ಮಂಗಳವಾರ, ಮಾರ್ಚ್ 23, 2010

ಅಮ್ಮಣ್ಣಿಯ ನೆನಪು


ನಿದ್ದೆ ಇರದ ರಾತ್ರಿಗಳಲ್ಲಿ
ಅವಳ ಹೆಜ್ಜೆಯ ಗುರುತಿತ್ತು
ನಿದ್ದೆ ಬಂದ ರಾತ್ರಿಯಂತೂ
ಅವಳ ಕನಸೇ ಬಿದ್ದಿತ್ತು...

ಹಾದಿ ಬದಿಯ ಒಂಟಿ ನಡಿಗೆ
ಆಕೆಯ ನೆನಪ ತರುತಿತ್ತು
ಆ ಮಲ್ಲಿಗೆ ನಗು ನೆನಪಾದಾಗ
ನನ ಕಾಲು ಕುಂಟುತಿತ್ತು...

ಕನ್ನಡಿ ಮುಂದೆ ನಿಂತರಂತೂ
ಅವಳ ಕಣ್ಣೇ ಕಾಣುತಿತ್ತು
ಕಣ್ಣು ನನದೇನೇ ಎಂದರಿತಾಗ
ತುಟಿಯ ಅಂಚು ನಗುತಿತ್ತು...

ತಟ್ಟೆಯಲ್ಲಿ ತುತ್ತು ಅನ್ನ
ಅವಳಿಗಾಗಿ ಮೀಸಲಿರ್ತಿತ್ತು
ಹಸಿವೆ ತುಂಬ ಸಹಿಸಲಾಗದೆ
ನನ್ನ ಹೊಟ್ಟೆ ಸೇರ್ತಿತ್ತು...

ಐಸ್-ಕ್ರೀಂ ಸವಿಯುವಾಗ
ಅವಳ ಗಲ್ಲದ ನುಣುಪಿತ್ತು
ಅದು ಮೆಲ್ಲನೆ ಕರಗಿದಾಗ
ಅಲ್ಲಿ ನನ್ನ ತುಟಿ ಇತ್ತು...

ಶನಿವಾರ, ಮಾರ್ಚ್ 20, 2010

ವಿರಹಾಗ್ನಿ ಧಗ ಧಗಿಸುತಿದೆ




ಯಾವ ಜೀವನ ಪ್ರೀತಿಗೆ ಹೀಗೆ
ವಿರಹಾಗ್ನಿ ಧಗ ಧಗಿಸುತಿದೆ?
ಯಾವ ಹೃದಯಗಳ ಬಂಧನಕೆ
ಕಣ್ಣುಗಳು ಹೀಗೆ ಹುಡುಕಾಡುತಿದೆ?

ನಿನ್ನ ಮಾತನಾಡಿಸಿದ ಆ ನಿಮಿಷಗಳೇ ಮತ್ತೆ ಮತ್ತೆ ನೆನಪಾಗುತಿದೆ...
ಬೆಳದಿಂಗಳ ರಾತ್ರಿಯಲಿ ಹುಣ್ಣಿಮೆಯು ನಕ್ಕ ಹಾಗಿರುವ ಆ ನಿನ್ನ ಸುಂದರ ವದನದ ನೆನಪಾಗುತ್ತಿದೆ...
ಮೌನವೇ ಮಾತಾದಾಗ, ನಮ್ಮಿಬ್ಬರ ಮನಸಿನಾಳದ ಒಮ್ಮತದ ನಿರ್ಧಾರ ನೆನಪಾಗುತ್ತಿದೆ...

ಯಾಕೋ ಆ ಕ್ಷಣ ನಾನು ಏನೂ ಹೇಳದಿದ್ದರೂ ನೀ ತಿಳಿದುಕ್ಕೊಂಡೆ, ಜೊತೆಗೆ ನಾನೂ ಕೂಡ...
ಮತ್ತೆ ಮಾತನಾಡಲು ಅವಕಾಶವಿರಲಿಲ್ಲ... ನಿಜವಾ? ಅಧಿಕಾರವಿರಲಿಲ್ಲ ಅನ್ನು, ಅವಕಾಶ ಉಪಯೋಗಿಸಲಿಲ್ಲವೆನ್ನು...
ಮತ್ತದೇ ಮುಗುಳುನಗೆ ಕಾಣಲು ಅದೆಷ್ಟು ಬಾರಿ ಕಣ್ಣು ಮುಚ್ಚಿ ನಿನ್ನ ಧ್ಯಾನಿಸಿಲ್ಲ, ಹೇಳು?
ಈ ವಿರಹಾಗ್ನಿಯ ಉದ್ದ-ಅಗಲದ ಲೆಕ್ಕಕ್ಕೆ ಅದೇನು ಅಳತೆಗೋಲಿದೆ ಹೇಳು?

ಕಡು ಬೇಸಿಗೆಯಲ್ಲೂ
ಈ ಕಟುಕನ ಕಣ್ಣಿನಲ್ಲಿ
ಬತ್ತದೆ ಬರುವ ಹನಿಗಳ
ಈ ಒರತೆ ಸಾಲದೇ?

ಬುಧವಾರ, ಜನವರಿ 27, 2010

ಮರೆಯಲಾಗದ, ಮರಳಲಾಗದ ಆ ದಿನಗಳು...

"ಅಪ್ಪಾ... ನನಗೆ ಹೊಟ್ಟೆ ನೋವು... ತುಂಬಾ ನೋವಾಗ್ತಿದೆ ಆಪ್ಪಾ...."

ಕಣ್ಣಲ್ಲಿ ಸಣ್ಣಕ್ಕೆ ಎರಡು ಹನಿ ಇಳಿ ಬಿಟ್ಟು ತಂದೆಯವರನ್ನು ತಬ್ಬಿ ಹಿಡಿದಾಗ, ಅವರಿಗೆ ಅರ್ಥವಾಗುತ್ತಿತ್ತು... ಇದು ಶಾಲೆಗೆ ಹೊರಡಲಿಕ್ಕೆ ಹಿಂಜರಿಯುವ ಮನಸ್ಸಿನ ಮಿಡಿತ ಅಂತ...
"ಪುಟ್ಟಾ.. ಇರಲಿ ಬಿಡು.. ಪರ್ವಾಗಿಲ್ಲ... ಈವತ್ತು ಶಾಲೆಗೆ ಹೊಗ್ಬೇಡ..." ಅಂತ ಒಂದೇ ಮಾತಲ್ಲಿ ನನ್ನ ನೋವಿಗೆ ಸಾಂತ್ವನ ನೀಡ್ತಿದ್ರು... ೬ ವರ್ಷದ ನನಗೆ ಒಂದನೇ ತರಗತಿಯಲ್ಲಿ ಹೊಗಬೇಕಾದ್ರೆ ಪ್ರತಿ ದಿನ ಈ ಹೊಟ್ಟೆ ನೋವು ಕಾಡುತ್ತಿತ್ತು...!!

ನನಗೆ ಆ ಪ್ರೊಗ್ರೆಸ್ ರಿಪೋರ್ಟ್ ಸ್ಪಷ್ಟವಾಗಿ ನೆನಪಿವೆ... ಮೊದಲ ಕ್ವಾರ್ಟರ್ಲಿ ಪರೀಕ್ಷೆಯಲ್ಲಿ ೨ ನೇ ರಾಂಕ್.. ಎರಡನೇ ಕ್ವಾರ್ಟರ್ಲಿ ಪರೀಕ್ಷೆಯಲ್ಲಿ ೨೨ ನೇ ರಾಂಕ್... ಮೊದಲ ಕ್ವಾರ್ಟರ್ಲಿಯ ರಾಂಕ್ ಎರಡು ಬಾರಿ(೨ -> ೨೨) ರಿಪೀಟ್ ಆದದ್ದು ಮಾತ್ರ ಕಾಕತಾಳೀಯ...! ಆದ್ರೆ ಕಾರಣ ಮಾತ್ರ, ನನ್ನ ಪ್ರತಿದಿನ ಶಾಲೆಗೆ ಹೋಗುವ ಮೊದಲು ಬರುತ್ತಿದ್ದ ಹೊಟ್ಟೆನೋವು...! ಅಯ್ಯೋ.. ಎಂಥ ಹೊಟ್ಟೆ ನೋವು ಅನ್ನಿ... ಬೆಳಿಗ್ಗೆದ್ದು ಬ್ರಶ್ ಮಾಡಿ, ಸ್ನಾನ ಮಾಡಿ, ಯುನಿಫೋರ್ಮ್ ತೊಟ್ಟು ತಿಂಡಿ ತಿನ್ನುವವರೆಗೆ ಇಲ್ಲದ್ದು ಆಮೇಲೆ ಇದ್ದಕ್ಕಿದ್ದಂತೆ ಬರುತ್ತಿತ್ತು...! ೧ ನೇ ತರಗತಿಯಲ್ಲಿ ಸುಮಾರು ೫೦% ಶಾಲಾ ದಿನಗಳನ್ನು ನಾನು ಮನೆಯಲ್ಲೇ ಕಳೆದಿರಬಹುದೇನೋ..!

ಅಕ್ಕನೋ, ನೀಟಾಗಿ ಜಡೆ ಬಾಚಿ ಸರಿಯಾದ ಟೈಮ್ ಗೇ ಹೊರಡುತ್ತಿದ್ದಳು. ಅಮ್ಮನಿಗೆ ಪುರುಸೊತ್ತಿದ್ರೆ ಅಕ್ಕನಿಗೆ ಎರಡು ಜಡೆ ಹಾಕ್ತಿದ್ರು, ಪುರುಸೊತ್ತಿಲ್ಲಾ ಅಂದ್ರೆ ಒಂದೇ. ಮನೆಯ ಅಂಗಳದಲ್ಲೇ ಬೆಳೆದ ಜಾಜಿ ಮಲ್ಲಿಗೆಯೋ ಇಲ್ಲ ಸೇವಂತಿಗೆಯೋ, ಗುಲಾಬಿ ಹೂವೋ, ಹಿಂದಿನ ದಿನವೇ ಮಾಡಿಟ್ಟ ಅಬಲಿಗೆ ಹೂವಿನ ಮಾಲೆಯೋ ಯಾವುದೋ ಒಂದು ಸಿಕ್ಕಿಸಿದರೆ ಆಯ್ತು. ದಾಸವಾಳದ ಹೂವು ಮರದ ತುಂಬಾ ಆಗ್ತಿದ್ರೂ ಅದನ್ನು ಮಾತ್ರ ಮುಡೀತಿರ್ಲಿಲ್ಲ. ಆದ್ರೆ ಹಣೆಯಲ್ಲೊಂದು ನೀಟಾದ ಲಾಲ್-ಗಂಧ(ಪುಟ್ಟದಾದ ಕೆಂಪು ಚುಕ್ಕೆ!) ಇರಲೇ ಬೇಕಿತ್ತು. ಇಲ್ಲಾಂದ್ರೆ ಅಮ್ಮ ಬಿಡ್ತಿರ್ಲಿಲ್ಲ...!

ತೀರಾ ಹಳ್ಳಿಯಾದ್ರಿಂದ ಶಾಲೆಗೆ ಹೋಗಬೇಕೆಂದ್ರೆ ಒಂದೂವರೆ-ಎರಡು ಕಿಲೋಮೀಟರ್ ನಡೆದು ಹೋಗಬೇಕಿತ್ತು. ಅಕ್ಕನ ಜೊತೆ ಅಕ್ಕಪಕ್ಕದ ಮನೆಯವರೊಂದಿಗೆ ಪುಟ್ಟ-ಪುಟ್ಟ ಹೆಜ್ಜೆ ಇಟ್ಟು ನಡೆದೇ ಹೊಗುತ್ತಿದ್ದೆ. ಆವಾಗ ಸಣ್ಣ ಸಣ್ಣ ವಿಷಯವನ್ನೂ ನೋಡಿ ಖುಷಿ ಪಟ್ಟಿದ್ದೀನಲ್ಲಾ.

ಹೊಸತಾಗಿ ತಂದ ಶರ್ಟ್, ಆ ಸಣ್ಣ ಚಡ್ಡಿ... ಅಹಾ... ಅದೆಷ್ಟು ದಿನ ಅದನ್ನು ಹಾಕ್ಕೊಂಡು ಖುಶಿಪಟ್ಟಿಲ್ವಾ...?
ಅ ಛತ್ರಿ, ಅದರ ಬಣ್ಣದ ಹಿಡಿ. ಅಹಾ.. ಆ ಮಳೆಗೆ ಅದನ್ನು ತಿರುಗಿಸುತ್ತಾ ಮಳೆಗೆ ಅರ್ಧ ನೆನೆದುಕ್ಕೊಂಡು ಹೋಗಿಲ್ವಾ...?
ಬಣ್ಣದ ಚಪ್ಪಲಿ. ಆಹಾ... ಅದನ್ನು ಹಾಕ್ಕೊಂಡು ಎಷ್ಟೊಂದು ಠೀವಿಯಿಂದ ನಡೆದಾಡಲಿಲ್ಲ?

ಕಡು ಹಸುರು ಬಣ್ಣದ ಆ ಬಾಗ್... ಅದರೊಳಗೆ ಗರಿ ಗರಿಯಾದ ಹೊಚ್ಚ ಹೊಸ ಪಾಠ ಪುಸ್ತಕಗಳು... ಆ ಬಳಪ.. ಚಾಕ್ ಪೀಸ್.. ಆ ಬಳಪ ಒರಸಿಕ್ಕೊಳ್ಳಲು ನಮ್ಮ ತೋಟದಲ್ಲಿ ಬೆಳೆಯುವ ಒಂದು ಜಾತಿಯ ನೀರು ಕಡ್ಡಿ ಎಂಬ ಹುಲ್ಲನ್ನು ತೆಗೆದುಕ್ಕೊಂಡು ಹೋಗುತ್ತಿದ್ದೆವು. ಆ ಹುಲ್ಲಿನಲ್ಲಿ ನೀರಿನ ಅಂಶ ಚೆನ್ನಾಗಿದ್ದುದರಿಂದ ಬಳಪ ಫುಲ್ ಕ್ಲೀನ್...!
ಮಳೆಗಾಲದ ಮೊದಲ ದಿನಗಳಲ್ಲಿ ಶಾಲೆಗೆ ನಡೆದುಕ್ಕೊಂಡು ಹೋಗುತ್ತಿದ್ದಾಗ ಸಿಗುತ್ತಿದ್ದ ’ದೇವರ ತುಪ್ಪಲು’ ಅನ್ನುತ್ತಿದ್ದ ಕೆಂಪು ಬಣ್ಣದ ಸಣ್ಣ ಜೀವಿಯ ಮೈ ಬಣ್ಣ ನೋಡುವುದೇ ಒಂದು ಚಂದ...
ಶಾಲೆಯಲ್ಲಿ ಆಡುತ್ತಿದ್ದ ಕಬಡ್ಡಿ, ಲಗೋರಿ, ತಲೆಮಾ, ಅಪ್ಪಚ್ಚೆಂಡು, ಚಿನ್ನಿದಾಂಡು, ಕಣ್ಣು ಮುಚ್ಚಾಲೆ ಮುಂತಾದ ಸಾಂಪ್ರದಾಯಿಕ ಆಟಗಳೇ ಎಷ್ಟೊಂದು ಖುಷಿಕೊಡುತ್ತಿತ್ತು...
ಮನೆಯಲ್ಲಿ ಆಡುತ್ತಿದ್ದ ಚೆನ್ನಮಣೆ, ಜಿಬ್ಲಿ, ಗೇರುಬೀಜ ಚುಟ್ಟುವುದು, ಸ್ಯಾಟ್... ವಾವ್.. ಅದೆಲ್ಲ ಅಷ್ಟೊಂದು ಸುಂದರ ದಿನಗಳಾಗಿದ್ದವು...
ತೀರಾ ಅಪರೂಪವೆನ್ನುವಂತೆ ನಮ್ಮದೇ ವಯಸ್ಸಿನ ಹುಡುಗರು ಸೈಕಲ್ ತುಳಿದುಕ್ಕೊಂಡು ಬಂದರೆ, ಶಾಲೆಗೆಲ್ಲಾ ಅವನೇ ಹೀರೋ...
ಅಸೂಯೆ ಪಟ್ಟುಕ್ಕೊಂಡು ಅವನ್ನೇ ನೋಡೂತ್ತಿದ್ದೇವಲ್ವಾ...
ಪಯಸ್ವಿನಿ ನದಿಗೆ ಈಜಲು ಹೋಗುವುದೆಂದರೆ ಕುಣಿದು ಕುಪ್ಪಳಿಸುತ್ತಿದ್ದೆ...

ಒಂದನೇ ತರಗತಿಯಲ್ಲಿ ನನ್ನ ಅಮ್ಮಣ್ಣಿ ನನ್ ಪಕ್ಕದಲ್ಲೇ ಕುಳಿತುಕ್ಕೊಳ್ಳುತ್ತಿದ್ದಳು. ನಾವಿಬ್ರೂ ಜೊತೆಗೇ ಆಟವಾಡುತ್ತಿದ್ದೆವು. ಆಕೆ ಮನೆಯಿಂದ ತಿಂಡಿ ತಂದರೆ ನನ್ ಜೊತೆ ಹಂಚಿಕ್ಕೊಳ್ಳುತ್ತಿದ್ದಳು. ನಾನೂ ಹಾಗೇ, ಅಪ್ಪನ ಕಿಸೆಯಿಂದ ಕದ್ದ ದುಡ್ಡಿನಲ್ಲಿ ಆಕೆಗೂ ಮಿಟಾಯಿ, ಚೊಕೋಲೇಟ್ ಕೊಡಿಸುತ್ತಿದ್ದೆ(ಪಾಕೆಟ್ ಮನಿ ಅನ್ನುವ ಕಾಂಸೆಪ್ಟ್ ಇರಲಿಲ್ಲ ಬಿಡಿ ಆ ಕಾಲದಲ್ಲಿ, ಹೀಗೇನಾದ್ರು ಕಿತಾಪತಿ ಮಾಡಿದ್ರೆ ಮಾತ್ರ ಎರಡು ಚಿಲ್ರೆ ಕಾಸು ದಕ್ಕುತ್ತಿತ್ತು!). ಈವತ್ತು, ಹತ್ತಿಪ್ಪತ್ತು ವರುಷದ ನಂತರವೂ, ಆಕೆಯನ್ನು ನೆನೆಸಿಕ್ಕೊಳ್ಳುವ ಷ್ಟು ಆಕೆ ಆತ್ಮೀಯಳಾಗಿದ್ದಳು. ಆದರೆ ಒಂದನೇ ತರಗತಿಯ ವೆಕೇಷನ್ ಮುಗಿದು, ಎರಡನೇ ತರಗತಿಗೆ ಹೋದಾಗ ಆಕೆ ಕಾಣಲಿಲ್ಲ. ಒಂದು ದಿನ ನನ್ನ ಅಣ್ಣನಲ್ಲಿ ಆಕೆಯ ಬಗ್ಗೆ ವಿಚಾರಿಸಿದಾಗ, ಆಕೆಯ ಫ್ಯಾಮಿಲಿ ನಮ್ಮೂರ ಬಿಟ್ಟು ಬೇರೆ ಕಡೆ ಶಿಫ್ಟ್ ಆಗಿ ಹೋದುದಾಗಿ ಹೇಳಿದರು. ಅಮೇಲೆ ಆಕೆಯನ್ನು ಈವರೆಗೆ ನೋಡಿಲ್ಲ. ಈವತ್ತೂ ಯವುದಾದ್ರು ಗುಂಪನ್ನು ನೋಡಿದಾಗ ಆಕೆಯ ನೆನಪಾಗುತ್ತೆ. ನನ್ನ ಕಣ್ಣುಗಳು ಆಕೆಗಾಗಿ ಆ ಗುಂಪಿನಲ್ಲಿ ಹುಡುಕಾಡ್ತವೆ.

♫ ಈ ಕಂಗಳ ಮುಂಬಾಗಿಲು
ನಿನಗಾಗಿಯೆ ತೆರೆದಿರಲು
ತಡವೇತಕೆ ಅಮ್ಮಣ್ಣೀ
ನನ್ನಿದುರಿಗೆ ಬರಲು...

ನೀ ನನ್ನೆದುರಿಗೆ ಬರದಿರಬಹುದು. ಆದ್ರೆ, ನಾನಿನ್ನೂ ಅದೇ ಊರನವನೇ ಆಗಿರುವುದರಿಂದ, ಯಾರನ್ನಾದರೂ ಕೇಳಿ ನನ್ ಫೋನ್ ನಂಬರ್ ತೆಗೆದುಕ್ಕೊಂಡು, ನನಗೊಂದು ಕಾಲ್ ಮಾಡಬಹುದಿತ್ತಲ್ಲಾ... ಹೋಗ್ಲಿ, ಓರ್ಕುಟ್, ಫೇಸ್ ಬುಕ್ ನಲ್ಲಾದರೂ ಒಂದು ಪ್ರೊಫೈಲ್ ಕ್ರಿಯೇಟ್ ಮಾಡ್ಬಹುದಿತ್ತಲ್ಲಾ.ಯಾಕೆ ಅಮ್ಮಣ್ಣೀ ನನ್ ಹೃದಯದ ಮಿಡಿತ ಕೇಳಿಸಲ್ವಾ...?

ಶನಿವಾರ, ಡಿಸೆಂಬರ್ 19, 2009

ಇರುಳ ದೀಪಕ್ಕೆ ನಮನ

[ಅರ್ಪಣೆ : ಕನಸಿಗೆ ರೆಕ್ಕೆ ಕಟ್ಟಿ, ಬಿದ್ದಾಗ ಹೆಗಲ ತಟ್ಟಿ, ಮನಸಿಗೆ ಹುರುಪ ತುಂಬಿ, ತನ್ನುಸಿರ ತುಂಬಾ ನನ್ನನ್ನೇ ಲಾಲಿಸಿ, ಒಲವಿನ ಪೈರು ಬೆಳೆಸಿದ ನನ್ನಿರುಳ ದೀಪ ಅಮ್ಮನಿಗೆ...]

ಅಮ್ಮ...,

ಜೀವನ ಪ್ರೀತಿಯಾ ಕೂಪ, ದಾರಿ ತೋರುವಾ ಸ್ತೂಪ
ಆ ದೇವಿಯಾ ನಿಜ ರೂಪ, ನೀನೊಂದು ಇರುಳ ದೀಪ...

ನಿನ್ನ ಬಗ್ಗೆ ಬರೆಯಲು ಬಹಳಷ್ಟು ಸಲ ನಾನು ಹವಣಿಸಿದ್ದಿದೆ. ಅನುಭೂತಿಯೊಂದರ ಬಗ್ಗೆ ಶಬ್ದಗಳಲ್ಲಿ ವರ್ಣಿಸಲಾರದೆ ನಾನೊಬ್ಬ ಬಾವಿಯೊಳಗಿನ ಕಪ್ಪೆಯಂತೆ ಅನಿಸುತ್ತಿತ್ತು. ಲೇಖನಿ ಹಿಡಿದು ಕುಳಿತಾಗಲೆಲ್ಲ ತೇವವಾದ ಕಣ್ಣುಗಳೊಂದಿಗೆ ಎದುರಿನ ಕಾಗದ, ಮಂಜಿನಲ್ಲಿ ಮುಸುಕಿದ ವಿಸ್ತಾರವಾದ ಬಯಲೊಂದರಂತೆ ಅನಿಸುತ್ತಿತ್ತು.

ತಾನು ನೊಂದು ತಿಳಿ ಬೆಳಕ ಬೀರುತಿದೆ ಒಂದು ಇರುಳ ದೀಪ ನಿಶ್ಚಲದ ಮೂರ್ತ ರೂಪ...

ಧಾರವಾಹಿ ಮುಕ್ತದ ಹಾಡಿನಿಂದ ಸ್ಪೂರ್ತಿಗೊಂಡು ಇರುಳ ದೀಪವೆಂಬ ಹೆಸರನ್ನು ನಿನಗೆ ಅನ್ವರ್ಥವಾಗಿ ಇಟ್ಟಿದ್ದಂತೂ ನಿಜ. H.S.Venkateshamurthy ಆ ಸಾಲುಗಳನ್ನು ಸ್ವತಂತ್ರತೆ(ಮುಕ್ತತೆ)ಯ ಬಗ್ಗೆ ಬರೆದಿರಬಹುದಾದರೂ, ಇರುಳ ದೀಪ ಎನ್ನುವ ಶಬ್ದ ಕೇಳಿದಾಗ ಮಾತ್ರ ಅಮ್ಮನನ್ನೇ ನೆನೆಸುವಂತಿತ್ತು. ನೀನು ಅನಿರ್ವಚನೀಯ ಎನ್ನುವುದು ನಿಜವಾದ್ರು, ನಿನ್ನ ವರ್ಚಸ್ಸಿಗೆ ಸಮೀಪವಾದ ಪದಪುಂಜಗಳನ್ನು, ನನ್ನೆದೆಯ ಮಿಡಿತಕ್ಕೆ ತಕ್ಕಂತೆ ಆರಿಸಿದ್ದೇನೆ.

ಜೀವದೊಳು ಜೀವ ಇರುವಾಗಲೇ ನೀ ನನಗೆ ಮುದ್ದು ಮಾಡುತ್ತಿದ್ದಿಯಲ್ಲ...
ನಿನ್ನ ಜೀವನ ಪ್ರೀತಿಯನ್ನು ಅಲ್ಲೇ ನೀ ಧಾರೆ ಎರೆದಿದ್ದೀಯಲ್ಲಾ...
ಅಲ್ಲೇ ಜೊಗುಳವನ್ನೂ ಹಾಡಿದ್ದೀಯಲ್ಲಾ...

ನೀನು ಖಾರ ತಿಂದ್ರೆ, ನನಗೂ ಖಾರವಾಗಬಹುದೆಂದು ನಿನಗಿಷ್ಟವಾದ ಖಾರವನ್ನೂ ತಿನ್ನುವುದು ಬಿಟ್ಟಿರಲಿಲ್ಲವೇ...?
ನಾನು ಚೆನ್ನಾಗಿ ಮಲಗಿರಬಹುದೇ, ಇಲ್ಲಾ... ಆಟವಾಡುತ್ತಿರಬಹುದೇ ಎಂದು ನೀ ಎಲ್ಲೆಂದರಲ್ಲಿ ಯೋಚಿಸುತ್ತಿರಲಿಲ್ಲವೇ...?
ನೀನು ಪುಟ್ಟಾ... ಎಂದು ಹೆಸರಿಟ್ಟು ಕೂಗಿದಾಗ ನಾನೂ ಹೂಂ ಗುಟ್ಟುತ್ತಿರಲಿಲ್ಲವೇ...

ನಿನ್ನೆದುರಿಗೆ ಬಂದ ನಂತರವಂತೂ ರಾಜ ಕುಮಾರನಂತೆ ನನ್ನ ಬೆಳೆಸಿದ್ದೀಯಲ್ಲಾ...
ನೀನುಣಿಸುತ್ತಿದ್ದ ಅಮೃತವದು ನನ್ನ ಸಿರಗಳಲ್ಲಿನ ಜೀವಕ್ಕೆ ಕಾರಣೀಭೂತವಾದುದು...
ನೀನು ಹೇಳುತ್ತಿದ್ದ ರಾಮಾಯಣ, ಮಹಾಭಾರತ ಕಥೆಯಂತು ಹಾಗೇ ನನ್ನ ಮನಸ್ಸಿನಲ್ಲಿ ಅಚ್ಚಳಿಯದೆ ಕುಳಿತಿದೆ ಅಮ್ಮಾ...

ನಾನು ಕೆಟ್ಟದಾಗಿ ಗಲೀಜು ಮಾಡಿದಾಗ, ಚೊಕ್ಕದಾಗಿ ಸ್ನಾನ ಮಾಡಿಸಿ...
ಕಣ್ಣ ತೀದಿ, ಹಣೆಯಲೊಂದು ತಿಲಕವಿರಿಸಿ, ಜೊತೆಗೊಂದು ದೃಷ್ಟಿ ಬೊಟ್ಟನ್ನೂ ಇಟ್ಟು...
ನಾನು ಪುಟ್ಟದಾಗಿ ನಕ್ಕಾಗ, ಕೆನ್ನೆಯ ಮೇಲೊಂದು ಹನಿ ಮುತ್ತನಿಟ್ಟು...

ನನ್ನ ಜೊತೆ ಆಟವಾಡಿ, ಊಟಮಾಡಿಸಿ, ಜೊತೆಯಲ್ಲೇ ಇದ್ದು ನನ್ನೆಲ್ಲ ಇಷ್ಟಗಳನ್ನು ಪೂರೈಸಿದ್ದೀಯಲ್ಲಾ...
ನನಗೆ ಹುಷಾರಿಲ್ಲದಾದಾಗ ನಿದ್ದೆಗೆಟ್ಟು ಕಣ್ಣಿಗೆ ಎಣ್ಣೆ ಹಾಕಿ ಕಾದಿದ್ದೀಯಲ್ಲ...
ಆಟವಾಡಿ ಮೈ ಕೈ ಗಾಯ ಮಾಡಿಕ್ಕೊಂಡಾಗ ಸುಶ್ರೂಷಿಸಿದವಳು ನೀನಲ್ಲವೇ...?

ಅಕ್ಕನ ಜೊತೆ ಜಗಳವಾದಾಗ ಸಂಧಾನವನ್ನೂ ಮಾಡಿಸುತ್ತಿದ್ದೀಯಲ್ಲಾ...
ನನಗಿಷ್ಟವಾದ ತಿಂಡಿಗಳನ್ನೇ ಮಾಡಿ ಸದಾ ನನ್ನ ಖುಶಿಗೊಳಿಸುತ್ತಿದ್ದವಳು ನೀನಲ್ಲವೇ...?
ಆ ದಿನ ನದೀದಡದಲ್ಲಿ ಗೇರುಬೀಜ(ಗೋಡಂಬಿ) ಸುಟ್ಟುಕೊಟ್ಟಿದ್ದಂತೂ ನೆನೆಯಲಾರದೆ ಇರಲಾರೆ ಅಮ್ಮಾ...

ಕಾಲೇಜು ದಿನಗಳಲ್ಲಿ ಬೆಳಿಗ್ಗೆ ಬೇಗನೆ ಹೋಗಬೇಕೆಂಬ ಕಾರಣಕ್ಕೆ, ನೀನು ನಾಲ್ಕು ಗಂಟೆಗೇ ಎದ್ದು ತಿಂಡಿ ಮಾಡುತ್ತಿದ್ದುದು ನೆನಪಾಗುತ್ತಮ್ಮಾ...
ಕೊಳೆಯಾದ ನನ್ನ ಬಟ್ಟೆಗಳನ್ನು, ಒಂದು ದಿನವೂ ನೀನು ಬೇಸರಿಸದೆ ಒಗೆದು ಹಾಕಿದ್ದೀಯಲ್ಲಾ...
ದೂರದೂರಿಗೆ ಕಾಲೇಜು ಸೇರುವಾಗ ಖುಶಿಯಾಗಿ ಕಳುಹಿಸಿದಳ ಮನಸಿನೊಳು ಬಿಕ್ಕುತ್ತಿದ್ದದ್ದು ನನಗೆ ಕೇಳಿಸುತ್ತಿತ್ತಮ್ಮಾ...

ಇರುಳಲ್ಲೇ ನಿಂತು ನೀ ನನ್ನ ಬಾಳಿನ ಬೆಳಕಿಗೆ ಕಾರಣವಾದೆ...
ಅಮ್ಮಾ..., ಈ ಋಣ ಯಾವ ಜನುಮದಲಿ ತೀರಿಸಲಮ್ಮಾ...?
ನೀ ಇರುಳ ದೀಪ...

ಬುಧವಾರ, ಡಿಸೆಂಬರ್ 9, 2009

ಎಂಜಿ ರೋಡಿನಲ್ಲಿ ಹೃದಯ ಮೀಟಿದವರಾರು...?

[ಅರ್ಪಣೆ : ನನ್ನ ಬ್ಲಾಗ್ ನಲ್ಲಿ ಹೊಸ ಬರಹಗಳನ್ನು ಕಾಣದಿರುವುದಕ್ಕೆ, ನನ್ನನ್ನು ಕಟಕಟೆಯಲ್ಲಿ ನಿಲ್ಲಿಸಿ, ಬರೆಯಲೇ ಬೇಕೆಂದು ತಾಕೀತು ಮಾಡಿ, ಬರಹಕ್ಕೆ ಉತ್ತಮ ತಳಹದಿಯನ್ನೂ ಶೀರ್ಷಿಕೆಯನ್ನೂ ನೀಡಿ, ಮಿತ್ರರಲ್ಲೊಬ್ಬರ ಕಥೆಯನ್ನೂ ಬರೆಯಲು ಅನುಮತಿಯನ್ನು ದೊರಕಿಸಿ ಕೊಟ್ಟ ನನ್ನ ಮೂವರು ಮಿತ್ರರಿಗೆ...]

ಅಮ್ಮಣ್ಣೀ...,

ಯಾಕೋ ನಿನ್ನ ಮದುವೆ ಕಳೆದ ನಂತರ ನನ್ನ ಮನಸು ಅಲ್ಲೋಲ-ಕಲ್ಲೋಲವಾಗಿದೆ. ನಿನ್ನ ಮದುವೆಯ ದಿನ ನಾನು ಬಂದಿದ್ದೆ ನಿಜ. ಆದರೆ ನನ್ನ ಮನ ನಿರ್ಭಾವುಕವಾಗಿತ್ತು. ಆ ರಾತ್ರಿ ಮನೆಗೆ ಹಿಂತಿರುಗಿದವನಿಗೆ ತಡೆಯಲಾಗಲಿಲ್ಲ, ಕಣ್ಣೀರ ಕೋಡಿ ಹರಿಸಿದ್ದೆ. ಮುಂದೆರಡು ದಿನಗಳ ತನಕ ಎಲ್ಲವೂ ಚೆನ್ನಗೇ ಇತ್ತು. ಆಮೇಲೆ ನನಗೆ ಮಂಕು ಕವಿದಿತ್ತು. ಮನಸು ಮುದುಡಿತ್ತು. ಕೆಲವೊಮ್ಮೆ ಭಾವೋತ್ಕಟತೆಗೆ ಸಿಲುಕಿ ಮನೆಯವರಿಗೆ, ಗೆಳೆಯರಿಗೆ ಕಿರಿಕಿಕಿಯಾಗುತ್ತಿತ್ತಂತೆ. ಮನೆಗೆ ಬಂದ ಬಂಧುಗಳೆಡೆಯಲ್ಲಿ ನನ್ನ ಮನೆಯವರು ಪೇಚಿಗೂ ಸಿಲುಕಿದ್ದರಂತೆ, ನನ್ನಿಂದಾಗಿ! ನೀನು ಬೇಸರಿಸದಿರು ಅಮ್ಮಣ್ಣೀ... ಸುಮಾರು ಒಂದು-ವರೆ ತಿಂಗಳಷ್ಟು ಕಾಲ ಡಾಕ್ಟರ್ ಸುಬ್ರಹ್ಮಣ್ಯಮ್ ಕೊಟ್ಟ ಔಷಧಿ ತೆಗೆದುಕ್ಕೊಂಡ ನಂತರ, ಈವಾಗ ನಾನು ಚೆನ್ನಾಗೇ ಇದ್ದೇನೆ...ಈಗ ನಿನಗೆ ಅರ್ಥವಾಗಿರ ಬೇಕು, ನಾನ್ಯಾಕೆ ಇಷ್ಟು ದಿನ ಈ ಬ್ಲಾಗ್ ಅಪ್ ದೇಟ್ ಮಾಡಿಲ್ಲಾ ಅಂತ.

ನನ್ನ ಬರಹದ ಶೀರ್ಷಿಕೆಯನ್ನು"ಎಂಜಿ ರೋಡಿನಲ್ಲಿ ಹೃದಯ ಮೀಟಿದವರಾರು?" ಅಂತ ಇರಿಸಬೇಕೆಂದು ಮಿತ್ರ ಕೂಟದಿಂದ ಅಪ್ಪಣೆಯಾಗಿತ್ತು. ಯಾಕೋ ಕೆಲವು ಒತ್ತಡಗಳಿಂದ ಬರೆಯಲಾಗಲಿಲ್ಲ, ಮಿತ್ರ ಕೂಟದಿಂದಲೇ ಒಬ್ಬರನ್ನು ಕಥಾ ನಾಯಕನ್ನ್ನಾಗಿ ಆಯ್ಕೆ ಮಾಡಿದ್ದೂ ಆಯ್ತು. ಆತನಿಗೆ ಮದುವೆಯ ವಯಸ್ಸು. ಹಾಗೆಂದು ತಪ್ಪಾಗಿ ಗ್ರಹಿಸದಿರಿ. ಈತನಿಗೆ ಅದರ ಹುಚ್ಚೇನೂ ಇಲ್ಲ! ಊರಿಂದ ಅವನ ಅಮ್ಮ ಫೋನ್ ಮಾಡಿ, ಹುಡುಗಿಯೊಬ್ಬಳ ವಿವರ ನೀಡಿ, ಆಕೆಯನ್ನು ನೋಡಿ ಬರಬೇಕೆಂದು ಹೇಳಿದ್ದರು. ಸರಿ, ಶನಿವಾರ ಬೆಳಿಗ್ಗೆ ಆಕೆಯ ಆಫೀಸಿನ ಮೆಟ್ಟಿಲಲ್ಲಿ ಕುಳಿತು ಈತ ಕಾದದ್ದೇ ಕಾದಿದ್ದು... ಸುಮಾರು ಹುಡುಗಿಯರು ಬಂದು ಹೋಗುತ್ತಿದ್ದರಂತೆ. ಆಕೆಯ ಮುಖ ದರ್ಶನ ಆಗಿರಲಿಲ್ಲ. ಒಬ್ಬನೇ ಹೊಗಿದ್ದರಿಂದ ಆಫೀಸಿನ ಒಳಗೆ ಹೋಗಿ ಆಕೆಯ ಬಗ್ಗೆ ಕೇಳಲು ಯಾಕೋ ಅಳುಕಾಗಿ, ಆಕೆಯನ್ನು ನೋಡದೇ 11 ಗಂಟೆಗೇ ಹಿಂತಿರುಗಿ ಬಂದಿದ್ದ. ನಾನು ಫೋನು ಮಾಡಿ "OKನಾ...?" ಅಂತ ಕೇಳಿದಾಗೆ "NOT OK" ಅಂದ. "ಯಕೋ? ಚೆನ್ನಾಗಿಲ್ವಾ?" ಅಂತ ಕೇಳಿದ್ರೆ, "ಅವಳು ಯಾರು ಅಂತಾನೇ ಗೊತ್ತಾಗಿಲ್ಲ..." ಅಂತ ಹಲ್ಲು ಕಿಸೀತಿದ್ದ. ಅನಿವಾರ್ಯವಾಗಿ ಆಕೆಯ ಆಫೀಸಿನೆಡೆಗಿನ ಎರಡನೆಯ ಸವಾರಿಯಲ್ಲಿ ಆತನೊಂದಿಗೆ ನಾನು ಹೊರಡಬೇಕಾಯಿತು. ಜೊತೆಗೊಬ್ಬರಿದ್ದುದರಿಂದ ಆತ ಸ್ವಲ್ಪ ಧೈರ್ಯ ತಾಳಿ, ಆಕೆಯ ಆಫೀಸ್ ನೊಳಗೆ ಹೋಗಿ, ಅಕೆಯನ್ನು ಮಾತನಾಡಿಸಿದ್ದು, ಆಕೆಯ ನಗುವಿನಲ್ಲಿ ಆತ ಪುಳಕಿತ ಗೊಂಡಿದ್ದು... ಆಕೆಯ ಅನನ್ಯವಾದ ಕಂಗಳಲ್ಲಿ ಆತ ಹೊಳಪ ಕಂಡಿದ್ದು... ಆಕೆಯ ಸರಳತೆಯ ಸಮ್ಮೋಹನದಲ್ಲಿ ಆತ ಕ್ಲೀನ್ ಆಗಿ ಬೌಲ್ಡ್ ಆದದ್ದು... ಆಕೆಯ ಮಾತಿನ ಹೊನಪಲ್ಲಿ, ಆತ ವೀಣೆಯ ಇಂಪನ್ನು ಕೇಳಿದ್ದು... ಹಿಂತಿರುಗಿ ಬರುವಾಗ ಆತ ತುಂಬಾ excite ಆಗಿರುವುದರಿಂದ ಬೈಕ್ ರೈಡ್ ಮಾಡಲು ನನಗೊಪ್ಪಿಸಿ, ಆತ ಕನಸು ಕಾಣುತ್ತಿದ್ದುದು...!!

ನಾನು ಅಂದ್ಕೊಳ್ತಿದ್ದೆ, ಅಮ್ಮಣ್ಣಿ... ನೀನು ದೂರವಾದಾಗಿನಿಂದ ಬರಿದಾದ ಆ ಸ್ಥಾನಕ್ಕೆ ಯಾರಾದ್ರು ತುಂಬ ಬೇಡ್ವಾ.. ಅಂತ... ಎಷ್ಟು ದಿನ ಅಂತ ಹೀಗೆ ನಿನ್ನ ತೆರವನ್ನು ನಾ ಸಹಿಸಲಿ?

ಕಳೆದ ಸೋಮವಾರ, ಕೆಲಸವೆಲ್ಲ ಮುಗಿಸಿ ಆಫೀಸಿನಿಂದ ಮನೆ ಕಡೆ ಹೋಗುವವನಿದ್ದಾಗ, ಅಚಾನಕ್ ಆಗಿ ನನ್ನ ಇ-ಮೇಲ್ ಗೆಳತಿಯಿಂದ ಫೋನ್ ಕಾಲ್. "ನಾನು ಗಾಂಧೀಬಜಾರಲ್ಲಿದ್ದೇನೆ. ಸಾಧ್ಯವಾದರೆ ಮೀಟ್ ಮಾಡೋಣ ಅಂತ". ಆಕೆ ಬರಹಗಾರ್ತಿ. ಆಕೆಯ ಅಕ್ಷರಗಳೇ ಮುದ್ದು ಮುದ್ದು. ಮೊಲದ ಮರಿಯಷ್ಟು ಮುದ್ದು... ಆಕೆಯ ಮಾತಿನ ಮೋಡಿಯೇ ಹಾಗೆ, ಆಗ ತಾನೇ ಅರಳಿದ ಮಲ್ಲಿಗೆಯ ಮೊಗ್ಗಿನಂತೆ... ಹಾಗೇ ಬೈಕ್ ಗೆ ಪೆಟ್ರೊಲ್ ಹಾಕ್ಕೊಂಡು ಗಾಂಧೀಬಜಾರ್ ಕಡೆ ಬಂದ್ರೆ, ಲೇಡೀಸ್ ವೇರ್ ಹೌಸ್ ಹತ್ರ, ನನ್ನ ಗೆಳತಿಯ ಜೊತೆ, ನನ್ನ ಗೆಳತಿಯ-ಗೆಳತಿಯೂ ಇದ್ದುದು ಒಂದು ಥರ ಮುಜುಗರ, ಖುಷಿ, ಈರ್ಷೆ ಎಲ್ಲವನ್ನೂ ನೀಡೀತು...


ನನ್ನ ಗೆಳತಿ ಜೀನ್ಸ್ ಮತ್ತು ಪಿಂಕ್ T-shirt ನಲ್ಲಿ ಕಂಗೊಳಿಸುತ್ತಿದ್ದರೆ, ಆಕೆಯ ಗೆಳತಿ ಶ್ವೇತವರ್ಣದ ಚೂಡಿಯಲ್ಲಿ ಮಲ್ಲಿಗೆಯ ಕಂಪಿನ ಜೊತೆ ಬಂದಿದ್ದಳು...
ನನ್ನ ಗೆಳತಿಯದು ಶುಭ್ರನಗು(ಖಂಡಿತವಾಗ್ಲೂ ಆಕೆ ಸ್ಮಿತವದನೆಯೇ!), ಆಕೆಯ ಗೆಳತಿಯದು ಮುಗ್ಧವಾದ ನಗು...
ನನ್ನ ಗೆಳತಿಯೋ ಮಾತಿನಲಿ ಬಲು ಚತುರೆ ಹಾಗೂ ಚಟಾಕಿ ಹಾರಿಸುವವಳಾದರೆ, ಆಕೆಯ ಗೆಳತಿ ಸ್ನೇಹಿತರ ಹೃದಯದ ಮಿಡಿತಕ್ಕೆ ಸ್ಪಂದಿಸುವ ನಂದಾದೀಪದಂತಿದ್ದಳು...
ನನ್ನ ಗೆಳತಿ ಅತ್ತ ಇತ್ತ ಕಣ್ಣ ಹೊರಳಿಸಿ, ಮರಿ ಜಿಂಕೆಯಂತೆ ಪುಟಿಯುತ್ತಿದ್ದರೆ, ಆಕೆಯ ಗೆಳತಿ ಒಲವಿನ ತೋರಣ ಕಟ್ಟಿ, ರೆಕ್ಕೆ ಬಿಚ್ಚಿ ಹಾರುವ ಪಾತರಗಿತ್ತಿಯಂತೆ ಕಂಡಳು...

ನನ್ನ ಗೆಳತಿಯ ಮಾತಿನ ಮೋಡಿಗೆ ನಾ ಮರುಳಾದರೆ, ಆಕೆಯ ಗೆಳತಿಯ ಕುಡಿ ನೋಟಕ್ಕೆ ನಾ ಸೋತೆ...
ನನ್ನ ಗೆಳತಿಯ ಪಿಕಿಲಾಟದ ವೈಖರಿಗೆ ನಾ ಮರುಳಾದರೆ, ಆಕೆಯ ಗೆಳತಿಯ ತುಟಿಯಂಚಿನ ನಗುವಿಗೆ ನಾ ಸೋತೆ...
ನನ್ನ ಗೆಳತಿಯ ಹೆಜ್ಜೆಯ ಮಿಡಿತಕ್ಕೆ ನಾ ಮರುಳಾದರೆ, ಆಕೆಯ ಗೆಳತಿಯ ಗೆಜ್ಜೆಯ ಸದ್ದಿಗೆ ನಾ ಸೋತೆ...
ನನ್ನ ಗೆಳತಿಯ ಹೃದಯವಂತಿಕೆಗೆ ನಾ ಮರುಳಾದರೆ, ಆಕೆಯ ಗೆಳತಿಯ ಮನಸಿನ ಆರ್ಧ್ರತೆಗೆ ನಾ ಸೋತೆ...

ಅಮ್ಮಣ್ಣೀ..., ಸಣ್ಣವರಿದ್ದಾಗ ಹುಡುಕುವ ಆಟ ಆಡುವಾಗ ನಮ್ಮನೆ ಅಟ್ಟಕ್ಕೆ ಹತ್ತಿ, ಕೆಳಗಿಳಿಯುವಾಗ ನೀನು ಜಾರಿ ಬಿದ್ದು, ಏಣಿಯ ಮೆಟ್ಟಿಲು ಮುರಿದು, "ತಕಟ್ ಧಂ..." ಅಂತ ದೊಡ್ಡ ಸದ್ದಾಗಿ, ಅಮ್ಮ "ಏನದು ಸದ್ದು?" ಅಂತ ಬೈದು, ಬಿದ್ದಿದ್ದು ನೀನು ಅಂತ ಗೊತ್ತಾದಾಗ "ತಕಟ್ ಧಿಮ್ಮಿ.. ಸ್ವಲ್ಪ ಮೆಲ್ಲಗೆ ಇಳೀ ಬಾರ್ದಾ..." ಅಂತ ಸಮಧಾನಿಸಿದ್ದು ಎಲ್ಲ ನೆನಪಾಗ್ತಿದೆ... ಆಮೇಲೆ "ತಕಟ್ ಧಿಮ್ಮಿ..." ಅಂತನೇ ನಿನ್ನನ್ನು ಎಲ್ಲರೂ ಕರೆಯತೊಡಗಿದ್ದು, ವಿಪರ್ಯಾಸ...!

ಹಾಗೇಯೇ ಈವಾಗ ಯಾರೋ ನನ್ನೆದೆಯ ಮೆಟ್ಟಿಲನ್ನು "ತಕಟ್ ಧಂ..." ಅಂತ ಮುರಿದುಬಿಟ್ಟಿದ್ದಾರೆ. ಆಕೆಯನ್ನೂ, ನಾ ತಕಟ್ ಧಿಮ್ಮಿ ಅಂತಾನೇ ಕರೆಯಲೇ?


ಸಂಜೆಯ ಮಬ್ಬಿನ ಬೆಳಕಿನಲಿ
ನನ್ನ ಹೃದಯಕ್ಕೆ ಸದ್ದಿಲ್ಲದೆ
ಯಾರೋ ಲಗ್ಗೆ ಇಡುತ್ತಿದ್ದಾರಲ್ಲಾ...

ನನ್ನ ಹೃದಯ-ವೀಣೆಯ ತಂತಿಯನ್ನು
ನನ್ನ ಅನುಮತಿ ಇಲ್ಲದೆ
ಯಾರೋ ಮೀಟುತ್ತಿದ್ದಾರಲ್ಲಾ...

ಸೋಮವಾರ, ಸೆಪ್ಟೆಂಬರ್ 7, 2009

ನನ್ನ ಕಣ್ಣಿನೊಳಗೆ ನೀ ಇಣುಕಿ ನೋಡಬಹುದಿತ್ತಲ್ಲ?


ಆಗ ನಾನು ೭-೮ನೇ ತರಗತಿಲ್ಲಿದ್ದಿರಬೇಕು. ಅದೊಂದು ಆಗಸ್ಟ್ ತಿಂಗಳ ಶನಿವಾರ. ಶಾಲೆಯಲ್ಲಿ ಸ್ವತಂತ್ರೊತ್ಸವದ ಅಂಗವಾಗಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ದೇಶಭಕ್ತಿ ಗೀತೆ ಹಾಡಿ ಅಮ್ಮಣ್ಣಿ ಬಹುಮಾನ ಪಡೆದು ಬೀಗಿದ ದಿನ. ಅದೇ ಸ್ಪರ್ದೆಯಲ್ಲಿ ನಾನೂ ಹಾಡಿದ್ದರೂ, ಮಳೆಗಾಲ ಆದಿಯಲ್ಲಿ ಮಳೆಯ ಮುನ್ಸೂಚನೆ ಪಡೆದ ಕಪ್ಪೆಗಳು ವಟಗುಟ್ಟುವಂತೆ ಕೇಳಿಸುವ ನನ್ನ ಧ್ವನಿಯಿಂದ ತೀರ್ಪುಗಾರರೆಲ್ಲ ಮುಖ ಸಿಂಡರಿಸಿದ್ದು ನೆನಪಿದೆ. ಅಮ್ಮಣ್ಣೀ..., ನೀ ಪಡೆದ ಬಹುಮಾನವನ್ನು ನನಗೆ ತೋರಿಸಿ ತುಂಟ ನಗೆ ನಕ್ಕಿದ್ದಕ್ಕೆ ನನಗೆ ವಿಪರೀತ ಕಿರಿ ಕಿರಿ ಎನಿಸಿ ನಿನ್ನ ಜೊತೆ ಮತನಾಡದೇ ಠೂ ಬಿಟ್ಟಿದ್ದು ನೆನಪಾಗ್ತಿದೆ... ಒಂದು ವಾರ ನಿನ್ನ ಬಿಟ್ಟು ನಾನೊಬ್ಬನೇ ಶಾಲೆಗೆ ಹೋಗುವುದು, ಬರುವುದು ಮಾಡ್ತಿದ್ದೆ. ಆ ಒಂದು ವಾರ ನಾ ಹೇಗೆ ಕಳೆದೆ ಎಂದು ಮಾತ್ರ ಕೇಳಬೇಡ... ರಾತ್ರಿ ತಲೆದಿಂಬಿನೊಳಗೆ ಕಣ್ಣೀರ ಕೋಡಿ ಹರಿಸ್ತಿದ್ದೆ.
ಒಂದು ವಾರದ ನಂತರದ ಒಂದು ಶನಿವಾರ ಬೆಳಿಗ್ಗೆ ೮ರ ಹೊತ್ತಿಗೆ ನನ್ನ ಮನೆಗೆ ಬಂದಿದ್ದೆ. ನಾನು ಮಲಗೇ ಇದ್ದೆ. ಅಮ್ಮ ಬಂದು ಹೊದಿಕೆ ಕಿತ್ತು "ಹೊತ್ತು ನೆತ್ತಿಗೇರಿದೆ... ತಕಟ್ ಧಿಮ್ಮಿ ಬಂದಿದ್ದಾಳೆ... ಅವಳ್ ಎಷ್ಟು ಬೇಗ ಏಳ್ತಾಳೆ ನೋಡು... ". ನನ್ನಮ್ಮ ಇಟ್ಟ ಹೆಸರಲ್ವಾ ಅದು? ತಕಟ್ ಧಿಮ್ಮಿ...ನನ್ನಮ್ಮ ಮಾತ್ರವಲ್ಲ ಇನ್ನೂ ಹಲವರು ಹಾಗೇ ಕರಿತಿದ್ರು ನಿನ್ನ...ಸೀದ ನನ್ನ ಕೋಣೆಗೆ ಬಂದವಳೇ ಕೈಯಲ್ಲಿದ್ದ ಕುಂಟಾಂಗಿರ ಹಣ್ಣು(ನೇರಳೆ ಹಣ್ಣಿನ ಹಾಗೇ, ಗಾತ್ರದಲ್ಲಿ ಚಿಕ್ಕದು) ತೋರಿಸಿ "ಕೋಪಾನಾ...?" ಅಂದೆ.ಮುಖ ಆಚೆ ಮಾಡಿ ಮಗ್ಗಲು ತಿರುಗಿಸಿದೆ... ಆಮೇಲೆ ನೀ ನನ್ನ ಪಕ್ಕದಲ್ಲಿ ಕುಳಿತು ಕಂಬನಿ ಮಿಡಿದಾಗ ಆರ್ದ್ರವಾದವನು ನಾನು... ಇನ್ನೂ ಹಲ್ಲುಜ್ಜದಿದ್ದರೂ, ನೀ ಕೊಟ್ಟ ಕುಂಟಾಂಗಿರ ಹಣ್ಣಿನ ರುಚಿ ನೋಡಿದ್ದು ನೆನಪಾಗ್ತಿದೆ...
ಸ್ವಲ್ಪ ಹೊತ್ತು ಅದೂ ಇದೂ ಮಾತಾಡಿ ಸಿಟ್ಟೆಲ್ಲ ಇಳಿಸಿದ ಮೇಲೆ ಮೆಲ್ಲನೆ ನನ್ನ ಕೈ ಹಿಡಿದೆಳೆದು ದೇರಳೆ ಬೆಟ್ಟಕ್ಕೆ ಹೋಗಿ ನೆಲ್ಲಿಕ್ಕಾಯಿ ತರೋಣ ಅನ್ನುವ ಪ್ಲಾನ್ ಹಾಕಿದ್ದು ನೀನೇ ಅಲ್ವಾ...? ಮತ್ತೊಂದೆರಡು ನಿಮಿಷಕ್ಕೆ ಪ್ರಾತರ್ವಿಧಿಗಳನ್ನು ಮುಗಿಸಿ ಜೊತೆಗೇ ಕುಳಿತು ತಿಂಡಿ ತಿಂದದ್ದು, ಅಮ್ಮನಲ್ಲಿ ನಮ್ಮ ಪ್ಲಾನ್ ಹೇಳಿದಾಗ ಬೈಸಿಕ್ಕೊಂಡದ್ದು, ನಾನು ಅಮ್ಮನಲ್ಲಿ ಮುನಿಸಿಕ್ಕೊಂಡದ್ದು, ಆಮೇಲೆ ಅಮ್ಮ ದೇರಳೆ ಬೆಟ್ಟಕ್ಕೆ ಹೋಗಲು ಒಪ್ಪಿಗೆ ಕೊಟ್ಟಿದ್ದು...
೩ ಕಿಲೋಮೀಟರ್ ಗಳ ನಡಿಗೆಯ ನಂತರ ಬೆಟ್ಟದಲ್ಲಿರುವ ನೆಲ್ಲಿಕ್ಕಾಯಿ ಮರಗಳ ಮೇಲೆ ಹತ್ತಿ ಸಾಧ್ಯವಾದಷ್ಟು ಕಾಯಿಗಳನ್ನು ಕೊಯ್ದು ಖುಶಿ ಪಟ್ಟೆವು. ಇನ್ನೇನು ಹೊರಡಬೇಕುನ್ನುವಾಗ ಪಕ್ಕದಲ್ಲೇ ಪೊದೆಗಳಂಚಿನಲ್ಲಿ ಹಾವೊಂದು ಕಂಡು, ನಿನ್ನ ಕೈ ಹಿಡಿದೆಳೆದದ್ದು...ಬೆಟ್ಟ ಕೆಳಗಿಳಿಯುವಾಗ ನೀನು ಜಾರಿ ಬಿದ್ದದ್ದು, ಕೈ ಕಾಲಿಗೆ ಪರಚಿದ ಗಾಯ ಮಡ್ಕೊಂಡದ್ದು... ಕೈಹಿಡಿದೆಬ್ಬಿಸಿದಾಗ ನನ್ನ ತೋಳಿಗಾಸರೆಯಾಗಿ ನಿಂತು ಸುಧಾರಿಸಿಕ್ಕೊಂಡದ್ದು...
ಮುಂದೊಂದು ದಿನ ಶಾಲೆಗೆ ಜೊತೆಯಲ್ಲಿ ಹೋಗುವಾಗ ಕಾಲು ದಾರಿಯ ಪಕ್ಕದಲ್ಲೇ ಇದ್ದ ದೊಡ್ಡ ಮರವೊಂದರಲ್ಲಿದ್ದ ಬಳ್ಳಿಯಲ್ಲಿ ಕಂಡ ನೀಲಿ ಬಣ್ಣದ ಹೂವನ್ನು ನೀನು ಆಸೆ ಪಟ್ಟದ್ದು...ನಾನು ಅದು ಹೇಗೋ ಮರ ಹತ್ತಿ ಆ ಹೂವ ಕೊಯ್ದು ನಿನ್ನ ಮುಡಿಗೇರಿಸಿದ್ದು...!
ಸ್ವಾರಸ್ಯವೆಂದರೆ... ಆ ಮರ ಹತ್ತಿ, ಹೂವ ಕಿತ್ತಿದ್ದೆ... ಆದರೆ ಪಕ್ಕದಲ್ಲೇ ಜೇನುಗೂಡೊಂದು ಇತ್ತು...ಅವುಗಳಿಗೇನೂ ನೋವಾಗಿರಬೇಕು... ಮೂರ್ನಾಲ್ಕು ಜೇನು ಹುಳಗಳು ನನ್ನ ಮುಖಕ್ಕೆ ಮುತ್ತಿಕ್ಕಿದ್ದವು. ಅದು ಹೇಗೋ ಮರದಿಂದ ಕೆಳಗಿಳಿದಾಗ ನನ್ನ ಮುಖ ಊದಿಕ್ಕೊಂಡಿತ್ತು, ಸ್ವಲ್ಪ ಸಮಯದ ನಂತರ ಕಣ್ ರೆಪ್ಪೆ ಗಳೆರಡೂ ಮುಚ್ಚುವಷ್ಟು ಮುಖ ಊದಿಕ್ಕೊಂಡಿತ್ತು... ಆ ನೋವಿನಲ್ಲಿ ಹೂವನ್ನು ನಿನಗೆ ಕೊಟ್ಟೆನೋ ಇಲ್ಲವೋ ಅಂತ ನನಗೆ ಸರಿಯಾಗಿ ನೆನಪಿಲ್ಲ ಅಮ್ಮಣ್ಣೀ...
ಆ ನೋವಿನಂತೆ ಈಗ, ನೀ ನನ್ನ ಅರ್ಥ ಮಾಡದೆ ಹೋದೆಯಲ್ಲ ಅನ್ನುವ ನೋವು ಕಾಡುತ್ತಿದೆ ಅಮ್ಮಣ್ಣೀ...

ನಿನ್ನಲ್ಲಿ ನೇರವಾಗಿ ನಾ ಹೇಳದಿರಬಹುದು...
ಆದರೂ, ನನ್ನ ಉಸಿರೊಳಗೆ ನೀ ಹುಡುಕಬಹುದಿತ್ತಲ್ಲ್ಲ?
ನನ್ನ ಮಾತಲ್ಲಿ ನೀ ಕಾಣದಿರಬಹುದು...
ಆದರೂ, ನನ್ನ ಕಣ್ಣೊಳಗೆ ನೀ ಇಣುಕಿ ನೋಡಬಹುದಿತ್ತಲ್ಲ?

ಭಾನುವಾರ, ಆಗಸ್ಟ್ 23, 2009

ಒಂಟಿತನದ ಕಾವಲಲ್ಲಿ...


ರಾಜರಾಜೇಶ್ವರಿ ದೇವಸ್ಥಾನದ ಪಕ್ಕದ ಬೀದಿಯಲ್ಲಿರುವ ವಿಶ್ವನಿಕೇತನ ಸಭಾಭವನ. ಮಂಗಳವಾರದ ಬೆಳಿಗ್ಗೆ ೯:೦೦ ರ ಮಂಗಳಕರಮಯ ಸಮಯ. ಅಮ್ಮಣ್ಣಿ ಇನ್ನೂ ಹಸೆಮಣೆಯ ಮೇಲೆ ಬಂದಿರಲಿಲ್ಲ, ಶ್ವೇತವರ್ಣದ ಪಂಚೆಯುಟ್ಟು, ಮೈ ಮೇಲೆ ಧೋತಿ ಮತ್ತು ತಲೆ ಮೇಲೆ ಪೇಟ ತೊಟ್ಟಿದ್ದ ವಿಕಾಸ್ ಒಬ್ಬರೇ ಕುಳಿತು ಪುರೋಹಿತರು ಮಾಡಿಸುತ್ತಿದ್ದ ಹೋಮದ ಧೂಪ ತಿನ್ನುತ್ತಾ ಎಡಗೈ ಬೆರಳುಗಳನ್ನು ಸುರುಟಿಕ್ಕೊಂಡು ಬಾಯಿ ಮೇಲೆ ಇಟ್ಟು ಮೆಲ್ಲನೆ ಕೆಮ್ಮುತ್ತಿದ್ರು. ಗಂಡು ಮತ್ತು ಹೆಣ್ಣಿನ ಕುಟುಂಬದವರು ಮತ್ತು ಆತ್ಮೀಯರು ಮಾತ್ರ ಬಂದಿದ್ದರು. ಬಹುಶ: ಊಟದ ಹೊತ್ತಿಗೆ ಮಿಕ್ಕವರೆಲ್ಲಾ ಬರಬಹುದು. ಪರಿಚಿತರಾದ ಅನೇಕರಲ್ಲಿ ಕುಶಲೋಪರಿ ನಡೆಸಿ, ಹಿಂದಿನ ಸಾಲಿನಲ್ಲಿ ಗೆಳೆಯ ಗಣೇಶನ ಜೊತೆ ಮಂದಸ್ಮಿತನಾಗಿ ಕುಳಿತಿದ್ದೆ. ಅದೂ ಇದೂ ಅಂತ ಮಾತಾಡುತ್ತಿದ್ದೆವು. ನನ್ನ ಮತ್ತು ಅಮ್ಮಣ್ಣಿಯ ಒಡನಾಟ ಒಳಪಟ್ಟಂತೆ ಬಹುತೇಕ ನನ್ನ ಅಂತರಂಗದ ವಿಶಯಗಳು ಆತ್ಮೀಯ ಗೆಳೆಯ ಗಣೇಶನಿಗೆ ಗೊತ್ತು.
ನಮ್ಮ ಮಾತುಕತೆಯ ನಡುವೆ ಹೊರ ಹೋಗೋಣ ಅಂತ ಹೇಳಿದೆ. ಅವನಿಗೆ ನನ್ನ ಮನದ ಇಂಗಿತ ಅರ್ಥ ಆಗಿದ್ದರಿಂದ ಅವನೇ ಮೊದಲು ಎದ್ದು ಹೊರ ಹೋಗಲು ಅನುವಾದ, ಜೊತೆಗೆ ನಾನೂ. ಹಿಂದಿನ ದಿನ ಹಿತವಾಗಿ ಮಳೆ ಬಂದಿದ್ದರಿಂದ ಧೂಳಿಲ್ಲದ ರಸ್ತೆ ಮೇಲೆ ವಾಹನಗಳು ಓಡಾಡುತ್ತಿದ್ದವು.
"ಬಾಲ್ಕನಿ ಮೇಲೆ ಹೋಗೋಣವಾ?" ಗಣೇಶ ನನ್ನನ್ನು ಕೇಳಿದ. ನಾನು ಹೂಂಗುಟ್ಟಿದೆ.
ಬಾಲ್ಕನಿಯ ಮೇಲೆ ಐದಾರು ಪ್ಲಾಸ್ಟಿಕ್ ಕುರ್ಚಿಗಳು, ಯಾರೋ ಬೆಳಗಿನ ತಿಂಡಿ ಕಾಫಿ ಕುಡಿದ ಪ್ಲೇಟುಗಳು, ಹಗುರವಾಗಿ ಯಾರ ಪರಿವೆಯೂ ಇಲ್ಲದೆ ಮನ ಬಂದಲ್ಲಿಗೆ ಹಾರಾಡುವ ಮೋಡಗಳ ನಡು ನಡುವೆ ಆವಾಗಾವಾಗ ಇಣುಕುವ ಸೂರ್ಯನ ಕಿರಣ, ಯಾವ ಉದ್ವೇಗವೂ ಇಲ್ಲದೆ ಹದವಾಗಿ ಬೀಸುವ ಗಾಳಿ.ಕಣ್ಣಳತೆಯ ದೂರದ ಮಾಧ್ಯಮಿಕ ಶಾಲೆಯೊಂದರಲ್ಲಿ ಸಮವಸ್ತ್ರದಲ್ಲಿದ್ದ ೨೦೦ ರಷ್ಟಿದ್ದ ಮಕ್ಕಳ ಗುಂಪೊಂದು ಸಾಲಾಗಿ ನಿಂತು ಅದೇನೋ ಗುನುಗುತ್ತಿತ್ತು. ಕಿವಿ ನಿಮಿರಿಸಿದೆ, ಆದರೂ ಅರ್ಥವಾಗಲಿಲ್ಲ; ಪ್ರತಿಜ್ನೆ ಇರಬಹುದೇನೋ.
ಕುರ್ಚಿಯಲ್ಲಿ ಕುಳಿತಾಗ ಪಕ್ಕದಲ್ಲೇ ಕಂಬಕ್ಕೆ ಅಲಂಕಾರಕ್ಕಾಗಿ ಇರಿಸಿದ್ದ ಬಳ್ಳಿಯೊಂದು ನನ್ನ ಕಿವಿಯ ಕೆಳಭಾಗಕ್ಕೆ ಕೆನ್ನೆಯನ್ನು ಸವರಿ, ಏನೋ ಒಂಥರಾ ಮುದ ನೀಡಿತು. ನನ್ನ ಮನದ ದುಗುಡವನ್ನು ನೇವರಿಸಿ ಸಾಂತ್ವನ ನೀಡಿದಂತೆ, ಆ ಕ್ಷಣಕ್ಕೆ ಆ ಬಳ್ಳಿಯ ಮೇಲೆ ಆಪ್ಯಾಯಮಾನವಾಗಿ, ಚಳಿಗಾಲದ ಮುಂಜಾವುಗಳಲ್ಲಿ ಎಲೆಯ ಮೇಲಿನ ಮಂಜಿನ ಹನಿಯಂತೆ ಎಡಗಣ್ಣಿನ ಅಂಚಿನಿಂದ ಒಂದೇ ಒಂದು ಹನಿ ಮೆಲ್ಲನೆ ಜಿನುಗಿತು.
ಆಗ ನಾನು ಏಳನೇ ತರಗತಿ. ನನ್ನ ಮತ್ತು ನಿನ್ನ ಮನೆ ಒಂದೆರಡು ಫರ್ಲಾಂದು ದೂರ ಮಾತ್ರವಿದ್ದುದರಿಂದ ಒಂದುವರೆ ಕಿಲೋಮೀಟರ್ ದೂರದ ಶಾಲೆಗೆ ನಾವಿಬ್ಬರೂ ಜೊತೆಯಾಗಿ ನಡೆದು ಹೋಗುವ ರೂಢಿಯಾಗಿತ್ತು. ತಿಂಗಳ ಯಾವುದೆಂದು ನೆನಪಾಗುತ್ತಿಲ್ಲ, ಅದೊಂದು ಶುಕ್ರವಾರ. ಮಿಕ್ಕೆಲ್ಲ ದಿನಗಳಲ್ಲಿ ಶಾಲಾ ಸಮವಸ್ತ್ರ ಕಡ್ಡಾಯವಾದ್ದರಿಂದ, ಶುಕ್ರವಾರ ಮಾತ್ರ ಬಣ್ಣದ ವಸ್ತ್ರಗಳ ಮೊರೆ ಹೋಗಬಹುದಿತ್ತು. ನೀನು ಆವತ್ತು ಬಿಳೀ ಬಣ್ಣದ ಚೂಡಿದಾರ-ಧಾರಿಯಾಗಿ ಹೊರಟಿದ್ದಿ. ಉದ್ದನೆಯ ಕೇಶಕ್ಕೆ ಎರಡು ಜಡೆಯ ಹಾಕಿ ಮೇಲಗಡೆ ನಸು ಕೆಂಪು ಗುಲಾಬಿಯೋ ಇಲ್ಲಾ ಕಡು ಹಳದಿ ಸೇವಂತಿಗೆ ಹೂವೋ; ಹೂದೋಟದಲ್ಲಿ ಹೂವೇ ಇಲ್ಲದ ಸಮಯದಲ್ಲಿ ಸುವಾಸನೆಯುಳ್ಳ ಪಾಚದ ಎಲೆಯನ್ನು ಮುಡಿಸಿ, ಮಳೆಗಾಲದಲ್ಲಿ ಕೇದಗೆಯ ಹೂವನ್ನು ಒಂದು ಸಲ ಮಡಚಿ ಕ್ಲಿಪ್ ಮಾಡಿ ನಿನ್ನಮ್ಮ ನಿನ್ನ ಮುಡಿಗೇರಿಸುತ್ತಿದ್ದರು. ಅಲ್ವಾ?
ಎಂದಿನಂತೆ ಅಂದೂ ಜೊತೆಯಾಗೇ ಹೊರಟಿದ್ದೆವು. ಸುಬ್ಬಾ ಭಟ್ಟರ ತೋಟದ ಪಕ್ಕದ ದಾರಿ ಕಳೆದು ದಿಣ್ಣೆಯನ್ನು ಏರಿ, ರಸ್ತೆ ಪಕ್ಕದ ಪೇರಳೆ ಮರದಲ್ಲಿ ಕಾಯಿ ಇದೆಯೇ ಎಂದು ದಿಟ್ಟಿಸಿ ನೋಡಿ ಮುಂದಕ್ಕೆ ಶಾಂತಕ್ಕನ ಮನೆಯ ಪಕ್ಕದ ತಿರುವಿಗೆ ತಲುಪಿದ್ದೆವು. ಬಹುಶ: ಅರ್ಧ ದಾರಿ ಕ್ರಮಿಸಿದ್ದೆವೇನೋ, ಇದ್ದಕ್ಕಿದ್ದಂತೆ ನೀನು ಹೊಟ್ಟೆ ನೋವಾಗುತ್ತಿದೆಯೆಂದು ಹೇಳಿ ಅಳುತ್ತಿದ್ದಾಗ, ಮನೆಲೆಕ್ಕ(Home Work)ವನ್ನು ಮಾಡದ್ದಕ್ಕಾಗಿ ದೇಸಾಯಿ ಮೇಷ್ಟ್ರ ಬೆತ್ತದ ರುಚಿಯ ಗುಂಗಿನಲ್ಲಿದ್ದ ನಾನು ನಿನ್ನ ನೋಡಿದಾಗ, ಕಿಬ್ಬೊಟ್ಟೆಯ ಕೆಳಗೆ ಕೆಂಪನೆಯ ಚಿತ್ತಾರದಿಂದ ನಿನ್ನ ಬಟ್ಟೆಗಳೆಲ್ಲ ಕಂಗೊಳಿಸಿ, ಬಿಳಿ ಬಣ್ಣದ ಮೇಲೆ ರೌದ್ರತೆಯ ನರ್ತನವಾಡಿದಂತೆ ಅನಿಸಿತ್ತು.
"ಹಾ... ಏನಾಯ್ತು?.. ಅಬ್ಬಾ.. ತುಂಬಾ ರಕ್ತ... ಬಿದ್ದು ಬಿಟ್ಯಾ...?" ಅಂತ ನಾ ದಿಗಿಲಲ್ಲಿ ಕೇಳಿದಾಗ, ಕುಕ್ಕರಗಾಲಲ್ಲೇ ಕುಳಿತು, ಬಾಯಿ ಮೇಲೆ ಬೆರಳಿಟ್ಟು, ಶಬ್ದ ಮಾಡದಂತೆ ಸೂಚಿಸಿದ್ದಿ.
ಒಂದೆರಡು ನಿಮಿಷಗಳ ನಂತರ ಎದ್ದು ನಿಂತು "ನನ್ನನ್ನು ಮನೆ ತನಕ ಬಿಟ್ಟು ಬಿಟ್ತೀಯಾ...?" ಎಂದಿದ್ದೆಯಲ್ಲ.
"ಸರಿ... ಏನಾಯ್ತು? ಬಿದ್ದು ಬಿಟ್ಯಾ? ತುಂಬಾ ನೋಯ್ತಾ ಇದೆಯಾ...? ಶಂಕರ ವೈದ್ಯರಲ್ಲಿ...." ಎನ್ನುವ ಮೊದಲೇ ನನ್ನ ಮಾತನ್ನು ತುಂಡರಿಸಿ
"ಏನೂ ಆಗಿಲ್ಲ... ನಿಂಗೆ ಅದೆಲ್ಲ ಅರ್ಥ ಆಗಲ್ಲ... ನನ್ನನ್ನು ಮನೆ ತನಕ ಬಿಡ್ತೀಯಾ...?"
ಆಮೇಲೆ ನಿನ್ನನ್ನ ಹಿಂಬಾಲಿಸಿದೆ. ಆದ್ರೆ ಹಿಂತಿರುಗುವಾಗ ಯಾವಾಗಿನ ದಾರಿ ಬಿಟ್ಟು, ದೇವಯ್ಯನ ಮನೆಯ ಪಕ್ಕದ ಓಣಿಯಲ್ಲಿ ಇಳಿದು ಮತ್ತೆ ರಾಮಣ್ಣನ ತೋಟದಲ್ಲೇ ಆಗಿ ಸುಬ್ಬಾ ಭಟ್ಟರ ತೋಟಕ್ಕೆ ತಲುಪಿದಾಗ ಪುನಹ ಕೇಳಿದೆ.
"ಏನಾಯ್ತು...? "
"ಅದೆಲ್ಲ ನಿಂಗೆ ಅರ್ಥ ಆಗಲ್ಲ... ಸುಮ್ನೆ ಬಾ ನನ್ ಜೊತೆ"
ಅರ್ಥವಾಗಲ್ಲ ಅಂದೆಯಲ್ಲ. ಯಾಕೆ ಅರ್ಥ ಆಗಲ್ಲ? ಕ್ರಿಕೆಟ್ ನಲ್ಲಿ ವೈಡ್ ಬಾಲ್ ಅಂದ್ರೆ ಏನು ಅಂತ ನಿನಗೆ ನಾನೇ ಕಲಿಸಿ ಕೊಟ್ಟಿದ್ದಲ್ಲವಾ? ಲೆಕ್ಕದಲ್ಲಿ ಭಾಗಾಕರವನ್ನು ನಿನಗೆ ನಾನೇ ತಾನೇ ಹೇಳಿ ಕೊಟ್ಟದ್ದು? ಅಂಥ ನನಗೆ ಅರ್ಥವಾಗದಿರುವುದು ಏನಿದೆ?
ನಿನ್ನ ಮನೆ ತಲುಪಿದಾದ ನಿನ್ನಮ್ಮ ನನ್ನನ್ನು ಪಕ್ಕಕ್ಕೆ ಕರೆದು "ಯಾರಲ್ಲೂ ಹೇಳಬೇಡ ಹೀಗಾಯಿತೆಂದು..." ಎಂದರು.
ಹೇಗಾಯಿತೆಂದು ಕೇಳೋಣವೆನಿಸಿದರೂ ಕೇಳಲಿಲ್ಲ. ಒಳಗಡೆ ಹೋಗಿ ಬಾಳೆ ಎಲೆಯೊಂದರಲ್ಲಿ ಹೋಳಿಗೆ ತಂದು ನನ್ನ ಕೈಯಲ್ಲಿರಿಸಿ ತಲೆ ನೇವರಿಸಿ ಕಳಿಸಿ ಕೊಟ್ಟಿದ್ದರು ನಿನ್ನಮ್ಮ.
ಶಾಲೆಗೆ ಹೋದಾಗಲೂ ಏನೋ ಒಂದು ಗೋಜಲು ಗೋಜಲು. ಯಾಕೆ ಎಲ್ಲ ಮುಚ್ಚಿಡುತ್ತಿದ್ದಾರೆ? ಮಲಗಿದಾಗಲೂ ನಿದ್ರೆ ಬಾರದೆ, ನಿನಗೇನಾಗಿರಬಹುದೆಂದು ಸಂಕಟ ಪಟ್ಟು ಅಡುಗೆ ಮನೆಯಲ್ಲಿ ಪಾತ್ರೆ ತೊಳೆಯುತ್ತಿದ್ದ ಅಮ್ಮನಲ್ಲಿ ವಿಷಯ ಹೇಳಿದಾಗ, ಬಲಕೈಯನ್ನು ಸೀರೆಯ ಸೆರಗಲ್ಲಿ ಒರಸಿ ನನ್ನ ತಲೆಯ ನೇವರಿಸಿ "ಮುಂದೆ ದೊಡ್ಡವನಾದಾಗ ನಿನಗೆಲ್ಲ ಅರ್ಥವಾಗುತ್ತೆ..." ಎಂದು ನಸು ನಕ್ಕು, ಪಾತ್ರೆ ತೊಳೆಯುವುದರಲ್ಲೇ ಮಗ್ನರಾದರು.
ಆ ರಾತ್ರೆ ಇಡೀ ನಿದ್ರೆ ಬರದೆ ಚಡಪಡಿಸುತ್ತಿದ್ದೆನು. ಆವತ್ತು ನನಗೆ ಪ್ರಪ್ರಥಮವಾಗಿ ಒಂಟಿಯೆಂದೆನಿಸಿತ್ತು. ಯಾರೂ ನನ್ನ ಬಳಿ ಮಾತನಾಡ ಬಯಸುತ್ತಿಲ್ಲವೆಂದೆನಿಸಿತ್ತು.
ಇಂದು ಪುನಹ ಹಾಗೇ ಒಂಟಿಯೆಂದೆನಿಸುತ್ತಿದೆ ಅಮ್ಮಣ್ಣೀ...

ಒಂಟಿಕಾಲ ಮೇಲಿನಲ್ಲಿ
ತುಂಬಿ ಬಂದ ನೋವಿನಲ್ಲಿ
ಒಂಟಿತನದ ಕಾವಲಲ್ಲಿ
ನಂದುವುದೇತಕೀ ದೀಪವು?

ಉಸಿರ ದನಿ ಕೇಳದಿರದು
ಉಗುಳು ನುಂಗಿ ಬದುಕುತಿಹುದು
ಬತ್ತಿ ಹೋದ ಗಂಟಲಲ್ಲಿ
ಒತ್ತಿ ಒತ್ತಿ ನೆನೆಯುತಿಹುದು

ಆಸರೆಯ ಅರಸುತಿಹೆನು
ಕಿರು ಬೆರಳೇ ಸಾಕು
ಹಕ್ಕಿಗೆ ಹಾರಾಡುವ ಆಸೆ
ಮರಿ ಚಿಗುರ ಕನಸೇ?