ಶನಿವಾರ, ಡಿಸೆಂಬರ್ 19, 2009

ಇರುಳ ದೀಪಕ್ಕೆ ನಮನ

[ಅರ್ಪಣೆ : ಕನಸಿಗೆ ರೆಕ್ಕೆ ಕಟ್ಟಿ, ಬಿದ್ದಾಗ ಹೆಗಲ ತಟ್ಟಿ, ಮನಸಿಗೆ ಹುರುಪ ತುಂಬಿ, ತನ್ನುಸಿರ ತುಂಬಾ ನನ್ನನ್ನೇ ಲಾಲಿಸಿ, ಒಲವಿನ ಪೈರು ಬೆಳೆಸಿದ ನನ್ನಿರುಳ ದೀಪ ಅಮ್ಮನಿಗೆ...]

ಅಮ್ಮ...,

ಜೀವನ ಪ್ರೀತಿಯಾ ಕೂಪ, ದಾರಿ ತೋರುವಾ ಸ್ತೂಪ
ಆ ದೇವಿಯಾ ನಿಜ ರೂಪ, ನೀನೊಂದು ಇರುಳ ದೀಪ...

ನಿನ್ನ ಬಗ್ಗೆ ಬರೆಯಲು ಬಹಳಷ್ಟು ಸಲ ನಾನು ಹವಣಿಸಿದ್ದಿದೆ. ಅನುಭೂತಿಯೊಂದರ ಬಗ್ಗೆ ಶಬ್ದಗಳಲ್ಲಿ ವರ್ಣಿಸಲಾರದೆ ನಾನೊಬ್ಬ ಬಾವಿಯೊಳಗಿನ ಕಪ್ಪೆಯಂತೆ ಅನಿಸುತ್ತಿತ್ತು. ಲೇಖನಿ ಹಿಡಿದು ಕುಳಿತಾಗಲೆಲ್ಲ ತೇವವಾದ ಕಣ್ಣುಗಳೊಂದಿಗೆ ಎದುರಿನ ಕಾಗದ, ಮಂಜಿನಲ್ಲಿ ಮುಸುಕಿದ ವಿಸ್ತಾರವಾದ ಬಯಲೊಂದರಂತೆ ಅನಿಸುತ್ತಿತ್ತು.

ತಾನು ನೊಂದು ತಿಳಿ ಬೆಳಕ ಬೀರುತಿದೆ ಒಂದು ಇರುಳ ದೀಪ ನಿಶ್ಚಲದ ಮೂರ್ತ ರೂಪ...

ಧಾರವಾಹಿ ಮುಕ್ತದ ಹಾಡಿನಿಂದ ಸ್ಪೂರ್ತಿಗೊಂಡು ಇರುಳ ದೀಪವೆಂಬ ಹೆಸರನ್ನು ನಿನಗೆ ಅನ್ವರ್ಥವಾಗಿ ಇಟ್ಟಿದ್ದಂತೂ ನಿಜ. H.S.Venkateshamurthy ಆ ಸಾಲುಗಳನ್ನು ಸ್ವತಂತ್ರತೆ(ಮುಕ್ತತೆ)ಯ ಬಗ್ಗೆ ಬರೆದಿರಬಹುದಾದರೂ, ಇರುಳ ದೀಪ ಎನ್ನುವ ಶಬ್ದ ಕೇಳಿದಾಗ ಮಾತ್ರ ಅಮ್ಮನನ್ನೇ ನೆನೆಸುವಂತಿತ್ತು. ನೀನು ಅನಿರ್ವಚನೀಯ ಎನ್ನುವುದು ನಿಜವಾದ್ರು, ನಿನ್ನ ವರ್ಚಸ್ಸಿಗೆ ಸಮೀಪವಾದ ಪದಪುಂಜಗಳನ್ನು, ನನ್ನೆದೆಯ ಮಿಡಿತಕ್ಕೆ ತಕ್ಕಂತೆ ಆರಿಸಿದ್ದೇನೆ.

ಜೀವದೊಳು ಜೀವ ಇರುವಾಗಲೇ ನೀ ನನಗೆ ಮುದ್ದು ಮಾಡುತ್ತಿದ್ದಿಯಲ್ಲ...
ನಿನ್ನ ಜೀವನ ಪ್ರೀತಿಯನ್ನು ಅಲ್ಲೇ ನೀ ಧಾರೆ ಎರೆದಿದ್ದೀಯಲ್ಲಾ...
ಅಲ್ಲೇ ಜೊಗುಳವನ್ನೂ ಹಾಡಿದ್ದೀಯಲ್ಲಾ...

ನೀನು ಖಾರ ತಿಂದ್ರೆ, ನನಗೂ ಖಾರವಾಗಬಹುದೆಂದು ನಿನಗಿಷ್ಟವಾದ ಖಾರವನ್ನೂ ತಿನ್ನುವುದು ಬಿಟ್ಟಿರಲಿಲ್ಲವೇ...?
ನಾನು ಚೆನ್ನಾಗಿ ಮಲಗಿರಬಹುದೇ, ಇಲ್ಲಾ... ಆಟವಾಡುತ್ತಿರಬಹುದೇ ಎಂದು ನೀ ಎಲ್ಲೆಂದರಲ್ಲಿ ಯೋಚಿಸುತ್ತಿರಲಿಲ್ಲವೇ...?
ನೀನು ಪುಟ್ಟಾ... ಎಂದು ಹೆಸರಿಟ್ಟು ಕೂಗಿದಾಗ ನಾನೂ ಹೂಂ ಗುಟ್ಟುತ್ತಿರಲಿಲ್ಲವೇ...

ನಿನ್ನೆದುರಿಗೆ ಬಂದ ನಂತರವಂತೂ ರಾಜ ಕುಮಾರನಂತೆ ನನ್ನ ಬೆಳೆಸಿದ್ದೀಯಲ್ಲಾ...
ನೀನುಣಿಸುತ್ತಿದ್ದ ಅಮೃತವದು ನನ್ನ ಸಿರಗಳಲ್ಲಿನ ಜೀವಕ್ಕೆ ಕಾರಣೀಭೂತವಾದುದು...
ನೀನು ಹೇಳುತ್ತಿದ್ದ ರಾಮಾಯಣ, ಮಹಾಭಾರತ ಕಥೆಯಂತು ಹಾಗೇ ನನ್ನ ಮನಸ್ಸಿನಲ್ಲಿ ಅಚ್ಚಳಿಯದೆ ಕುಳಿತಿದೆ ಅಮ್ಮಾ...

ನಾನು ಕೆಟ್ಟದಾಗಿ ಗಲೀಜು ಮಾಡಿದಾಗ, ಚೊಕ್ಕದಾಗಿ ಸ್ನಾನ ಮಾಡಿಸಿ...
ಕಣ್ಣ ತೀದಿ, ಹಣೆಯಲೊಂದು ತಿಲಕವಿರಿಸಿ, ಜೊತೆಗೊಂದು ದೃಷ್ಟಿ ಬೊಟ್ಟನ್ನೂ ಇಟ್ಟು...
ನಾನು ಪುಟ್ಟದಾಗಿ ನಕ್ಕಾಗ, ಕೆನ್ನೆಯ ಮೇಲೊಂದು ಹನಿ ಮುತ್ತನಿಟ್ಟು...

ನನ್ನ ಜೊತೆ ಆಟವಾಡಿ, ಊಟಮಾಡಿಸಿ, ಜೊತೆಯಲ್ಲೇ ಇದ್ದು ನನ್ನೆಲ್ಲ ಇಷ್ಟಗಳನ್ನು ಪೂರೈಸಿದ್ದೀಯಲ್ಲಾ...
ನನಗೆ ಹುಷಾರಿಲ್ಲದಾದಾಗ ನಿದ್ದೆಗೆಟ್ಟು ಕಣ್ಣಿಗೆ ಎಣ್ಣೆ ಹಾಕಿ ಕಾದಿದ್ದೀಯಲ್ಲ...
ಆಟವಾಡಿ ಮೈ ಕೈ ಗಾಯ ಮಾಡಿಕ್ಕೊಂಡಾಗ ಸುಶ್ರೂಷಿಸಿದವಳು ನೀನಲ್ಲವೇ...?

ಅಕ್ಕನ ಜೊತೆ ಜಗಳವಾದಾಗ ಸಂಧಾನವನ್ನೂ ಮಾಡಿಸುತ್ತಿದ್ದೀಯಲ್ಲಾ...
ನನಗಿಷ್ಟವಾದ ತಿಂಡಿಗಳನ್ನೇ ಮಾಡಿ ಸದಾ ನನ್ನ ಖುಶಿಗೊಳಿಸುತ್ತಿದ್ದವಳು ನೀನಲ್ಲವೇ...?
ಆ ದಿನ ನದೀದಡದಲ್ಲಿ ಗೇರುಬೀಜ(ಗೋಡಂಬಿ) ಸುಟ್ಟುಕೊಟ್ಟಿದ್ದಂತೂ ನೆನೆಯಲಾರದೆ ಇರಲಾರೆ ಅಮ್ಮಾ...

ಕಾಲೇಜು ದಿನಗಳಲ್ಲಿ ಬೆಳಿಗ್ಗೆ ಬೇಗನೆ ಹೋಗಬೇಕೆಂಬ ಕಾರಣಕ್ಕೆ, ನೀನು ನಾಲ್ಕು ಗಂಟೆಗೇ ಎದ್ದು ತಿಂಡಿ ಮಾಡುತ್ತಿದ್ದುದು ನೆನಪಾಗುತ್ತಮ್ಮಾ...
ಕೊಳೆಯಾದ ನನ್ನ ಬಟ್ಟೆಗಳನ್ನು, ಒಂದು ದಿನವೂ ನೀನು ಬೇಸರಿಸದೆ ಒಗೆದು ಹಾಕಿದ್ದೀಯಲ್ಲಾ...
ದೂರದೂರಿಗೆ ಕಾಲೇಜು ಸೇರುವಾಗ ಖುಶಿಯಾಗಿ ಕಳುಹಿಸಿದಳ ಮನಸಿನೊಳು ಬಿಕ್ಕುತ್ತಿದ್ದದ್ದು ನನಗೆ ಕೇಳಿಸುತ್ತಿತ್ತಮ್ಮಾ...

ಇರುಳಲ್ಲೇ ನಿಂತು ನೀ ನನ್ನ ಬಾಳಿನ ಬೆಳಕಿಗೆ ಕಾರಣವಾದೆ...
ಅಮ್ಮಾ..., ಈ ಋಣ ಯಾವ ಜನುಮದಲಿ ತೀರಿಸಲಮ್ಮಾ...?
ನೀ ಇರುಳ ದೀಪ...

7 ಕಾಮೆಂಟ್‌ಗಳು:

  1. ಇರುಳದೀಪವಾದ ಚಂದ್ರನ ಬೆಳದಿಂಗಳಿನಂತೆಯೇ ತಾಯಿಯ ವಾತ್ಸಲ್ಯ. ನಿಮ್ಮ ಲೇಖನದಲ್ಲಿ ತಾಯಿಯ ಬಗೆಗಿನ ನಿಮ್ಮ ಪ್ರೀತಿ ಸುಂದರವಾಗಿ ಅಭಿವ್ಯಕ್ತವಾಗಿದೆ.

    ಪ್ರತ್ಯುತ್ತರಅಳಿಸಿ
  2. ತುಂಬಾ ಭಾವನಾತ್ಮಕವಾಗಿ ಬರೆದಿದ್ದಿರಾ
    ಬಹಳ ಇಷ್ಟವಾಯಿತು

    ಪ್ರತ್ಯುತ್ತರಅಳಿಸಿ
  3. E lehana oduvaga nanage sudden ammana nenapaytu.. avarella bidaru adu namma olleyadakkagi...
    Ammana Preethiyannu tumba chennagi varnisiddira...

    ಪ್ರತ್ಯುತ್ತರಅಳಿಸಿ
  4. ಅಮ್ಮನ ಮಮತೆ ಪ್ರೀತಿ ವಾತ್ಸಲ್ಯದ ಬಗ್ಗೆ ತುಂಬಾ ಚೆನ್ನಾಗಿ ಬರೆದಿದ್ದೀರ....

    ಪ್ರತ್ಯುತ್ತರಅಳಿಸಿ
  5. ನಿಜ ಕಣೋ ತಮ್ಮಾ... "ಅಮ್ಮ ಎಂಬ ಮಾತಿಗಿಂತ ಬೇರೆ ಮಂತ್ರ ಎಲ್ಲಿದೆ .. ಅದು ನೀಡುವ ಶಾಂತಿ ಕಾಂತಿ ಯಾವ ತಾರೆ ರವಿಗಿದೆ.."

    ಪ್ರತ್ಯುತ್ತರಅಳಿಸಿ
  6. sunaath, ಸಾಗರದಾಚೆಯ ಇಂಚರ, Harsha.K, acchu, minchulli ಅಕ್ಕಾ,

    ನಿಮ್ಮ ಪ್ರೋತ್ಸಾಹಕ್ಕೆ ನಾ ಅಭಾರಿ. ಹೀಗೇ ಬರುತ್ತಿರಿ.

    ಹೊಸ ವರುಷದ ಶುಭಾಷಯಗಳೊಂದಿಗೆ,
    ನಲ್ಮೆಯಿಂದ,
    -ಗಿರಿ

    ಪ್ರತ್ಯುತ್ತರಅಳಿಸಿ