ಗುರುವಾರ, ಜುಲೈ 30, 2009

ನಿನ್ನ ಕಂದಮ್ಮಗಳು ನನ್ನನ್ನೇನಾದ್ರು ’ಮಾಮಾ’ ಅಂತ ಕರೆದರೆ...?




ನಿನ್ನೆ ಬಳುಕುವ ಹಾದಿಯ ಆ ತಿರುವಿನಲ್ಲಿ ಬರುತ್ತಿದ್ದಾಗ ಅನಿರೀಕ್ಷಿತವಾಗಿ ನೀನು ಸಿಕ್ಕಿದ್ದೆಯಲ್ಲ... ಸಿಕ್ಕಿದ ತಕ್ಷಣ ಒಂದು ಮುಗುಳು ನಗೆ... ವಾವ್... ಕೊಚ್ಚೆ ತಳದ ತಟಾಕದಲ್ಲಿ, ನೈದಿಲೆ ಅರಳಿದಾಗ ಚಂದ್ರಮ ಹೇಗೆ ಸಂಭ್ರಮಿಸುತ್ತನೋ ಹಾಗೇ ಏನೇನೋ ಕಾರಣಗಳಿಂದ ನಾನು ತೀರ ದುಗುಡದಲ್ಲಿದ್ದರೂ ಆ ನಗುವ ಕಂಡು ಪುಳಕಿತಗೊಂಡಿದ್ದೆ... ಕೆನ್ನೆಯ ಕೆಂಪು ರಂಗಿನಿಂದಲೇ ನೀನು ತುಂಬಾ ಸಂಭ್ರಮದಲ್ಲಿರುವುದು ತಿಳಿಯುತ್ತಿತ್ತು.
"ತುಂಬಾ ಖುಶಿಯಲ್ಲಿದ್ದೀಯಲ್ಲ... ಎನ್ ವಿಶೇಷ ?" ಅಂತ ಕೇಳಿದ್ದಕ್ಕೆ ಸಣ್ಣದಾಗಿ ಕಣ್ಣು ಮುಚ್ಚಿ, ತುಟಿ ಮತ್ತು ಹುಬ್ಬುಗಳನ್ನು ಕಂಪಿಸಿಕ್ಕೊಂಡು ನಿನ್ನ ಅಂತರಂಗದ ಸೌಂದರ್ಯವನ್ನೆಲ್ಲಾ ಮುದ್ದು ಮುಖದಲ್ಲಿ ಹೊರ ಸೂಸಿದ್ಯಲ್ಲಾ... ಅಬ್ಬಾ.. ಆಗ ನಾನು ನನ್ನನ್ನೇ ಮರೆತಿಲ್ಲ ಅಂತ ಅನ್ನುವುದಾದರೂ ಹೇಗೆ...?
"ಮದ್ವೆ ಆಗ್ತಿದ್ದೇನೆ... ವಿಕಾಸ್ ಅಂತ... ಹಾಸನದವರು... ಲಂಡನ್ ನಲ್ಲಿ ಇದಾರೆ..." ಆಮೇಲೆ ನಾನೂ ಮಾತನಾಡಲಿಲ್ಲ... ನೀನೂ... ಹಾಗೇ ಮೂರ್-ನಾಲ್ಕು ನಿಮಿಷ... !
"ನಿಂಗೆ ನಾನೇ ಹುಡುಗಿ ಹುಡುಕಿ ಕೊಡ್ತೇನೆ ಮಾರಾಯ... ಎಂಥ ಹುಡುಗಿ ಬೇಕು ಹೇಳು...?!" ಅಂತ ನಗ್ತಾ ಕೇಳಿದ್ಯಲ್ಲ...(ನಿಜವಾಗ್ಲೂ ನಕ್ಕು ಬಿಟ್ಯಾ?... ಯಕೋ ಗೊತ್ತಾಗ್ತಿಲ್ಲ...)
ಮನಸ್ಸಿನಲ್ಲಿ ಏನೇನೋ ಹೇಳ್ಬೇಕೂಂತ ಆಯ್ತು ಕಣೇ... ಆದ್ರೆ ಅದ್ಯಾವ್ದೂ ಮಾತುಗಳಾಗಿ ಬರಲಿಲ್ಲ...

ಮೀನಿನಂತ ಕಣ್ಣುಳ್ಳವಳು... ಬೆಣ್ಣೆಯಂತ ಕೆನ್ನೆಯವಳು... ಗುಲಾಬಿಯ ಎಸಳಿನಂತ ತುಟಿಯವಳು... ಹಲಸಿನ ಹಣ್ಣಿನ ಸಣ್ಣ ಸೋಳೆಯ ಹಾಗಿರುವ ಮೂಗಿನವಳು... ಉದುರುವ ಮಂಜಿನ ಹಾಗೆ ಮಾತನಾಡಬಲ್ಲವಳು... ಉರಿಯುವ ಬೆಂಕಿಯಂತೆ ನನ್ನ ಪ್ರೀತಿಸುವವಳು... ನದಿಯ ಹರಿಯುವ ನೀರಿನಂತೆ ಓಡಾಡಬಲ್ಲವಳು... ನನ್ನೆದೆಗೆ ಒರಗಿ ನನ್ನ ಕೆಡಕುಗಳನ್ನು ಹೆಕ್ಕಿ ತೆಗೆಯುವವಳು... ಒಲುಮೆಯಿಂದ ನನ್ನೆದೆಯ ಗುಬ್ಬಚ್ಚಿ ಗೂಡಿಗೆ ಅನನ್ಯ ಪ್ರೀತಿ ತುಂಬುವವಳು... ನನ್ನನ್ನು ಪ್ರೀತಿಸಿ ಕೊಲ್ಲುವವಳು... ನನ್ನ ಉಸಿರ ಮಿಡಿತಕ್ಕೆ ನಾಚಿ ನೀರಾಗುವವಳು... ನನ್ನೆದೆಯ ಕೊಳದಲ್ಲಿ ಮೀನಾಗುವವಳು... ಹೀಗಿರಿವವರು ಬೇಕು...ಇದಾರಾ? ಅಂತ ಕೇಳೋಣಾ ಅಂದ್ಕೊಂಡ್ರೂ ಮಾತುಗಳಾಗಲಿಲ್ಲ ಅಮ್ಮಣ್ಣೀ...

ಆಮೇಲೆ ಒಂದೆರಡು ಫರ್ಲಾಂಗು ನಡೆದು ರಂಗಣ್ಣನ ಹೋಟೆಲ್ ನಲ್ಲಿ ಕಾಫಿ ಹೀರಿ ಬೀಳ್ಕೊಡುವವರೆಗೂ ಮೌನ. ಕೇವಲ ಒಂದು ’ಬೈ’ ಯಲ್ಲಿ ನಮ್ಮ ಭೇಟಿಯ ಪರ್ಯವಸಾನ.ಅದೆಷ್ಟೋ ವರ್ಷ ನಾವಿಬ್ರೂ ಜೊತೆಯಾಗಿ ಶಾಲೆ ಕಾಲೇಜುಗಳಿಗೆ ಹೋದವರು... ಹೇಳದೆಯೇ ಅರ್ಥಮಾಡಿಕ್ಕೊಂಡವರು...
ಅಲ್ಲಾ... ಅರ್ಥ ಆಗದೇ ಹೋಯಿತೇ...?
ಇಲ್ಲ... ಅರ್ಥವಾಗಿತ್ತು... ಅರ್ಥ ಆಗದಿದ್ದರೆ, ಮತ್ಯಾಕೆ, ಭೇಟಿಯಾದಾಗ ಒಂದೆರಡು ನಿಮಿಷ ಬಿಟ್ರೆ, ಮತ್ತೆಲ್ಲ ನಾವಿಬ್ರೂ ಮೌನವಾಗಿದ್ದುದು...? ... ನಿಜವಾಗ್ಲೂ ಅರ್ಥವಾಗಿತ್ತು... ಅಲ್ವಾ ಅಮ್ಮಣ್ಣಿ...?

ಈವಾಗ ನೀನ್ ಸಿಗಲ್ಲಾಂತ ನನೇನು ದು:ಖ ಪಡ್ತಿಲ್ಲ... ಆದ್ರೆ ನಿನ್ನ ಬಗೆಗಿನ ಅನುಭೂತಿ ಇದೆಯಲ್ಲ... ಅದು ಸಾಕು... ಯಾವತ್ತಾದ್ರು ಒಂದು ಮೆಸ್ಸೇಜ್ ಬಂದ್ರೆ, ನನ್ನ ಮುಖ ಅರಳ್ಬಹುದು... ಯಾವಗಾದ್ರು ಒಂದು ಮಿಸ್ಡ್ ಕಾಲ್ ಬಂದ್ರೆ, ನಾನಿನ್ನೂ ನಿಂಗೆ ನೆನಪಿದ್ದೇನಲ್ಲಾ ಅಂತ ಖುಶಿಪಡ್ಬಹುದು...ಯಾವುದಾದ್ರು ಮದ್ವೆ-ಮುಂಜಿಯಲ್ಲಿ ನನ್ನ ಕಣ್ಣುಗಳು ನಿನ್ನ ಹುಡುಕಬಹುದು... ಆಗ ನಿನ್ನ ಕಂಕುಳಲ್ಲೊಂದು ಸಣ್ಣ ಪುಟ್ಟನೋ, ಪುಟ್ಟಿಯೋ ಕಂಡಾಗ ನಾನು ಹಿರಿ ಹಿರಿ ಹಿಗ್ಗಬಹುದು... ನಿನ್ನ ಕಂದಮ್ಮಗಳು ನನ್ನನ್ನೇನಾದ್ರು ’ಮಾಮಾ’ ಅಂತ ಕರೆದರೆ, ಪ್ರೀತಿಯಿಂದ ಅವುಗಳ ತಲೆ ನೇವರಿಸಿ ಚಾಕೋಲೇಟ್ ಕೊಡಿಸಬಹುದು...

ನೀನು ಮದುವೆ ಆದ್ರೂ ನಿನ್ ಮೇಲಿನ ಪ್ರೀತಿ ಕಮ್ಮಿ ಆಗಲ್ಲ... ನೀನು ಸದಾ ಹಾಗೇ, ಬೆಚ್ಚನೆ ನನ್ನ ಕನಸಲ್ಲಿ ಬರಬಹುದು... ನಂಗೇನೂ ಬೇಜಾರಾಗಲ್ಲ ಅಮ್ಮಣ್ಣೀ... ನಿನ್ ಬಗ್ಗೆ ಅನನ್ಯ ಪ್ರೀತಿ ನನ್ನೆದೆಯ ತುಂಬಾ ಹರಡಿ ಬಿಡ್ತೇನೆ... ಅಲ್ಲಿ, ನೀನಿಲ್ಲಾಂತ ದು:ಖ ಇರಲ್ಲ... ಆದ್ರೆ, ನೀನಿರ್ತಿದ್ರೆ ಏನೇನ್ ಮಾಡ್ತಿದ್ದೆ ಅನ್ನೋ ಕಲ್ಪನೆಗಳು ಹಚ್ಚ ಹಸಿರಾಗಿರುತ್ತೆ... ನಿನ್ನ ಬಗ್ಗೆ ಅಭಿಮಾನ ಇರುತ್ತೆ.. ನಿನ್ನ ಬಗ್ಗೆ ಕಾಳಜಿ ಇರುತ್ತೆ...

8 ಕಾಮೆಂಟ್‌ಗಳು:

  1. akshath, Vishnu, sunaath, Narendra P. Sastry ... ಬರಹ ಮೆಚ್ಚಿದ್ದಕ್ಕೆ ಖುಶಿ ಆಯ್ತು... ಕಾಮೆಂಟಿಸಿದ್ದಕ್ಕೆ ಧನ್ಯವಾದಗಳು.. ಹೀಗೇ ಬರುತ್ತಿರಿ...

    -ಗಿರಿ

    ಪ್ರತ್ಯುತ್ತರಅಳಿಸಿ
  2. estu bega janagalu badalagi bidodu kanree... premisuthidda huduga ksanamathradalli sahodaranaguvudunte.... (hudugiya makkalu 'mama') endu karedare hudugige ee huduga sahodaranagabeku thane....???????

    ಪ್ರತ್ಯುತ್ತರಅಳಿಸಿ
  3. ಅನಾಮಧೇಯರಿಗೆ ನಮಸ್ಕಾರ...

    ಸಣ್ಣ ಮಕ್ಕಳು ಕರೆಯುವ ’ಅಂಕಲ್’ ಎನ್ನುವ ಶಬ್ದದ ಕನ್ನಡ ರೂಪಿಯಾಗಿ ಮಾಮಾ ಅನ್ನುವ ಶಬ್ದ ಉಪಯೋಗಿಸಿದೆ.
    ವಾವ್... ನೀವು ಹೇಳಿದ್ದು ಸರಿ... , ನಾನು ಆ ಬಗ್ಗೆ ಆಲೋಚಿಸಿರಲಿಲ್ಲ. ಮುಂದೆ ಬರವಣಿಗೆಯಲ್ಲಿ ಜಾಗರೂಕನಾಗಿರುತ್ತೇನೆ. ತಪ್ಪನ್ನು ತೋರಿಸಿಕೊಟ್ಟಿದ್ದಕ್ಕೆ ಕೃತಜ್ನತೆಗಳು...
    ಧನ್ಯವಾದಗಳು...

    -ಗಿರಿ

    ಪ್ರತ್ಯುತ್ತರಅಳಿಸಿ
  4. ಸರ್ "ಅಮ್ಮಣ್ಣಿ" ಪದ ಬಹಳ ಚೆನ್ನಾಗಿದೆ, ನಮ್ಮನೇಲಿ ಚಿಕ್ಕ ಮಕ್ಕಳಿಗೆ ಈ ಪುಟ್ಟಿ ಅಂತಾರಲ್ಲ ಹಾಗೆ ಕರೆಯೋದು.
    ಭಾವನೆಗಳನ್ನು ಬರಹದಲ್ಲಿ ಬಹಳ ಚೆನ್ನಾಗಿ ಇಳಿಸ್ತೀರಾ.

    ಪ್ರತ್ಯುತ್ತರಅಳಿಸಿ