ಸೋಮವಾರ, ಸೆಪ್ಟೆಂಬರ್ 7, 2009

ನನ್ನ ಕಣ್ಣಿನೊಳಗೆ ನೀ ಇಣುಕಿ ನೋಡಬಹುದಿತ್ತಲ್ಲ?


ಆಗ ನಾನು ೭-೮ನೇ ತರಗತಿಲ್ಲಿದ್ದಿರಬೇಕು. ಅದೊಂದು ಆಗಸ್ಟ್ ತಿಂಗಳ ಶನಿವಾರ. ಶಾಲೆಯಲ್ಲಿ ಸ್ವತಂತ್ರೊತ್ಸವದ ಅಂಗವಾಗಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ದೇಶಭಕ್ತಿ ಗೀತೆ ಹಾಡಿ ಅಮ್ಮಣ್ಣಿ ಬಹುಮಾನ ಪಡೆದು ಬೀಗಿದ ದಿನ. ಅದೇ ಸ್ಪರ್ದೆಯಲ್ಲಿ ನಾನೂ ಹಾಡಿದ್ದರೂ, ಮಳೆಗಾಲ ಆದಿಯಲ್ಲಿ ಮಳೆಯ ಮುನ್ಸೂಚನೆ ಪಡೆದ ಕಪ್ಪೆಗಳು ವಟಗುಟ್ಟುವಂತೆ ಕೇಳಿಸುವ ನನ್ನ ಧ್ವನಿಯಿಂದ ತೀರ್ಪುಗಾರರೆಲ್ಲ ಮುಖ ಸಿಂಡರಿಸಿದ್ದು ನೆನಪಿದೆ. ಅಮ್ಮಣ್ಣೀ..., ನೀ ಪಡೆದ ಬಹುಮಾನವನ್ನು ನನಗೆ ತೋರಿಸಿ ತುಂಟ ನಗೆ ನಕ್ಕಿದ್ದಕ್ಕೆ ನನಗೆ ವಿಪರೀತ ಕಿರಿ ಕಿರಿ ಎನಿಸಿ ನಿನ್ನ ಜೊತೆ ಮತನಾಡದೇ ಠೂ ಬಿಟ್ಟಿದ್ದು ನೆನಪಾಗ್ತಿದೆ... ಒಂದು ವಾರ ನಿನ್ನ ಬಿಟ್ಟು ನಾನೊಬ್ಬನೇ ಶಾಲೆಗೆ ಹೋಗುವುದು, ಬರುವುದು ಮಾಡ್ತಿದ್ದೆ. ಆ ಒಂದು ವಾರ ನಾ ಹೇಗೆ ಕಳೆದೆ ಎಂದು ಮಾತ್ರ ಕೇಳಬೇಡ... ರಾತ್ರಿ ತಲೆದಿಂಬಿನೊಳಗೆ ಕಣ್ಣೀರ ಕೋಡಿ ಹರಿಸ್ತಿದ್ದೆ.
ಒಂದು ವಾರದ ನಂತರದ ಒಂದು ಶನಿವಾರ ಬೆಳಿಗ್ಗೆ ೮ರ ಹೊತ್ತಿಗೆ ನನ್ನ ಮನೆಗೆ ಬಂದಿದ್ದೆ. ನಾನು ಮಲಗೇ ಇದ್ದೆ. ಅಮ್ಮ ಬಂದು ಹೊದಿಕೆ ಕಿತ್ತು "ಹೊತ್ತು ನೆತ್ತಿಗೇರಿದೆ... ತಕಟ್ ಧಿಮ್ಮಿ ಬಂದಿದ್ದಾಳೆ... ಅವಳ್ ಎಷ್ಟು ಬೇಗ ಏಳ್ತಾಳೆ ನೋಡು... ". ನನ್ನಮ್ಮ ಇಟ್ಟ ಹೆಸರಲ್ವಾ ಅದು? ತಕಟ್ ಧಿಮ್ಮಿ...ನನ್ನಮ್ಮ ಮಾತ್ರವಲ್ಲ ಇನ್ನೂ ಹಲವರು ಹಾಗೇ ಕರಿತಿದ್ರು ನಿನ್ನ...ಸೀದ ನನ್ನ ಕೋಣೆಗೆ ಬಂದವಳೇ ಕೈಯಲ್ಲಿದ್ದ ಕುಂಟಾಂಗಿರ ಹಣ್ಣು(ನೇರಳೆ ಹಣ್ಣಿನ ಹಾಗೇ, ಗಾತ್ರದಲ್ಲಿ ಚಿಕ್ಕದು) ತೋರಿಸಿ "ಕೋಪಾನಾ...?" ಅಂದೆ.ಮುಖ ಆಚೆ ಮಾಡಿ ಮಗ್ಗಲು ತಿರುಗಿಸಿದೆ... ಆಮೇಲೆ ನೀ ನನ್ನ ಪಕ್ಕದಲ್ಲಿ ಕುಳಿತು ಕಂಬನಿ ಮಿಡಿದಾಗ ಆರ್ದ್ರವಾದವನು ನಾನು... ಇನ್ನೂ ಹಲ್ಲುಜ್ಜದಿದ್ದರೂ, ನೀ ಕೊಟ್ಟ ಕುಂಟಾಂಗಿರ ಹಣ್ಣಿನ ರುಚಿ ನೋಡಿದ್ದು ನೆನಪಾಗ್ತಿದೆ...
ಸ್ವಲ್ಪ ಹೊತ್ತು ಅದೂ ಇದೂ ಮಾತಾಡಿ ಸಿಟ್ಟೆಲ್ಲ ಇಳಿಸಿದ ಮೇಲೆ ಮೆಲ್ಲನೆ ನನ್ನ ಕೈ ಹಿಡಿದೆಳೆದು ದೇರಳೆ ಬೆಟ್ಟಕ್ಕೆ ಹೋಗಿ ನೆಲ್ಲಿಕ್ಕಾಯಿ ತರೋಣ ಅನ್ನುವ ಪ್ಲಾನ್ ಹಾಕಿದ್ದು ನೀನೇ ಅಲ್ವಾ...? ಮತ್ತೊಂದೆರಡು ನಿಮಿಷಕ್ಕೆ ಪ್ರಾತರ್ವಿಧಿಗಳನ್ನು ಮುಗಿಸಿ ಜೊತೆಗೇ ಕುಳಿತು ತಿಂಡಿ ತಿಂದದ್ದು, ಅಮ್ಮನಲ್ಲಿ ನಮ್ಮ ಪ್ಲಾನ್ ಹೇಳಿದಾಗ ಬೈಸಿಕ್ಕೊಂಡದ್ದು, ನಾನು ಅಮ್ಮನಲ್ಲಿ ಮುನಿಸಿಕ್ಕೊಂಡದ್ದು, ಆಮೇಲೆ ಅಮ್ಮ ದೇರಳೆ ಬೆಟ್ಟಕ್ಕೆ ಹೋಗಲು ಒಪ್ಪಿಗೆ ಕೊಟ್ಟಿದ್ದು...
೩ ಕಿಲೋಮೀಟರ್ ಗಳ ನಡಿಗೆಯ ನಂತರ ಬೆಟ್ಟದಲ್ಲಿರುವ ನೆಲ್ಲಿಕ್ಕಾಯಿ ಮರಗಳ ಮೇಲೆ ಹತ್ತಿ ಸಾಧ್ಯವಾದಷ್ಟು ಕಾಯಿಗಳನ್ನು ಕೊಯ್ದು ಖುಶಿ ಪಟ್ಟೆವು. ಇನ್ನೇನು ಹೊರಡಬೇಕುನ್ನುವಾಗ ಪಕ್ಕದಲ್ಲೇ ಪೊದೆಗಳಂಚಿನಲ್ಲಿ ಹಾವೊಂದು ಕಂಡು, ನಿನ್ನ ಕೈ ಹಿಡಿದೆಳೆದದ್ದು...ಬೆಟ್ಟ ಕೆಳಗಿಳಿಯುವಾಗ ನೀನು ಜಾರಿ ಬಿದ್ದದ್ದು, ಕೈ ಕಾಲಿಗೆ ಪರಚಿದ ಗಾಯ ಮಡ್ಕೊಂಡದ್ದು... ಕೈಹಿಡಿದೆಬ್ಬಿಸಿದಾಗ ನನ್ನ ತೋಳಿಗಾಸರೆಯಾಗಿ ನಿಂತು ಸುಧಾರಿಸಿಕ್ಕೊಂಡದ್ದು...
ಮುಂದೊಂದು ದಿನ ಶಾಲೆಗೆ ಜೊತೆಯಲ್ಲಿ ಹೋಗುವಾಗ ಕಾಲು ದಾರಿಯ ಪಕ್ಕದಲ್ಲೇ ಇದ್ದ ದೊಡ್ಡ ಮರವೊಂದರಲ್ಲಿದ್ದ ಬಳ್ಳಿಯಲ್ಲಿ ಕಂಡ ನೀಲಿ ಬಣ್ಣದ ಹೂವನ್ನು ನೀನು ಆಸೆ ಪಟ್ಟದ್ದು...ನಾನು ಅದು ಹೇಗೋ ಮರ ಹತ್ತಿ ಆ ಹೂವ ಕೊಯ್ದು ನಿನ್ನ ಮುಡಿಗೇರಿಸಿದ್ದು...!
ಸ್ವಾರಸ್ಯವೆಂದರೆ... ಆ ಮರ ಹತ್ತಿ, ಹೂವ ಕಿತ್ತಿದ್ದೆ... ಆದರೆ ಪಕ್ಕದಲ್ಲೇ ಜೇನುಗೂಡೊಂದು ಇತ್ತು...ಅವುಗಳಿಗೇನೂ ನೋವಾಗಿರಬೇಕು... ಮೂರ್ನಾಲ್ಕು ಜೇನು ಹುಳಗಳು ನನ್ನ ಮುಖಕ್ಕೆ ಮುತ್ತಿಕ್ಕಿದ್ದವು. ಅದು ಹೇಗೋ ಮರದಿಂದ ಕೆಳಗಿಳಿದಾಗ ನನ್ನ ಮುಖ ಊದಿಕ್ಕೊಂಡಿತ್ತು, ಸ್ವಲ್ಪ ಸಮಯದ ನಂತರ ಕಣ್ ರೆಪ್ಪೆ ಗಳೆರಡೂ ಮುಚ್ಚುವಷ್ಟು ಮುಖ ಊದಿಕ್ಕೊಂಡಿತ್ತು... ಆ ನೋವಿನಲ್ಲಿ ಹೂವನ್ನು ನಿನಗೆ ಕೊಟ್ಟೆನೋ ಇಲ್ಲವೋ ಅಂತ ನನಗೆ ಸರಿಯಾಗಿ ನೆನಪಿಲ್ಲ ಅಮ್ಮಣ್ಣೀ...
ಆ ನೋವಿನಂತೆ ಈಗ, ನೀ ನನ್ನ ಅರ್ಥ ಮಾಡದೆ ಹೋದೆಯಲ್ಲ ಅನ್ನುವ ನೋವು ಕಾಡುತ್ತಿದೆ ಅಮ್ಮಣ್ಣೀ...

ನಿನ್ನಲ್ಲಿ ನೇರವಾಗಿ ನಾ ಹೇಳದಿರಬಹುದು...
ಆದರೂ, ನನ್ನ ಉಸಿರೊಳಗೆ ನೀ ಹುಡುಕಬಹುದಿತ್ತಲ್ಲ್ಲ?
ನನ್ನ ಮಾತಲ್ಲಿ ನೀ ಕಾಣದಿರಬಹುದು...
ಆದರೂ, ನನ್ನ ಕಣ್ಣೊಳಗೆ ನೀ ಇಣುಕಿ ನೋಡಬಹುದಿತ್ತಲ್ಲ?