ಮುಸ್ಸಂಜೆ ಗದ್ದೆ ಬದಿಯ ಕಾಲುದಾರಿಯಾಗಿ ಮನೆಗೆ ಹೋಗುವವನಿದ್ದೆ, ಮನೆ ಇನ್ನೂ ಒಂದೆರಡು ಫರ್ಲಾಂಗು ದೂರವಷ್ಟೇ. ಆಗಸ್ಟು ತಿಂಗಳ ಕೊನೆಯಾದ್ರಿಂದ ಮಳೆಯೇನು ಅಷ್ಟಾಗಿ ಬರುತ್ತಿರಲಿಲ್ಲ. ಬಂದರೂ ಶಾಲೆಗೆ ಹೋಗುವ ಸಮಯಕ್ಕೋ ಶಾಲೆ ಬಿಡುವ ಸಮಯಕ್ಕೋ ಸರಿಯಾಗಿ ಬಂದು, ಒಂದಷ್ಟು ಮಕ್ಕಳಿಂದ ಬೈಸಿಕ್ಕೊಂಡು, ಮುಖ ಊದಿಸ್ಕೊಂಡು ಆರ್ಭಟಿಸುತ್ತಾ ತೆವಳಿಕ್ಕೊಂಡು ಪಕ್ಕದೂರಿಗೆ ಹೊಗುತ್ತಿತ್ತು. ಗದ್ದೆ ಬದಿಯ ಒಬ್ಬನಿಗೆ ನಡೆಯಲಷ್ಟೇ ಹದವಾದ ಓಣಿ, ಮರಳಿ ಗೂಡಿಗೆ ಹೋಗೋ ತವಕದಲ್ಲಿರೋ ಹಕ್ಕಿಗಳ ಕೂಗು, ಒಂದೆರಡು ಅಡಿಯಷ್ಟು ಬೆಳೆದಿರುವ ಹಚ್ಚಹಸುರಿನ ಜೀವತುಂಬಿರುವ ಪೈರು, ಪಕ್ಕದಲ್ಲೇ ಇರುವ ಪದ್ಮಿನಿ ಅಕ್ಕನ ಮನೆಯ ಹೂದೊಟದಲ್ಲಿ ಬೆಳೆದಿರೋ ಜಾಜಿ ಮಲ್ಲಿಗೆಯ ಘಮ ಘಮ ಪರಿಮಳ, ದೂರದಿಂದೆಲ್ಲೋ ಗಾಳಿಯಲ್ಲಿ ಹರಿದಾಡಿ ಬರುವ "ಕಭಿ ಕಭಿ ಮೇರೆ ದಿಲ್ ಮೇ..." ಹಾಡು, ಎಲ್ಲ ಸೇರಿ ನನ್ನ ನಡೆಗೊಂದು ತಾಳ ಕೊಟ್ಟು, ಮೆಲ್ಲ ಮೆಲ್ಲನೆ ನೆನಪಿನ ಸುರುಳಿಯೊಂದು ನನ್ನರಿವಿಲ್ಲದೇನೇ ಮನತುಂಬ ಆವರಿಸತೊಡಗಿತು.
ಮಂಗಳೂರಿನ ಸುಳ್ಯದಿಂದ ಸುಬ್ರಹ್ಮಣ್ಯಕ್ಕೆ ಹೊಗುವ ದಾರಿಯಲ್ಲಿ ನಾರ್ಣಕಜೆ ನಂತರ ಸಿಗುವ ಎಲಿಮಲೆಯಲ್ಲಿ ಎಡಕ್ಕೆ ೪ ಮೈಲಿ ಹೋದರೆ ಸಿಗುವ ಮೊದಲ ಊರು ಸೀಮುರ್ದೆ. ಸುಮಾರು ೧೦೦ - ೧೨೦ ಕುಟುಂಬಗಳಿರೋ ಸೀಮುರ್ದೆ, ರಸ್ತೆಯ ಎರಡೂ ಪಕ್ಕದಲ್ಲಿ ಚಾಚಿಕ್ಕೊಂಡಿದೆ. ನಂತರ ಸಿಗೋ ಕಾಟಿಗೋಳಿ ರಸ್ತೆಯ ಎಡಕ್ಕೂ, ಮಿಂಚಿನಡ್ಕ ರಸ್ತೆಯ ಬಲಕ್ಕೂ, ಮುಂದಕ್ಕೆ ಬಾಳೂರೆಂಬ ಸಿದ್ದಪ್ಪ ಸಾವುಕಾರ್ರ್ ಊರು, ಇನ್ನೂ ಮುಂದಕ್ಕೆ ದಟ್ಟ ಕಾಡಿನ ಗವರ್ಮೆಂಟ್ ಫಾರೆಸ್ಟ್. ಈ ರಸ್ತೆಯಲ್ಲಿ ದಿನಕ್ಕೆರಡು ಬಾರಿ ಸುಳ್ಯದಿಂದ ಬರುವ ಬಸ್ಸೇ ಜನರ ರಾಜತಂತ್ರಿಕ ವಾಹನ. ಟೆಂಪೋಗಳು ಅವಗೀವಾಗ ಬರುತ್ತಿದ್ದರೂ ಜನರು ಅದಕ್ಕೇ ಎಂದು ಕಾದು ಕುಳಿತುಕ್ಕೊಳ್ಳೂವಂತಿರಲಿಲ್ಲ. ಮದುವೆಗೆ, ಇಲ್ಲವೇ ಸುಳ್ಯದ ಶಾಲೆಗಳ ಮಕ್ಕಳ ಪ್ರವಾಸಕ್ಕೋ ಟೆಂಪೋಗಳು ಹೊದರೆ, ಕಾದು ಕುಳಿತವನು ಹೈರಾಣಗಿ ನಡೆದೇ ಹೊಗುತ್ತಿದ್ದ.
ಸೀಮುರ್ದೆಯಲ್ಲಿರೊ ಗವರ್ಮೆಂಟ್ ಶಾಲೆಯೇ ಹತ್ತಿರದ ಐದಾರು ಹಳ್ಳಿಗಳ ಮಕ್ಕಳಿಗೆ ಸರಕಾರ ಮಾಡಿಗೊಟ್ಟ ಏಕೈಕ ದೇವಾಲಯ. ಸುಬ್ಬಣ್ಣ ಮಾಸ್ತರರ ಮುಖ್ಯ ಪೌರೊಹಿತ್ಯ ಈ ದೇವಾಲಯದಲ್ಲಿದ್ದರೂ, ಉಸ್ತುವಾರಿ ಎಲ್ಲ ನಾಗಪ್ಪ ಮಾಸ್ತರರದ್ದೇ. ಸುನಂದ ಟೀಚರರಲ್ಲದೆ ಇನ್ನೂ ಒಂದಿಬ್ಬರು ಮಾಸ್ತರರಿದ್ದಾರೆ. ಗ್ರಾಮೀಣ ಪ್ರದೇಶದ ಏಕೈಕ ಶಾಲೆಯಾದ್ರಿಂದ ಬಡವ ಬಲ್ಲಿದರೆಂಬ ಭಾವವಿಲ್ಲದ ಎಲ್ಲರೂ ಜೊತೆಯಾಗಿರುತ್ತಿದ್ದೆವು. ಹತ್ತನೆ ತರಗತಿಯವರೆಗೆ ೩೭೦ ಮಕ್ಕಳ ಭವಿಷ್ಯ ರೂಪಿಸಬೆಕಾದ ಈ ಶಾಲೆ ಅದ್ಯಾಪಕರ ಕೊರತೆಯಿಂದ ಮನೆಯ ಸೊರುವ ಮಾಡಿನಂತೆ ಅಲ್ಲಲ್ಲಿ ಮಕ್ಕಳು ನಪಾಸಾಗಿ, ಎಸ್ ಎಸ್ ಎಲ್ ಸಿ ತರಗತಿ ಸೇರುವ ವಿದ್ಯಾರ್ಥಿಗಳ ಸಂಖ್ಯೆ ಬೆರಳಲ್ಲಿ ಎಣಿಸುವಷ್ಟಾಗುತ್ತಿತ್ತು. ಇಷ್ಟದ್ರಲ್ಲಿ, ನಾನು ಅದ್ ಹೇಗೊ ಮಾಯದಲ್ಲಿ ನುಸುಳಿಕ್ಕೊಂಡು ಎಸ್ ಎಸ್ ಎಲ್ ಸಿ ತಲುಪಿದ್ದೆ.
ತರಗತಿಯ ಮೊದಲ ದಿನವೇ ಸಿದ್ದಪ್ಪ ಸಾವ್ಕಾರರ ಮಗಳು - ಹರಿಣಿ, ಕಣ್ಣಿಗೆ ಕಾಡಿಗೆ ಹಚ್ಚಿಕ್ಕೊಂಡು, ಎರಡು ಜಡೆ ಹಾಕ್ಕೊಂಡು, ಒಂದು ಮೊಳ ಕಸ್ತೂರಿ ಮಲ್ಲಿಗೆ ಮುಡಿಕ್ಕೊಂಡು ಹಸಿರು ಚೂಡಿದಾರದಲ್ಲಿ ಬಂದಿದ್ಲು. ಇದರ ಮೊದಲು ನಾನೂ ಅವಳೂ ಒಂದೆ ತರಗತಿಯಲ್ಲಿ ಕಲಿತಿದ್ದರೂ, ಇಷ್ಟೊಂದು ಆಕರ್ಶಕವಾಗಿ ಕಂಡಿರಲಿಲ್ಲ. ೮-೯ ಕ್ಲಾಸುಗಳಲ್ಲೇ ಅವರಿವರ ಹೆಸರುಗಳನ್ನು ಇವರವರ ಹೆಸರುಗಳ ಜೊತೆ ಸೇರಿಸಿ, ಗುಸು ಗುಸು ಮಾತಾಡಿ, ಪಿಸಿ ಪಿಸಿ ನಕ್ಕು, ಕಿಸಿ ಕಿಸಿ ಹಲ್ಲು ತೋರಿಸಿ, ಕಣ್ಣರಳಿಸುತ್ತ ಛೇಡೀಇಸುತ್ತಿದ್ದೆವಾದ್ರೂ ಅದೆಲ್ಲ ಒಂದು ಮೋಜೆನಿಸುತ್ತಿತ್ತೇ ವಿನಹ ಅದೊಂದು ನಮ್ಮ ತಂಟೆಗೆ ಬರುವ ವಿಷಯವಾಗಿರಲಿಲ್ಲ.
ಈವತ್ಯಕೋ ನನ್ನ ಗಮನವೆಲ್ಲ ಆಕೆಯ ಮೇಲೇ ಹೋಗುತ್ತಿದೆಯಲ್ಲ...
ಮೊದಲ ದಿನವಾದ್ರಿಂದ ಹೆಡ್ ಮಾಸ್ತರರು ಬಂದು, ಇನ್ನೂ ೯ ತಿಂಗಳು ಕಳೆದು ಬರುವ ಪಬ್ಲಿಕ್ ಪರೀಕ್ಷೆಯನ್ನು, ಸಿನೆಮಾಗಳಲ್ಲಿ ಚೊಚ್ಚಲ ಗರ್ಭಿಣಿಯನ್ನು ಜತನದಿಂದ ನೊಡಿಕ್ಕೊಳ್ಳುವ ಗಂಡನಂತೆ ವಿವರಿಸಿ ಹೋದರು. ಮತ್ಯರೂ ಬರಲಿಲ್ಲವಾದ್ದರಿಂದ ಮಂಗಳೂರಿನ ಮೀನು ಮಾರ್ಕೇಟ್ ನಮ್ಮ ಶಾಲೆಗೇ ಸ್ತಳಾಂತರವಾಗಿರುವಂತೆ ಆಗಿತ್ತು.
ನನ್ನ ಕಣ್ಣುಗಳಂತು ತಿರು ತಿರುಗಿ ಅವಳನ್ನೇ ನೋಡುತ್ತಿತ್ತು. ಅವಳ ಹಸಿರು ಚೂಡಿದಾರ ಮತ್ತು ಅವಳ ಮೈ ಬಣ್ಣ ಒಂದಕ್ಕೊಂದು ತುಂಬಾ ಹೊಸೆದುಕ್ಕೊಂಡಿತ್ತು. ಮದರಂಗಿ ಹಾಕಿದ ಕೈಗಳ ತುಂಬಾ ಬಳೆಗಳೂ ಹಸಿರು. ಕೊಬ್ಬರಿ ಎಣ್ಣೆಯಿಂದ ನೀವಿದ ನೀಳವಾದ ಜಡೆಗಳೆರಡೂ ಮೂರೆಳೆಯಲ್ಲಿ ಹೆಣೆದು ಮೆಲ್ಗಡೆಯಲ್ಲಿ ಕಸ್ತೂರಿ ಮಲ್ಲಿಗೆ ಮುಡಿದಿದ್ಲು. ಕೆನ್ನೆಯಲ್ಲೊಂದು ಸಣ್ಣ ಗುಳಿ ಅವಾಗಾವಾಗ ನಗುತ್ತಿದ್ದಂತೆ ಕಾಣಿಸಿಕ್ಕೊಂಡು ಮತ್ತೆ ನಗುವಿನೊಂದಿಗೇ ಮಾಯವಾಗುತಿತ್ತು. ತುಟಿಯ ಕೆಳಗಡೆಯಿರುವ ಸಣ್ಣ ಮಚ್ಚೆಯೊಂದು ರಾಜನ ಕೈಯಲ್ಲಿರುವ ತಿಜೊರಿ ಪೆಟ್ಟಿಗೆಯಂತೆ ತಾನ್ಯಾರರಿಗೆಂದೂ, ತನ್ನೊಳೆಷ್ಟಿದೆಯೆಂದೂ ತೋರಿಸದೆ, ತನ್ನಿರುವನ್ನು ಮಾತ್ರ ಸೂಸಿ ಗಾಂಭೀರ್ಯದಿಂದ ಕುಳಿತಿತ್ತು. ಮುಂಗುರುಳು ಹಣೆಯ ಮೇಲಿಂದ ಹಾಗೇ ಇಳಿದು ಕೆನ್ನೆಯನ್ನು ಮುತ್ತಿಕ್ಕುತ್ತಿತ್ತು. ನನ್ನ ಆಂತರ್ಯದಲ್ಲಿ ಆ ಮುಂಗುರುಳ ಮೇಲೇ ಸಣ್ಣದೊಂದು ಮಾತ್ಸರ್ಯ ಬೆಳೆದದ್ದು ನನಗೇ ತಿಳಿಯದಂತಿರಲಿಲ್ಲ. ಬಂಗರದ ಸಣ್ಣ ಝುಮ್ಕಿ ಕಿವಿಗಳ ಮೇಲೆ ತಾನೊಲ್ಲೆ - ತಾನೊಲ್ಲೆ ಎನ್ನುವಂತೆ ಆಡುತ್ತಿದ್ದವು. ಆವುಗಳ ಭಾಷೆ ನನಗೆ ಗೊತ್ತಿಲ್ಲವಾದ್ದರಿಂದ ಅವುಗಳು ಯಾಕೆ ಒಲ್ಲೆ ಎನ್ನುತ್ತಿದ್ದವೆಂದು ಅರ್ಥವಾಗಲಿಲ್ಲ. ಮೂಗಿನ ಮೇಲೆ ಪಚ್ಚೆ ಕಲ್ಲಿನ ಸುಂದರವಾದ ಮೂಗುತಿಯೊಂದು ಜಂಬದಿಂದ ಮಿರ ಮಿರನೆ ಹೊಳಿಯುತ್ತಿತ್ತು. ಅದು ತಾನೆ ಚಕ್ರವರ್ತಿಯಂತೆ ಗ್ರಹಿಸುತ್ತಿರಬೇಕು. ನನ್ನನ್ನು ನೋಡಿ ಒಂದು ಮಂದಹಾಸವನ್ನಾದರೂ ಕೊಟ್ಟಿದ್ದರೆ ಚೆನ್ನಾಗಿತ್ತು. ಆದರೆ ನೀನು ಒಂದು ಥರಾ ಜಿಗುಪ್ಸೆಯಿಂದ ನನ್ನ ನೋಡಿ ಮುಖ ತಿರುಗಿಸಿದ್ಯಲ್ಲ. ನಿಜಕ್ಕೂ ನನ್ನ ಮೇಲೇ ಬೇಜಾರಾಯ್ತು. ಹಾಗೆ ನೋಡಬಾರದೆನಿಸಿತ್ತು.
ಮನೆಗೆ ಮರಳುವ ದಾರಿಯಲ್ಲಿ ಚಂದ್ರು ಕೇಳಿದ್ದ - ನಿಂಗೆ ಹರಿಣಿಯನ್ನು ನೋಡಿದ್ರೆ ಇಷ್ಟವಾ? ಅಂತ. ಯಾಕೆ ಹಾಗೆ ಕೆಳ್ತಾ ಇದ್ದೆಯ ಅಂದೆ. ನೋಡ್ತಾಇದ್ಯಲ್ಲಾ ಅಂದ. ಕೆಲವು ವಿಷಯಗಳ ಬಗ್ಗೆ ಅತೀ ಹತ್ತಿರದ ಗೆಳೆಯರು ಕೇಳಿದ್ರೂ ಮುಜುಗರವಾಗುತ್ತೆ. ಇನ್ನೂ ಹುಟ್ಟದ ಚೊಚ್ಚಲ ಪ್ರೇಮವೂ ಹೀಗೇ ಇರಬೇಕು. ಬಹುಶ ಚಂದ್ರುವಿಗೆ ತಿಳಿಯದಿರದ ಯಾವ ಗುಟ್ಟುಗಳೂ ನನ್ನಲ್ಲಿಲ್ಲವೇನೋ, ಇದೊಂದನ್ನು ಬಿಟ್ಟು. ಪಕ್ಕದಲ್ಲೇ ಇರುವ ಪೊನ್ನೆ ಮರದಲ್ಲಿ ಅರಣೆಯೊಂದು ಕಂಡದ್ರಿಂದ ಚಂದ್ರು ನನ್ನ ವಿಷಯವನ್ನು ಬಿಟ್ಟು ಕಲ್ಲು ತೆಗೊಂಡು ಅರಣೆಗೆ ಹೊಡಿಲಿಕ್ಕೆ ಅಣಿಯಾದ. ನಾನೇನೋ ನನ್ನ ಮುಜಗರದಿಂದ ಪಾರದೆ. ಆದ್ರೆ, ಅರಣೆಯ ಅದೃಷ್ಟ ನಿಜಕ್ಕೂ ಚೆನ್ನಗಿರಲಿಲ್ಲ. ರಜೆಯ ದಿನಗಳಲ್ಲೆಲ್ಲಾ ಲಗೋರಿ ಆಡಿ ಆಡಿ, ಚಂದ್ರುವಿನ ಗುರಿ ಅರ್ಜುನನ ಗಾಂಢೀವದಿಂದ ಹೊರಟ ಬಾಣದಂತೆ ನೇರವಾಗಿ ಅರಣೆಯ ತಲೆಯನ್ನು ಸೀಳೀ ರಕ್ತದೋಕುಳಿ ಕಾಣುವಂತೆ ಮಾಡಿತ್ತು. ನನ್ನ ಮಿಡಿಯುವ ಮನಸ್ಸನ್ನೋದಿದ ಚಂದ್ರು ನನ್ನನ್ನು ಹುಂಬುತನವೆಂದು ಜರಿಯತೊಡಗಿದ. ಸಂಜೆಯ ಆಟದಲ್ಲೇನೂ ಪೂರ್ಣವಾಗಿ ತೊಡಗಿಸಿಕ್ಕೊಳ್ಳಲಾಗಲಿಲ್ಲ. ಎಲ್ಲೋ ಏನೋ ಒಂದು ಅಶಾಂತಿ ಅಸಂತೃಪ್ತಿ ಹೊಗೆಯಾಡತೊಡಗಿದೆ ಅಂತ ಗೊತ್ತಾಗುತ್ತಿದ್ದರೂ, ಎಲ್ಲಿ ಯಾಕೆ ಅಂತ ಹೊಳಿಯಲಿಲ್ಲ. ಋಷಿ ಮೂಲ ಮತ್ತು ನದೀ ಮೂಲ ಹುಡಕಬಾರದೆಂದು ಎಲ್ಲೋ ಹೇಳಿದ್ದು ಕೇಳಿ ನನ್ನ ಸಮಸ್ಯೆಯ ಮೂಲವನ್ನಲ್ಲ ಎಂದು ಮನಗಂಡು ಹುಡುಕುತ್ತಾ ಹೋದಂತೆ ಮತ್ತಷ್ಟು ಜಟಿಲವಾಗಿ ಮಿದುಳಲ್ಲೊಂದು ಕೊರೆಯುವ ಹೊಟ್ಟೆಯಲ್ಲಿರಬೆಕಾದ ಜಂತು ಹುಳವನ್ನು ಬಿಟ್ಟಂತಿತ್ತು.
ದಿನಕಳಿದಂತೆ ಆಕೆಯನ್ನು ಕನವರಿಸುವುದು ಜಾಸ್ತಿಯಾದರೂ, ಹರಿಣಿ ಮಾತ್ರ ಇದ್ಯವದೂ ತನಗೆ ಸಂಬಂಧಿಸಿದ್ದಲ್ಲವೆಂಬಂತೆ ಸುಮ್ಮನಿರುತ್ತಿದ್ದಳು. ಛೇ, ಈ ಹುಡುಗಿಯರೇ ಹೀಗೆ... ಎಲ್ಲ ಗೊತ್ತಿದ್ದರೂ, ಗೊತ್ತಿಲ್ಲದವರಂತೆ ಇರ್ತಾರಲ್ಲ. ಎಷ್ಟು ಸಲ ಕ್ಲಾಸಿನಲ್ಲೆ ಅವಳ ಮುಖ ನೊಡುತ್ತಿಲ್ಲ? ಅವಳು ಬಸ್ಸಿಗೆ ಕಾಯುವಾಗ ನಾನೂ ಕಾಯಲಿಲ್ಲ? ಎಷ್ಟು ಸರ್ತಿ ಅವಳ ಹತ್ರ ನೋಟ್ಸ್ ತೆಗೊಂಡಿಲ್ಲ? ಅದೂ ಸುಮ್ಮ ಸುಮ್ಮನೆ ಅಂತ ಅವಳಿಗೂ ಗೊತ್ತಿಲ್ವಾ? ಮತ್ತೂ ಅವಳ್ಯಾಕೆ ಸುಮ್ಮನಿದ್ದಾಳೆ. ಬಹುಶ: ನಾನು ಕಾಣಲು ಅವಳಷ್ಟು ಚೆನ್ನಗಿಲ್ಲ ಅಂತ ಆಗಿರ್ಬಹುದು. ನಾನು ಅವಳ ಹಾಗೆ ಸವುಕಾರರ ಕುತುಂಬವಲ್ಲದಿದ್ದರೂ, ಅಷ್ಟಿಷ್ಟು ಜೀವನ ನಡೆಸಿಕ್ಕೊಂಡು ಹೊಗೊದಿಕ್ಕಗುವಷ್ಟು ತೋಟ ಇರುವವನೇ.
ಎಲ್ಲದಕ್ಕೂ ಕಾಲ ಕೂಡಿಬರಬೇಕಲ್ಲ. ಎರಡು ತಿಂಗಳಿಗೇ ಬಂತು. ಒಂದು ದಿನ ಶಾಲೆಯ ಹತ್ತಿರ ಗೆಜ್ಜೆಯೊಂದು ಸಿಕ್ಕಿ ಅದರ ಒಡತಿಯಾದ ಹರಿಣಿಗೇ ಹಿಂತಿರುಗಿಸಿದೆ. ಅವಳ ಎಲ್ಲ ಆಭರಣಗಳ ಬಗ್ಗೆ, ಅವಳ ಚುಡಿದಾರಗಳ ಬಗ್ಗೆ ಅಷ್ಟೇ ಏಕೆ ಅವಳ ಉಬ್ಬು-ತಬ್ಬು ಗಳ ಬಗ್ಗೆ ನನಗೆ ತುಂಬಾ ನಿಖರವಾದ ಅತೀಂದ್ರಿಯದ ಜ್ನಾನವಿದೆ. ನನಗೆ ಗುರುತಿಸಲು ಏನೇನೂ ಕಷ್ಟವಾಗಿರಲಿಲ್ಲ. ಆದ್ರೆ ಅವಳಿಗೆ ನನ್ನ ಬಗ್ಗೆ... ಒಂದು... ಒಂದು... ಈ.. ಇ... ಇದು ಶುರುವಾಗಲು ಇದೊಂದು ಘಟನೆ ಸಾಕಾಯ್ತು. ಹಾಗೆಂತ ಪ್ರೇಮವೇನೂ ಅಲ್ಲ.. ಆದ್ರೂ ಏನೋ ಒಂದು ರೀತಿ ನೋಡುವ ಕಣ್ಣುಗಳ ನೋಟ ಬೇರೆಯಾದದ್ದು ತಿಳಿಯುತ್ತಿತ್ತು. ಆಮೇಲೆ ನನ್ನಲ್ಲಿ ತುಂಬಾ ಮಾತಡತೊಡಗಿದಳು. ನಲಿವಿರಲಿ ನೋವಿರಲಿ ಹಸಿವಿರಲಿ ಹುಸಿ ಕೋಪವಿರಲಿ ಎಲ್ಲವನ್ನೂ ಅರಹುತ್ತಿದ್ದಳು. ನಾನೂ ಅಷ್ಟೇ...
ಈ ಹುಡುಗ್ಯರೇ ಹೀಗೆ.. ಅವರಿಗೆ ಯಾರು ಯಾವಾಗ ಹೇಗೆ ಎಲ್ಲಿ ಇಷ್ಟ ಆಗ್ತಾರೆ ಅಂತಾನೇ ಗೊತ್ತಾಗಲ್ಲ. ಮುಂದೆ ದಸರಾ ರಜೆಯಲ್ಲಂತೂ ನನ್ನ ಮನಸು ಅವಳ ಗುಂಗಿನಲ್ಲೇ ಇದ್ದು ತಿಂಡಿ ತೀರ್ಥ ಏನೂ ಬೇಡವಾಗಿ ಅಮ್ಮನಿಂದ ಬೈಸಿಕ್ಕೊಂಡು ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ತಾಯತ ಕಟ್ಟಿಸ್ಕೊಂಡು, ಅಷ್ಟೆಲ್ಲ ಆಗುವಾಗ ದಸರ ರಜೆ ಮುಗಿದು ಶಾಲೆ ಪುನ: ಶುರುವಾಗಿ, ನನ್ನೆಲ್ಲ ತುಡಿತಗಳ ಕೇಂದ್ರ ಬಿಂದು ವೃತ್ತೀಯ ಕೋಣದೊಳಗೆ ಬಂದು, ಸಮ ಕೋಣವಾಗಿ, ಛಾಪ ತ್ರಿಜ್ಯವಾಗಿ, ತ್ರಿಜ್ಯ ಕೇಂದ್ರವಾಗಿ, ಕೆಂದ್ರವೇ ಅನಂತವಾಗಿ ಹೋಯಿತು. ಲೆಕ್ಕಗಳ ಗುಣಿತಗಳು ಅವಳ ತಲೆಕೂದಲಿನ ಸಂಖ್ಯೆಯಂತೆ, ಲೋಗರಿತಮ್ ಟೇಬಲ್ ಅವಳ ಮನಸಿನಂತೆ, ವಿಜ್ನಾನದ ಸಮೀಕರಣಗಳು ಅವಳ ಮೈಬಣ್ಣದ ಅದ್ಭುತದಂತೆ, ಸಮಾಜ ಶಾಸ್ತ್ರದ ಇಸವಿಗಳು ಇವಳ ಮಾತಿನಲ್ಲಿ ವಿಲೀನವಾಗಿ ಮತ್ತಷ್ಟು ಜಟಿಲವಾಗತೊಡಗಿತು.
ಅದೆಷ್ಟು ಸರ್ತಿ ನಿನ್ನ ಕನಸುಗಳು ನನ್ನ ಮನಸಿನಲ್ಲಿ ಮೊಳಕೆಯೊಡೆಯಲಿಲ್ಲ? ಕನಸುಗಳು ರಾತ್ರಿ ಮಾತ್ರವಲ್ಲ. ಹಗಲುಗಳೂ ರಾತ್ರಿಯಂತಾದವು. ನನ್ನ ಬಳಿ ಬಂದು ಅಪ್ಪಿ ಮುದ್ದಾಡಿ ತುಟಿ ಕಚ್ಚಿದಂತದಾಗ ಅದೆಷ್ಟು ಬಾರಿ ನಾನು ಸಿಹಿ ನಿದ್ದೆಯಲ್ಲಿ ನರಳಾಡಿ ಎಚ್ಚರಗೊಳ್ಳಲಿಲ್ಲ? ನಮ್ಮನೆ ಪಕ್ಕದಲ್ಲೆ ಇರುವ ತೊರೆಯೊಂದರಲ್ಲಿ ನಾವಿಬ್ಬರೂ ಕಾಲುಗಳನ್ನಿಟ್ಟು ಆಟವಾಡುವಾಗ ಪುಳಕಿತಗೊಳ್ಳಲಿಲ್ಲವೇ? ಷಷ್ಟಿಯ ದಿನ ಸುಬ್ರಹ್ಮಣ್ಯದಲ್ಲಿ ಮನೆಯವರ ಕಣ್ಣು ತಪ್ಪಿಸಿ ಸ್ಕಂದ ಹೊಟೆಲ್ ನಲ್ಲಿ ಜೊತೆಗೂಡಿ ಐಸ್ ಕ್ರೀಂ ತಿನ್ನಲಿಲ್ಲವಾ? ಸುಳ್ಯದ ಜಾತ್ರೆಯಲ್ಲಿ ಜೊತೆಯಾಗಿ - ತಿರುಗಾಡಿ ತಿರುಗಾಡಿ ಚಪ್ಪಲಿ ಸವೆದು ಹೋಗಿಲ್ಲವಾ...? ನಿನ್ನ ತಲೆ ಮೇಲೆ ಶಾಲು ಹೊದ್ದರೆ ಮತ್ತಷ್ಟು ಮುದ್ದಾಗಿ ಕಾಣಿಸುತ್ತಿ ಎಂದು ನಾನು ಅದೆಷ್ಟು ಬಾರಿ ಶಾಲು ಹೊದಿಸಿಲ್ಲ? ಈ ಥರ ನಾನು ಮಾತ್ರವಲ್ಲವಲ್ಲಾ, ನೀನೂ ಕನಸು ಕಾಣುತ್ತಿದ್ದಿತೆಂದು ಅನಿಸುತ್ತಿದ್ದಿತು. ಆದರೆ ಬಾಯಿ ಬಿಟ್ಟು ಕೇಳಲು ಏನೋ ಒಂದು ಅಂಜಿಕೆ. ಯಾವತ್ತೂ ಒಬ್ಬರಿಗೊಬ್ಬರು ಹೇಳಿಕ್ಕೊಳ್ಳದೆ ಅದೆಷ್ಟು ಸಮಯ ಪೇಚಾಡಿಕ್ಕೊಳ್ಳಲಿಲ್ಲ?
ಪಬ್ಲಿಕ್ ಪರೀಕ್ಷೆ ಸಿಸೆರಿಯನ್ ಹೆರಿಗೆಯಂತೆ ಆಗೋಯ್ತು. ರಿಸಲ್ಟ್ ಬಂದಾಗ ನಾನು ಅಲ್ಲಿಂದಲ್ಲಿಗೆ ಪಾಸಾಗಿದ್ದೆ. ನೀನು ಸೆಕೆಂಡ್ ಕ್ಲಾಸ್ನಲ್ಲಿ ಪಾಸಾಗಿದ್ದೆ. ನಿಂಗೆ ಸುಳ್ಯದಲ್ಲಿ ಕಾಲೇಜು ಸೀಟು ಸಿಕ್ಕಿ, ನನಗೆ ಮಾರ್ಕು ತುಂಬಾ ಕಡಿಮೆಯಾದ್ರಿಂದ ರಾಣೀಬೆನ್ನೂರಿನಲ್ಲಿ ಕಾಲೆಜು ಸಿಕ್ಕಿ ಒಬ್ಬರಿಗೊಬ್ಬರು ದೂರವಾದೆವು. ವರ್ಷಗಳು ಕಳೆದಂತೆ ತುಡಿತವೆಲ್ಲ ಕಡಿಮೆಯಾಗಿ ನೆನಪುಗಳೂ ಮಾಸಿದವು.
ಈವತ್ತು ಸುಳ್ಯದ ಬಸ್ ಸ್ಟಾಂಡಿನಲ್ಲಿ ನಿನ್ನಂತೆ ಒಬ್ಬಳು ಕೈಯಲ್ಲಿ ೭-೮ ತಿಂಗಳ ಮಗುವನ್ನು ಹಿಡಿದಿರುವುದು ಕಂಡಾಗ ನೆನಪಾಯ್ತು. ನಿನ್ನಂತೆ ಅಲ್ಲ, ಅದು ನೀನೇ, ಯಾಕೋ ಬುದ್ಧಿ ಒಪ್ಪಿಕ್ಕೊಂಡಿದ್ದರೂ ಮನಸ್ಸು ತಯಾರಾಗಿರಲಿಲ್ಲ. ಎಲ್ಲೋ ಏನೋ ಕಟುಕಿದಂತಾಗುತ್ತಿತ್ತು. ೨ ವರ್ಷಗಳ ಹಿಂದೆ ಚನ್ದ್ರು ಹೇಳಿದ್ದ. ಈಗ ನಿನ್ನ ನೋಡೀದ ಮೇಲೆ ಏನೋ ಕಳೆದು ಹೋದಂತೆ ಅನ್ನಿಸುತ್ತಿದೆ. ಸುಮಾರು ೮ ವರ್ಷ ಆಯ್ತಲ್ಲ ನಿನ್ನ ನೋಡಿ.. ಒಳ್ಳೇ ಬೂದು ಕುಂಬಳಕಾಯಿಯಂತೆ ಊದಿಕ್ಕೊಂಡಿದ್ದೀಯಲ್ಲಾ?
ಅಮ್ಮನ ದನಿ ಕೇಳಿ ನೆನಪಿನ ಸುರುಳಿಯಿಂದ ಈಚೆ ಬರಬೇಕಾಯ್ತು. ಲೋಟವೊಂದರಲ್ಲಿ ಬಿಸಿ ಬಿಸಿ ಕಾಫಿ ಹೀರಿದಾಗ ಮೈ ಎಲ್ಲ ಆರಾಮವಾಯ್ತು. ಆದರೂ ಮನದ ಮೂಲೆಯಲ್ಲೆಲ್ಲೋ ಸಣ್ಣದೊಂದು ಭಾವ ತಾಳಕ್ಕೂ ಸಿಗದೆ, ರಾಗಕ್ಕೂ ಹೊಂದಿಕ್ಕೊಳ್ಳದೆ ಆಲಾಪಿಸುತ್ತಿತ್ತು.