿಯಲ್ಲಿ ನಿನ್ನೆ ಬೆಳ್ಳಂ-ಬೆಳಗ್ಗೆದ್ದು ಊರಿಗೆ ಹೋಗಿದ್ದಾಳೆ. ಸುಮಾರು ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಅಕ್ಕನ ಮಗಳು ಭೂಮಿಕಾಳ ಶಾಲಾ ಫೀಸ್ ಕಟ್ಟುವ ಪ್ರಹಸನ ಅಚಾನಕ್ ಆಗಿ ನನ್ನ ಹೆಗಲ ಮೇಲೆ ಬಿದ್ದಿತ್ತು. ಶಾಲೆಗೆ ಹೋದಾಗ ೫ ಅಡಿ ಉದ್ದದ ಎಕ್ವೇರಿಯಂ ಕಂಡು ವಿಸ್ಮಿತನಾಗಿ, ಅದರ ಪಕ್ಕದಲ್ಲೇ ಕುಳಿತೆ. ಬಣ್ಣ ಬಣ್ಣದ ಮೀನುಗಳನ್ನು ನೋಡಲು ಚಂದವೋ ಚಂದ.

ಅಹಾ... ಕಪ್ಪು ಬಣ್ಣದ ಆ ಸುಂದರಿಯಾದ ಬಳಕುವ ಮೈಯ, ಮಿಟುಕುವ ಕಣ್ಣುಗಳ ಮೀನನ್ನು ನೋಡುತ್ತಿದ್ದಂತೆ ನನ್ನ ಮೈಯಲ್ಲಿ ಮಿಂಚೊಂದು ಝುಂ ಎಂದಿತು! ಅವಳು ಯರನ್ನೋ ಹುಡುಕುತ್ತಿದ್ದಂತೆ ತೋರುತ್ತಿತ್ತು... ನನ್ನನ್ನೇ...? ಇಲ್ಲಪ್ಪಾ... ಇರಲಿಕ್ಕಿಲ್ಲ... ನನ್ನದೇನಿದ್ದರೂ ವನ್ ವೇ...! ಅವಳ ರೆಕ್ಕೆಗಳ ಬಡಿತದ ಅಲೆಗಳಿಗೆ ನಾ ಎದೆಯೊಡ್ಡಬೇಕೆನಿಸುತ್ತಿತ್ತು. ಅಬ್ಬಾ..., ಶಾಲೆಯಲ್ಲಿರುವ ಅರಿವಾಗಿ ಭಾವ ತೀವ್ರತೆಗೆ ತಡೆಯೊಡ್ಡಿತ್ತು...! 

ಅದೋ ಅಲ್ಲಿ..., ಕಾರಿನ ಚಕ್ರದ ಕೆಳಗೆ ಬಿದ್ದು ಚಪ್ಪಟೆಯಾದ ಪೆಪ್ಸಿ ಬಾಟಲಿಯಂತಿರುವ ಮೈಯ ತುಂಬಾ ಕಪ್ಪು-ಬಿಳಿ ಪಟ್ಟೆಯ ಮೀನೊಂದು ಸೂಪರಿಟೆಂಡೆಂಟ್ ನಂತೆ ಕೈ ಕಟ್ಟಿ ಮೆಲ್ಲ-ಮೆಲ್ಲನೆ ಠೀವಿಯಿಂದ ಬಂದು ಹೋಯಿತು... 

Finding nemo ಚಲನಚಿತ್ರದ nemo ಥರವಿರುವ ಒಂದು ಪುಟ್ಟ ಮೀನು  ಅಲ್ಲಲ್ಲಿ ಬಗ್ಗಿ ನೋಡುತ್ತಾ, ಏನೋ ಹೊಸತನವನ್ನು ಹುಡುಕುತ್ತಿರುವಂತೆ ಓಡಾಡುತ್ತಿತ್ತು.  

ನೋಡ- ನೋಡುತ್ತಿದ್ದಂತೆ ತೊಂಡೆಕ್ಕಾಯಿಯಷ್ಟಕ್ಕಿರುವ ಕೇಸರಿ ಬಣ್ಣದ ಮೀನೊಂದು ನನ್ನೆಡೆಗೆ ಬಂದು, ಗುಲು-ಗುಂಜಿಯಷ್ಟಕ್ಕಿರುವ ಅದರ ಬಾಯಿಯಿಂದ ಪುಂಖಾನು-ಪುಂಖವಾಗಿ ಗೊಣಗತೊಡಗಿತು. ಗಾಜಿನ ತಡೆಗೋಡೆಯಿದ್ದಿದ್ದರಿಂದ ನನಗೆ ಅಸ್ಪಷ್ಟವಾಗಿ ಕೇಳಿಸುತ್ತಿತ್ತಷ್ಟೆ. ಬಹುಶ: ಅದರ ಸ್ವಾತಂತ್ರ ಕಳೆದುಕ್ಕೊಂಡದ್ದಕ್ಕೆ ಅದು ಬಯ್ಯುತ್ತಿದ್ದಿರಬೇಕು. "ಲೋ... ನನ್ನ ಸ್ವಾತಂತ್ರಹರಣವನ್ನು ಆಸ್ವಾದಿಸುವ ನಿನ್ನ ಜನುಮಕ್ಕೆ ನನ್ನ ಧಿಕ್ಕಾರವಿರಲಿ...  ಇನ್ನೊಂದು ಜನ್ಮಾಂತ ನನಗೇನಾದ್ರು ಇದ್ರೆ, ನಿನ್ನನ್ನೂ ಇದೇ ರೀತಿ ಬಂಧನದಲ್ಲಿರಿಸುತ್ತೇನೆ..." ಮುಂದೇನೇನೋ ಭಾಷಾ ನಿಘಂಟುವಿನ ಹೊರಗಿನಿಂದ ಶಬ್ದಗಳ ಬಳಕೆ ಮಾಡಿ ಬೈದದ್ರಿಂದ ಇಲ್ಲಿ ಹೇಳಲಾಗ್ತಿಲ್ಲ... ಹೆನ್ರಿ ಶಾರ್ರಿಯರ್ ನ ಪಾಪಿಲೋನ್ ನೆನಪಿಗೆ ಬಂದಿತ್ತು.

ವಿಧಿಯ ಹೊರೆಗಳನು ತಪ್ಪಿಸಿಕೊಳುವನೆಲ್ಲಿಹನು?
ಬೆದರಿಕೆಯನದರಿಂದ ನೀಗಿಪನು ಸಖನು |
ಎದೆಯನುಕ್ಕಾಗಿಸಾನಿಸು ಬೆನ್ನ, ತುಟಿಯ ಬಿಗಿ
ವಿಧಿಯಗಸ, ನೀಂ ಕತ್ತೆ - ಮಂಕುತಿಮ್ಮ ||

ನಾನು ನನ್ನಿಂದಾದ ಸಮಾಧಾನ ಹೇಳಿದೆ ಆ ಮೀನಿಗೆ...
ನಿನ್ನ ವಿಧಿಯೊಳಗೆ ನೀ ಕತ್ತೆ, ನನ್ನ ವಿಧಿಯೊಳಗೆ ನಾನೂ...


ಮಂಗಳವಾರ, ಏಪ್ರಿಲ್ 21, 2009

ಯಾಕೆ ಗೆಳತಿ... ನೀ ಹೀಗೆ ಜೀವ ಹಿಂಡುತಿ...?


ಪ್ರಿಯೇ,

ನಿನ್ನ ಮೊದಲ ಸಲ ನೋಡಿದೊಡೆ ನನ್ನ ಮೈ ಪುಳಕಗೊಳ್ಳಲಿಲ್ಲ...ನಿಜ, ಒಪ್ಪಿಕ್ಕೊಳ್ಳುವೆ... 
ನಿನ್ನ ಬಿಳೀ ಬಣ್ಣದ ಚೂಡಿಯಲ್ಲಿನ ಕಪ್ಪು ಚುಕ್ಕೆಗಳು ನಭೋ ಮಂಡಲದ ನಕ್ಷತ್ರಗಳಂತೆ ಕಂಡು ಬರಲಿಲ್ಲ... 
ನಿನ್ನ ಕಿವಿಯಲ್ಲಿ ನೇತಾಡುವ ಬಿಳಿಯ ಮುತ್ತಿನ ಮಣಿಗಳು ನನಗೆ ಜೋಗ್ ಜಲಪಾತದಲ್ಲಿ ಧುಮ್ಮಿಕ್ಕಿ ಬರುವ ಮಂಜಿನ ಕಣಗಳ ಹಾಗೆಯೂ ಕಾಣಲಿಲ್ಲ...  
ನಿನ್ನ ಕಣ್ಣಿನ ಮೇಲೆನ ತೀವಿದ ಹುಬ್ಬುಗಳೂ ನನಗೆ ಕಾಮನ ಬಿಲ್ಲಿನ ಹಾಗೆ ಕಾಣಲಿಲ್ಲ... 
ನಾನೇನು ಮಾಡಲಿ... ನನಗೆ ಹಾಗೆಲ್ಲ ಕಾಣಲಿಲ್ಲ ಎಂಬುದು ನನ್ನಾಣೆ ಸತ್ಯ... 

ನಿನ್ನ ಗುಂಗುರು ಕೂದಲನ್ನು ನೋಡಿ, ಕೂದಲೊಳಗೆ ಹೇನಾಗಬೇಕೆಂದೂ ಅನಿಸಲಿಲ್ಲ... 
ನಿನ್ನ ಮೃದುವಾದ ಕೈಗಳ ನೋಡಿ ಅಮ್ಮ ಕಡೆಯುವ ಮಜ್ಜಿಗೆಯೊಳಗಿನ ಬೆಣ್ಣೆಯ ನೆನಪೂ ಆಗಲಿಲ್ಲ... 
ನಂಗೆ ಗೊತ್ತು, ಹೀಗೆಲ್ಲ ಅನಿಸಿಲ್ಲ ಅಂದ್ರೆ ನಿಂಗೆ ನನ್ನ ಇಷ್ಟ ಅಗೋಲ್ಲಾ ಅಂತ... ನಿನ್ನಲ್ಲಿ ನಾ ಹೇಗೆ ಸುಳ್ಳು ಹೇಳಲಿ...? ನಾನೇನು ಮಾಡಲಿ... ನನಗೆ ಹಾಗೆಲ್ಲ ಅನಿಸಲಿಲ್ಲ ಎಂಬುದು ನಿಜವಾಗಿದ್ದಾಗ...

ನಿನ್ನ ಮೈ ಮಾಟ ನನ್ನ ಆಕಷಿಸಲಿಲ್ಲ... 
ನಿನ್ನ ತುಟಿಗಳ ನೋಡಿ ನಂಗೆ ಚೆರ್ರಿ ಹಣ್ಣಿನ ನೆನಪಾಗಲಿಲ್ಲ... ಕನಿಷ್ಟ ಪಕ್ಷ ಟೊಮೇಟೊ ಹಣ್ಣಿನ ನೆನಪಾದ್ರೂ ಆಗ್ಬೇಕಿತ್ತು... 
ನಿಮ್ಮ ಸೊಂಟ ನೋಡಿದಾಗ ಸಿಂಹಿಣಿಯ ಕಟಿ ನೆನಪಾಗಬೇಕಿತ್ತು... ಅದೂ ಆಗಲಿಲ್ಲ... ಛೇ... ಏನು ಮಾಡಲಿ...?
ನಿನ್ನ ಕೊರಳ ನೋಡಿ ನವಿರಾಗಿ ಮುತ್ತಿಕ್ಕಬೇಕೆಂದು ಅನಿಸಬೇಕಿತ್ತು... ಅದೂ ಅನಿಸಲಿಲ್ಲ...
ಮೊದಲ ನೋಟದಲ್ಲೇ ನೀನು ನನ್ನವಳಗಬೇಕೆಂದು ನಾನು ದಂಬಾಲು ಬೀಳಬೇಕಿತ್ತು... ನಾ ಬೀಳಲಿಲ್ಲ... ನಿಜ...

ಆದ್ರೆ,

ನೀ ನಿನ್ನಲ್ಲಿ ಮಾತನಾಡಿದ ಕ್ಷಣದಿಂದ ನಾ ಬಂದಿ... 
ನನ್ನಲ್ಲೆ ನಿನ್ನೋಳಗೆ ನಾ ಬಂದಿ...
ನಿನ್ನ ನಗುವಿನ ಗೆಲುವಿನಲೇ ನಾ ಬಂದಿ...


ನೆನಪಿದೆಯಾ, ಆ ಮೊದಲ ದಿನ ನಾವು ಸುಮ್ ಸುಮ್ನೇ ಜಗಳ ಆಡಿದ್ದು... ಆ ಮೇಲೆ ಒಂದಾದದ್ದು....?  ಆ ಜಗಳಕ್ಕೆ ನಾ ಬಂದಿ...
ನೇರವಾಗಿ ನೋಡದೆ, ಕುಡಿಗಣ್ಣಿನ ನಸು ನಾಚಿದ ನೋಟಕ್ಕೆ, ನಾ ಅನುಭವಿಸಿದ ಸಂಜೆಗೆಂಪಿನ ಮಧುರ ಭಾವಕ್ಕೆ ನಾ ಬಂದಿ...
ಊರಿನಿಂದ ಬಾಳೆ ಎಲೆಯಲ್ಲಿ ಮಾಡಿದ ಪತ್ರೊಡೆ ತಂದು ನನ್ನ ಕರೆದು ಕೊಟ್ಟ ಆ ನಿನ್ನ ಹೃದಯದ ಆರ್ದ್ರತೆಗೆ ನಾ ಬಂದಿ...

ನಿನ್ನ ಜೊತೆ ಕಳೆದ ಆ ಎರಡು ತಾಸುಗಳೇ ನನಗೆ ಹಾಲು ಚೆಲ್ಲುವ ಬೆಳದಿಂಗಳಾಗಿರುವಾಗ...ಆ ಕ್ಷಣಗಳಿಗೇ ನಾ ಬಂದಿ...
ನಾ ಕಾಪಿ ಹೀರಿದ ಶಬ್ದಕ್ಕೆ ನೀ ನಕ್ಕಾಗ ಮನಸೆಲ್ಲ ಮುತ್ತುಗಳ ಮಾಲೆಯ ನೆನಪಾದಾಗ... ಅವುಗಳಿಗೆ ನಾ ಬಂದಿ...
ಮನಸು ಬೇಸರವಾಗಿದೆಯೆಂದು ನನಗೆ ಫೋನಾಯಿಸುವಾಗ ನಿನ್ನ ದನಿಗೇ ನಾ ಬಂದಿ...

ಆವಾಗಾವಾಗ ಮುಚ್ಚಿ ತೆರೆಯುವ ನಿನ್ನ ಕಣ್ ರೆಪ್ಪೆಗಳ ನಡುವಿನ ಮಿಂಚಿನ ಮಿಡಿತಕ್ಕೆ ನಾ ಬಂದಿ... 
ಮಣಿಯೊಂದು ನಿನ್ನ ಗೆಜ್ಜೆಯಿಂದ ದೂರ ಸರಿದಾಗ, ನಿನಗರಿವಿಲ್ಲದಂತೇ ನಾ ಎತ್ತಿಟ್ಟುಕ್ಕೊಂಡು ರಾತ್ರೆ ನೋಡಿ ಪುಳಕಗೊಡಾಗ, ಆ ಮಣಿಗೇ ನಾ ಬಂದಿ..
ನಿನ್ನಪ್ಪ ಬೈದದ್ದಕ್ಕೆ ನನ್ಹತ್ರ ಬಂದು ತಲೆಯೊರಗಿ ಒಂದು ಹಿಡಿ ಕಣ್ಣೀರಾದಾಗ, ಆ ಕಣ್ಣೀರಿಗೇ ನಾ ಬಂದಿ...

ನಿನ್ನುಸಿರು ನನ್ನ ಕೆನ್ನೆಯ ಬಳಿ ಹಾಯ್ದಾಗ, ಕಣ್ ಮುಚ್ಚಿ ನಾ ಅನುಭವಿಸಿದ ಆ ಕ್ಷಣಗಳಿಗೆ ನಾ ಬಂದಿ... 
ಗಾಳಿಯಲಿ ಹಾರಿ ಬಂದು ನನ್ನ ಮುಖದ ಮೇಲೆ ಮೃದುವಾಗಿ ಸರಿದ ನಿನ್ನ ದುಪ್ಪಟ್ಟಾದ ನೂಲಿನೆಳೆಗಳಿಗೆ ನಾ ಬಂದಿ...
ಸಂಜೆಯಲಿ ಮುಗಿಲ ಮದ್ಯದಲಿ ತೊರೆಯೊಡೆದು ಬಂದ ಸುಧೆಗೆ ಒದ್ದೆಯಾದಾಗ ಆ ಮಳೆರಾಯನ ಕೃಪೆಗೆ ನಾ ಬಂದಿ..

ನಿನ್ನ ಕೈಹಿಡಿದು ಮಳೆಗಾಲದ ತೊರೆಯ ದಾಟುವಾಗ ಆ ಝರಿಯ ಒರೆತಕ್ಕೇ ನಾ ಬಂದಿ... 
ಬಯಲಂಚಿನಲಿ ನಿನ್ನ ಕಾಲುಳುಕಿದಾಗ ನಿನ್ನಾಸರೆಯಾಗುವ ನನ್ನ ಅವಕಾಶಕ್ಕೆ ನಾ ಬಂದಿ...
ಕಣ್ಣಿನಲಿ ಕಸ ಬಿದ್ದು ನನ್ನ ಪರದಾಟ ಕಂಡು ನೀ ಬಂದು ತೆಗೆದಾಗ ನಿನ್ನ ಕರವಸ್ತ್ರಕ್ಕೆ  ನಾ ಬಂದಿ... 

ನೀ ನುಡಿದ ಮಾತುಗಳೇ ನನಗೆ ಹಾಡುಗಳಾದಾಗ...
ನೀ ಹೇಳಿದ ಹಾಡುಗಳೇ ನನಗೆ ಸ್ಪೂರ್ತಿಯಾದಾಗ...
ಮೌನದಲಿ ಮತಾದಾಗ, ನಿನಗೇ ನಾ ಬಂದಿ....

ಇತಿ,
-ನಿನ್ನವನು

ಬುಧವಾರ, ಏಪ್ರಿಲ್ 8, 2009

ಪುಳಕಗೊಂಡ ಈ ಕೋಗಿಲೆಯ ಹಾಡು ಸಾಕೇ...?


ನಿನ್ನ ಕೆನ್ನೆಯ 
ಬೆಣ್ಣೆ ನುಣುಪಿಗೆ
ಉಪಮೆ ಹೇಳಲು 
ವೆನಿಲ್ಲಾ ಐಸ್ ಕ್ರೀಂ ಸಾಕೇ...?

ನಿನ್ನ ತುಟಿಯಂಚಿನ
ಕಿರು ನಗೆಗೆ
ಉಪಮೆ ಹೇಳಲು
ರಾತ್ರೆ ಬಿರಿವ ಮಲ್ಲಿಗೆ ಸಾಕೇ...?

ಕಣ್ಣು ಕುಗ್ಗಿಸಿ, ಕೊರಳು ಬಗ್ಗಿಸಿ
ಒಲಿಯುವಾ ಮುಗುಳು ನಗೆಗೆ
ಉಪಮೆ ಹೇಳಲು
ಬೆಳಕ ತರುವ ಉಷಾಕಿರಣ ಸಾಕೇ...? 

ನಿನ್ನ ಕಣ್ಣ ತುಂಬಿಹರಿವ
ಮಧುರ ಕಾವ್ಯಕೆ
ಉಪಮೆ ಹೇಳಲು, ಪುಳಕಗೊಂಡ
ಈ ಕೋಗಿಲೆಯ ಹಾಡು ಸಾಕೇ...?

ಮಂಗಳವಾರ, ಮಾರ್ಚ್ 17, 2009

ದಯವಿಟ್ಟು ಮರಳಿ ಬರದಿರು ನಾಳೆ, ಹೀಗೇ ಬಾಯಿ ಅಗಲ ಬಿಟ್ಟು...



ತಾರಸಿಯ ಮೇಲೊಂದು
ಕಲ್ಲು ಬೆಂಚಲಿ ಕುಳಿತು
ಮೇಲೆ ನೋಡುತಿರೆ
ದೊಡ್ಡ ಬಟ್ಟಲ ಚಂದಿರನಿಂದು...

ಹುಣ್ಣಿಮೆಯ ಚಂದಿರನೆ
ನೀನಿಂದೇತಕೋ ಹೊಳಪು?
ಮೈತುಂಬ ಗಂಧ ಅರಸಿನ
ಪೂಸಿರುವೆಯಾ...?

ಮನವೆಲ್ಲ ಕನಸಿನಾ ಕನ್ಯೆ
ನಾನರಿಯೆ ಅವಳಿರುವು,
ಹುಡು-ಹುಡುಕಿ ಬರುತಿಹುದು ಉಬ್ಬಸವು
ದೀರ್ಘವಾದ ನಿಶ್ವಾಸವೂ...

ಪೂರ್ಣ ಚಂದಿರನೇ, ಜಗದ
ಚಂದ ನೋಡುತಿಹೆಯೇ,
ನೀ ನೋಡದೊಂದು ಕಣವಿಲ್ಲ
ನಿನ್ನ ನೋಡದ ಒಂದು ಹುಳವಿಲ್ಲ...

ಹುಣ್ಣಿಮೆಯ ಹೊಂಬೆಳಕು
ಮನವೆಲ್ಲ ಕಂಗೊಳಿಸಿ
ನನ್ನ ಹುಡುಕುತಿಹಳೇ
ನನ್ನಂತೆ ಅವಳೂ...?

ಬೀಸುತಿಹ ತಂಗಾಳಿಯಲಿ
ಕಣ್ಣು ಮಿಟುಕಿಸದೆ
ಅವಳೂ ನೋಡುತಿರೆ ನಿನ್ನ
ಹೇಳುವೆಯಾ ನನ್ನ ಮನವನ್ನಾ...?

ಕುಡಿ ಮೀಸೆ ಪುಡಿ ಆಸೆ
ನೀಳಕಾಯದ ನನ್ನ
ಉದ್ದ ಮೂಗಿನ ಬಳುಕು
ಹೇಳದಿರು ಹುಳುಕು...

ತುಂಬಾ ಹೊತ್ತು ಹಾಯದಿರು
ಮತ್ತೆ ಅವಳೆದುರು,
ನನ್ನ ವರ್ಣಿಸಿ ಮರೆಯಾಗು
ಇಲ್ಲಾ ದೂರ ಹೋಗು...

ನಿನ್ನ ಅಂದಕೆ ಮನಸೋತು
ನೋಡದಾದರೆ ನನ್ನ ಅವಳು,
ದಯವಿಟ್ಟು ಮರಳಿ ಬರದಿರು ನಾಳೆ
ಹೀಗೇ ಬಾಯಿ ಅಗಲ ಬಿಟ್ಟು...

ಶುಕ್ರವಾರ, ಮಾರ್ಚ್ 13, 2009

ನನ್ನಕ್ಕ...



ನನ್ನ ಅಮ್ಮ ಕೆಲವೊಮ್ಮೆ ನೆನಪಿಸುತ್ತಾರೆ. ನಾನು ೩-೪ ವರ್ಷದವನಿರುವಾಗ ಅಕ್ಕನ ಹೊಸ ಬಟ್ಟೆಗಳೇ ಬೇಕೆಂದು ರಂಪ ಮಾಡುವ ಕಾಲವೊಂದಿತ್ತಂತೆ...!! ಅವಳು ಶಾಲೆಗೆ ಹೋಗುತ್ತಿದ್ದರಿಂದ, ಒಂದೆರಡು ಜತೆ ಬಟ್ಟೆ ಹಿಚ್ಚಿಗೆ ತೆಗೆದು ಕೊಡುತ್ತಿದ್ದರು. ಅದನ್ನು ನನಗೆ ಕಾಣಿಸದ ಹಾಗೆ ಧರಿಸಿ ಶಾಲೆಗೆ ಹೋಗುವ ಸಲುವಾಗಿ, ನನಗೆ ಕಾಯಿತುರಿ ಬೆಲ್ಲ ಕೊಟ್ಟೋ ಇಲ್ಲಾ ಏನೇನೋ ನೆಪ ಹೇಳಿ ಹಟ್ಟಿಯಲ್ಲಿ ದನ, ಕರುಗಳನ್ನೋ ತೋರಿಸುತ್ತಿದ್ದರಂತೆ  ನನ್ನಮ್ಮ.

ಕೇರಳದ ಕಾಸರಗೋಡು ಜಿಲ್ಲೆಯ ಕುಗ್ರಾಮವೊಂದು ನನ್ನ ಊರು. ನನ್ನ ಮನೆಗೆ ಹೊಂದಿಕ್ಕೊಂಡೇ ಇರುವ ತೆಂಗು-ಕಂಗಿನ ತೋಟ. ಇಳಿಜಾರು ಗುಡ್ಡೆಗಳಿರುವ ಕಾರಣ, ಮನೆಯಿಂದ ತೊಟಕ್ಕೆ ಸುಮಾರು ೨೦೦-೨೫೦ ಮೀಟರ್ ದೂರ. ಮನೆಯಿಂದ ತೋಟಕ್ಕೆ ಹೋಗುವ ಕಾಲುದಾರಿಯಲ್ಲಿ ಸಣ್ಣದೊಂದು ತೋಡು(ನೀರಿನ ತೊರೆ). ಮಳೆಗಾಲದಲ್ಲಿ ದೂರದ ಬೆಟ್ಟದಿಂದೆಲ್ಲಿಂದಲೋ ಝರಿಯೊಂದು ಹುಟ್ಟಿ ಈ ದಾರಿಯಾಗಿ ಹಾದು ಪಯಸ್ವಿನಿ ನದಿಯನ್ನು ತಲಪುತ್ತದೆ. ತೋಡಿನ ಮೇಲೆರಡು ಅಡಿಕೆಮರದ ತುಂಡು ಅಡ್ಡ ಹಾಕಿದರೆ, ಅದೇ ಸಂಕ(ಬ್ರಿಡ್ಜ್). ಬಾಲ್ಯದ ಮತ್ತೆಲ್ಲ ನೆನಪುಗಳು ಮರೆಯಾದರೂ, ಎರಡಾಳು ಎತ್ತರವಿರುವ ಈ ತೋಡು ನನ್ನ ಬಾಲ್ಯದ ಒಂದು ಸನ್ನಿವೇಶವನ್ನು ನೆನಪಿಸುತ್ತದೆ...!
ನನಗಾಗ ಬಹುಶ ೪ ವರ್ಷ, ಅಕ್ಕನಿಗೆ ೮ - ೯ ವರ್ಶ ಪ್ರಾಯವಿರಬಹುದು. ನಮ್ಮ ಹಟ್ಟಿಯ ತುಂಬಾ ಹಸು-ಕರುಗಳಿದ್ದವಾದ್ದರಿಂದ, ನನ್ನ ಅಮ್ಮ ಹಸುಗಳ ಮೇವಿಗಾಗಿ ಹುಲ್ಲು ತರಲು ತೋಟಕ್ಕೆ ಹೋಗಿದ್ದರು. ನನ್ನ ಅಕ್ಕ ಮತ್ತು ನಾನು ಆಟವಾಡುತ್ತಾ ಮನೆಯಿಂದ ತೋಟದೆಡೆಗೆ ಹೋಗುತ್ತಿದ್ದೆವು. ಈ ಮದ್ಯೆ ಆಟ ಪಿಕಿಲಾಟವಾಯಿತು. ನೋಡ ನೋಡುತ್ತಿದ್ದಂತೆ ಜಗಳ ಶುರುವಾಯಿತು. ತೋಡು ಬಂದದ್ದು ಗೊತ್ತಾಗಲಿಲ್ಲ. ಅಕ್ಕ ಮುಂದೆ... ನಾನು ಹಿಂದೆ ನಡೆಯಿತ್ತಿದ್ದೆವು... ನಾನು ಅವಳನ್ನು ಮುಂದಕ್ಕೆ ನೂಕಿದೆ. 
ಆದ್ರೆ ಅವಳು ಹೋಗಲಿಲ್ಲ ಮುಂದಕ್ಕೆ... ಬದಲು ಹೋದದ್ದು ಕೆಳಗೆ... ತೋಡಲ್ಲಿದ್ದಳು....!
ನಾನು ಗಾಬರಿಯಾಗಿ, ಬೊಬ್ಬೆ(ಕೂಗು) ಹಾಕತೊಡಗಿದೆ. ಮನೆಯಿಂದ ಅಣ್ಣ, ತೋಟದಿಂದ ಅಮ್ಮ ಓಡಿಬಂದರು... ನನಗೆ ಒಂದಿಷ್ಟು ಬೈಗುಳ ಸಿಕ್ಕಿರಬಹುದು, ಸರಿಯಾಗಿ ನೆನಪಾಗ್ತಿಲ್ಲ. ನಾನು ತುಂಬಾ ಸಣ್ಣವನಾದರಿಂದ, ಅಕ್ಕನಿಗಂತೂ ಚೆನ್ನಾಗಿ ಪುಷ್ಪಾರ್ಚನೆ ಸಿಕ್ಕಿರುತ್ತದೆ...!

ನಾನು ೧ ನೇ ತರಗತಿ, ಅಕ್ಕ ೫ನೇ... ಕೆಜಿ ಸ್ಕೂಲ್ ಇಲ್ಲದ ಗ್ರಾಮವಾದ್ದರಿಂದ, ಶಾಲೆಯ ಅನುಭೂತಿಯೇ ಮೊದಲನೆಯದು ನನಗೆ. ಶಾಲೆಗೆ ೨ ಕಿ.ಮೀ ನಷ್ಟು ನಡೆದುಕ್ಕೊಂಡು ಹೋಗಬೇಕಾದರೂ, ನನ್ನ ದೃತ ತಾಳದ ಹೆಜ್ಜೆಗೆ ತಾಳ್ಮೆಯಿಂದ ಕೈ ಹಿಡಿದು ಶಾಲೆಗೆ ಕರೆದುಕ್ಕೊಂದು ಹೋಗುತ್ತಿದ್ದಳು. ನನ್ನ ಮದ್ಯಾನ್ಹದೂಟದ ಬುತ್ತಿಯ ಮುಚ್ಚಳ ತೆಗೆಯಲು ತುಂಬಾ ಕಷ್ಟವಾದಾಗಲೆಲ್ಲ, ಅವಳ ಬಳಿ ಹೋದರೆ ತೆಗೆದು ಕೊಡುತ್ತಿದ್ದಳು. ಹಾಗಂತ, ಮುಚ್ಚಳ ತೆಗೆಯಲು ಕಷ್ಟವಲ್ಲದ ಬುತ್ತಿ ಶಾಲೆಗೆ ತೆಗೆದುಕ್ಕೊಂಡು ಹೋದರೆ, ಅಮ್ಮ ಬುತ್ತಿಗೆ ಹಾಕಿ ಕೊಡುತ್ತಿದ್ದ ಅನ್ನದ ಜೊತೆ ಇರುವ ಮಜ್ಜಿಗೆ ಸೋರಿ ಹೋಗಿ, ಮಾವಿನ ಉಪ್ಪಿನ ಕಾಯಿ ಮಾತ್ರ ಉಳಿಯುತ್ತಿತ್ತು...! 

ನಾನು ೮ - ೧೦ ವರ್ಷದವನಾದಾಗ ಅಕ್ಕನ ಉದ್ದದ ಜಡೆ ಎಳೆದು ಸತಾಯಿಸುತ್ತಿದ್ದೆ... ಮನೆಯ ಮುಂದಿರುವ ತೋತಾಪುರಿ ಮಾವಿನ ಮರದ ಕಾಯಿಗಳನ್ನು ಹಣ್ಣಾಗಿಸಲು ಅಟ್ಟದ ಮೇಳಿರಿಸುತ್ತಿದ್ದರು. ಯಾರೂ ಇರದ ಸಮಯ ನೋಡಿ, ಅಕ್ಕನ ಜೊತೆ ಸೇರಿ, ಅಟ್ಟದ ಮೇಲೇರಿ, ಯಾವ ಹಣ್ಣಿಗೆ ಎಷ್ಟು ರುಚಿ, ಅಂತ ಪರೀಕ್ಷೆ ಮಾಡುತ್ತಿದ್ದೆವು...!

ಸುತ್ತ-ಮುತ್ತಲಿನ ಮಕ್ಕಳೆಲ್ಲ ಜತೆ ಸೇರಿ,ಕ್ರಿಕೆಟ್ ಆಡುತ್ತಿದ್ದೆವು. ನಮ್ಮ ಮನೆಯ ಅಂಗಳವೇ ಫೀಲ್ಡ್... ವಿಷೇಶವೆಂದರೆ, ಇದರಲ್ಲಿ ಉಪಯೋಗಿಸುವ ಪರಿಕರಗಳು. ತೆಂಗಿನ ಮರದ ಮಡಲನ್ನು(ಸೋಗೆ) ಕತ್ತಿಯಿಂದ ಕಡಿದು ಬಾಟ್ ನಂತೆ ಉಪಯೋಗಿಸುತ್ತಿದ್ದೆವು. ಕೆಂಪು ರಬ್ಬರಿನ ಬಾಲು ತಂದ ದಿನವೇ ಯಾರದಾದರೊಂದು ಹೊಡೆತಕ್ಕೆ ತೋಟಕ್ಕೆ ಹೋಗಿ ಬಿದ್ದು, ಹುಡುಕಿ ಸಿಗದಾದಾಗ, ಕಾಗದಗಳನ್ನು ಪ್ಲಸ್ಟಿಕ್ ಚೀಲದಲ್ಲಿಟ್ಟು ದಾರದಿಂದ ಗಟ್ಟಿಯಾಗಿ ಬಿಗಿದು ಚೆಂಡಿನಂತೆ ಮಾಡಿ ಕೊಡುತ್ತಿದ್ದವಳು.. ಅಕ್ಕ. 
ಆಮೇಲೇ, ಕ್ರಿಕೆಟ್ ನ ಎರಡನೇ ಇನ್ನಿಂಗ್ಸ್ ಶುರು....!

ಅಕ್ಕ ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಓದುತ್ತಿದ್ದಾಗ, ನಾನು ಹಿಂದಿನಿಂದ ಬಂದು ತುಂಟಾಟವಾಡುತ್ತಿದ್ದೆ. ರಾತ್ರಿಯಲಿ, ವಿಚಿತ್ರ ವೇಶ ಧರಿಸಿ ಅವಳು ಓದುತ್ತಿದ್ದ ಸಮಯದಲ್ಲಿ ಕಿಟಿಕಿಯ ಹೊರಗಿನಿಂದ ಬಂದು ಹೆದರಿಸುತ್ತಿದ್ದೆ. ಮಿತಿ ಮೀರಿದರೆ, ಎರಡೇಟು ಹಾಕುತ್ತಿದ್ದಳು. ಅವಳ ಮೇಲೆ ಈಗೀಗ ತುಂಬಾ ಗೌರವವಾದ್ದರಿಂದ, ನಾನು ಎದುರೇಟು ಹಾಕುತ್ತಿರಲಿಲ್ಲ...! 
ಕುಗ್ರಾಮವಾದ್ದರಿಂದ, ಮನೆಯಲ್ಲಿ ವಿದ್ಯುತ್ ಸೌಕರ್ಯ ನಾನು ಎಸ್.ಎಸ್.ಎಲ್.ಸಿ ಮಾಡುವಾಗಲೂ ಇರಲಿಲ್ಲ. ಓದುತ್ತಾ ಓದುತ್ತಾ, ನನಗೆ ನಿದ್ದೆಬಂದು, ಸೀಮೇ ಎಣ್ಣೆ(ಕೆರೋಸಿನ್) ದೀಪವೇ ಮಗಚಿ ಹೋಗಿ, ಪುಸ್ತಕವೆಲ್ಲಾ ಸೀಮೆ ಎಣ್ಣೆ ವಾಸನೆ ಬೀರುವಾಗ, ಮುಖದ ಪೌಡರ್ ಪುಸ್ತಕದ ಮೇಲೆ ಹಾಕಿ ವಾಸನೆ ಬರದಂತೆ ಮಾಡುತ್ತಿದ್ದವಳೇ ನನ್ನ ಅಕ್ಕ...

ಆಮೇಲೆ ನಾನು ಡಿಗ್ರಿ ಓದುತ್ತಿದ್ದಾಗ, ಅಕ್ಕನ ಮದುವೆಯಾಯ್ತು... 
ನನ್ನ ಕಣ್ಣಿನಿಂದೆರಡು ಸಣ್ಣ ಮುತ್ತುಗಳು.. ಅವಳಿಗಾಗಿ

ಶನಿವಾರ, ಫೆಬ್ರವರಿ 28, 2009

ಭಾವ

ಮುಸ್ಸಂಜೆ ಗದ್ದೆ ಬದಿಯ ಕಾಲುದಾರಿಯಾಗಿ ಮನೆಗೆ ಹೋಗುವವನಿದ್ದೆ, ಮನೆ ಇನ್ನೂ ಒಂದೆರಡು ಫರ್ಲಾಂಗು ದೂರವಷ್ಟೇ. ಆಗಸ್ಟು ತಿಂಗಳ ಕೊನೆಯಾದ್ರಿಂದ ಮಳೆಯೇನು ಅಷ್ಟಾಗಿ ಬರುತ್ತಿರಲಿಲ್ಲ. ಬಂದರೂ ಶಾಲೆಗೆ ಹೋಗುವ ಸಮಯಕ್ಕೋ ಶಾಲೆ ಬಿಡುವ ಸಮಯಕ್ಕೋ ಸರಿಯಾಗಿ ಬಂದು, ಒಂದಷ್ಟು ಮಕ್ಕಳಿಂದ ಬೈಸಿಕ್ಕೊಂಡು, ಮುಖ ಊದಿಸ್ಕೊಂಡು ಆರ್ಭಟಿಸುತ್ತಾ ತೆವಳಿಕ್ಕೊಂಡು ಪಕ್ಕದೂರಿಗೆ ಹೊಗುತ್ತಿತ್ತು. ಗದ್ದೆ ಬದಿಯ ಒಬ್ಬನಿಗೆ ನಡೆಯಲಷ್ಟೇ ಹದವಾದ ಓಣಿ, ಮರಳಿ ಗೂಡಿಗೆ ಹೋಗೋ ತವಕದಲ್ಲಿರೋ ಹಕ್ಕಿಗಳ ಕೂಗು, ಒಂದೆರಡು ಅಡಿಯಷ್ಟು ಬೆಳೆದಿರುವ ಹಚ್ಚಹಸುರಿನ ಜೀವತುಂಬಿರುವ ಪೈರು, ಪಕ್ಕದಲ್ಲೇ ಇರುವ ಪದ್ಮಿನಿ ಅಕ್ಕನ ಮನೆಯ ಹೂದೊಟದಲ್ಲಿ ಬೆಳೆದಿರೋ ಜಾಜಿ ಮಲ್ಲಿಗೆಯ ಘಮ ಘಮ ಪರಿಮಳ, ದೂರದಿಂದೆಲ್ಲೋ ಗಾಳಿಯಲ್ಲಿ ಹರಿದಾಡಿ ಬರುವ "ಕಭಿ ಕಭಿ ಮೇರೆ ದಿಲ್ ಮೇ..." ಹಾಡು, ಎಲ್ಲ ಸೇರಿ ನನ್ನ ನಡೆಗೊಂದು ತಾಳ ಕೊಟ್ಟು, ಮೆಲ್ಲ ಮೆಲ್ಲನೆ ನೆನಪಿನ ಸುರುಳಿಯೊಂದು ನನ್ನರಿವಿಲ್ಲದೇನೇ ಮನತುಂಬ ಆವರಿಸತೊಡಗಿತು.

ಮಂಗಳೂರಿನ ಸುಳ್ಯದಿಂದ ಸುಬ್ರಹ್ಮಣ್ಯಕ್ಕೆ ಹೊಗುವ ದಾರಿಯಲ್ಲಿ ನಾರ್ಣಕಜೆ ನಂತರ ಸಿಗುವ ಎಲಿಮಲೆಯಲ್ಲಿ ಎಡಕ್ಕೆ ೪ ಮೈಲಿ ಹೋದರೆ ಸಿಗುವ ಮೊದಲ ಊರು ಸೀಮುರ್ದೆ. ಸುಮಾರು ೧೦೦ - ೧೨೦ ಕುಟುಂಬಗಳಿರೋ ಸೀಮುರ್ದೆ, ರಸ್ತೆಯ ಎರಡೂ ಪಕ್ಕದಲ್ಲಿ ಚಾಚಿಕ್ಕೊಂಡಿದೆ. ನಂತರ ಸಿಗೋ ಕಾಟಿಗೋಳಿ ರಸ್ತೆಯ ಎಡಕ್ಕೂ, ಮಿಂಚಿನಡ್ಕ ರಸ್ತೆಯ ಬಲಕ್ಕೂ, ಮುಂದಕ್ಕೆ ಬಾಳೂರೆಂಬ ಸಿದ್ದಪ್ಪ ಸಾವುಕಾರ್ರ್ ಊರು, ಇನ್ನೂ ಮುಂದಕ್ಕೆ ದಟ್ಟ ಕಾಡಿನ ಗವರ್ಮೆಂಟ್ ಫಾರೆಸ್ಟ್. ಈ ರಸ್ತೆಯಲ್ಲಿ ದಿನಕ್ಕೆರಡು ಬಾರಿ ಸುಳ್ಯದಿಂದ ಬರುವ ಬಸ್ಸೇ ಜನರ ರಾಜತಂತ್ರಿಕ ವಾಹನ. ಟೆಂಪೋಗಳು ಅವಗೀವಾಗ ಬರುತ್ತಿದ್ದರೂ ಜನರು ಅದಕ್ಕೇ ಎಂದು ಕಾದು ಕುಳಿತುಕ್ಕೊಳ್ಳೂವಂತಿರಲಿಲ್ಲ. ಮದುವೆಗೆ, ಇಲ್ಲವೇ ಸುಳ್ಯದ ಶಾಲೆಗಳ ಮಕ್ಕಳ ಪ್ರವಾಸಕ್ಕೋ ಟೆಂಪೋಗಳು ಹೊದರೆ, ಕಾದು ಕುಳಿತವನು ಹೈರಾಣಗಿ ನಡೆದೇ ಹೊಗುತ್ತಿದ್ದ. 

ಸೀಮುರ್ದೆಯಲ್ಲಿರೊ ಗವರ್ಮೆಂಟ್ ಶಾಲೆಯೇ ಹತ್ತಿರದ ಐದಾರು ಹಳ್ಳಿಗಳ ಮಕ್ಕಳಿಗೆ ಸರಕಾರ ಮಾಡಿಗೊಟ್ಟ ಏಕೈಕ ದೇವಾಲಯ. ಸುಬ್ಬಣ್ಣ ಮಾಸ್ತರರ ಮುಖ್ಯ  ಪೌರೊಹಿತ್ಯ ಈ ದೇವಾಲಯದಲ್ಲಿದ್ದರೂ, ಉಸ್ತುವಾರಿ ಎಲ್ಲ ನಾಗಪ್ಪ ಮಾಸ್ತರರದ್ದೇ. ಸುನಂದ ಟೀಚರರಲ್ಲದೆ ಇನ್ನೂ ಒಂದಿಬ್ಬರು ಮಾಸ್ತರರಿದ್ದಾರೆ. ಗ್ರಾಮೀಣ ಪ್ರದೇಶದ ಏಕೈಕ ಶಾಲೆಯಾದ್ರಿಂದ ಬಡವ ಬಲ್ಲಿದರೆಂಬ ಭಾವವಿಲ್ಲದ ಎಲ್ಲರೂ ಜೊತೆಯಾಗಿರುತ್ತಿದ್ದೆವು. ಹತ್ತನೆ ತರಗತಿಯವರೆಗೆ ೩೭೦ ಮಕ್ಕಳ ಭವಿಷ್ಯ ರೂಪಿಸಬೆಕಾದ ಈ ಶಾಲೆ ಅದ್ಯಾಪಕರ ಕೊರತೆಯಿಂದ ಮನೆಯ ಸೊರುವ ಮಾಡಿನಂತೆ ಅಲ್ಲಲ್ಲಿ ಮಕ್ಕಳು ನಪಾಸಾಗಿ, ಎಸ್ ಎಸ್ ಎಲ್ ಸಿ ತರಗತಿ ಸೇರುವ ವಿದ್ಯಾರ್ಥಿಗಳ ಸಂಖ್ಯೆ ಬೆರಳಲ್ಲಿ ಎಣಿಸುವಷ್ಟಾಗುತ್ತಿತ್ತು. ಇಷ್ಟದ್ರಲ್ಲಿ, ನಾನು ಅದ್ ಹೇಗೊ ಮಾಯದಲ್ಲಿ ನುಸುಳಿಕ್ಕೊಂಡು ಎಸ್ ಎಸ್ ಎಲ್ ಸಿ ತಲುಪಿದ್ದೆ.  

ತರಗತಿಯ ಮೊದಲ ದಿನವೇ ಸಿದ್ದಪ್ಪ ಸಾವ್ಕಾರರ ಮಗಳು - ಹರಿಣಿ, ಕಣ್ಣಿಗೆ ಕಾಡಿಗೆ ಹಚ್ಚಿಕ್ಕೊಂಡು, ಎರಡು ಜಡೆ ಹಾಕ್ಕೊಂಡು, ಒಂದು ಮೊಳ ಕಸ್ತೂರಿ ಮಲ್ಲಿಗೆ ಮುಡಿಕ್ಕೊಂಡು ಹಸಿರು ಚೂಡಿದಾರದಲ್ಲಿ ಬಂದಿದ್ಲು. ಇದರ ಮೊದಲು ನಾನೂ ಅವಳೂ ಒಂದೆ ತರಗತಿಯಲ್ಲಿ ಕಲಿತಿದ್ದರೂ, ಇಷ್ಟೊಂದು  ಆಕರ್ಶಕವಾಗಿ ಕಂಡಿರಲಿಲ್ಲ. ೮-೯ ಕ್ಲಾಸುಗಳಲ್ಲೇ ಅವರಿವರ ಹೆಸರುಗಳನ್ನು ಇವರವರ ಹೆಸರುಗಳ ಜೊತೆ ಸೇರಿಸಿ, ಗುಸು ಗುಸು ಮಾತಾಡಿ, ಪಿಸಿ ಪಿಸಿ ನಕ್ಕು, ಕಿಸಿ ಕಿಸಿ ಹಲ್ಲು ತೋರಿಸಿ, ಕಣ್ಣರಳಿಸುತ್ತ ಛೇಡೀಇಸುತ್ತಿದ್ದೆವಾದ್ರೂ ಅದೆಲ್ಲ ಒಂದು ಮೋಜೆನಿಸುತ್ತಿತ್ತೇ ವಿನಹ ಅದೊಂದು ನಮ್ಮ ತಂಟೆಗೆ ಬರುವ ವಿಷಯವಾಗಿರಲಿಲ್ಲ.

ಈವತ್ಯಕೋ ನನ್ನ ಗಮನವೆಲ್ಲ ಆಕೆಯ ಮೇಲೇ ಹೋಗುತ್ತಿದೆಯಲ್ಲ... 
ಮೊದಲ ದಿನವಾದ್ರಿಂದ ಹೆಡ್ ಮಾಸ್ತರರು ಬಂದು, ಇನ್ನೂ ೯ ತಿಂಗಳು ಕಳೆದು ಬರುವ ಪಬ್ಲಿಕ್ ಪರೀಕ್ಷೆಯನ್ನು, ಸಿನೆಮಾಗಳಲ್ಲಿ ಚೊಚ್ಚಲ ಗರ್ಭಿಣಿಯನ್ನು ಜತನದಿಂದ ನೊಡಿಕ್ಕೊಳ್ಳುವ ಗಂಡನಂತೆ ವಿವರಿಸಿ ಹೋದರು. ಮತ್ಯರೂ ಬರಲಿಲ್ಲವಾದ್ದರಿಂದ ಮಂಗಳೂರಿನ ಮೀನು ಮಾರ್ಕೇಟ್ ನಮ್ಮ ಶಾಲೆಗೇ ಸ್ತಳಾಂತರವಾಗಿರುವಂತೆ ಆಗಿತ್ತು.

ನನ್ನ ಕಣ್ಣುಗಳಂತು ತಿರು ತಿರುಗಿ ಅವಳನ್ನೇ ನೋಡುತ್ತಿತ್ತು. ಅವಳ ಹಸಿರು ಚೂಡಿದಾರ ಮತ್ತು ಅವಳ ಮೈ ಬಣ್ಣ ಒಂದಕ್ಕೊಂದು ತುಂಬಾ ಹೊಸೆದುಕ್ಕೊಂಡಿತ್ತು. ಮದರಂಗಿ ಹಾಕಿದ ಕೈಗಳ ತುಂಬಾ ಬಳೆಗಳೂ ಹಸಿರು. ಕೊಬ್ಬರಿ ಎಣ್ಣೆಯಿಂದ ನೀವಿದ ನೀಳವಾದ ಜಡೆಗಳೆರಡೂ ಮೂರೆಳೆಯಲ್ಲಿ ಹೆಣೆದು ಮೆಲ್ಗಡೆಯಲ್ಲಿ ಕಸ್ತೂರಿ ಮಲ್ಲಿಗೆ ಮುಡಿದಿದ್ಲು. ಕೆನ್ನೆಯಲ್ಲೊಂದು ಸಣ್ಣ ಗುಳಿ ಅವಾಗಾವಾಗ ನಗುತ್ತಿದ್ದಂತೆ ಕಾಣಿಸಿಕ್ಕೊಂಡು ಮತ್ತೆ ನಗುವಿನೊಂದಿಗೇ ಮಾಯವಾಗುತಿತ್ತು. ತುಟಿಯ ಕೆಳಗಡೆಯಿರುವ ಸಣ್ಣ ಮಚ್ಚೆಯೊಂದು ರಾಜನ ಕೈಯಲ್ಲಿರುವ ತಿಜೊರಿ ಪೆಟ್ಟಿಗೆಯಂತೆ ತಾನ್ಯಾರರಿಗೆಂದೂ,  ತನ್ನೊಳೆಷ್ಟಿದೆಯೆಂದೂ ತೋರಿಸದೆ, ತನ್ನಿರುವನ್ನು ಮಾತ್ರ ಸೂಸಿ ಗಾಂಭೀರ್ಯದಿಂದ ಕುಳಿತಿತ್ತು. ಮುಂಗುರುಳು ಹಣೆಯ ಮೇಲಿಂದ ಹಾಗೇ ಇಳಿದು ಕೆನ್ನೆಯನ್ನು ಮುತ್ತಿಕ್ಕುತ್ತಿತ್ತು. ನನ್ನ ಆಂತರ್ಯದಲ್ಲಿ ಆ ಮುಂಗುರುಳ ಮೇಲೇ ಸಣ್ಣದೊಂದು ಮಾತ್ಸರ್ಯ ಬೆಳೆದದ್ದು ನನಗೇ ತಿಳಿಯದಂತಿರಲಿಲ್ಲ. ಬಂಗರದ ಸಣ್ಣ ಝುಮ್ಕಿ ಕಿವಿಗಳ ಮೇಲೆ ತಾನೊಲ್ಲೆ - ತಾನೊಲ್ಲೆ ಎನ್ನುವಂತೆ ಆಡುತ್ತಿದ್ದವು. ಆವುಗಳ ಭಾಷೆ ನನಗೆ ಗೊತ್ತಿಲ್ಲವಾದ್ದರಿಂದ ಅವುಗಳು ಯಾಕೆ ಒಲ್ಲೆ ಎನ್ನುತ್ತಿದ್ದವೆಂದು ಅರ್ಥವಾಗಲಿಲ್ಲ. ಮೂಗಿನ ಮೇಲೆ ಪಚ್ಚೆ ಕಲ್ಲಿನ ಸುಂದರವಾದ ಮೂಗುತಿಯೊಂದು ಜಂಬದಿಂದ ಮಿರ ಮಿರನೆ ಹೊಳಿಯುತ್ತಿತ್ತು. ಅದು ತಾನೆ ಚಕ್ರವರ್ತಿಯಂತೆ ಗ್ರಹಿಸುತ್ತಿರಬೇಕು. ನನ್ನನ್ನು ನೋಡಿ ಒಂದು ಮಂದಹಾಸವನ್ನಾದರೂ ಕೊಟ್ಟಿದ್ದರೆ ಚೆನ್ನಾಗಿತ್ತು. ಆದರೆ ನೀನು ಒಂದು ಥರಾ ಜಿಗುಪ್ಸೆಯಿಂದ ನನ್ನ ನೋಡಿ ಮುಖ ತಿರುಗಿಸಿದ್ಯಲ್ಲ.  ನಿಜಕ್ಕೂ ನನ್ನ ಮೇಲೇ ಬೇಜಾರಾಯ್ತು. ಹಾಗೆ ನೋಡಬಾರದೆನಿಸಿತ್ತು.

ಮನೆಗೆ ಮರಳುವ ದಾರಿಯಲ್ಲಿ ಚಂದ್ರು ಕೇಳಿದ್ದ - ನಿಂಗೆ ಹರಿಣಿಯನ್ನು ನೋಡಿದ್ರೆ ಇಷ್ಟವಾ? ಅಂತ. ಯಾಕೆ ಹಾಗೆ ಕೆಳ್ತಾ ಇದ್ದೆಯ ಅಂದೆ. ನೋಡ್ತಾಇದ್ಯಲ್ಲಾ ಅಂದ. ಕೆಲವು ವಿಷಯಗಳ ಬಗ್ಗೆ ಅತೀ ಹತ್ತಿರದ ಗೆಳೆಯರು ಕೇಳಿದ್ರೂ ಮುಜುಗರವಾಗುತ್ತೆ. ಇನ್ನೂ ಹುಟ್ಟದ ಚೊಚ್ಚಲ ಪ್ರೇಮವೂ ಹೀಗೇ ಇರಬೇಕು. ಬಹುಶ ಚಂದ್ರುವಿಗೆ ತಿಳಿಯದಿರದ ಯಾವ ಗುಟ್ಟುಗಳೂ ನನ್ನಲ್ಲಿಲ್ಲವೇನೋ, ಇದೊಂದನ್ನು ಬಿಟ್ಟು. ಪಕ್ಕದಲ್ಲೇ ಇರುವ ಪೊನ್ನೆ ಮರದಲ್ಲಿ ಅರಣೆಯೊಂದು ಕಂಡದ್ರಿಂದ ಚಂದ್ರು ನನ್ನ ವಿಷಯವನ್ನು ಬಿಟ್ಟು ಕಲ್ಲು ತೆಗೊಂಡು ಅರಣೆಗೆ ಹೊಡಿಲಿಕ್ಕೆ ಅಣಿಯಾದ. ನಾನೇನೋ ನನ್ನ ಮುಜಗರದಿಂದ ಪಾರದೆ. ಆದ್ರೆ, ಅರಣೆಯ ಅದೃಷ್ಟ ನಿಜಕ್ಕೂ ಚೆನ್ನಗಿರಲಿಲ್ಲ. ರಜೆಯ ದಿನಗಳಲ್ಲೆಲ್ಲಾ ಲಗೋರಿ ಆಡಿ ಆಡಿ, ಚಂದ್ರುವಿನ ಗುರಿ ಅರ್ಜುನನ ಗಾಂಢೀವದಿಂದ ಹೊರಟ ಬಾಣದಂತೆ ನೇರವಾಗಿ ಅರಣೆಯ ತಲೆಯನ್ನು ಸೀಳೀ ರಕ್ತದೋಕುಳಿ ಕಾಣುವಂತೆ ಮಾಡಿತ್ತು. ನನ್ನ ಮಿಡಿಯುವ ಮನಸ್ಸನ್ನೋದಿದ ಚಂದ್ರು ನನ್ನನ್ನು ಹುಂಬುತನವೆಂದು ಜರಿಯತೊಡಗಿದ. ಸಂಜೆಯ ಆಟದಲ್ಲೇನೂ ಪೂರ್ಣವಾಗಿ ತೊಡಗಿಸಿಕ್ಕೊಳ್ಳಲಾಗಲಿಲ್ಲ. ಎಲ್ಲೋ ಏನೋ ಒಂದು ಅಶಾಂತಿ ಅಸಂತೃಪ್ತಿ ಹೊಗೆಯಾಡತೊಡಗಿದೆ ಅಂತ ಗೊತ್ತಾಗುತ್ತಿದ್ದರೂ, ಎಲ್ಲಿ ಯಾಕೆ ಅಂತ ಹೊಳಿಯಲಿಲ್ಲ. ಋಷಿ ಮೂಲ ಮತ್ತು ನದೀ ಮೂಲ ಹುಡಕಬಾರದೆಂದು ಎಲ್ಲೋ ಹೇಳಿದ್ದು ಕೇಳಿ ನನ್ನ ಸಮಸ್ಯೆಯ ಮೂಲವನ್ನಲ್ಲ ಎಂದು ಮನಗಂಡು ಹುಡುಕುತ್ತಾ ಹೋದಂತೆ ಮತ್ತಷ್ಟು ಜಟಿಲವಾಗಿ ಮಿದುಳಲ್ಲೊಂದು ಕೊರೆಯುವ ಹೊಟ್ಟೆಯಲ್ಲಿರಬೆಕಾದ ಜಂತು ಹುಳವನ್ನು ಬಿಟ್ಟಂತಿತ್ತು.

ದಿನಕಳಿದಂತೆ ಆಕೆಯನ್ನು ಕನವರಿಸುವುದು ಜಾಸ್ತಿಯಾದರೂ, ಹರಿಣಿ ಮಾತ್ರ ಇದ್ಯವದೂ ತನಗೆ ಸಂಬಂಧಿಸಿದ್ದಲ್ಲವೆಂಬಂತೆ ಸುಮ್ಮನಿರುತ್ತಿದ್ದಳು. ಛೇ, ಈ ಹುಡುಗಿಯರೇ ಹೀಗೆ... ಎಲ್ಲ ಗೊತ್ತಿದ್ದರೂ, ಗೊತ್ತಿಲ್ಲದವರಂತೆ ಇರ್ತಾರಲ್ಲ. ಎಷ್ಟು ಸಲ ಕ್ಲಾಸಿನಲ್ಲೆ ಅವಳ ಮುಖ ನೊಡುತ್ತಿಲ್ಲ? ಅವಳು ಬಸ್ಸಿಗೆ ಕಾಯುವಾಗ ನಾನೂ ಕಾಯಲಿಲ್ಲ? ಎಷ್ಟು ಸರ್ತಿ ಅವಳ ಹತ್ರ ನೋಟ್ಸ್ ತೆಗೊಂಡಿಲ್ಲ? ಅದೂ ಸುಮ್ಮ ಸುಮ್ಮನೆ ಅಂತ ಅವಳಿಗೂ ಗೊತ್ತಿಲ್ವಾ? ಮತ್ತೂ ಅವಳ್ಯಾಕೆ ಸುಮ್ಮನಿದ್ದಾಳೆ. ಬಹುಶ: ನಾನು ಕಾಣಲು ಅವಳಷ್ಟು ಚೆನ್ನಗಿಲ್ಲ ಅಂತ ಆಗಿರ್ಬಹುದು. ನಾನು ಅವಳ ಹಾಗೆ ಸವುಕಾರರ ಕುತುಂಬವಲ್ಲದಿದ್ದರೂ, ಅಷ್ಟಿಷ್ಟು ಜೀವನ ನಡೆಸಿಕ್ಕೊಂಡು ಹೊಗೊದಿಕ್ಕಗುವಷ್ಟು ತೋಟ ಇರುವವನೇ.

ಎಲ್ಲದಕ್ಕೂ ಕಾಲ ಕೂಡಿಬರಬೇಕಲ್ಲ. ಎರಡು ತಿಂಗಳಿಗೇ ಬಂತು. ಒಂದು ದಿನ ಶಾಲೆಯ ಹತ್ತಿರ ಗೆಜ್ಜೆಯೊಂದು ಸಿಕ್ಕಿ ಅದರ ಒಡತಿಯಾದ ಹರಿಣಿಗೇ ಹಿಂತಿರುಗಿಸಿದೆ. ಅವಳ ಎಲ್ಲ ಆಭರಣಗಳ ಬಗ್ಗೆ, ಅವಳ ಚುಡಿದಾರಗಳ ಬಗ್ಗೆ ಅಷ್ಟೇ ಏಕೆ ಅವಳ ಉಬ್ಬು-ತಬ್ಬು ಗಳ ಬಗ್ಗೆ ನನಗೆ ತುಂಬಾ ನಿಖರವಾದ ಅತೀಂದ್ರಿಯದ ಜ್ನಾನವಿದೆ. ನನಗೆ ಗುರುತಿಸಲು ಏನೇನೂ ಕಷ್ಟವಾಗಿರಲಿಲ್ಲ. ಆದ್ರೆ ಅವಳಿಗೆ ನನ್ನ ಬಗ್ಗೆ... ಒಂದು... ಒಂದು... ಈ.. ಇ... ಇದು ಶುರುವಾಗಲು ಇದೊಂದು ಘಟನೆ ಸಾಕಾಯ್ತು. ಹಾಗೆಂತ ಪ್ರೇಮವೇನೂ ಅಲ್ಲ.. ಆದ್ರೂ ಏನೋ ಒಂದು ರೀತಿ ನೋಡುವ ಕಣ್ಣುಗಳ ನೋಟ ಬೇರೆಯಾದದ್ದು ತಿಳಿಯುತ್ತಿತ್ತು. ಆಮೇಲೆ ನನ್ನಲ್ಲಿ ತುಂಬಾ ಮಾತಡತೊಡಗಿದಳು. ನಲಿವಿರಲಿ ನೋವಿರಲಿ ಹಸಿವಿರಲಿ ಹುಸಿ ಕೋಪವಿರಲಿ ಎಲ್ಲವನ್ನೂ ಅರಹುತ್ತಿದ್ದಳು. ನಾನೂ ಅಷ್ಟೇ... 

ಈ ಹುಡುಗ್ಯರೇ ಹೀಗೆ.. ಅವರಿಗೆ ಯಾರು ಯಾವಾಗ ಹೇಗೆ ಎಲ್ಲಿ ಇಷ್ಟ ಆಗ್ತಾರೆ ಅಂತಾನೇ ಗೊತ್ತಾಗಲ್ಲ. ಮುಂದೆ ದಸರಾ ರಜೆಯಲ್ಲಂತೂ ನನ್ನ ಮನಸು ಅವಳ ಗುಂಗಿನಲ್ಲೇ ಇದ್ದು ತಿಂಡಿ ತೀರ್ಥ ಏನೂ ಬೇಡವಾಗಿ ಅಮ್ಮನಿಂದ ಬೈಸಿಕ್ಕೊಂಡು ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ತಾಯತ ಕಟ್ಟಿಸ್ಕೊಂಡು, ಅಷ್ಟೆಲ್ಲ ಆಗುವಾಗ ದಸರ ರಜೆ ಮುಗಿದು ಶಾಲೆ ಪುನ: ಶುರುವಾಗಿ, ನನ್ನೆಲ್ಲ ತುಡಿತಗಳ ಕೇಂದ್ರ ಬಿಂದು ವೃತ್ತೀಯ ಕೋಣದೊಳಗೆ ಬಂದು, ಸಮ ಕೋಣವಾಗಿ, ಛಾಪ ತ್ರಿಜ್ಯವಾಗಿ, ತ್ರಿಜ್ಯ ಕೇಂದ್ರವಾಗಿ, ಕೆಂದ್ರವೇ ಅನಂತವಾಗಿ ಹೋಯಿತು. ಲೆಕ್ಕಗಳ ಗುಣಿತಗಳು ಅವಳ ತಲೆಕೂದಲಿನ ಸಂಖ್ಯೆಯಂತೆ, ಲೋಗರಿತಮ್ ಟೇಬಲ್ ಅವಳ ಮನಸಿನಂತೆ, ವಿಜ್ನಾನದ ಸಮೀಕರಣಗಳು ಅವಳ ಮೈಬಣ್ಣದ ಅದ್ಭುತದಂತೆ, ಸಮಾಜ ಶಾಸ್ತ್ರದ ಇಸವಿಗಳು ಇವಳ ಮಾತಿನಲ್ಲಿ ವಿಲೀನವಾಗಿ ಮತ್ತಷ್ಟು ಜಟಿಲವಾಗತೊಡಗಿತು.

ಅದೆಷ್ಟು ಸರ್ತಿ ನಿನ್ನ ಕನಸುಗಳು ನನ್ನ ಮನಸಿನಲ್ಲಿ ಮೊಳಕೆಯೊಡೆಯಲಿಲ್ಲ? ಕನಸುಗಳು ರಾತ್ರಿ ಮಾತ್ರವಲ್ಲ. ಹಗಲುಗಳೂ ರಾತ್ರಿಯಂತಾದವು. ನನ್ನ ಬಳಿ ಬಂದು ಅಪ್ಪಿ ಮುದ್ದಾಡಿ ತುಟಿ ಕಚ್ಚಿದಂತದಾಗ ಅದೆಷ್ಟು ಬಾರಿ ನಾನು ಸಿಹಿ ನಿದ್ದೆಯಲ್ಲಿ ನರಳಾಡಿ ಎಚ್ಚರಗೊಳ್ಳಲಿಲ್ಲ? ನಮ್ಮನೆ ಪಕ್ಕದಲ್ಲೆ ಇರುವ ತೊರೆಯೊಂದರಲ್ಲಿ ನಾವಿಬ್ಬರೂ ಕಾಲುಗಳನ್ನಿಟ್ಟು ಆಟವಾಡುವಾಗ ಪುಳಕಿತಗೊಳ್ಳಲಿಲ್ಲವೇ? ಷಷ್ಟಿಯ ದಿನ ಸುಬ್ರಹ್ಮಣ್ಯದಲ್ಲಿ ಮನೆಯವರ ಕಣ್ಣು ತಪ್ಪಿಸಿ ಸ್ಕಂದ ಹೊಟೆಲ್ ನಲ್ಲಿ ಜೊತೆಗೂಡಿ ಐಸ್ ಕ್ರೀಂ ತಿನ್ನಲಿಲ್ಲವಾ? ಸುಳ್ಯದ ಜಾತ್ರೆಯಲ್ಲಿ ಜೊತೆಯಾಗಿ - ತಿರುಗಾಡಿ ತಿರುಗಾಡಿ ಚಪ್ಪಲಿ ಸವೆದು ಹೋಗಿಲ್ಲವಾ...? ನಿನ್ನ ತಲೆ ಮೇಲೆ ಶಾಲು ಹೊದ್ದರೆ ಮತ್ತಷ್ಟು ಮುದ್ದಾಗಿ ಕಾಣಿಸುತ್ತಿ ಎಂದು ನಾನು ಅದೆಷ್ಟು ಬಾರಿ ಶಾಲು ಹೊದಿಸಿಲ್ಲ? ಈ ಥರ ನಾನು ಮಾತ್ರವಲ್ಲವಲ್ಲಾ, ನೀನೂ ಕನಸು ಕಾಣುತ್ತಿದ್ದಿತೆಂದು ಅನಿಸುತ್ತಿದ್ದಿತು. ಆದರೆ ಬಾಯಿ ಬಿಟ್ಟು ಕೇಳಲು ಏನೋ ಒಂದು ಅಂಜಿಕೆ. ಯಾವತ್ತೂ ಒಬ್ಬರಿಗೊಬ್ಬರು ಹೇಳಿಕ್ಕೊಳ್ಳದೆ ಅದೆಷ್ಟು ಸಮಯ ಪೇಚಾಡಿಕ್ಕೊಳ್ಳಲಿಲ್ಲ?    

ಪಬ್ಲಿಕ್ ಪರೀಕ್ಷೆ ಸಿಸೆರಿಯನ್ ಹೆರಿಗೆಯಂತೆ ಆಗೋಯ್ತು. ರಿಸಲ್ಟ್ ಬಂದಾಗ ನಾನು ಅಲ್ಲಿಂದಲ್ಲಿಗೆ ಪಾಸಾಗಿದ್ದೆ. ನೀನು ಸೆಕೆಂಡ್ ಕ್ಲಾಸ್ನಲ್ಲಿ ಪಾಸಾಗಿದ್ದೆ. ನಿಂಗೆ ಸುಳ್ಯದಲ್ಲಿ ಕಾಲೇಜು ಸೀಟು ಸಿಕ್ಕಿ, ನನಗೆ ಮಾರ್ಕು ತುಂಬಾ ಕಡಿಮೆಯಾದ್ರಿಂದ  ರಾಣೀಬೆನ್ನೂರಿನಲ್ಲಿ ಕಾಲೆಜು ಸಿಕ್ಕಿ ಒಬ್ಬರಿಗೊಬ್ಬರು ದೂರವಾದೆವು. ವರ್ಷಗಳು ಕಳೆದಂತೆ ತುಡಿತವೆಲ್ಲ ಕಡಿಮೆಯಾಗಿ ನೆನಪುಗಳೂ ಮಾಸಿದವು. 

ಈವತ್ತು ಸುಳ್ಯದ ಬಸ್ ಸ್ಟಾಂಡಿನಲ್ಲಿ ನಿನ್ನಂತೆ ಒಬ್ಬಳು ಕೈಯಲ್ಲಿ ೭-೮ ತಿಂಗಳ ಮಗುವನ್ನು ಹಿಡಿದಿರುವುದು ಕಂಡಾಗ ನೆನಪಾಯ್ತು. ನಿನ್ನಂತೆ ಅಲ್ಲ, ಅದು ನೀನೇ, ಯಾಕೋ ಬುದ್ಧಿ ಒಪ್ಪಿಕ್ಕೊಂಡಿದ್ದರೂ ಮನಸ್ಸು ತಯಾರಾಗಿರಲಿಲ್ಲ. ಎಲ್ಲೋ ಏನೋ ಕಟುಕಿದಂತಾಗುತ್ತಿತ್ತು. ೨ ವರ್ಷಗಳ ಹಿಂದೆ ಚನ್ದ್ರು ಹೇಳಿದ್ದ. ಈಗ ನಿನ್ನ ನೋಡೀದ ಮೇಲೆ ಏನೋ ಕಳೆದು ಹೋದಂತೆ ಅನ್ನಿಸುತ್ತಿದೆ. ಸುಮಾರು ೮ ವರ್ಷ ಆಯ್ತಲ್ಲ ನಿನ್ನ ನೋಡಿ.. ಒಳ್ಳೇ ಬೂದು ಕುಂಬಳಕಾಯಿಯಂತೆ ಊದಿಕ್ಕೊಂಡಿದ್ದೀಯಲ್ಲಾ?

ಅಮ್ಮನ ದನಿ ಕೇಳಿ ನೆನಪಿನ ಸುರುಳಿಯಿಂದ ಈಚೆ ಬರಬೇಕಾಯ್ತು. ಲೋಟವೊಂದರಲ್ಲಿ ಬಿಸಿ ಬಿಸಿ ಕಾಫಿ ಹೀರಿದಾಗ ಮೈ ಎಲ್ಲ ಆರಾಮವಾಯ್ತು. ಆದರೂ ಮನದ ಮೂಲೆಯಲ್ಲೆಲ್ಲೋ   ಸಣ್ಣದೊಂದು ಭಾವ ತಾಳಕ್ಕೂ ಸಿಗದೆ, ರಾಗಕ್ಕೂ ಹೊಂದಿಕ್ಕೊಳ್ಳದೆ ಆಲಾಪಿಸುತ್ತಿತ್ತು.

ಶುಕ್ರವಾರ, ಫೆಬ್ರವರಿ 20, 2009

ಬೈಗುಳ ಕೂಡ ತುಂಬಾ ದುಬಾರಿ ಈ ಕಾಲದಲ್ಲಿ...!

ಬೆಳಿಗ್ಗೆ ೮:೩೦ಕ್ಕೆ ಸರಿಯಾಗಿ ನಮ್ಮ ಕ್ಯಾಬ್ ಹೊರಡುತ್ತೆ. ನನ್ನದೇ ಪ್ರಥಮ ನಿಲ್ದಾಣವಾದ್ರಿಂದ ಒಂದೆರಡು ನಿಮಿಷಗಳ ಹೆಚ್ಚು ಕಮ್ಮಿ ಆದ್ರೂ ಚಾಲಕ ಕುಮಾರ್ ಮಾತನಾಡದೆ ಕಾಯ್ತಾ ಇರ್ತಾರೆ. ೫ ನಿಮಿಷ ಕಳೆದೂ ಬಂದಿಲ್ಲವೆಂದರೆ ಮಿಸ್ ಕಾಲ್ ಕೊಡ್ತಾರೆ. ನನ್ ನಿಲ್ದಾಣ ಕಳೆದ ಮೇಲೆ ೩ - ೪ ಜನರು ಸೇರಿಕ್ಕೊಳ್ತಾರೆ. ಕೊನೆಗೆ ಬರೋವ್ರು ಅಕ್ಷತಾ. ಹೆಸರಿನಂತೆ ಅವರ ಮಾತು ಕೂಡ ಅಕ್ಷಯ.

ತಡೆ ರಹಿತ ಮಾತು
ಬಿಸಿ ಬಿಸಿ ಬಾತು
ಸಕತ್ ಹಾಟು
ಅಕ್ಷತಳ ಟಾಕು...

ಅವರು ಮಾತನಾಡೋ ರೀತೀನೇ ಹಾಗೆ... ಮಾತುಗಳು ತಡೆರಹಿತವಾಗಿದ್ರೂ, ಹೇಳೋ ವಿಷಯಗಳು ಅಷ್ಟೇ ಆಕರ್ಶನೀಯವಾಗಿರುತ್ವೆ ಇದ್ದಕ್ಕಿದ್ದಂತೆ ಅಕ್ಷತ ಹೇಳಿದ್ರು " ಇತ್ತೀಚಿಗೆ ಬೈಗಳು ಕೂಡಾ ತುಂಬ ದುಬಾರಿ. ನಾನು ಇನ್ನು ಯಾರಿಗೂ ಬೈಯ್ಯಲ್ಲಪ್ಪಾ...." ಅಂತ.ಅಕ್ಷತ ಸದ್ಯದಲ್ಲೇ ಮದುವೆ ಆಗಲಿರುವವರು. ಭಾವಿ ಗಂಡನ ತಮ್ಮನಿಗೆ ಏನೋ ಹೇಳಲಿಕ್ಕೆ ಹೋಗಿ ಏನೇನೋ ಆಗಿ ಭಾವಿ ಗಂಡನ ತಮ್ಮನಿಂದ್ಲೇ ಬೈಸಿಕ್ಕೊಂದು ಜೊತೆಗೆ ಇವರೂ ಬೈದಾಡಿ, ಮಾತ್ರವಲ್ದೆ ಮೈದುನ ಸಿಟ್ಟಾಗಿ, ಸಿಟ್ಟಿಗೆ ಅಕ್ಷತ ಬೇಜಾರಾಗಿ,

ಮುನಿಸು ಬೇಡಲೋ ಭಾವಿ ಗಂಡನ ತಮ್ಮಾ,
ಹಸನಾಗಿ ಮನೆಯಲಿರಬೇಕದವರು ನಾವು
ಒಮ್ಮೆ ಮನನೊಂದ ಮಾತ್ರಕ್ಕೆ
ಮನೆಯೆಲ್ಲ ಎರಡಾಗುವುದೇತಕ್ಕೆ ತಮ್ಮಾ ?

ಓಹ್, ಇದಕ್ಕೇ ಕಾದಂತಿದ್ದ ಮೈದುನ, ಕೇಳೇ ಬಿಟ್ಟನಂತೆ... " ಪರಿಹಾರಾರ್ಥವಾಗಿ ಒಂದು ಉಡುಗೊರೆ ಬೇಕು.."
ಇವಳನ್ದ್ಲು"ಸೈ..."
ಕೊನೆಗೆ ೩,೫೦೦ ಬೆಲೆಯ ಸೂಟೊಂದು ಕೊಂಡ ಮೇಲೆ ಭಾವಿ ಮೈದುನ ಶಾಂತ ಗೊಂಡನಂತೆ...
ಆಫೀಸು ತಲಪುವ ಮುಂಚೆ ಮತ್ತೊಮ್ಮೆ ಅಕ್ಷತ ಅಂದ್ಲು " ಇತ್ತೀಚಿಗೆ ಬೈಗಳು ಕೂಡಾ ತುಂಬ ದುಬಾರಿ. ನಾನು ಇನ್ನು ಮುಂದೆ ಯಾರಿಗೂ ಬೈಯ್ಯಲ್ಲಪ್ಪಾ...." ಅಂತ.

ಶುಕ್ರವಾರ, ಫೆಬ್ರವರಿ 13, 2009

ಓ ಫೆಬ್ರವರಿ, ನೀನೇಕೆ ತುಂಬಾ ಕೆಂಪು ಕೆಂಪು...?



ಓ ಫೆಬ್ರವರಿ,
ನಿನ್ನ ಕಾಯುತಿದೆ
ಬಹುದಿನಗಳ ಕನಸು...

ನಡೆಯುತಲಿ ಬೀದಿಯಲಿ
ನಿನ್ನೇ ನೆನೆಯುತಿದೆ
ಕಾಣದಾ ಮನಸು...
ಉದುರಿದೆಲೆಯಲ್ಲಿ
ನಿನ್ನ ಮೊಗ ಕಂಡು
ಕಾಲೆರಡು ಮೈ ಮರೆಯುತಿವೆ...
ಸುಳಿವ ಗಾಳಿಯಲಿ
ನಿನ್ನ ನಗು ಕಂಡು
ಕಣ್ಣು ಮಿನುಗುತಿದೆ...
ಸಂಜೆಯಲಿ ರವಿ ಕೆಂಪು
ನಿನ್ನ ಕೆನ್ನೆಯ ತುಂಬ
ನವಿರಾದ ತಂಪು...
ಬಿಳಿಯ ಮೋಡಗಳೇ
ಬಳಿಬಂದು ಕೊಡುತಿಹವು
ನಿನ್ನ ಓಲೆಗಳು...
ಬಿಡಿಸಿ ನೋಡಲು ನಾನು
ಮಳೆಯ ಹನಿಗಳು ಬಿದ್ದು
ಕದ್ದು ಓಡುತಿವೆ...
ಮುಸ್ಸಂಗೆ ನನಕಂಡು
ಅಂತರಂಗದ ಬಯಕೆ
ನಡೆಯಲಿಹುದು ಎನ್ನುತಿದೆ...
ಮರೆಯ ಮೋಡದ ನಡುವೆ
ಚಂದಿರನ ಕಂಡು
ಮನಸು ಕಾಡುತಿದೆ...
ಓ ಫೆಬ್ರವರಿ,
ನೀನೇಕೆ ತುಂಬಾ
ಕೆಂಪು ಕೆಂಪು...?

ಸೋಮವಾರ, ಫೆಬ್ರವರಿ 9, 2009

ಬೇಕಲ ಕೋಟೆ

ನಮ್ಮೂರಲ್ಲಿ ತುಂಬಾ ಆಕರ್ಷಣೀಯವಾದ ಹಾಗೂ ಬಹುತೇಕ ಅನ್ಯ ರಾಜ್ಯವಾಸಿಗಳಿಗೆ ಗೊತ್ತಿರುವ ಪ್ರೇಕ್ಷಣೀಯ ಸ್ಥಳ ಬೇಕಲ ಕೋಟೆ.

ಸಸ್ಯ ಶ್ಯಾಮಲೆಯಿಂದ ಸಮೃದ್ಧಿಗೊಂಡ ಗಡಿನಾಡು ಪ್ರದೇಶದಲ್ಲಿರುವ ಈ ಕೋಟೆ ಕೇರಳದಲ್ಲೇ ಹಿರಿದಾದ ಕೋಟೆ. ಸುಮಾರು 40 ಎಕರೆ ಪ್ರದೇಶದ ವ್ಯಾಪ್ತಿಯಲ್ಲಿ ತನ್ನ ಬಾಹುಗಳನ್ನು ಚಾಚಿಕ್ಕೊಂದು ಈ ಕೋಟೆ ಹಿರಿಯ ವೆಂಕಪ್ಪ ನಾಯಕನಿಂದ ಆರಂಬಿಸಿದ ಶಿವಪ್ಪ ನಾಯಕನ ಕಾಲದಲ್ಲಿ ಅಂತ್ಯ ಗೊಂಡಿತೆಂದು ಇತಿಹಾಸ ಹೇಳುತ್ತಿದೆ.


ಸಮುದ್ರಕ್ಕೆ ತಾಗಿಕ್ಕೊಂದು ಇರುವ ಈ ಕೋಟೆಯು ಸಂದರ್ಶಕರನ್ನು ಖಂಡಿತವಾಗಿಯೂ ಆಕರ್ಷಿಸುತ್ತದೆ. ಪಕ್ಕದಲ್ಲೇ ಇರುವ ಸಮುದ್ರ ತೀರವು, ಜೇನುನೊಣ ಮಧುವನ್ನರಸಿ ಹೋಗುವಂತೆ ಜನರನ್ನು ತನ್ನೆಡೆಗೆ ಕೈ ಬೀಸಿ ಕರೆದು ಮನದುಂಬಿ ಕಳಿಸುತ್ತಿದೆ...!

ಶುಕ್ರವಾರ, ಫೆಬ್ರವರಿ 6, 2009

ನನ್ನ ಪ್ರಿಯ ಮಿತ್ರ


online ಜಾತ್ರೆಯಲಿ ಪೀಪಿ ಊದಲು ಹೇಳಿಕೊಡುವವ
ebay ಯಲ್ಲಿ ಆನೆ purchase ಮಾಡ್ಲಿಕ್ಕೆ suggestion ಕೊಡುವವ
ಗೂಗಲ್ ಸರ್ಚ್ನಲ್ಲೂ ಸಿಗದೇ ಬೇಜಾರಾದಾಗ ಹುಡುಕಿ ಕೊಡುವವ
ನನ್ನ ಗುಟ್ಟುಗಳನ್ನು ತನ್ನ ಲೋಕೆರ್ ನಲ್ಲಿ ಭದ್ರವಾಗಿಡುವವ...

ನಂಗೆ ಬೇಜಾರಾದಾಗ ತನ್ನ ಮೂಗಿಗೆ ಬೆರಳು ಹಾಕಿ ಬೋರ್ವೆಲ್ ಕೊರೆಯುವಾತ
ನನಗೆ ಸಂತೋಷವಾದಾಗ ಬೆಲ್ಲಿ ಡಾನ್ಸ್ ಮಾಡವ ಅಂತ ಗೋಗೆರೆಯುವಾತ
ನಂಗೆ ಹುಷಾರಿಲ್ಲ ಅಂತ ಗೊತ್ತಾಗ್ವಾಗ ಗಂಜಿನೀರು ಕುಡಿ ಅಂತ ಉಪದೆಶಿಸುವಾತ
ನನಗೆ ಊಟ ಸೇರಲಿಲ್ಲ ಅಂದ್ರೆ ನನ್ ಬಿಟ್ಟು ಪಿಜ್ಜಾ ತಿಂದದ್ಯಾಕೆ ಅಂತ ಛೇಡಿಸುವಾತ...

ಎಕ್ಸಾಮ್ ಹತ್ರ ಬಂದಾಗ ಬಯಕೆ ಎಂದು ಐಸ್ಕ್ರೀಮ್ ತಿನ್ನಿಸುವಾತ
ಎಕ್ಸಾಮ್ ಹಿಂದಿನ ದಿನ ರಿಫ್ರೆಶ್ ಅಂತ ಮೂವಿ ನೋಡುವಾತ
ಹಲ್ಲುಜ್ಜದೆ, ಸ್ನಾನ ಮಾಡದೆ ಎಕ್ಸಾಮ್ ಬರೆಯಲು ಹೋಗುವಾತ
ಬರೆದು ಹೊರಬಂದ ಮೇಲೆ ತಲೆ ಮೇಲೆ ಕೈ ಇತ್ತು ಕೂರುವಾತ...

ಬೀದಿಯಲ್ಲಿ ನಿಂತು ಹೋಗೋ-ಬರೋ ಹಕ್ಕಿಗಳ ಸೌಂದರ್ಯ ಸವಿಯುವಾತ
ಅಂದ-ಚಂದದ, ಬಣ್ಣದ ಗೊಂಬೆಗಳ ನೋಡಿ ಜೊಲ್ಲು ಸುರಿಸುವಾತ
ಅಕ್ಕ-ಪಕ್ಕದ ಮನೆಗಳ ಇಣುಕಿ ನೋಡಿ ಕಾಮೆಂಟ್ ಮಾಡುವಾತ
ರಾತ್ರಿಯೆಲ್ಲಾ ಇಸ್ಪೀಟ್ ಆಟವಾಡಲು ಟೀ ಕೊಟ್ಟು ಹುರಿದುಂಬಿಸುವಾತ...

ಅಣು ರೇಣು ತೃಣ ಕಾಷ್ಟದಲಿ ಸಹಕರಿಸುವವ
ಕಷ್ಟದಲಿ-ಕಾರ್ಪಣ್ಯದಲಿ ಕೈನೀಡಿ ಮೇಲಕ್ಕೆಳೆಯುವವ
ಮರುಭೂಮಿಯಲಿ ಕುಡಿಯಲೊಂದುವರೆ ಲೀಟರ್
ಮಿನರಲ್ ವಾಟರ್ ಬಾಟಲ್ ಇದ್ದಂಗೆ ಕಣ್ರೀ ನನ್ನ ಮಿತ್ರ ...!

ಮಂಗಳವಾರ, ಫೆಬ್ರವರಿ 3, 2009

ಸುಮ್ನೇ ಒಂದು ಹರಟೆ...!

ಒಂದು ಹತ್ತು-ಹದಿನೈದು ವರ್ಷ ಹಿಂದಿನ ಕಂಪ್ಯೂಟರ್ ನೋಡಿದ್ರೆ ಎಲ್ಲ branded ಆಗಿರ್ತಿತ್ತು... ಆವಾಗ ಈಗಿನ ಥರ assembled ಕಾನ್ಸೆಪ್ಟ್ ಇರ್ಲಿಲ್ಲ.. ಸುಮಾರಾಗಿ ಬೆಲೇನೂ brandedಗೆ ಜಾಸ್ತಿನೆ ಇರ್ತಿತ್ತು... ಆ ಮೇಲೆ ಬಂತು ನೋಡಿ assembled PC ಗಳು... ಅವು ಬಂದಂತೆ ಬಂದಂತೆ branded PC ಬೆಲೆ ಠುಸ್ ಅಂತ ಇಳೀತು ನೋಡಿ..!
ಎಲ್ಲೆಡೆಗೆ ೧ ಅಥವಾ ೦ ಅನ್ನೋ ಸಿಗ್ನಲ್ ಕೊಡಲು ಬೇಕಾದ ಹೃದಯ, ಅದಕ್ಕೆ ಬೇಕಾದಷ್ಟು ಬುದ್ಧಿ, ಶೇಖರಿಸಿಡಲು ಉಗ್ರಾಣಕ್ಕೆ ಬೇಕಾದಷ್ಟು ಮಿದುಳು, ಬ್ರೇಕ್ ಹಿಡಿಲಿಕ್ಕೆ keyboard, ಬೇಜಾರಾದಾಗ ಆಟಾಡೊಕ್ಕೆ ಸುಂಡಿಲಿ, ತುಂಬ ಚಂದ ಆಗಿ ಕಾಣಲಿಕ್ಕೆ XP ಅಥವಾ ವಿಸ್ಟಾ, ಎಲ್ಲವನ್ನು ಸೊಗಸಾಗಿ ಉಸ್ತುವಾರಿ ನಡೆಸಲು ಇವೆಲ್ಲದರ ತಾಯಿಯೆಂಬ ಒಂದು ಹಸುರು ಹಲಗೆ... ಅಹಾ! ಎಲ್ಲವೂ ಬೇರೆ ಬೇರೆ ಕಂಪನಿ.. ಆದ್ರೆ ಎಲ್ಲ ಒಟ್ಟಿಗೆ ಸೇರಿಸಲು ನಮಗೆ ಬೇಕಾದ ರೀತಿಯ ಕಂಪ್ಯೂಟರ್ ರೆಡಿ... ನಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ನಮಗೆ ಬೇಕಾದ ಗಣಕ ಯಂತ್ರ ಸಾಧ್ಯವಾಗಬಹುದಾದರೆ, ಮತ್ತೇನು ?

ನಾಳೆ ಬೈಕ್ ಅಥವಾ ಕಾರು ಈ ಥರ assemble ಆಗಿ ಬಂದ್ರೆ? ಈವಾಗಲೇ ಇದೆ.. ಬಟ್ ಅಸ್ಟೊಂದು popular ಆಗಿಲ್ಲ.

ಎನ್ ಫೀಲ್ಡ್ ಬೈಕ್ ನ ಪಿಕ್ಕಪ್ಪು
ಬಜಾಜ್ ಗಾಡಿ ಮೈಲೇಜ್
ಜಾವಾ ಗಾಡಿಯ ಗೆಟ್ಟಪ್ಪು
ಪಲ್ಸರ್ ಗಾಡಿಯ ಲುಕ್ಕಪ್ಪು...!

MRS ಟೈರು, ಡಿಸ್ಕ್ ಬ್ರೇಕ್
ಪಂಚರ್ ಆಗದ ಟ್ಯುಬು
ಟೆಕ್ನಾಲಜಿ ಆಫ್ ಹೋಂಡ
yezdi ಬೈಕಿನ duel ಸೈಲೆಂಸೆರ್

ಹೊಸತೊಂದು ಬಂದಾಗ ಹಳತು ಮೂಲೆಗುಂಪಾಗುವುದು ಸಹಜ... ಆದ್ರೆ ಕಲ್ಪನೆಯಲ್ಲಿ ಕನಸಿನಲ್ಲಿ ಹೀಗೊಂದು ಬೈಕ್ ನನ್ನಲ್ಲಿದೆ...!

ನೀಲಿ-ಹಲ್ಲು, ಇನ್ಫ್ರಾಕೆಂಪು, ಈಮೈಲ್, ಗೊಗುಲ್ ಮ್ಯಾಪ್ ಅಂಥ ಎಲ್ಲ ಆಧುನಿಕ ಸೌಕರ್ಯಗಳಿರೊ ಮೊಬೈಲ್ ಇದ್ರೂ, 3G ಇದೆಯೇನ್ರೀ ಅಂತ ಇನ್ನೂ ಭಾರತದಲ್ಲಿ ಬರದಿರೋ ಟೆಕ್ನಾಲಜಿ ಬಗ್ಗೆ ಕೆಲವರು ನನ್ನಲ್ಲಿ ಹೊಸದಾಗಿ ಮೊಬೈಲ್ ಕೊಂಡಾಗ ಕೇಳಿದ್ದರು...! ಟೆಕ್ನಾಲಜಿ ಪ್ರತಿ ೧೮ ತಿಂಗಳಿಗೆ ಎರಡರಷ್ಟು ಬೆಳೀತಿದೆಯೆಂದು ಎಲ್ಲೋ ಓದಿದ ನೆನಪು... ಇದನ್ನು ನನ್ನ ಹಿರಿಯ ಗೆಳೆಯರೊಬ್ಬರಲ್ಲಿ ಹೇಳಿದಾಗ ಅವರು ಹೇಳಿದ್ರು...

ಹಳೆಯದಾದಂತೆ ಭಾರವನಿಸುತ್ತೆ
ಕಳೆಗುಂದುತ್ತೆ, ನಿಧಾನವಾಗುತ್ತೆ...
ಸುಕ್ಕುಗಟ್ಟುತ್ತೆ, ಸರ್ವಿಸಿಂಗ್ ಮಾಡಬೇಕಾಗುತ್ತೆ
ಒಟ್ಟಿನಲ್ಲಿ ನಮ್ಮ ಭಾವನೆಗಳು ಬದಲಾಗುತ್ತೆ
ಕೈ ಹಿಡಿದ ಹೆಂಡ್ತಿನೂ ಇದಕ್ಕೆ ಅಪವಾದವಲ್ಲ ..!

ಅಂತಂದ್ರು.. ಪಾಪ..!

ಶುಕ್ರವಾರ, ಜನವರಿ 30, 2009

ಇರುಳ ಸುಖ


ಎದೆಗೊಂದು ಮಗು ಅವಚಿ, ಬಸ್ stand ನಲಿ ಕೈ ಚಾಚಿ
ಮೈ ಎಲ್ಲ ಗಬ್ಬೆದ್ದು, ಕೊಳಚೆಯಲಿ ಮಲಗೆದ್ದು
ನರ ನಾಡಿ, ಹೃದಯದಡಿ ಇರುಳ ಸುಖ ಉಂಡವರಿಗೆ
ಶೇರ್ ಮಾರ್ಕೆಟ್ ಸೆನ್ಸೆಕ್ಸ್ ,ಗ್ಲೋಬಲ್ recession
ಮರುಕ ಬರಿಸುವುದೇ...?

ನಿನ್ನೆಯಾ ನೆನಪು ಮಾಸದಾಗಿದೆ
ನಾಳೆಯಾ ಕನಸು ನೋಡದಾಗಿದೆ
ಇಂದಿನಾ ಹಸಿವು ಕಾಣುವುದೇ ಕಣ್ಣಿನಲಿ
ಹಸಿವು ಕಣ್ಣಿನಲೊ, ಮಣ್ಣಿನಲೋ,
ಸರ್ವಾಂಗದಲೋ ಬಲ್ಲರವರವರೆ...

ಮನವೆಲ್ಲ ಕೆಂಪಿರಲು ತನುವೆಲ್ಲ ಕಪ್ಪಿರುಳು
ಸುತ್ತ ಕಾಣುವುದೇ ಬರಿ ನೆರಳು
ನೆರಳೆಂದು ಕುಳಿತೊಂದು ಸಿಹಿ ನಿದ್ದೆಯಿರಲು
ಅವಚಿಕೊಳ ಮತ್ತೊಂದು ಮಗದೊಂದು
ಸುಖಕೊಂದು ಪ್ರತಿಫಲವಿರಲು...

ಮಂಗಳವಾರ, ಜನವರಿ 27, 2009

ಪಕ್ಕದ ಮನೆಯ ಸುಬ್ಬಾ ಭಟ್ಟರ ಮಗಳು...

ಅಮ್ಮನ ಕರೆಯನು ಕಿವಿಯಲಿ ಹಾಕಿ
ಬಸ್ಸಲಿ ತಲೆಯನು ಹೊರಗಡೆ ತೂರಿ
ಡಾಂಬರು ಹಾದಿಯು ಸವೆಯುತ್ತಿರಲು
ಮನದಲಿ ಮೂಡಿತು ಕಿರು ನಗೆಯು

ತಲೆಯಲಿ ತುಂಬಾ ಬಾಲ್ಯದ ನೆನಪು
ಪಕ್ಕದ ಮನೆಯ ಗೆಳತಿಯ ಕಂಪು
ಗೆಜ್ಜೆ ಝುಮುಕಿಯ ಝಳಪು
ಹಸಿರು ಚೂಡಿದಾರದ ಹೊಳಪು

ಗಿಳಿಯಾ ಮೂಗು, ಕೋಗಿಲೆ ಕೂಗು
ನಡುವೇ ಸಣ್ಣ, ಮೀನಿನ ಕಣ್ಣು
ಕೂದಲು ಉದ್ದ, ಮೊಲದಾ ಮುದ್ದು
ಸ್ತ್ರೋಬೇರಿ ಹಣ್ಣಿನ ತುಟಿಯು

ಜೋಡಿ ಜಡೆಯು ಬೆಕ್ಕಿನ ನಡೆಯು
ಮಾವಿನ ಕಾಯಿಯ ತಿನಲು
ಒಂದಿಷ್ಟು ಉಪ್ಪು ಮತ್ತೊಂದಿಷ್ಟು ಖಾರ
ಜೊತೆಯಲಿ ತರುವಳು ಅವಳು

ಕುಂಟಾಂಗಿರಿ, ಪೇರಳೆ, ಚಿಕ್ಕು, ಮಾವು
ಎಲ್ಲಾ ಜೊತೆಯಲಿ ತಿನ್ನಲು ನಾವು
ದೂರದ ಊರಿಗೆ ಕಾಲೇಜು ಸೇರಲು
ಮೌನವದೆವು SSLC ಮುಗಿಯಲು

ಕಾಲೇಜು ಕಳೆದು ಕೆಲಸಕೆ ಸೇರಲು
ಊರೂರು ತಿರುಗಲು ನಾನು
ನೌಕರಿ ಸಿಗಲು ಬೆಂಗಳೂರು ಹೋಗಲು
ಹೇಳಿದೆ ಅವಳಲಿ I Love U

ಧೂಳಿನ ಕಣಗಳು ಮುಖಕೆ ಮುತ್ತಲು
ಎಚ್ಚರವಾಗಲು ನನಗೆ
ಡಾಂಬರು ಕಳೆದು ಮಣ್ಣಿನ ಹಾದಿಯು
ಕರೆಯಿತು ನಮ್ಮನು ಊರಿಗೆ

ನಸು ಸಂಜೆಯ ಕತ್ತಲ ನೋಡಿ
ಹೆಂಡೆಯ ತುಂಬಾ ಬಿಸಿ ನೀರ ಮಾಡಿ
ಮನೆಯಲಿ ಅಮ್ಮ ಕಾಯುತಲಿದ್ದರು
ಪಕ್ಕದ ಮನೆಯಲಿ ಅವಳೂ

ಕರುಕುರು ಎನ್ನುವ ಚಕ್ಕುಲಿ ಸಂಡಿಗೆ
ಪಾತ್ರೆಯ ತುಂಬಾ ಜಿಲೇಬಿ ಹೋಳಿಗೆ
filter ಕಾಫಿಯಾ ಸುವಾಸನೆಗೆ
ಅಮ್ಮನ ಪ್ರೀತಿಯು ಸವಿನುಡಿಗೆ

ಅಮ್ಮನ ಗುಟ್ಟು ಆಯಿತು ರಟ್ಟು
ಮದುವೆ ವಿಷಯವೇ ಒಟ್ಟು
ಪಕ್ಕದ ಮನೆಯ ಬಾಲ್ಯದ
ಗೆಳತಿಯೇ ಇದೆಲ್ಲದರ ಜುಟ್ಟು

ಆಗಲಿ ಎನ್ನದೆ ಆಗದು ಎನ್ನದೆ
ಮನದಲಿ ನಗಲು ನಾನು
ಮರುದಿನ ಅಮ್ಮನು ಜೊತೆಗೇ ನಾನು
ಒಟ್ಟಿಗೆ ಹೋಗಲು ಅವಳ್ಮನೆಗೇ

ನನ್ನಮ್ಮನೆ ಅವಳಮ್ಮನ ಕೇಳಲು
ಸುಬ್ಬಾ ಭಟ್ಟರ ಮಗಳು
ಮರೆ ಮಾಚಿ ತುಸು ನಾಚಿ ನಗಲು
ಒಳಗಡೆ ಹೋದಳು ಹಗಲು

ಸೋಮವಾರ, ಜನವರಿ 19, 2009

ಅಹಾ.. ಬೆಂದಕಾಳೂರು...!




ಹಗಲೆಲ್ಲ ದುಡಿಯಬಹುದು ಏರ್ ಕಂಡೀಶನ್ ಆಪೀಸ್ನಲ್ಲಿ,
ಕಿಸೆ ತುಂಬ ಹೊನ್ನಹುದು ಮಾಸದಂತ್ಯದಲಿ !
ನಿನ್ನ ಬಾಳಿನ ತುಂಬ ಅನ್ನ ನೊರೆ ಹಾಲು,
ನನ್ನ ಮಾತನು ಕೇಳು, ನನ್ನೊಡನೆ ಬಾಳು ... !!

ಅಂತ ನೀನು ಕರೆದೆಯಲ್ಲ... ಅಬ್ಬಬ್ಬ... ಎಷ್ಟ ಖುಃಷಿ ಆಯ್ಥು ಗೊತ್ತಾ...? ಏರ್ ಕಂಡೀಶನ್ office, ಕಿಸೆ ತುಂಬ ಕಾಸು, ನಿನ್ನ ಬಳುಕುವಾ ಹಾದಿಯಲಿ ಓಡಾಡಲು ನನಗೊಂದು ಕಾರು... ಅಹಾ.. ಆಕಾಶಕ್ಕೆ ಮೂರೇ ಗೇಣು...! ಮತ್ತೆ ಅನ್ನ-ಸಾಂಬಾರ್ ವಿಷ್ಯ..., ನೊರೆ ಹಾಲೇನು ಬೇಡ ನಂಗೆ... ಹಾಲು ಬಿಳೀ ಇದ್ರೇ ಸಾಕಪ್ಪಾ... (ನೊರೆ ಹಾಲು ನೋಡಿದ್ರೆ ನಂಗೆ ಮುಖಕ್ಕೆ ಹಚ್ಚಿದ shaving cream ಥರ ಅನಿಸುತ್ತೆ!). ನಿನ್ನೆಡೆಗೆ ಬರುವವರನ್ನೆಲ್ಲ ಕೈ ಬೀಸಿ ಕರೀತಿಯಲ್ಲಾ... ಬರುವವರೆಲ್ಲ ಬಣ್ಣ ಬಣ್ಣದ ಕನಸುಗಳನ್ನು, ಮನಸು ತುಂಬಾ ಉಲ್ಲಾಸವನ್ನು, ಸಂಸಾರ ತುಂಬಾ ಆಹ್ಲಾದವನ್ನು, ಕೈ ತುಂಬಾ ಸಂಬಳವನ್ನು ಜೀವನ ತುಂಬಾ ಖುಃಷಿಯನ್ನು ನೆನೆ-ನೆನೆದು ಬರುತಾರಲ್ಲಾ... ನಿನ್ನ ಅತಿ ವೇಗದ ಜೀವನಕ್ಕೆ ಮಾರು ಪೋಗದವರ್ ಯಾರ್ ಅಂತ ಹೇಳಲಿ ? ನೀನಿರೋದೇ ಹಾಗಲ್ವಾ...!

ಮೋಹದೊಳು ಮಾಯೆಯೋ,
ಮಾಯೆಯೊಳು ಮೊಹವೋ...
ಬೆಂಗಳೂರೊಳಗೆ ಜನರೊ,
ಜನರೊಳು ಬೆಂಗಳೂರೋ...!


ದಾಸರೇನಾದದರೂ ಇದ್ದಿದ್ದರೆ ಹಾಡಿ ಹೊಗಳುತ್ತಿದ್ದರೆನೋ...! ನಿನ್ನ ಕುಡಿ ನೋಟ ಸಾಕು ಹಳ್ಳಿಯ ರೈತರ ಹಾಗು ಅವರ ಮಕ್ಕಳ ಮುಗ್ಧ(!) ಮನಸ್ಸನ್ನು ನಿನ್ನೆಡೆಗೆ ಕನವರಿಸಲು... ಅಹಾ ನಿನ್ನ ವಶೀಕರಣ ತಂತ್ರವೇ... ಸಣ್ಣವನಿದ್ದಾಗ ಅಮ್ಮ ಹೇಳಿಸುತ್ತಿದ್ದ ಜೇಡ-ನೊಣದ ಹಾಡೊಂದು ನೆನಪಾಗುತ್ತಿದೆ.. "ಬಾ ನೊಣವೇ, ಬಾ ನೊಣವೇ ಬಾ ನನ್ನ ಮನೆಗೆ.. ಬಾನಿನೊಳು ಹಾರಿ ಬಲು ದನಿವಾಯ್ತು ನಿನಗೆ.. ". ಕಾಸರಗೋಡು, ಮಂಗಳೂರು ಕಡೆಗಳಲ್ಲೆಲ್ಲ ತೋಟ ನೋಡಿಕ್ಕೊಳ್ಳೊರೇ ಇಲ್ಲದಾಗಿದೆ... ರಾಯಚೂರು ಬೀದರವಂತು ನಿನ್ನೆಡೆಗೆ ಗುಳೇ ಎದ್ದಿದೆ... ಮಲೆನಾಡಲ್ಲಂತೂ ಕನ್ಯೆಯರು ಬೆಂಗಳೂರ ಹುಡುಗರೇ ಬೇಕೆಂದು ರಂಪ ಮಾಡ್ತಾರಂತೆ...! ಅಹಾ.. ನೀನಗೆ ಯಾರಿಟ್ಟರೀ ಹೆಸರು...? ಬೆಂದ ಕಾಳೂರು... ನಂಗನ್ಸುತ್ತೆ.. ನೀನಿನ್ನೂ ಬೆಂದಿಲ್ಲ... ಸುಂದರಿಯಾದ ಲಲನೆಯಂತೆ ಮೈ ತುಂಬಿ ತುಳುಕುವ ನದಿಯಂತೆ ವೇಗವಾಗಿ ಓಡುವ ಹಿಂಗಾರಿನ ಮೋಡದಂತೆ ಜಟಾಧಾರಿಯಾಗಿ ಸುರಿಯುವ ಮಲೆನಾಡ ಮಳೆಯಂತೆ ಅನುರಣಿಯಾಗಿ ಚಾಚಿಕ್ಕೊಂಡ ಚಾರ್ಮಾಡಿ ಘಾಟಿನ ಕುಸಿದು ಮತ್ತೆ ಎದ್ದು ಬರುವ ಸಿಮೆಂಟ್ ರೋಡಿನಂತೆ ಕಾಣಿಸ್ತಿದ್ದೀಯಾ... !

ಕೈತುಂಬಾ ಕಾಸಿರಲು ಮನತುಂಬ ಆಸೆ ಇರಲು
ITPL, electronic city ಯಲ್ಲಿ ಕೆಲಸ ಇರಲು
ವಾರಾಂತ್ಯದಲಿ ಅಡ್ಡಾಡಲು ಫೋರಮ್ ಮಾಲ್ ಇರಲು,
ಮೈಗಂಟಿಕ್ಕೊಳ್ಳಲೊಂದು ಫಿಗರ್ ಸಿಗುವುದು ಕಷ್ಟವೇ junk-ತಿಮ್ಮ !


ಅಂತ ಡಿವಿಜಿ ತಲೆ ಮೇಲೆ ಕೈ ಇತ್ತು, ಮತ್ತೊಂದು ಕಗ್ಗ ಬರೆತಿದ್ದರೆನೋ... ನಿನ್ನೋಳಗೊಮ್ಮೆ ಸುತ್ತಾಡಿ ಬರಲು BMTC ಬಸ್ಸಲ್ಲಿ ಡೈಲಿ ಪಾಸ್ ತೆಗೊಂಡ್ರೆ ಸಾಕಾಗೋಲ್ಲ... monthly ಪಾಸ್ಗೆ ಬೇಕಾಗ್ವಷ್ಟು ಬೆಳ್ದು ಬಿಟ್ಟಿದ್ದೀಯಲ್ಲ.. ಎಲ್ಲಿ ನೋಡಿದರಲ್ಲಿ ನಿನ್ನ ಮನ ಮೋಹಕ ಸೌಂದರ್ಯದಿಂದ ಪ್ರೇಮಿಗಳ ಅಡ್ಡವಾಗಿ ಬಿಟ್ಟಿದ್ದೀಯಲ್ಲ.. ಪಾರ್ಕುಗಳು ಮಾಲುಗಳು ಮಲ್ಟಿಪ್ಲೆಕ್ಸುಗಳು ನಿನ್ನ ಸೌಂದರ್ಯದ tool kit ಆಗ್ಬಿಟ್ಟಿದೆಯಲ್ಲ... fly overಗಳು ನಿನ್ನ ಆಭರಣದಂತೆ, ವಿಧಾನಸೌಧ ನಿನ್ನ ಮುಗುತಿಯಂತೆ, ಲಾಲ್ಬಾಗ್ ನಿನ್ನ ಹಚ್ಚ ಹಸುರಿನ iron ಮಾಡಿದ ಸೀರೆಯಂತೆ, ನಿನ್ನ ನೃತ್ಯದ ಮುದ್ರೆಗಳು ಬದಲಾಗುವಂತೆ ಮೆಜೆಸ್ಟಿಕ್, ನಿನ್ನ ಕಾಲಿನ ಅಂದವಾದ ನಡತೆಯಂತೆ ಕೃಷ್ಣ ರಾಜ ಮಾರ್ಕೆಟ್ಟು... ಅಯ್ಯೋ... ಪ್ರೇಮಿಗಳ ಪಾಲಿಗಂತೂ ನೀನು ಸ್ವರ್ಗ...!

ಶುಕ್ರವಾರ, ಜನವರಿ 16, 2009

ನಿನ್ನ ನೆನಪು!

ನೆನಪುಗಳು ಮಧುರ
ನೆನಪಿಸುವುದು ಸುಮಧುರ !
ನೆನೆ ನೆನೆದು ಮೆಲಕುತ್ತ
ನೆನಪಿನಲಿ ನಲಿದಾಡುವುದು ಅತಿಮಧುರ!!

ಮರೆಯಲಾಗದೆ ನಿನ್ನ
ಮರಳಿ ಮರೆತೆಡೆಗೆ ಮರಳಲಾಗದೆ,
ವಿರಳವಾಗಿಹುದು
ನನಗೀ ಜೀವನ !