ರಾಜರಾಜೇಶ್ವರಿ ದೇವಸ್ಥಾನದ ಪಕ್ಕದ ಬೀದಿಯಲ್ಲಿರುವ ವಿಶ್ವನಿಕೇತನ ಸಭಾಭವನ. ಮಂಗಳವಾರದ ಬೆಳಿಗ್ಗೆ ೯:೦೦ ರ ಮಂಗಳಕರಮಯ ಸಮಯ. ಅಮ್ಮಣ್ಣಿ ಇನ್ನೂ ಹಸೆಮಣೆಯ ಮೇಲೆ ಬಂದಿರಲಿಲ್ಲ, ಶ್ವೇತವರ್ಣದ ಪಂಚೆಯುಟ್ಟು, ಮೈ ಮೇಲೆ ಧೋತಿ ಮತ್ತು ತಲೆ ಮೇಲೆ ಪೇಟ ತೊಟ್ಟಿದ್ದ ವಿಕಾಸ್ ಒಬ್ಬರೇ ಕುಳಿತು ಪುರೋಹಿತರು ಮಾಡಿಸುತ್ತಿದ್ದ ಹೋಮದ ಧೂಪ ತಿನ್ನುತ್ತಾ ಎಡಗೈ ಬೆರಳುಗಳನ್ನು ಸುರುಟಿಕ್ಕೊಂಡು ಬಾಯಿ ಮೇಲೆ ಇಟ್ಟು ಮೆಲ್ಲನೆ ಕೆಮ್ಮುತ್ತಿದ್ರು. ಗಂಡು ಮತ್ತು ಹೆಣ್ಣಿನ ಕುಟುಂಬದವರು ಮತ್ತು ಆತ್ಮೀಯರು ಮಾತ್ರ ಬಂದಿದ್ದರು. ಬಹುಶ: ಊಟದ ಹೊತ್ತಿಗೆ ಮಿಕ್ಕವರೆಲ್ಲಾ ಬರಬಹುದು. ಪರಿಚಿತರಾದ ಅನೇಕರಲ್ಲಿ ಕುಶಲೋಪರಿ ನಡೆಸಿ, ಹಿಂದಿನ ಸಾಲಿನಲ್ಲಿ ಗೆಳೆಯ ಗಣೇಶನ ಜೊತೆ ಮಂದಸ್ಮಿತನಾಗಿ ಕುಳಿತಿದ್ದೆ. ಅದೂ ಇದೂ ಅಂತ ಮಾತಾಡುತ್ತಿದ್ದೆವು. ನನ್ನ ಮತ್ತು ಅಮ್ಮಣ್ಣಿಯ ಒಡನಾಟ ಒಳಪಟ್ಟಂತೆ ಬಹುತೇಕ ನನ್ನ ಅಂತರಂಗದ ವಿಶಯಗಳು ಆತ್ಮೀಯ ಗೆಳೆಯ ಗಣೇಶನಿಗೆ ಗೊತ್ತು.
ನಮ್ಮ ಮಾತುಕತೆಯ ನಡುವೆ ಹೊರ ಹೋಗೋಣ ಅಂತ ಹೇಳಿದೆ. ಅವನಿಗೆ ನನ್ನ ಮನದ ಇಂಗಿತ ಅರ್ಥ ಆಗಿದ್ದರಿಂದ ಅವನೇ ಮೊದಲು ಎದ್ದು ಹೊರ ಹೋಗಲು ಅನುವಾದ, ಜೊತೆಗೆ ನಾನೂ. ಹಿಂದಿನ ದಿನ ಹಿತವಾಗಿ ಮಳೆ ಬಂದಿದ್ದರಿಂದ ಧೂಳಿಲ್ಲದ ರಸ್ತೆ ಮೇಲೆ ವಾಹನಗಳು ಓಡಾಡುತ್ತಿದ್ದವು.
"ಬಾಲ್ಕನಿ ಮೇಲೆ ಹೋಗೋಣವಾ?" ಗಣೇಶ ನನ್ನನ್ನು ಕೇಳಿದ. ನಾನು ಹೂಂಗುಟ್ಟಿದೆ.
ಬಾಲ್ಕನಿಯ ಮೇಲೆ ಐದಾರು ಪ್ಲಾಸ್ಟಿಕ್ ಕುರ್ಚಿಗಳು, ಯಾರೋ ಬೆಳಗಿನ ತಿಂಡಿ ಕಾಫಿ ಕುಡಿದ ಪ್ಲೇಟುಗಳು, ಹಗುರವಾಗಿ ಯಾರ ಪರಿವೆಯೂ ಇಲ್ಲದೆ ಮನ ಬಂದಲ್ಲಿಗೆ ಹಾರಾಡುವ ಮೋಡಗಳ ನಡು ನಡುವೆ ಆವಾಗಾವಾಗ ಇಣುಕುವ ಸೂರ್ಯನ ಕಿರಣ, ಯಾವ ಉದ್ವೇಗವೂ ಇಲ್ಲದೆ ಹದವಾಗಿ ಬೀಸುವ ಗಾಳಿ.ಕಣ್ಣಳತೆಯ ದೂರದ ಮಾಧ್ಯಮಿಕ ಶಾಲೆಯೊಂದರಲ್ಲಿ ಸಮವಸ್ತ್ರದಲ್ಲಿದ್ದ ೨೦೦ ರಷ್ಟಿದ್ದ ಮಕ್ಕಳ ಗುಂಪೊಂದು ಸಾಲಾಗಿ ನಿಂತು ಅದೇನೋ ಗುನುಗುತ್ತಿತ್ತು. ಕಿವಿ ನಿಮಿರಿಸಿದೆ, ಆದರೂ ಅರ್ಥವಾಗಲಿಲ್ಲ; ಪ್ರತಿಜ್ನೆ ಇರಬಹುದೇನೋ.
ಕುರ್ಚಿಯಲ್ಲಿ ಕುಳಿತಾಗ ಪಕ್ಕದಲ್ಲೇ ಕಂಬಕ್ಕೆ ಅಲಂಕಾರಕ್ಕಾಗಿ ಇರಿಸಿದ್ದ ಬಳ್ಳಿಯೊಂದು ನನ್ನ ಕಿವಿಯ ಕೆಳಭಾಗಕ್ಕೆ ಕೆನ್ನೆಯನ್ನು ಸವರಿ, ಏನೋ ಒಂಥರಾ ಮುದ ನೀಡಿತು. ನನ್ನ ಮನದ ದುಗುಡವನ್ನು ನೇವರಿಸಿ ಸಾಂತ್ವನ ನೀಡಿದಂತೆ, ಆ ಕ್ಷಣಕ್ಕೆ ಆ ಬಳ್ಳಿಯ ಮೇಲೆ ಆಪ್ಯಾಯಮಾನವಾಗಿ, ಚಳಿಗಾಲದ ಮುಂಜಾವುಗಳಲ್ಲಿ ಎಲೆಯ ಮೇಲಿನ ಮಂಜಿನ ಹನಿಯಂತೆ ಎಡಗಣ್ಣಿನ ಅಂಚಿನಿಂದ ಒಂದೇ ಒಂದು ಹನಿ ಮೆಲ್ಲನೆ ಜಿನುಗಿತು.
ಆಗ ನಾನು ಏಳನೇ ತರಗತಿ. ನನ್ನ ಮತ್ತು ನಿನ್ನ ಮನೆ ಒಂದೆರಡು ಫರ್ಲಾಂದು ದೂರ ಮಾತ್ರವಿದ್ದುದರಿಂದ ಒಂದುವರೆ ಕಿಲೋಮೀಟರ್ ದೂರದ ಶಾಲೆಗೆ ನಾವಿಬ್ಬರೂ ಜೊತೆಯಾಗಿ ನಡೆದು ಹೋಗುವ ರೂಢಿಯಾಗಿತ್ತು. ತಿಂಗಳ ಯಾವುದೆಂದು ನೆನಪಾಗುತ್ತಿಲ್ಲ, ಅದೊಂದು ಶುಕ್ರವಾರ. ಮಿಕ್ಕೆಲ್ಲ ದಿನಗಳಲ್ಲಿ ಶಾಲಾ ಸಮವಸ್ತ್ರ ಕಡ್ಡಾಯವಾದ್ದರಿಂದ, ಶುಕ್ರವಾರ ಮಾತ್ರ ಬಣ್ಣದ ವಸ್ತ್ರಗಳ ಮೊರೆ ಹೋಗಬಹುದಿತ್ತು. ನೀನು ಆವತ್ತು ಬಿಳೀ ಬಣ್ಣದ ಚೂಡಿದಾರ-ಧಾರಿಯಾಗಿ ಹೊರಟಿದ್ದಿ. ಉದ್ದನೆಯ ಕೇಶಕ್ಕೆ ಎರಡು ಜಡೆಯ ಹಾಕಿ ಮೇಲಗಡೆ ನಸು ಕೆಂಪು ಗುಲಾಬಿಯೋ ಇಲ್ಲಾ ಕಡು ಹಳದಿ ಸೇವಂತಿಗೆ ಹೂವೋ; ಹೂದೋಟದಲ್ಲಿ ಹೂವೇ ಇಲ್ಲದ ಸಮಯದಲ್ಲಿ ಸುವಾಸನೆಯುಳ್ಳ ಪಾಚದ ಎಲೆಯನ್ನು ಮುಡಿಸಿ, ಮಳೆಗಾಲದಲ್ಲಿ ಕೇದಗೆಯ ಹೂವನ್ನು ಒಂದು ಸಲ ಮಡಚಿ ಕ್ಲಿಪ್ ಮಾಡಿ ನಿನ್ನಮ್ಮ ನಿನ್ನ ಮುಡಿಗೇರಿಸುತ್ತಿದ್ದರು. ಅಲ್ವಾ?
ಎಂದಿನಂತೆ ಅಂದೂ ಜೊತೆಯಾಗೇ ಹೊರಟಿದ್ದೆವು. ಸುಬ್ಬಾ ಭಟ್ಟರ ತೋಟದ ಪಕ್ಕದ ದಾರಿ ಕಳೆದು ದಿಣ್ಣೆಯನ್ನು ಏರಿ, ರಸ್ತೆ ಪಕ್ಕದ ಪೇರಳೆ ಮರದಲ್ಲಿ ಕಾಯಿ ಇದೆಯೇ ಎಂದು ದಿಟ್ಟಿಸಿ ನೋಡಿ ಮುಂದಕ್ಕೆ ಶಾಂತಕ್ಕನ ಮನೆಯ ಪಕ್ಕದ ತಿರುವಿಗೆ ತಲುಪಿದ್ದೆವು. ಬಹುಶ: ಅರ್ಧ ದಾರಿ ಕ್ರಮಿಸಿದ್ದೆವೇನೋ, ಇದ್ದಕ್ಕಿದ್ದಂತೆ ನೀನು ಹೊಟ್ಟೆ ನೋವಾಗುತ್ತಿದೆಯೆಂದು ಹೇಳಿ ಅಳುತ್ತಿದ್ದಾಗ, ಮನೆಲೆಕ್ಕ(Home Work)ವನ್ನು ಮಾಡದ್ದಕ್ಕಾಗಿ ದೇಸಾಯಿ ಮೇಷ್ಟ್ರ ಬೆತ್ತದ ರುಚಿಯ ಗುಂಗಿನಲ್ಲಿದ್ದ ನಾನು ನಿನ್ನ ನೋಡಿದಾಗ, ಕಿಬ್ಬೊಟ್ಟೆಯ ಕೆಳಗೆ ಕೆಂಪನೆಯ ಚಿತ್ತಾರದಿಂದ ನಿನ್ನ ಬಟ್ಟೆಗಳೆಲ್ಲ ಕಂಗೊಳಿಸಿ, ಬಿಳಿ ಬಣ್ಣದ ಮೇಲೆ ರೌದ್ರತೆಯ ನರ್ತನವಾಡಿದಂತೆ ಅನಿಸಿತ್ತು.
"ಹಾ... ಏನಾಯ್ತು?.. ಅಬ್ಬಾ.. ತುಂಬಾ ರಕ್ತ... ಬಿದ್ದು ಬಿಟ್ಯಾ...?" ಅಂತ ನಾ ದಿಗಿಲಲ್ಲಿ ಕೇಳಿದಾಗ, ಕುಕ್ಕರಗಾಲಲ್ಲೇ ಕುಳಿತು, ಬಾಯಿ ಮೇಲೆ ಬೆರಳಿಟ್ಟು, ಶಬ್ದ ಮಾಡದಂತೆ ಸೂಚಿಸಿದ್ದಿ.
ಒಂದೆರಡು ನಿಮಿಷಗಳ ನಂತರ ಎದ್ದು ನಿಂತು "ನನ್ನನ್ನು ಮನೆ ತನಕ ಬಿಟ್ಟು ಬಿಟ್ತೀಯಾ...?" ಎಂದಿದ್ದೆಯಲ್ಲ.
"ಸರಿ... ಏನಾಯ್ತು? ಬಿದ್ದು ಬಿಟ್ಯಾ? ತುಂಬಾ ನೋಯ್ತಾ ಇದೆಯಾ...? ಶಂಕರ ವೈದ್ಯರಲ್ಲಿ...." ಎನ್ನುವ ಮೊದಲೇ ನನ್ನ ಮಾತನ್ನು ತುಂಡರಿಸಿ
"ಏನೂ ಆಗಿಲ್ಲ... ನಿಂಗೆ ಅದೆಲ್ಲ ಅರ್ಥ ಆಗಲ್ಲ... ನನ್ನನ್ನು ಮನೆ ತನಕ ಬಿಡ್ತೀಯಾ...?"
ಆಮೇಲೆ ನಿನ್ನನ್ನ ಹಿಂಬಾಲಿಸಿದೆ. ಆದ್ರೆ ಹಿಂತಿರುಗುವಾಗ ಯಾವಾಗಿನ ದಾರಿ ಬಿಟ್ಟು, ದೇವಯ್ಯನ ಮನೆಯ ಪಕ್ಕದ ಓಣಿಯಲ್ಲಿ ಇಳಿದು ಮತ್ತೆ ರಾಮಣ್ಣನ ತೋಟದಲ್ಲೇ ಆಗಿ ಸುಬ್ಬಾ ಭಟ್ಟರ ತೋಟಕ್ಕೆ ತಲುಪಿದಾಗ ಪುನಹ ಕೇಳಿದೆ.
"ಏನಾಯ್ತು...? "
"ಅದೆಲ್ಲ ನಿಂಗೆ ಅರ್ಥ ಆಗಲ್ಲ... ಸುಮ್ನೆ ಬಾ ನನ್ ಜೊತೆ"
ಅರ್ಥವಾಗಲ್ಲ ಅಂದೆಯಲ್ಲ. ಯಾಕೆ ಅರ್ಥ ಆಗಲ್ಲ? ಕ್ರಿಕೆಟ್ ನಲ್ಲಿ ವೈಡ್ ಬಾಲ್ ಅಂದ್ರೆ ಏನು ಅಂತ ನಿನಗೆ ನಾನೇ ಕಲಿಸಿ ಕೊಟ್ಟಿದ್ದಲ್ಲವಾ? ಲೆಕ್ಕದಲ್ಲಿ ಭಾಗಾಕರವನ್ನು ನಿನಗೆ ನಾನೇ ತಾನೇ ಹೇಳಿ ಕೊಟ್ಟದ್ದು? ಅಂಥ ನನಗೆ ಅರ್ಥವಾಗದಿರುವುದು ಏನಿದೆ?
ನಿನ್ನ ಮನೆ ತಲುಪಿದಾದ ನಿನ್ನಮ್ಮ ನನ್ನನ್ನು ಪಕ್ಕಕ್ಕೆ ಕರೆದು "ಯಾರಲ್ಲೂ ಹೇಳಬೇಡ ಹೀಗಾಯಿತೆಂದು..." ಎಂದರು.
ಹೇಗಾಯಿತೆಂದು ಕೇಳೋಣವೆನಿಸಿದರೂ ಕೇಳಲಿಲ್ಲ. ಒಳಗಡೆ ಹೋಗಿ ಬಾಳೆ ಎಲೆಯೊಂದರಲ್ಲಿ ಹೋಳಿಗೆ ತಂದು ನನ್ನ ಕೈಯಲ್ಲಿರಿಸಿ ತಲೆ ನೇವರಿಸಿ ಕಳಿಸಿ ಕೊಟ್ಟಿದ್ದರು ನಿನ್ನಮ್ಮ.
ಶಾಲೆಗೆ ಹೋದಾಗಲೂ ಏನೋ ಒಂದು ಗೋಜಲು ಗೋಜಲು. ಯಾಕೆ ಎಲ್ಲ ಮುಚ್ಚಿಡುತ್ತಿದ್ದಾರೆ? ಮಲಗಿದಾಗಲೂ ನಿದ್ರೆ ಬಾರದೆ, ನಿನಗೇನಾಗಿರಬಹುದೆಂದು ಸಂಕಟ ಪಟ್ಟು ಅಡುಗೆ ಮನೆಯಲ್ಲಿ ಪಾತ್ರೆ ತೊಳೆಯುತ್ತಿದ್ದ ಅಮ್ಮನಲ್ಲಿ ವಿಷಯ ಹೇಳಿದಾಗ, ಬಲಕೈಯನ್ನು ಸೀರೆಯ ಸೆರಗಲ್ಲಿ ಒರಸಿ ನನ್ನ ತಲೆಯ ನೇವರಿಸಿ "ಮುಂದೆ ದೊಡ್ಡವನಾದಾಗ ನಿನಗೆಲ್ಲ ಅರ್ಥವಾಗುತ್ತೆ..." ಎಂದು ನಸು ನಕ್ಕು, ಪಾತ್ರೆ ತೊಳೆಯುವುದರಲ್ಲೇ ಮಗ್ನರಾದರು.
ಆ ರಾತ್ರೆ ಇಡೀ ನಿದ್ರೆ ಬರದೆ ಚಡಪಡಿಸುತ್ತಿದ್ದೆನು. ಆವತ್ತು ನನಗೆ ಪ್ರಪ್ರಥಮವಾಗಿ ಒಂಟಿಯೆಂದೆನಿಸಿತ್ತು. ಯಾರೂ ನನ್ನ ಬಳಿ ಮಾತನಾಡ ಬಯಸುತ್ತಿಲ್ಲವೆಂದೆನಿಸಿತ್ತು.
ಇಂದು ಪುನಹ ಹಾಗೇ ಒಂಟಿಯೆಂದೆನಿಸುತ್ತಿದೆ ಅಮ್ಮಣ್ಣೀ...
ಒಂಟಿಕಾಲ ಮೇಲಿನಲ್ಲಿ
ತುಂಬಿ ಬಂದ ನೋವಿನಲ್ಲಿ
ಒಂಟಿತನದ ಕಾವಲಲ್ಲಿ
ನಂದುವುದೇತಕೀ ದೀಪವು?
ಉಸಿರ ದನಿ ಕೇಳದಿರದು
ಉಗುಳು ನುಂಗಿ ಬದುಕುತಿಹುದು
ಬತ್ತಿ ಹೋದ ಗಂಟಲಲ್ಲಿ
ಒತ್ತಿ ಒತ್ತಿ ನೆನೆಯುತಿಹುದು
ಆಸರೆಯ ಅರಸುತಿಹೆನು
ಕಿರು ಬೆರಳೇ ಸಾಕು
ಹಕ್ಕಿಗೆ ಹಾರಾಡುವ ಆಸೆ
ಮರಿ ಚಿಗುರ ಕನಸೇ?
ಪುಟ್ಟ ಮುಗ್ಧ ಮನಸ್ಸಿನ ಭಾವನೆಗಳನ್ನು ಅದೇನು ಚೆನ್ನಾಗಿ ಬರೆದಿದ್ದೀರಿ ಸರ್, ಚಿಕ್ಕೊರಿದ್ದಾಗ ಹೀಗೆ ಯಾರೂ ಎನೂ ಹೇಳದಿದ್ದಾಗ ನಿಜವಗ್ಲೂ ಒಂಟಿ ಅಂತ ಅನಿಸಿಬಿಡುತ್ತಿತ್ತು! ಈಗೇನು ಎಲ್ಲ ಹೇಳ್ತಾರೆ, ಹೇಳದಿದ್ರೂ ಎಲ್ಲೋ ಕೇಳಿ ತಿಳ್ಕೊತೀವಿ... ಆಗ ಗೊತ್ತಿಲ್ಲದೇ ಇದ್ದದ್ದೇ ಚೆನ್ನಾಗಿತ್ತು ಅನಿಸುತ್ತದೆ...
ಪ್ರತ್ಯುತ್ತರಅಳಿಸಿಪ್ರಭುರಾಜ ಹೇಳೂದು ಖರೇ ಅನಸ್ತದ. Ignorance is bliss!
ಪ್ರತ್ಯುತ್ತರಅಳಿಸಿchennagide guru
ಪ್ರತ್ಯುತ್ತರಅಳಿಸಿಗಿರಿ,
ಪ್ರತ್ಯುತ್ತರಅಳಿಸಿಇಂಥದ್ದೇ ಆನುಭವ ನನಗೂ ಆಗಿತ್ತು. ನಾನು ಆಗ ಕೇಳಿದರೇ ಯಾರು ಹೇಳುತ್ತಿರಲಿಲ್ಲ. ಮತ್ತೆ ನಾನದಕ್ಕೆ ತಲೆ ಕೆಡಿಸಿಕೊಂಡಿರಲಿಲ್ಲ. ತಲೆಕೆಡಿಸಿಕೊಂಡಿದ್ದು ಯಾಕೆಂದರೇ ಹತ್ತು ದಿನ ಆವಳು ಸ್ಕೂಲಿಗೆ ಜೊತೆಯಾಗಿ ಬರುವುದಿಲ್ಲವಲ್ಲ ಒಬ್ಬನೇ ಆದೆನಲ್ಲ ಅನ್ನುವ ಚಿಂತೆ ಕಾಡಿತ್ತು. ಮತ್ತೆ ಬಾಲ್ಯದಲ್ಲಿ ಮುಗ್ದತೆಯಿರುವಾಗ ಅವಲ್ಲೇ ತಿಳಿಯದಿರುವುದೇ ಒಳ್ಳೆಯದು ಅಂತ ಈಗನ್ನಿಸುತ್ತೆ. ಅಲ್ವಾ....ಬರಹದ ವಿಚಾರ ಚೆನ್ನಾಗಿದೆ..
Prabhuraj Moogi, sunaath, Vishnu, shivu...
ಪ್ರತ್ಯುತ್ತರಅಳಿಸಿಸಾಲುಗಳನ್ನು ಮೆಚ್ಚಿದ್ದಕ್ಕೆ ಖುಶಿ ಆಯ್ತು... ಕಾಮೆಂಟಿಸಿದ್ದಕ್ಕೆ ಧನ್ಯವಾದಗಳು.. ಹೀಗೇ ಬರುತ್ತಿರಿ...
-ಗಿರಿ
heloo really nice...... i like yr writing style and way of presentation........really nice.......
ಪ್ರತ್ಯುತ್ತರಅಳಿಸಿ