ಮಂಗಳವಾರ, ಮಾರ್ಚ್ 17, 2009

ದಯವಿಟ್ಟು ಮರಳಿ ಬರದಿರು ನಾಳೆ, ಹೀಗೇ ಬಾಯಿ ಅಗಲ ಬಿಟ್ಟು...



ತಾರಸಿಯ ಮೇಲೊಂದು
ಕಲ್ಲು ಬೆಂಚಲಿ ಕುಳಿತು
ಮೇಲೆ ನೋಡುತಿರೆ
ದೊಡ್ಡ ಬಟ್ಟಲ ಚಂದಿರನಿಂದು...

ಹುಣ್ಣಿಮೆಯ ಚಂದಿರನೆ
ನೀನಿಂದೇತಕೋ ಹೊಳಪು?
ಮೈತುಂಬ ಗಂಧ ಅರಸಿನ
ಪೂಸಿರುವೆಯಾ...?

ಮನವೆಲ್ಲ ಕನಸಿನಾ ಕನ್ಯೆ
ನಾನರಿಯೆ ಅವಳಿರುವು,
ಹುಡು-ಹುಡುಕಿ ಬರುತಿಹುದು ಉಬ್ಬಸವು
ದೀರ್ಘವಾದ ನಿಶ್ವಾಸವೂ...

ಪೂರ್ಣ ಚಂದಿರನೇ, ಜಗದ
ಚಂದ ನೋಡುತಿಹೆಯೇ,
ನೀ ನೋಡದೊಂದು ಕಣವಿಲ್ಲ
ನಿನ್ನ ನೋಡದ ಒಂದು ಹುಳವಿಲ್ಲ...

ಹುಣ್ಣಿಮೆಯ ಹೊಂಬೆಳಕು
ಮನವೆಲ್ಲ ಕಂಗೊಳಿಸಿ
ನನ್ನ ಹುಡುಕುತಿಹಳೇ
ನನ್ನಂತೆ ಅವಳೂ...?

ಬೀಸುತಿಹ ತಂಗಾಳಿಯಲಿ
ಕಣ್ಣು ಮಿಟುಕಿಸದೆ
ಅವಳೂ ನೋಡುತಿರೆ ನಿನ್ನ
ಹೇಳುವೆಯಾ ನನ್ನ ಮನವನ್ನಾ...?

ಕುಡಿ ಮೀಸೆ ಪುಡಿ ಆಸೆ
ನೀಳಕಾಯದ ನನ್ನ
ಉದ್ದ ಮೂಗಿನ ಬಳುಕು
ಹೇಳದಿರು ಹುಳುಕು...

ತುಂಬಾ ಹೊತ್ತು ಹಾಯದಿರು
ಮತ್ತೆ ಅವಳೆದುರು,
ನನ್ನ ವರ್ಣಿಸಿ ಮರೆಯಾಗು
ಇಲ್ಲಾ ದೂರ ಹೋಗು...

ನಿನ್ನ ಅಂದಕೆ ಮನಸೋತು
ನೋಡದಾದರೆ ನನ್ನ ಅವಳು,
ದಯವಿಟ್ಟು ಮರಳಿ ಬರದಿರು ನಾಳೆ
ಹೀಗೇ ಬಾಯಿ ಅಗಲ ಬಿಟ್ಟು...

ಶುಕ್ರವಾರ, ಮಾರ್ಚ್ 13, 2009

ನನ್ನಕ್ಕ...



ನನ್ನ ಅಮ್ಮ ಕೆಲವೊಮ್ಮೆ ನೆನಪಿಸುತ್ತಾರೆ. ನಾನು ೩-೪ ವರ್ಷದವನಿರುವಾಗ ಅಕ್ಕನ ಹೊಸ ಬಟ್ಟೆಗಳೇ ಬೇಕೆಂದು ರಂಪ ಮಾಡುವ ಕಾಲವೊಂದಿತ್ತಂತೆ...!! ಅವಳು ಶಾಲೆಗೆ ಹೋಗುತ್ತಿದ್ದರಿಂದ, ಒಂದೆರಡು ಜತೆ ಬಟ್ಟೆ ಹಿಚ್ಚಿಗೆ ತೆಗೆದು ಕೊಡುತ್ತಿದ್ದರು. ಅದನ್ನು ನನಗೆ ಕಾಣಿಸದ ಹಾಗೆ ಧರಿಸಿ ಶಾಲೆಗೆ ಹೋಗುವ ಸಲುವಾಗಿ, ನನಗೆ ಕಾಯಿತುರಿ ಬೆಲ್ಲ ಕೊಟ್ಟೋ ಇಲ್ಲಾ ಏನೇನೋ ನೆಪ ಹೇಳಿ ಹಟ್ಟಿಯಲ್ಲಿ ದನ, ಕರುಗಳನ್ನೋ ತೋರಿಸುತ್ತಿದ್ದರಂತೆ  ನನ್ನಮ್ಮ.

ಕೇರಳದ ಕಾಸರಗೋಡು ಜಿಲ್ಲೆಯ ಕುಗ್ರಾಮವೊಂದು ನನ್ನ ಊರು. ನನ್ನ ಮನೆಗೆ ಹೊಂದಿಕ್ಕೊಂಡೇ ಇರುವ ತೆಂಗು-ಕಂಗಿನ ತೋಟ. ಇಳಿಜಾರು ಗುಡ್ಡೆಗಳಿರುವ ಕಾರಣ, ಮನೆಯಿಂದ ತೊಟಕ್ಕೆ ಸುಮಾರು ೨೦೦-೨೫೦ ಮೀಟರ್ ದೂರ. ಮನೆಯಿಂದ ತೋಟಕ್ಕೆ ಹೋಗುವ ಕಾಲುದಾರಿಯಲ್ಲಿ ಸಣ್ಣದೊಂದು ತೋಡು(ನೀರಿನ ತೊರೆ). ಮಳೆಗಾಲದಲ್ಲಿ ದೂರದ ಬೆಟ್ಟದಿಂದೆಲ್ಲಿಂದಲೋ ಝರಿಯೊಂದು ಹುಟ್ಟಿ ಈ ದಾರಿಯಾಗಿ ಹಾದು ಪಯಸ್ವಿನಿ ನದಿಯನ್ನು ತಲಪುತ್ತದೆ. ತೋಡಿನ ಮೇಲೆರಡು ಅಡಿಕೆಮರದ ತುಂಡು ಅಡ್ಡ ಹಾಕಿದರೆ, ಅದೇ ಸಂಕ(ಬ್ರಿಡ್ಜ್). ಬಾಲ್ಯದ ಮತ್ತೆಲ್ಲ ನೆನಪುಗಳು ಮರೆಯಾದರೂ, ಎರಡಾಳು ಎತ್ತರವಿರುವ ಈ ತೋಡು ನನ್ನ ಬಾಲ್ಯದ ಒಂದು ಸನ್ನಿವೇಶವನ್ನು ನೆನಪಿಸುತ್ತದೆ...!
ನನಗಾಗ ಬಹುಶ ೪ ವರ್ಷ, ಅಕ್ಕನಿಗೆ ೮ - ೯ ವರ್ಶ ಪ್ರಾಯವಿರಬಹುದು. ನಮ್ಮ ಹಟ್ಟಿಯ ತುಂಬಾ ಹಸು-ಕರುಗಳಿದ್ದವಾದ್ದರಿಂದ, ನನ್ನ ಅಮ್ಮ ಹಸುಗಳ ಮೇವಿಗಾಗಿ ಹುಲ್ಲು ತರಲು ತೋಟಕ್ಕೆ ಹೋಗಿದ್ದರು. ನನ್ನ ಅಕ್ಕ ಮತ್ತು ನಾನು ಆಟವಾಡುತ್ತಾ ಮನೆಯಿಂದ ತೋಟದೆಡೆಗೆ ಹೋಗುತ್ತಿದ್ದೆವು. ಈ ಮದ್ಯೆ ಆಟ ಪಿಕಿಲಾಟವಾಯಿತು. ನೋಡ ನೋಡುತ್ತಿದ್ದಂತೆ ಜಗಳ ಶುರುವಾಯಿತು. ತೋಡು ಬಂದದ್ದು ಗೊತ್ತಾಗಲಿಲ್ಲ. ಅಕ್ಕ ಮುಂದೆ... ನಾನು ಹಿಂದೆ ನಡೆಯಿತ್ತಿದ್ದೆವು... ನಾನು ಅವಳನ್ನು ಮುಂದಕ್ಕೆ ನೂಕಿದೆ. 
ಆದ್ರೆ ಅವಳು ಹೋಗಲಿಲ್ಲ ಮುಂದಕ್ಕೆ... ಬದಲು ಹೋದದ್ದು ಕೆಳಗೆ... ತೋಡಲ್ಲಿದ್ದಳು....!
ನಾನು ಗಾಬರಿಯಾಗಿ, ಬೊಬ್ಬೆ(ಕೂಗು) ಹಾಕತೊಡಗಿದೆ. ಮನೆಯಿಂದ ಅಣ್ಣ, ತೋಟದಿಂದ ಅಮ್ಮ ಓಡಿಬಂದರು... ನನಗೆ ಒಂದಿಷ್ಟು ಬೈಗುಳ ಸಿಕ್ಕಿರಬಹುದು, ಸರಿಯಾಗಿ ನೆನಪಾಗ್ತಿಲ್ಲ. ನಾನು ತುಂಬಾ ಸಣ್ಣವನಾದರಿಂದ, ಅಕ್ಕನಿಗಂತೂ ಚೆನ್ನಾಗಿ ಪುಷ್ಪಾರ್ಚನೆ ಸಿಕ್ಕಿರುತ್ತದೆ...!

ನಾನು ೧ ನೇ ತರಗತಿ, ಅಕ್ಕ ೫ನೇ... ಕೆಜಿ ಸ್ಕೂಲ್ ಇಲ್ಲದ ಗ್ರಾಮವಾದ್ದರಿಂದ, ಶಾಲೆಯ ಅನುಭೂತಿಯೇ ಮೊದಲನೆಯದು ನನಗೆ. ಶಾಲೆಗೆ ೨ ಕಿ.ಮೀ ನಷ್ಟು ನಡೆದುಕ್ಕೊಂಡು ಹೋಗಬೇಕಾದರೂ, ನನ್ನ ದೃತ ತಾಳದ ಹೆಜ್ಜೆಗೆ ತಾಳ್ಮೆಯಿಂದ ಕೈ ಹಿಡಿದು ಶಾಲೆಗೆ ಕರೆದುಕ್ಕೊಂದು ಹೋಗುತ್ತಿದ್ದಳು. ನನ್ನ ಮದ್ಯಾನ್ಹದೂಟದ ಬುತ್ತಿಯ ಮುಚ್ಚಳ ತೆಗೆಯಲು ತುಂಬಾ ಕಷ್ಟವಾದಾಗಲೆಲ್ಲ, ಅವಳ ಬಳಿ ಹೋದರೆ ತೆಗೆದು ಕೊಡುತ್ತಿದ್ದಳು. ಹಾಗಂತ, ಮುಚ್ಚಳ ತೆಗೆಯಲು ಕಷ್ಟವಲ್ಲದ ಬುತ್ತಿ ಶಾಲೆಗೆ ತೆಗೆದುಕ್ಕೊಂಡು ಹೋದರೆ, ಅಮ್ಮ ಬುತ್ತಿಗೆ ಹಾಕಿ ಕೊಡುತ್ತಿದ್ದ ಅನ್ನದ ಜೊತೆ ಇರುವ ಮಜ್ಜಿಗೆ ಸೋರಿ ಹೋಗಿ, ಮಾವಿನ ಉಪ್ಪಿನ ಕಾಯಿ ಮಾತ್ರ ಉಳಿಯುತ್ತಿತ್ತು...! 

ನಾನು ೮ - ೧೦ ವರ್ಷದವನಾದಾಗ ಅಕ್ಕನ ಉದ್ದದ ಜಡೆ ಎಳೆದು ಸತಾಯಿಸುತ್ತಿದ್ದೆ... ಮನೆಯ ಮುಂದಿರುವ ತೋತಾಪುರಿ ಮಾವಿನ ಮರದ ಕಾಯಿಗಳನ್ನು ಹಣ್ಣಾಗಿಸಲು ಅಟ್ಟದ ಮೇಳಿರಿಸುತ್ತಿದ್ದರು. ಯಾರೂ ಇರದ ಸಮಯ ನೋಡಿ, ಅಕ್ಕನ ಜೊತೆ ಸೇರಿ, ಅಟ್ಟದ ಮೇಲೇರಿ, ಯಾವ ಹಣ್ಣಿಗೆ ಎಷ್ಟು ರುಚಿ, ಅಂತ ಪರೀಕ್ಷೆ ಮಾಡುತ್ತಿದ್ದೆವು...!

ಸುತ್ತ-ಮುತ್ತಲಿನ ಮಕ್ಕಳೆಲ್ಲ ಜತೆ ಸೇರಿ,ಕ್ರಿಕೆಟ್ ಆಡುತ್ತಿದ್ದೆವು. ನಮ್ಮ ಮನೆಯ ಅಂಗಳವೇ ಫೀಲ್ಡ್... ವಿಷೇಶವೆಂದರೆ, ಇದರಲ್ಲಿ ಉಪಯೋಗಿಸುವ ಪರಿಕರಗಳು. ತೆಂಗಿನ ಮರದ ಮಡಲನ್ನು(ಸೋಗೆ) ಕತ್ತಿಯಿಂದ ಕಡಿದು ಬಾಟ್ ನಂತೆ ಉಪಯೋಗಿಸುತ್ತಿದ್ದೆವು. ಕೆಂಪು ರಬ್ಬರಿನ ಬಾಲು ತಂದ ದಿನವೇ ಯಾರದಾದರೊಂದು ಹೊಡೆತಕ್ಕೆ ತೋಟಕ್ಕೆ ಹೋಗಿ ಬಿದ್ದು, ಹುಡುಕಿ ಸಿಗದಾದಾಗ, ಕಾಗದಗಳನ್ನು ಪ್ಲಸ್ಟಿಕ್ ಚೀಲದಲ್ಲಿಟ್ಟು ದಾರದಿಂದ ಗಟ್ಟಿಯಾಗಿ ಬಿಗಿದು ಚೆಂಡಿನಂತೆ ಮಾಡಿ ಕೊಡುತ್ತಿದ್ದವಳು.. ಅಕ್ಕ. 
ಆಮೇಲೇ, ಕ್ರಿಕೆಟ್ ನ ಎರಡನೇ ಇನ್ನಿಂಗ್ಸ್ ಶುರು....!

ಅಕ್ಕ ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಓದುತ್ತಿದ್ದಾಗ, ನಾನು ಹಿಂದಿನಿಂದ ಬಂದು ತುಂಟಾಟವಾಡುತ್ತಿದ್ದೆ. ರಾತ್ರಿಯಲಿ, ವಿಚಿತ್ರ ವೇಶ ಧರಿಸಿ ಅವಳು ಓದುತ್ತಿದ್ದ ಸಮಯದಲ್ಲಿ ಕಿಟಿಕಿಯ ಹೊರಗಿನಿಂದ ಬಂದು ಹೆದರಿಸುತ್ತಿದ್ದೆ. ಮಿತಿ ಮೀರಿದರೆ, ಎರಡೇಟು ಹಾಕುತ್ತಿದ್ದಳು. ಅವಳ ಮೇಲೆ ಈಗೀಗ ತುಂಬಾ ಗೌರವವಾದ್ದರಿಂದ, ನಾನು ಎದುರೇಟು ಹಾಕುತ್ತಿರಲಿಲ್ಲ...! 
ಕುಗ್ರಾಮವಾದ್ದರಿಂದ, ಮನೆಯಲ್ಲಿ ವಿದ್ಯುತ್ ಸೌಕರ್ಯ ನಾನು ಎಸ್.ಎಸ್.ಎಲ್.ಸಿ ಮಾಡುವಾಗಲೂ ಇರಲಿಲ್ಲ. ಓದುತ್ತಾ ಓದುತ್ತಾ, ನನಗೆ ನಿದ್ದೆಬಂದು, ಸೀಮೇ ಎಣ್ಣೆ(ಕೆರೋಸಿನ್) ದೀಪವೇ ಮಗಚಿ ಹೋಗಿ, ಪುಸ್ತಕವೆಲ್ಲಾ ಸೀಮೆ ಎಣ್ಣೆ ವಾಸನೆ ಬೀರುವಾಗ, ಮುಖದ ಪೌಡರ್ ಪುಸ್ತಕದ ಮೇಲೆ ಹಾಕಿ ವಾಸನೆ ಬರದಂತೆ ಮಾಡುತ್ತಿದ್ದವಳೇ ನನ್ನ ಅಕ್ಕ...

ಆಮೇಲೆ ನಾನು ಡಿಗ್ರಿ ಓದುತ್ತಿದ್ದಾಗ, ಅಕ್ಕನ ಮದುವೆಯಾಯ್ತು... 
ನನ್ನ ಕಣ್ಣಿನಿಂದೆರಡು ಸಣ್ಣ ಮುತ್ತುಗಳು.. ಅವಳಿಗಾಗಿ