
ಗೆಳತಿಯೊಬ್ಬಳು ಊರಿಗೆ ಹೋಗಿ ಮರಳಿ ಬಂದಾಗ ಒಂದಷ್ಟು ಜಿಟಿ-ಜಿಟಿ ಮಳೆಯ ನೆನಪನ್ನು ಹೊತ್ತು ತಂದಿದ್ದಳು. ನೀನೂ ಒಮ್ಮೆ ಹೋಗಿ ಬಾ.. ಆ ಮಳೆಯ ರೌದ್ರತೆಯ ರಮಣೀಯತೆಯನ್ನೂ, ನರ್ತನದ ತೀವ್ರತೆಯನ್ನು ನೋಡಿ ಬಾ... ಅಂತ ಹೇಳಿ, ನನ್ನ ಚಿಕ್ಕಂದಿನ ಮಳೆಯ ಜೊತೆಗಿನ ಚಿತ್ತಾರದ ನೆನಪುಗಳ ಬುತ್ತಿಗೆ ಒರೆಯಿಕ್ಕುವಂತೆ ಮಾಡಿದ್ದಳು.
ಮಳೆಗಾಲದ ಮೊದಲ ದಿನಗಳ ಭಾರೀ ಗುಡುಗಿನ ಸದ್ದಿಗೆ ಹೆದರಿ ಅಮ್ಮನ ಸೆರಗು ಹಿಡಿದದ್ದು, ಅಪ್ಪನ ಎದೆಗೆ ಒರಗಿ ಕಣ್ಣು ಪಿಳಿ ಪಿಳಿ ಮಾಡಿದ್ದು... ಮೊದಲ ಸಲ ಕೋಲ್ಮಿಂಚು ನೋಡಿ ಎರಡೂ ಕೈ ತಟ್ಟಿ ಕೇಕೆ ಹಾಕಿದ್ದು... ಶಾಲೆಗೆ ಹೊಸ ಕೊಡೆ(ಛತ್ರಿ) ಬೇಕೆಂದು ಹಟ ಹಿಡಿದದ್ದು... ಹೊಸ ಕೊಡೆ ಸಿಕ್ಕಾಗ ಅದನ್ನು ಬಿಡಿಸಿ ಮಡಸಿ ಖುಶಿ ಪಟ್ಟಿದ್ದು... ಅದೇ ಖುಶಿಯಲ್ಲಿ ಮಳೆಗಾಗಿ ಕಾದದ್ದು... ಬಿಸಿಲ ಜೊತೆ ಮಳೆ ಬಂದಾತ ’ಕೋಳಿಗೂ ಮಂಗಂಗೂ ಮದುವೆ’ ಅಂತ ಗೆಳೆಯರಲ್ಲಿ ಹೇಳಿ ನಕ್ಕಿದ್ದು... ಬೆಳಗಾದಾಗ ಬೆಚ್ಚಗಿದ್ದ ಬಾನು, ಶಾಲೆಗೆ ಹೊರಡಲನುವಾದಾಗ ತ್ರಿವಿಕ್ರಮನ ಬೇತಾಳನಂತೆ ಬಂದೇ ಬರುವ ಮಳೆ.. ಅದೇ ರೀತಿ ಶಾಲೆಯಿಂದ ಮನೆಗೆ ಹೊರಡಲನುವಾದಾಗ ಆವರ್ತಿಸುವ ಮಳೆರಾಯನ ಆಟ... ಅವನಿಗೊಂದಿಷ್ಟು ಹಿಡಿ ಶಾಪ ಹಾಕುವ ನಮ್ಮ ಗೆಳೆಯರ ಹಿಂಡು... ಆದರೂ ಬೇಸರಿಸದೆ ಆ ಜಡಿ ಮಳೆಯಲ್ಲಿ ಕೊಡೆ ಬಿಡಿಸಿ ಮನೆಗೆ ಹೊರಡೋ ತವಕ... ಎಂಟು ಕಡ್ಡಿಯ ಕೊಡೆಯ ಹಾಡು ಗುನುಗುತ್ತಾ, ಕೊಡೆಯನ್ನು ತಿರುಗಿಸುತ್ತಾ ಪಕ್ಕದಲ್ಲಿ ಬರುವ ಗೆಳೆಯನ ಮೈಗೆ ನೀರು ರಟ್ಟಿಸುತ್ತಾ(ಎರಚುತ್ತಾ)... ಅವನಿಂದ ಎರಚಿಸಿಕ್ಕೊಳ್ಳುತ್ತಾ... ಕಾಲಿನ ಸ್ಲಿಪ್ಪರ್ ಹಿಂಬಾಗಕ್ಕೆ ಸಿಕ್ಕ ಕೆಂಪು ನೀರು ನಮ್ಮ ಬಿಳೀ ಯುನಿಫೋರ್ಮ್ ಅಂಗಿಯ ಬೆನ್ನಿನ ಭಾಗಕ್ಕೆ ಎರಚಿ ಬಿಡಿಸುವ ಚಿತ್ತಾರ... ಹಂದಿಗೆ ಕೊಚ್ಚೆನೀರು ಹೇಗೆ ಇಷ್ಟವೋ ಹಾಗೇ ನಮಗೆ ಇಷ್ಟವಾಗುವ ಮಣ್ಣಿನ ಹಾದಿಯಲ್ಲಿ ಬರುವ ಕೆಂಪನೆಯ ಮಳೆಯನೀರು... ಕಾಲು ಹುಳ ಹಿಡಿಯುತ್ತೆ ಮಾರಾಯ ಅಂತ ಅಕ್ಕನಿಂದ ಬೈಸಿಕ್ಕೊಳ್ಳೋದು... ರಜಾ ದಿನಗಳಲ್ಲಿ ಕಾಗದದ ದೋಣಿಗಳನ್ನು ಮಾಡಿ ನೀರಿಗೆ ಬಿಟ್ಟು ಆಟವಾಡುತ್ತಿದ್ದ ಗೆಳೆಯರ ದಿಂಡು...
ವಾವ್... ಹೀಗೆ ಒಂದೋ ಎರಡೋ.. ಎಷ್ಟೊಂದು ನೆನಪುಗಳು...
ಮಳೆಗಾಲದ ಮೊದಲ ದಿನಗಳಲ್ಲಿ ಕೆಳಗೆ ಬಿದ್ದು ಮೊಳಕೆ ಒಡೆದ ಗೇರುಬೀಜ ತಿನ್ನಲು ನಡೆಯುವ ಪೈಪೋಟಿ... ಆಗಷ್ಟೇ ಬೇಸಗೆಯಲ್ಲಿ ಒಣಗಿಸಿ ಇಡುತ್ತಿದ್ದ ಹಲಸಿನ ಹಪ್ಪಳ ಸುಟ್ಟು ಕೊಡಲು ಅಮ್ಮನ ದಂಬಾಲು ಬೀಳುತ್ತಿದ್ದುದು... ಒಂದೆರಡು ಸುಟ್ಟು ಕೊಟ್ಟು ಆಮೇಲೂ ಬೇಕೆಂದಾಗ ಗದರಿಸುತ್ತಿದ್ದ ಅಮ್ಮ... ಅಮ್ಮನಿಗೆ ಗೊತ್ತಾಗದ ಹಾಗೆ ಅಟ್ಟಕ್ಕೆ ಹೋಗಿ ಹಸಿ ಹಸಿ ಹಲಸಿನ ಹಪ್ಪಳ ತಿನ್ನುತ್ತಿದ್ದ ತುಂಟತನ... ಮಳೆಗಾಲಲ್ಲಿ ನೀರು ಸೋರುತ್ತಿದ್ದ ಮಾಡಿನ ಕೆಳಗಿನ ತೆಂಗಿನ ಕಾಯಿಯಲ್ಲಿರುತ್ತಿದ್ದ ರುಚಿಯಾದ ಬೊಂಡು... ಮನೆಯ ಅಂಗಳದಲ್ಲೇ ಬೆಳೆಸುತ್ತಿದ್ದ ತರಕಾರಿ... ಮುಳ್ಳು ಸೌತೆಯ ಚಿಕ್ಕ ಎಳೆಯನ್ನು ಮನೆಯಲ್ಲಿ ಯಾರೂ ನೋಡದಂತೆ ಕೊಯ್ದು ಬೆಲ್ಲ ಸೇರಿಸಿ ತಿಂದದ್ದು...
ಹೂವಿನ ಗಿಡ ನೆಡಲು ಅಮ್ಮನ ಜೊತೆ ಹೋಗಿ ಕೈ ಕಾಲು ಮಣ್ಣಾಗಿಸಿ ಪಡುತ್ತಿದ್ದ ಖುಷಿ... ವಾವ್... ಆವಾಗ ಆ ಜಡಿ ಮಳೆಗೆ ಒದ್ದೆಯಾದಾಗ ’ನೆಗಡಿ ಶೀತ ಆಗುತ್ತೆ’ ಅಂತ ಗದರಿಸುತ್ತಿದ್ದ ಅಮ್ಮನ ಕಾಳಜಿ... ಮನೆಯ ಪಕ್ಕದ ಬಾವಿಯಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುವ ನೀರಿನ ಮಟ್ಟವನ್ನು ನೋಡಿ ಅಚ್ಚರಿ ಪಟ್ಟದ್ದು... ಗುಡ್ಡೆಯಲ್ಲಿ ಬರುವ ನೀರಿನ ಝರಿಯ ಒರತೆಯ ಬಗ್ಗೆ ವಿಸ್ಮಯದಿಂದ ಅಪ್ಪನನ್ನು ಕೇಳಿದ್ದು... ದಿನದಿಂದ ದಿನಕ್ಕೆ ಹೆಚ್ಚ ಹಸಿರಾಗುವ ಸುತ್ತುಮುತ್ತಲಿನ ಪ್ರಕೃತಿ... ರಾತ್ರೋ ರಾತ್ರೆ ದನದ ಕೊಟ್ಟಿಗೆಯಲ್ಲಿ ’ಅಂಬಾ..’ ಅಂತ ಸಣ್ಣ ನರಳಿಕೆಯೊಂದು ಕೇಳಿದಾಗ.. ಅಮ್ಮ ನೋಡಿ ಬಂದು ನನ್ನನ್ನೂ ಕರೆದುಕ್ಕೊಂಡು ಹೋಗಿ ಕರುವನ್ನು ತೋರಿಸಿದ್ದು...
ಹ ಹ್ಹ ಹ್ಹ್...
ಈ ಮಳೆಯೇ ಹೀಗೆ... ಅವನು ಕೇವಲ ಧರೆಗಿಳಿಯುವ ನೀರಲ್ಲ... ಜೊತೆಗೊಂದಿಷ್ಟು ಹಳೆಯ ನೆನಪನ್ನು ಹೊತ್ತು ತರುವ ಗೆಳೆಯ...
ನಿಮ್ಮ ಬಾಲ್ಯದ ಮಳೆಯ ನೆನಪುಗಳ ಧಾರೆಯನ್ನು ಓದಿ ಖುಶಿಯಾಯಿತು. ನನಗೂ ಸಹ ನನ್ನ ಹಳೆಯ ನೆನಪುಗಳು ಬಿಚ್ಚಿಕೊಂಡವು.
ಪ್ರತ್ಯುತ್ತರಅಳಿಸಿVery nice, Ranjan.
ಪ್ರತ್ಯುತ್ತರಅಳಿಸಿTumba chennagide.
ಪ್ರತ್ಯುತ್ತರಅಳಿಸಿಬಾಲ್ಯದ ಮಳೆಯ ನೆನಪುಗಳ ಧಾರೆ ಇಷ್ಟವಾಯಿತು
ಪ್ರತ್ಯುತ್ತರಅಳಿಸಿಇಳೆಗೆ ಮಳೆಹನಿಯ ಸ್ಪರ್ಶ
ಪ್ರತ್ಯುತ್ತರಅಳಿಸಿಮನದೊಳಗೆ ನೆನಪ ಹನಿ ವರ್ಷ
ಮಳೆ ಹೊತ್ತು ತಂದ ನೆನಪುಗಳನ್ನ ನಮ್ಮೊಂದಿಗೂ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು..
ಮಕ್ಕಳಾಗಿದ್ದಾಗ ಮಳೆಯ ನೆನಪು, ಆನಂದ ಎಲ್ಲವೂ ಚೆನ್ನಾಗಿದೆ.
ಪ್ರತ್ಯುತ್ತರಅಳಿಸಿಲೇಖನ ಓದಿ ನಾನೂ ಒಮ್ಮೆ ಒದ್ದೆ ಆದೆ...!!! :)
ಪ್ರತ್ಯುತ್ತರಅಳಿಸಿಸೂಪರ್ಬ್ ಕಣೋ!! ನೈಜವಾಗಿ ಮೂಡಿಬಂದಿದೆ ನಿನ್ನ ಬರವಣಿಗೆ. Way to Goo!!!
ಪ್ರತ್ಯುತ್ತರಅಳಿಸಿnice one.. Nanagoo malenaadina malegalla nenapaaytu..:-)
ಪ್ರತ್ಯುತ್ತರಅಳಿಸಿ