ಶುಕ್ರವಾರ, ಮಾರ್ಚ್ 13, 2009

ನನ್ನಕ್ಕ...



ನನ್ನ ಅಮ್ಮ ಕೆಲವೊಮ್ಮೆ ನೆನಪಿಸುತ್ತಾರೆ. ನಾನು ೩-೪ ವರ್ಷದವನಿರುವಾಗ ಅಕ್ಕನ ಹೊಸ ಬಟ್ಟೆಗಳೇ ಬೇಕೆಂದು ರಂಪ ಮಾಡುವ ಕಾಲವೊಂದಿತ್ತಂತೆ...!! ಅವಳು ಶಾಲೆಗೆ ಹೋಗುತ್ತಿದ್ದರಿಂದ, ಒಂದೆರಡು ಜತೆ ಬಟ್ಟೆ ಹಿಚ್ಚಿಗೆ ತೆಗೆದು ಕೊಡುತ್ತಿದ್ದರು. ಅದನ್ನು ನನಗೆ ಕಾಣಿಸದ ಹಾಗೆ ಧರಿಸಿ ಶಾಲೆಗೆ ಹೋಗುವ ಸಲುವಾಗಿ, ನನಗೆ ಕಾಯಿತುರಿ ಬೆಲ್ಲ ಕೊಟ್ಟೋ ಇಲ್ಲಾ ಏನೇನೋ ನೆಪ ಹೇಳಿ ಹಟ್ಟಿಯಲ್ಲಿ ದನ, ಕರುಗಳನ್ನೋ ತೋರಿಸುತ್ತಿದ್ದರಂತೆ  ನನ್ನಮ್ಮ.

ಕೇರಳದ ಕಾಸರಗೋಡು ಜಿಲ್ಲೆಯ ಕುಗ್ರಾಮವೊಂದು ನನ್ನ ಊರು. ನನ್ನ ಮನೆಗೆ ಹೊಂದಿಕ್ಕೊಂಡೇ ಇರುವ ತೆಂಗು-ಕಂಗಿನ ತೋಟ. ಇಳಿಜಾರು ಗುಡ್ಡೆಗಳಿರುವ ಕಾರಣ, ಮನೆಯಿಂದ ತೊಟಕ್ಕೆ ಸುಮಾರು ೨೦೦-೨೫೦ ಮೀಟರ್ ದೂರ. ಮನೆಯಿಂದ ತೋಟಕ್ಕೆ ಹೋಗುವ ಕಾಲುದಾರಿಯಲ್ಲಿ ಸಣ್ಣದೊಂದು ತೋಡು(ನೀರಿನ ತೊರೆ). ಮಳೆಗಾಲದಲ್ಲಿ ದೂರದ ಬೆಟ್ಟದಿಂದೆಲ್ಲಿಂದಲೋ ಝರಿಯೊಂದು ಹುಟ್ಟಿ ಈ ದಾರಿಯಾಗಿ ಹಾದು ಪಯಸ್ವಿನಿ ನದಿಯನ್ನು ತಲಪುತ್ತದೆ. ತೋಡಿನ ಮೇಲೆರಡು ಅಡಿಕೆಮರದ ತುಂಡು ಅಡ್ಡ ಹಾಕಿದರೆ, ಅದೇ ಸಂಕ(ಬ್ರಿಡ್ಜ್). ಬಾಲ್ಯದ ಮತ್ತೆಲ್ಲ ನೆನಪುಗಳು ಮರೆಯಾದರೂ, ಎರಡಾಳು ಎತ್ತರವಿರುವ ಈ ತೋಡು ನನ್ನ ಬಾಲ್ಯದ ಒಂದು ಸನ್ನಿವೇಶವನ್ನು ನೆನಪಿಸುತ್ತದೆ...!
ನನಗಾಗ ಬಹುಶ ೪ ವರ್ಷ, ಅಕ್ಕನಿಗೆ ೮ - ೯ ವರ್ಶ ಪ್ರಾಯವಿರಬಹುದು. ನಮ್ಮ ಹಟ್ಟಿಯ ತುಂಬಾ ಹಸು-ಕರುಗಳಿದ್ದವಾದ್ದರಿಂದ, ನನ್ನ ಅಮ್ಮ ಹಸುಗಳ ಮೇವಿಗಾಗಿ ಹುಲ್ಲು ತರಲು ತೋಟಕ್ಕೆ ಹೋಗಿದ್ದರು. ನನ್ನ ಅಕ್ಕ ಮತ್ತು ನಾನು ಆಟವಾಡುತ್ತಾ ಮನೆಯಿಂದ ತೋಟದೆಡೆಗೆ ಹೋಗುತ್ತಿದ್ದೆವು. ಈ ಮದ್ಯೆ ಆಟ ಪಿಕಿಲಾಟವಾಯಿತು. ನೋಡ ನೋಡುತ್ತಿದ್ದಂತೆ ಜಗಳ ಶುರುವಾಯಿತು. ತೋಡು ಬಂದದ್ದು ಗೊತ್ತಾಗಲಿಲ್ಲ. ಅಕ್ಕ ಮುಂದೆ... ನಾನು ಹಿಂದೆ ನಡೆಯಿತ್ತಿದ್ದೆವು... ನಾನು ಅವಳನ್ನು ಮುಂದಕ್ಕೆ ನೂಕಿದೆ. 
ಆದ್ರೆ ಅವಳು ಹೋಗಲಿಲ್ಲ ಮುಂದಕ್ಕೆ... ಬದಲು ಹೋದದ್ದು ಕೆಳಗೆ... ತೋಡಲ್ಲಿದ್ದಳು....!
ನಾನು ಗಾಬರಿಯಾಗಿ, ಬೊಬ್ಬೆ(ಕೂಗು) ಹಾಕತೊಡಗಿದೆ. ಮನೆಯಿಂದ ಅಣ್ಣ, ತೋಟದಿಂದ ಅಮ್ಮ ಓಡಿಬಂದರು... ನನಗೆ ಒಂದಿಷ್ಟು ಬೈಗುಳ ಸಿಕ್ಕಿರಬಹುದು, ಸರಿಯಾಗಿ ನೆನಪಾಗ್ತಿಲ್ಲ. ನಾನು ತುಂಬಾ ಸಣ್ಣವನಾದರಿಂದ, ಅಕ್ಕನಿಗಂತೂ ಚೆನ್ನಾಗಿ ಪುಷ್ಪಾರ್ಚನೆ ಸಿಕ್ಕಿರುತ್ತದೆ...!

ನಾನು ೧ ನೇ ತರಗತಿ, ಅಕ್ಕ ೫ನೇ... ಕೆಜಿ ಸ್ಕೂಲ್ ಇಲ್ಲದ ಗ್ರಾಮವಾದ್ದರಿಂದ, ಶಾಲೆಯ ಅನುಭೂತಿಯೇ ಮೊದಲನೆಯದು ನನಗೆ. ಶಾಲೆಗೆ ೨ ಕಿ.ಮೀ ನಷ್ಟು ನಡೆದುಕ್ಕೊಂಡು ಹೋಗಬೇಕಾದರೂ, ನನ್ನ ದೃತ ತಾಳದ ಹೆಜ್ಜೆಗೆ ತಾಳ್ಮೆಯಿಂದ ಕೈ ಹಿಡಿದು ಶಾಲೆಗೆ ಕರೆದುಕ್ಕೊಂದು ಹೋಗುತ್ತಿದ್ದಳು. ನನ್ನ ಮದ್ಯಾನ್ಹದೂಟದ ಬುತ್ತಿಯ ಮುಚ್ಚಳ ತೆಗೆಯಲು ತುಂಬಾ ಕಷ್ಟವಾದಾಗಲೆಲ್ಲ, ಅವಳ ಬಳಿ ಹೋದರೆ ತೆಗೆದು ಕೊಡುತ್ತಿದ್ದಳು. ಹಾಗಂತ, ಮುಚ್ಚಳ ತೆಗೆಯಲು ಕಷ್ಟವಲ್ಲದ ಬುತ್ತಿ ಶಾಲೆಗೆ ತೆಗೆದುಕ್ಕೊಂಡು ಹೋದರೆ, ಅಮ್ಮ ಬುತ್ತಿಗೆ ಹಾಕಿ ಕೊಡುತ್ತಿದ್ದ ಅನ್ನದ ಜೊತೆ ಇರುವ ಮಜ್ಜಿಗೆ ಸೋರಿ ಹೋಗಿ, ಮಾವಿನ ಉಪ್ಪಿನ ಕಾಯಿ ಮಾತ್ರ ಉಳಿಯುತ್ತಿತ್ತು...! 

ನಾನು ೮ - ೧೦ ವರ್ಷದವನಾದಾಗ ಅಕ್ಕನ ಉದ್ದದ ಜಡೆ ಎಳೆದು ಸತಾಯಿಸುತ್ತಿದ್ದೆ... ಮನೆಯ ಮುಂದಿರುವ ತೋತಾಪುರಿ ಮಾವಿನ ಮರದ ಕಾಯಿಗಳನ್ನು ಹಣ್ಣಾಗಿಸಲು ಅಟ್ಟದ ಮೇಳಿರಿಸುತ್ತಿದ್ದರು. ಯಾರೂ ಇರದ ಸಮಯ ನೋಡಿ, ಅಕ್ಕನ ಜೊತೆ ಸೇರಿ, ಅಟ್ಟದ ಮೇಲೇರಿ, ಯಾವ ಹಣ್ಣಿಗೆ ಎಷ್ಟು ರುಚಿ, ಅಂತ ಪರೀಕ್ಷೆ ಮಾಡುತ್ತಿದ್ದೆವು...!

ಸುತ್ತ-ಮುತ್ತಲಿನ ಮಕ್ಕಳೆಲ್ಲ ಜತೆ ಸೇರಿ,ಕ್ರಿಕೆಟ್ ಆಡುತ್ತಿದ್ದೆವು. ನಮ್ಮ ಮನೆಯ ಅಂಗಳವೇ ಫೀಲ್ಡ್... ವಿಷೇಶವೆಂದರೆ, ಇದರಲ್ಲಿ ಉಪಯೋಗಿಸುವ ಪರಿಕರಗಳು. ತೆಂಗಿನ ಮರದ ಮಡಲನ್ನು(ಸೋಗೆ) ಕತ್ತಿಯಿಂದ ಕಡಿದು ಬಾಟ್ ನಂತೆ ಉಪಯೋಗಿಸುತ್ತಿದ್ದೆವು. ಕೆಂಪು ರಬ್ಬರಿನ ಬಾಲು ತಂದ ದಿನವೇ ಯಾರದಾದರೊಂದು ಹೊಡೆತಕ್ಕೆ ತೋಟಕ್ಕೆ ಹೋಗಿ ಬಿದ್ದು, ಹುಡುಕಿ ಸಿಗದಾದಾಗ, ಕಾಗದಗಳನ್ನು ಪ್ಲಸ್ಟಿಕ್ ಚೀಲದಲ್ಲಿಟ್ಟು ದಾರದಿಂದ ಗಟ್ಟಿಯಾಗಿ ಬಿಗಿದು ಚೆಂಡಿನಂತೆ ಮಾಡಿ ಕೊಡುತ್ತಿದ್ದವಳು.. ಅಕ್ಕ. 
ಆಮೇಲೇ, ಕ್ರಿಕೆಟ್ ನ ಎರಡನೇ ಇನ್ನಿಂಗ್ಸ್ ಶುರು....!

ಅಕ್ಕ ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಓದುತ್ತಿದ್ದಾಗ, ನಾನು ಹಿಂದಿನಿಂದ ಬಂದು ತುಂಟಾಟವಾಡುತ್ತಿದ್ದೆ. ರಾತ್ರಿಯಲಿ, ವಿಚಿತ್ರ ವೇಶ ಧರಿಸಿ ಅವಳು ಓದುತ್ತಿದ್ದ ಸಮಯದಲ್ಲಿ ಕಿಟಿಕಿಯ ಹೊರಗಿನಿಂದ ಬಂದು ಹೆದರಿಸುತ್ತಿದ್ದೆ. ಮಿತಿ ಮೀರಿದರೆ, ಎರಡೇಟು ಹಾಕುತ್ತಿದ್ದಳು. ಅವಳ ಮೇಲೆ ಈಗೀಗ ತುಂಬಾ ಗೌರವವಾದ್ದರಿಂದ, ನಾನು ಎದುರೇಟು ಹಾಕುತ್ತಿರಲಿಲ್ಲ...! 
ಕುಗ್ರಾಮವಾದ್ದರಿಂದ, ಮನೆಯಲ್ಲಿ ವಿದ್ಯುತ್ ಸೌಕರ್ಯ ನಾನು ಎಸ್.ಎಸ್.ಎಲ್.ಸಿ ಮಾಡುವಾಗಲೂ ಇರಲಿಲ್ಲ. ಓದುತ್ತಾ ಓದುತ್ತಾ, ನನಗೆ ನಿದ್ದೆಬಂದು, ಸೀಮೇ ಎಣ್ಣೆ(ಕೆರೋಸಿನ್) ದೀಪವೇ ಮಗಚಿ ಹೋಗಿ, ಪುಸ್ತಕವೆಲ್ಲಾ ಸೀಮೆ ಎಣ್ಣೆ ವಾಸನೆ ಬೀರುವಾಗ, ಮುಖದ ಪೌಡರ್ ಪುಸ್ತಕದ ಮೇಲೆ ಹಾಕಿ ವಾಸನೆ ಬರದಂತೆ ಮಾಡುತ್ತಿದ್ದವಳೇ ನನ್ನ ಅಕ್ಕ...

ಆಮೇಲೆ ನಾನು ಡಿಗ್ರಿ ಓದುತ್ತಿದ್ದಾಗ, ಅಕ್ಕನ ಮದುವೆಯಾಯ್ತು... 
ನನ್ನ ಕಣ್ಣಿನಿಂದೆರಡು ಸಣ್ಣ ಮುತ್ತುಗಳು.. ಅವಳಿಗಾಗಿ

6 ಕಾಮೆಂಟ್‌ಗಳು:

  1. ಗಿರಿ,

    ಅಕ್ಕನ ಬಗ್ಗೆ ಅದ್ಭುತವಾದ, ಅದಕ್ಕಿಂತ ಹೆಚ್ಚೇ ತುಂಟತನವಿದ್ದರೂ ಒಳಗೆಲ್ಲೋ ಹೇಳಲಾಗದ ಗೌರವ, ಭಯ, ಮತ್ತು ವ್ಯಕ್ತ ಪಡಿಸಲಾಗದ ಪ್ರೀತಿ ಲೇಖನದುದ್ದಕ್ಕೂ ಹರಿದಿದೆ....ನನಗೆ ತಂಗಿ ಇಲ್ಲ ಅಕ್ಕ ಇದ್ದಾಳೆ ಥೇಟ್ ನಿನ್ನಕ್ಕನಂತೆಯೇ...ವಯಸ್ಸಿನಲ್ಲಿ ಎರಡೇ ವರ್ಷ....ಆಗ ನಾನು ಭಯ ಪಡುತ್ತಿದ್ದೆ....ಈಗ ಅವಳು ನನಗೆ ಹೆಚ್ಚು ಗೌರವ ಕೊಡುವಳು...
    ಲೇಖನ ಓದುತ್ತಿದ್ದಂತೆ ಎಲ್ಲಾ ನೆನಪಾಯಿತು....

    ನನ್ನಕ್ಕ ೧೦ ನೇ ತರಗತಿ, ನಾನು ಏಳನೇ ತರಗತಿಯಲ್ಲಿದ್ದಾಗ ನಮ್ಮ ಮನೆಯಲ್ಲೂ ವಿದ್ಯುತ್ ಇರದೇ ಸೀಮೆ ಎಣ್ಣೆ ಬುಡ್ಡಿ ದೀಪದಲ್ಲಿ ರಾತ್ರಿಯೆಲ್ಲಾ ಓದಿದ್ದು ಪಾಸಾಗಿದ್ದು ನೆನಪಾಯಿತು...
    ಕೊನೆಯಲ್ಲಿ ಮುಗಿಸುತ್ತಿದ್ದಂತೆ ಎದೆತುಂಬಿಬರುತ್ತದೆ...ಥ್ಯಾಂಕ್ಸ್...

    ಪ್ರತ್ಯುತ್ತರಅಳಿಸಿ
  2. ನಿಮ್ಮ ಬ್ಲಾಗ ಬಹಳ ಚೆನ್ನಾಗಿದೆ... ನನಗೆ ಅಕ್ಕ ಇಲ್ಲ, ಅಕ್ಕ ಇದ್ದರೆ ಇದ್ದರೆ ಚೆನ್ನಾಗಿತ್ತು, ಯಾರಾದರೂ ನನ್ನ ಬಯ್ಯುತ್ತಿದ್ದರು ನನ್ನ ತಪ್ಪುಗಳ ತಿದ್ದುತ್ತಿದ್ದರು ಅನಿಸಿದ್ದಿದೆ, ಆ ಅನಿಸಿಕೆ ಈ ಲೇಖನ ಓದಿದ ಮೇಲೆ ಇನ್ನಷ್ಟು ತೀವ್ರವಾಯಿತು...

    ಪ್ರತ್ಯುತ್ತರಅಳಿಸಿ
  3. **ಕಲಿಗಣನಾಥ ಗುಡದೂರು ಅವರ ಪ್ರತಿಕ್ರಿಯೆ....**

    ಪ್ರೀತಿಯ ಗಿರಿಯವರೆ, ನಿಮ್ಮಕ್ಕನನ್ನು ನೆನೆಯುತ್ತಾ ಬಹಳ ಅದ್ಭುತ ವ್ಯಕ್ತಿಯನ್ನು ಪರಿಚಯಿಸಿದ್ದೀರಿ. ಹಾಗೆ ನಿಮ್ಮ ಲೇಖನ ಓದುತ್ತಿದ್ದಂತೆ....

    ನೆನಪಾದದ್ದು.... ನನ್ನಕ್ಕ...

    ಅಮ್ಮ ಮತ್ತು ಅಕ್ಕನಿಲ್ಲದ ಮನೆ ಒಂದು ತೆರನಾದ ಖಾಲಿ ಖಾಲಿ! ಅಕ್ಕ ಮತ್ತು ಅಮ್ಮನ ನಡುವೆ ಬಹಳ ವ್ಯತ್ಯಾಸ ಗುರುತಿಸಲಾಗದೇನೊ? ಅಕ್ಕನೆಂದರೆ ಥೇಟ್ ತಾಯಿಯೇ. ಅಕ್ಕರೆಯಲಿ ಅವ್ವನಿಗೆ ಸವಾಲು ಒಡ್ಡುವ ರೀತಿ ಅಕ್ಕನದು. ನನ್ನಕ್ಕ ಶಿವಮ್ಮನೆಂದರೆ ತಾಯಿ, ತಂದೆ, ಗುರು, ಹಿತೈಷಿ. ಆಕೆ ಓದಿದ್ದು ಕೇವಲ ಮೂರನೇ ಕ್ಲಾಸ್. ಆಕೆಗಿಂತ ನಾನು ಒಂದೂವರೆ ವರ್ಷ ಚಿಕ್ಕವ. ಎರಡೂ ಕ್ಲಾಸ್ಗಳೂ ಕೂಡಿಯೇ ಇದ್ದವು ಆಗ. ನನಗೆ ಊಟಮಾಡಿಸುವುದರಿಂದ ಹಿಡಿದು ನನ್ನೆಲ್ಲಾ ಜವಾಬ್ದಾರಿ ಆಕೆಯ ಪುಟ್ಟ ಹೆಗಲುಗಳ ಮೇಲೆ. ಆಕೆ ಹತ್ತೆನ್ನರಡು ವರ್ಷಗಳಾಗುತ್ತಲೆ ಅವ್ವನ ಜೊತೆಗೆ ಕೂಲಿಗೆ ಜೊತೆಯಾದಳು. ಅವ್ವ ಮತ್ತು ಅಕ್ಕ ಕೂಲಿಯಿಂದ ತಂದ ದುಡ್ಡೇ ನನ್ನ ಓದು, ಬಟ್ಟೆಗಂತ ಖಚರ್ಾಗಿದ್ದು. ನನ್ನ ಎಂ.ಎ. ಸಟರ್ಿಫಿಕೇಟುಗಳ ಮೇಲೆ ಅಕ್ಕನದೇ ಬೆವರಿನ ಹನಿಗಳ ಸಹಿಗಳಿವೆ. ಅಕ್ಕ ನನಗೆ ಹಲವು ಬಾರಿ ಹಂಗಿಸಿದ್ದುಂಟು! ಅಂದರೆ ಆಕೆ ಕೆಟ್ಟ ಮನಸ್ಸಿನಿಂದ ಹಾಗೆ ಮಾಡುತ್ತಿರಲಿಲ್ಲ. ತಾನು ದುಡಿದ ದುಡ್ಡು ಎಲ್ಲಿ ವೇಸ್ಟ್ ಆಗಿ ಬಿಡುತ್ತೊ ಅನ್ನೊ ಆತಂಕ. ಅಪ್ಪ, ಅವ್ವನೊಂದಿಗೆ ನನಗೆ ಕೊಡುತ್ತಿದ್ದ ದುಡ್ಡಿನ ಬಗ್ಗೆ ಆಗಾಗ ಜಗಳ ಕಾಯುತ್ತಿದ್ದಳು. ಹಾಗೆ ಜಗಳ ಕಾಯುತ್ತಿದ್ದರಿಂದಲೇ ನನಗೆ ದುಡ್ಡಿನ ಬೆಲೆ ಅರಿವಾಗಿದ್ದು. ನಾನೂ ಹೈಸ್ಕೂಲ್ ಮತ್ತು ಕಾಲೇಜು ಓದುತ್ತಿದ್ದಾಗ ಅಕ್ಕ ಮತ್ತು ಅವ್ವನೊಂದಿಗೆ ಕೂಲಿಗೆ ಹೋಗುತ್ತಿದ್ದೆ. ಪದವಿ ಪಡೆದರೂ ದುಡಿಯುವ ಸ್ಥಳದಲ್ಲಿ ಸಮಾನತೆ ಎಂಬುದಿಲ್ಲ. ಆದರೆ ಆಗ ನಾನು ಅಕ್ಕ, ಅವ್ವ ಮತ್ತು ಊರಿನ ಕೆಲವು ಬಡವರ ಜೊತೆಗೆ ಕೂಲಿಗೆ ಹೋಗುತ್ತಿದ್ದಾಗ ಸಿಕ್ಕ ಖುಷಿ, ಅವರೆಲ್ಲರ ಜೊತೆಗೆ ಗಿಡದ ನೆರಳಲ್ಲಿ ಕುಳಿತು ಉಂಡ ಸಂಭ್ರಮ, ಗದ್ದೆಯ ವರತಿಗಳಲ್ಲೆ ಬಗ್ಗಿ ಬೊಗಸೆಯಲ್ಲಿ ಸಾಮೂಹಿಕವಾಗಿ ಸ್ವಲ್ಪವೂ ಹೇಸಿಕೆ, ಮುಜುಗರವಿಲ್ಲದೆ ನೀರು ಕುಡಿದ ಪರಿ ಈಗ ಎಲ್ಲೂ ಸಿಗದು. ಅಪ್ಪ, ಅವ್ವನಿಗಿಂತ ತುಸು ಹೆಚ್ಚೇ ನೆನಪಾಗುವ, ಕಾಡುವ ವ್ಯಕ್ತಿಯೆಂದರೆ ಅಕ್ಕನೇ. ಈಗಲೂ ತಮ್ಮ ಊರಿಗೆ ಬರುತ್ತಿಲ್ಲ ಎಂದು ಅಕ್ಕ ಸದಾ ಹಲಬುತ್ತಿರುತ್ತಾಳೆ. ನಾ ಹೋದಾಗ ಊಟ ಮಾಡದೇ ಬಂದರೆ ಆಕೆ ಬ್ರಹ್ಮಾಂಡದಷ್ಟು ಸಿಟ್ಟು. ನನಗಿಂತ ಕೇವಲ ಒಂದೂವರೆ ವರ್ಷ ದೊಡ್ಡವಳಾದ ಅಕ್ಕ ದುಡಿದು ದುಡಿದು ಅವ್ವನಿಗಿಂತಲೂ ವಯಸ್ಸಾದಂತೆ ಕಾಣುತ್ತಿದ್ದಾಳೆ. ಅಪ್ಪನ ಪಾಲಿನಲಿ ನನಗೇನೂ ಬೇಡವೆಂದೇ ನಾನು ಹಲವು ವರ್ಷಗಳ ಹಿಂದೆಯೇ ಹೇಳಿದ್ದುಂಟು. ನನ್ನ ಪಾಲೇನಾದರೂ ಕೊಡಬೇಕೆನಿಸಿದರೆ ನನ್ನ ಅಕ್ಕನಿಗೇ ಕೊಡಿ ಎಂದೇ ಹೇಳಿದ್ದೇನೆ. ಅಕ್ಕ ದುಡಿದು ಓದಿಸದದ್ದರೆ... ಬೇಡ ಬಿಡಿ. ಏನು ಆಗುತ್ತಿದ್ದೆನೊ? ಯೋಚಿಸಿದಷ್ಟು ಮನಸ್ಸು ಮುದುಡುತ್ತದೆ. ನನ್ನನ್ನು ಸ್ನಾತಕೋತ್ತರ ಪದವೀಧರ ಮಾಡಿದ ಅಕ್ಕ ನನ್ನ ಪಾಲಿನ ವಿಶ್ವವಿದ್ಯಾಲಯ. ಪೈಸೆಯ ಲೆಕ್ಕ ಆಕೆಯಿಂದಲೇ ಕಲಿಯಬೇಕು. ಅಕ್ಕನ ನೋಡಲು ಮುಂದಿನ ವಾರವೇ ಊರಿಗೆ ಹೋಗುತ್ತೇನೆ. ಅಕ್ಕನಿಗೆ ಸ್ವೀಟ್ ಎಂದರೆ ಪಂಚಪ್ರಾಣ. ಏನಾದರೂ ಒಯ್ಯುತ್ತೇನೆ. ಇನ್ನೂ ಒಂದು ಮಾತು. 'ಪುಟ್ಟ ಪಾದಗಳು' ಲೇಖನದಲ್ಲಿ ಕೇವಲ ಒಂದಿಬ್ಬರ ಪಾದಗಳಿಗೆ ಈಗಲೂ ನಮಸ್ಕರಿಸುತ್ತೇನೆ ಎಂದು ಬರೆದಿದ್ದೆನಲ್ಲ ಅವುಗಳಲ್ಲಿ ಅಕ್ಕನ ಪಾದಗಳು ಸೇರಿವೆ. ಹೋದಾಗ ಮತ್ತೆ ಅಕ್ಕನ ಪಾದಗಳಿಗೆ ನನ್ನ ಹಣೆ, ಕಣ್ಣೊತ್ತಿ ನಮಸ್ಕರಿಸಿ ಬರುವೆ. ನಿಜಕ್ಕೂ ಅಕ್ಕ ಎಂಬ ಅಕ್ಕರೆಯ ಜೀವಿ ಬಹುತೇಕ ಜೀವನಾಡಿ, ಒಡನಾಡಿ, ಥೇಟ್ ಭೂಮಿಯಂಥವಳು... ಆಕೆಗೆ ಹೋಲಿಕೆಯೆಂದರೆ ತಾಯಿಯೇ ಬಿಡಿ....
    -ಕಲಿಗಣನಾಥ ಗುಡದೂರು

    ಪ್ರತ್ಯುತ್ತರಅಳಿಸಿ
  4. ಈ ಲೇಖನ ಓದಿ ನಾನು ಚಿಕ್ಕವನಿದ್ದಾಗ ಅಕ್ಕನ ಜೊತೆಗೂಡಿ ಆಡಿದ ಆಟ , ಜಗಳ ಎಲ್ಲ ನೆನಪಾಯ್ತು...
    ಥ್ಯಾಂಕ್ಸ್...

    ಪ್ರತ್ಯುತ್ತರಅಳಿಸಿ
  5. ಯಪ್ಪಾ...ನಂಗೂ ನನ್ ತಮ್ಮನ ನೆನಪಾಯಿತು. ನಂಗೆ ಹೊಸ ಬಟ್ಟೆ ತಂದಾಗ ಅದೇನಿದ್ರೂ ಅವನು ಹಾಕಿ ಕೂರುತ್ತಿದ್ದ. ಹಾಗಾಗಿ ಅಮ್ಮ ಅವನಿಗೂ ಪೆಟ್ಟಿಕೋಟ್ ಹೊಲಿಸ್ತಾ ಇದ್ರು. ತುಂಬಾ ಚೆನ್ನಾಗಿ ಬರೆದಿದ್ದೀರಿ. ತುಂಟತನ, ಅಕ್ಕನೆಂಬ ಅಮ್ಮನ ಬಗೆಗಿರುವ ಪ್ರೀತಿ, ಕಾಳಜಿ ಎಲ್ಲಾವನ್ನೂ ಒಟ್ಟೊಟ್ಟಿಗಟ ಕಟ್ಟಿಕೊಟ್ಟಿದ್ದೀರಿ. ಖುಷಿಯಿಂದ ಅಕ್ಕನಿಂದ ಕಣ್ಣಿನಿಂದ ಸವಿಮುತ್ತುಗಳನ್ನು ನೀಡಿದ್ದೀರಾ..ನನ್ನ ನೋಡಿ ಅಕ್ಕಾ ಇರಬೇಕಿತ್ತು..ನಂಗೂ ಅಂತ ಯಾಕೋ ಕಂಗಳು ಒದ್ದೆಯಾಗುತ್ತವೆ. ಅಕ್ಕ ಬೇಕಲ್ವಾ... ಸುಂದರ ಬರಹಕ್ಕೆ ಅಭಿನಂದನೆಗಳು ಸರ್.
    -ಧರಿತ್ರಿ

    ಪ್ರತ್ಯುತ್ತರಅಳಿಸಿ
  6. @shivu
    ಶಿವಣ್ಣಾ,
    ನೀವು ನನ್ನ ಬರಹ ಮೆಚ್ಚಿದ್ದಕ್ಕೆ ಖುಶಿ ಆಗ್ತಾ ಇದೆ... ಅಕ್ಕನಿಗೆ ಅಕ್ಕನೇ ಸಾಟಿ ಕಣ್ರಿ... ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..

    @Prabhuraj Moogi
    ಪ್ರಭುರಾಜ್...
    ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು... ಹೀಗೇ ಬರುತ್ತ ಇರಿ....

    @ಕಲಿಗಣನಾಥ ಗುಡದೂರು
    ಕಲಿಗಣನಾಥ,
    ನೀವಂದಂತೆ, ಸಣ್ಣಂದಿನಲ್ಲಿ ಅಕ್ಕನೆಂದರೆ ಒರ್ವ ಗೆಳತಿಯಂತೆ... ಬೆಳೆದು ಬಂದಂತೆ ಅಮ್ಮನ ಸ್ಠಾನಕ್ಕೆ ಸಮನಾಗಿ ನಿಂತು ನಗ್ತಾಳಪ್ಪ, ಈ ಅಕ್ಕ.... ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..
    ತುಂಬ ಸುಂದರವಾಗಿ ನಿಮ್ಮ ಕಥೆಯನ್ನು ಬರೆದಿದ್ದೀರಾ.... ಅಭಿನಂದನೆಗಳು...

    @aditya
    ಆದಿತ್ಯ,
    ನಿಮ್ಮ ನೆನಪಿನಾಳದ ಹಳೆ ಕಡತಗಳನ್ನು ತೆಗೆಯಲು ನಾನು ಸಹಕಾರಿಯಾಗಿದ್ದಲ್ಲಿ, ನನಗೆ ಖುಶಿಯಾಗ್ತಾ ಇದೆ. ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..

    @ಧರಿತ್ರಿ
    ಧರಿತ್ರಿ,
    ನನ್ನ ಬರಹ ಇಷ್ಟಪಟ್ಟಿದ್ದಕ್ಕೆ ಸಂತೋಷ ಆಯ್ತು... ಒಹ್ಹ್... ನೀವೂ ಒಬ್ರು ಅಕ್ಕ ಅಲ್ವಾ...?! ತಮ್ಮನ ಎಲ್ಲ ಪಿಕಿಲಾಟಗಳನ್ನು ನೋಡಿ ಖುಷಿ ಪಟ್ಟಿರಬಹುದು ಅಲ್ವಾ? ಅಕ್ಕನ ಬಗ್ಗೆ ನೀಮ್ಮ ಬರಹ ಓದಿದ್ದೇನೆ.. ಇಷ್ಟಪಟ್ಟಿದ್ದೆನೆ... ದಯವಿಟ್ಟು ತಮ್ಮನ ಬಗ್ಗೆ ಒಂದು ಬರಹ ಬರೆದು ಓದುಗರ ಮನಸ ತಣಿಸುವಂತೆ ಕೋರಿಕೆ... ಅಕ್ಕಂದಿರ ಮನಸಲ್ಲಿ ತಮ್ಮಂದಿರ ಗೆರೆಯ ಉದ್ದ ಅಗಲದ ವಕ್ರತೆಯ ಪರಿಧಿ ಎಷ್ಟೆಂದು ಬೇಗ ನೋಡುವಂತಾಗಲಿ...

    ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..

    -ಗಿರಿ

    ಪ್ರತ್ಯುತ್ತರಅಳಿಸಿ