ಮಂಗಳವಾರ, ಏಪ್ರಿಲ್ 21, 2009

ಯಾಕೆ ಗೆಳತಿ... ನೀ ಹೀಗೆ ಜೀವ ಹಿಂಡುತಿ...?


ಪ್ರಿಯೇ,

ನಿನ್ನ ಮೊದಲ ಸಲ ನೋಡಿದೊಡೆ ನನ್ನ ಮೈ ಪುಳಕಗೊಳ್ಳಲಿಲ್ಲ...ನಿಜ, ಒಪ್ಪಿಕ್ಕೊಳ್ಳುವೆ... 
ನಿನ್ನ ಬಿಳೀ ಬಣ್ಣದ ಚೂಡಿಯಲ್ಲಿನ ಕಪ್ಪು ಚುಕ್ಕೆಗಳು ನಭೋ ಮಂಡಲದ ನಕ್ಷತ್ರಗಳಂತೆ ಕಂಡು ಬರಲಿಲ್ಲ... 
ನಿನ್ನ ಕಿವಿಯಲ್ಲಿ ನೇತಾಡುವ ಬಿಳಿಯ ಮುತ್ತಿನ ಮಣಿಗಳು ನನಗೆ ಜೋಗ್ ಜಲಪಾತದಲ್ಲಿ ಧುಮ್ಮಿಕ್ಕಿ ಬರುವ ಮಂಜಿನ ಕಣಗಳ ಹಾಗೆಯೂ ಕಾಣಲಿಲ್ಲ...  
ನಿನ್ನ ಕಣ್ಣಿನ ಮೇಲೆನ ತೀವಿದ ಹುಬ್ಬುಗಳೂ ನನಗೆ ಕಾಮನ ಬಿಲ್ಲಿನ ಹಾಗೆ ಕಾಣಲಿಲ್ಲ... 
ನಾನೇನು ಮಾಡಲಿ... ನನಗೆ ಹಾಗೆಲ್ಲ ಕಾಣಲಿಲ್ಲ ಎಂಬುದು ನನ್ನಾಣೆ ಸತ್ಯ... 

ನಿನ್ನ ಗುಂಗುರು ಕೂದಲನ್ನು ನೋಡಿ, ಕೂದಲೊಳಗೆ ಹೇನಾಗಬೇಕೆಂದೂ ಅನಿಸಲಿಲ್ಲ... 
ನಿನ್ನ ಮೃದುವಾದ ಕೈಗಳ ನೋಡಿ ಅಮ್ಮ ಕಡೆಯುವ ಮಜ್ಜಿಗೆಯೊಳಗಿನ ಬೆಣ್ಣೆಯ ನೆನಪೂ ಆಗಲಿಲ್ಲ... 
ನಂಗೆ ಗೊತ್ತು, ಹೀಗೆಲ್ಲ ಅನಿಸಿಲ್ಲ ಅಂದ್ರೆ ನಿಂಗೆ ನನ್ನ ಇಷ್ಟ ಅಗೋಲ್ಲಾ ಅಂತ... ನಿನ್ನಲ್ಲಿ ನಾ ಹೇಗೆ ಸುಳ್ಳು ಹೇಳಲಿ...? ನಾನೇನು ಮಾಡಲಿ... ನನಗೆ ಹಾಗೆಲ್ಲ ಅನಿಸಲಿಲ್ಲ ಎಂಬುದು ನಿಜವಾಗಿದ್ದಾಗ...

ನಿನ್ನ ಮೈ ಮಾಟ ನನ್ನ ಆಕಷಿಸಲಿಲ್ಲ... 
ನಿನ್ನ ತುಟಿಗಳ ನೋಡಿ ನಂಗೆ ಚೆರ್ರಿ ಹಣ್ಣಿನ ನೆನಪಾಗಲಿಲ್ಲ... ಕನಿಷ್ಟ ಪಕ್ಷ ಟೊಮೇಟೊ ಹಣ್ಣಿನ ನೆನಪಾದ್ರೂ ಆಗ್ಬೇಕಿತ್ತು... 
ನಿಮ್ಮ ಸೊಂಟ ನೋಡಿದಾಗ ಸಿಂಹಿಣಿಯ ಕಟಿ ನೆನಪಾಗಬೇಕಿತ್ತು... ಅದೂ ಆಗಲಿಲ್ಲ... ಛೇ... ಏನು ಮಾಡಲಿ...?
ನಿನ್ನ ಕೊರಳ ನೋಡಿ ನವಿರಾಗಿ ಮುತ್ತಿಕ್ಕಬೇಕೆಂದು ಅನಿಸಬೇಕಿತ್ತು... ಅದೂ ಅನಿಸಲಿಲ್ಲ...
ಮೊದಲ ನೋಟದಲ್ಲೇ ನೀನು ನನ್ನವಳಗಬೇಕೆಂದು ನಾನು ದಂಬಾಲು ಬೀಳಬೇಕಿತ್ತು... ನಾ ಬೀಳಲಿಲ್ಲ... ನಿಜ...

ಆದ್ರೆ,

ನೀ ನಿನ್ನಲ್ಲಿ ಮಾತನಾಡಿದ ಕ್ಷಣದಿಂದ ನಾ ಬಂದಿ... 
ನನ್ನಲ್ಲೆ ನಿನ್ನೋಳಗೆ ನಾ ಬಂದಿ...
ನಿನ್ನ ನಗುವಿನ ಗೆಲುವಿನಲೇ ನಾ ಬಂದಿ...


ನೆನಪಿದೆಯಾ, ಆ ಮೊದಲ ದಿನ ನಾವು ಸುಮ್ ಸುಮ್ನೇ ಜಗಳ ಆಡಿದ್ದು... ಆ ಮೇಲೆ ಒಂದಾದದ್ದು....?  ಆ ಜಗಳಕ್ಕೆ ನಾ ಬಂದಿ...
ನೇರವಾಗಿ ನೋಡದೆ, ಕುಡಿಗಣ್ಣಿನ ನಸು ನಾಚಿದ ನೋಟಕ್ಕೆ, ನಾ ಅನುಭವಿಸಿದ ಸಂಜೆಗೆಂಪಿನ ಮಧುರ ಭಾವಕ್ಕೆ ನಾ ಬಂದಿ...
ಊರಿನಿಂದ ಬಾಳೆ ಎಲೆಯಲ್ಲಿ ಮಾಡಿದ ಪತ್ರೊಡೆ ತಂದು ನನ್ನ ಕರೆದು ಕೊಟ್ಟ ಆ ನಿನ್ನ ಹೃದಯದ ಆರ್ದ್ರತೆಗೆ ನಾ ಬಂದಿ...

ನಿನ್ನ ಜೊತೆ ಕಳೆದ ಆ ಎರಡು ತಾಸುಗಳೇ ನನಗೆ ಹಾಲು ಚೆಲ್ಲುವ ಬೆಳದಿಂಗಳಾಗಿರುವಾಗ...ಆ ಕ್ಷಣಗಳಿಗೇ ನಾ ಬಂದಿ...
ನಾ ಕಾಪಿ ಹೀರಿದ ಶಬ್ದಕ್ಕೆ ನೀ ನಕ್ಕಾಗ ಮನಸೆಲ್ಲ ಮುತ್ತುಗಳ ಮಾಲೆಯ ನೆನಪಾದಾಗ... ಅವುಗಳಿಗೆ ನಾ ಬಂದಿ...
ಮನಸು ಬೇಸರವಾಗಿದೆಯೆಂದು ನನಗೆ ಫೋನಾಯಿಸುವಾಗ ನಿನ್ನ ದನಿಗೇ ನಾ ಬಂದಿ...

ಆವಾಗಾವಾಗ ಮುಚ್ಚಿ ತೆರೆಯುವ ನಿನ್ನ ಕಣ್ ರೆಪ್ಪೆಗಳ ನಡುವಿನ ಮಿಂಚಿನ ಮಿಡಿತಕ್ಕೆ ನಾ ಬಂದಿ... 
ಮಣಿಯೊಂದು ನಿನ್ನ ಗೆಜ್ಜೆಯಿಂದ ದೂರ ಸರಿದಾಗ, ನಿನಗರಿವಿಲ್ಲದಂತೇ ನಾ ಎತ್ತಿಟ್ಟುಕ್ಕೊಂಡು ರಾತ್ರೆ ನೋಡಿ ಪುಳಕಗೊಡಾಗ, ಆ ಮಣಿಗೇ ನಾ ಬಂದಿ..
ನಿನ್ನಪ್ಪ ಬೈದದ್ದಕ್ಕೆ ನನ್ಹತ್ರ ಬಂದು ತಲೆಯೊರಗಿ ಒಂದು ಹಿಡಿ ಕಣ್ಣೀರಾದಾಗ, ಆ ಕಣ್ಣೀರಿಗೇ ನಾ ಬಂದಿ...

ನಿನ್ನುಸಿರು ನನ್ನ ಕೆನ್ನೆಯ ಬಳಿ ಹಾಯ್ದಾಗ, ಕಣ್ ಮುಚ್ಚಿ ನಾ ಅನುಭವಿಸಿದ ಆ ಕ್ಷಣಗಳಿಗೆ ನಾ ಬಂದಿ... 
ಗಾಳಿಯಲಿ ಹಾರಿ ಬಂದು ನನ್ನ ಮುಖದ ಮೇಲೆ ಮೃದುವಾಗಿ ಸರಿದ ನಿನ್ನ ದುಪ್ಪಟ್ಟಾದ ನೂಲಿನೆಳೆಗಳಿಗೆ ನಾ ಬಂದಿ...
ಸಂಜೆಯಲಿ ಮುಗಿಲ ಮದ್ಯದಲಿ ತೊರೆಯೊಡೆದು ಬಂದ ಸುಧೆಗೆ ಒದ್ದೆಯಾದಾಗ ಆ ಮಳೆರಾಯನ ಕೃಪೆಗೆ ನಾ ಬಂದಿ..

ನಿನ್ನ ಕೈಹಿಡಿದು ಮಳೆಗಾಲದ ತೊರೆಯ ದಾಟುವಾಗ ಆ ಝರಿಯ ಒರೆತಕ್ಕೇ ನಾ ಬಂದಿ... 
ಬಯಲಂಚಿನಲಿ ನಿನ್ನ ಕಾಲುಳುಕಿದಾಗ ನಿನ್ನಾಸರೆಯಾಗುವ ನನ್ನ ಅವಕಾಶಕ್ಕೆ ನಾ ಬಂದಿ...
ಕಣ್ಣಿನಲಿ ಕಸ ಬಿದ್ದು ನನ್ನ ಪರದಾಟ ಕಂಡು ನೀ ಬಂದು ತೆಗೆದಾಗ ನಿನ್ನ ಕರವಸ್ತ್ರಕ್ಕೆ  ನಾ ಬಂದಿ... 

ನೀ ನುಡಿದ ಮಾತುಗಳೇ ನನಗೆ ಹಾಡುಗಳಾದಾಗ...
ನೀ ಹೇಳಿದ ಹಾಡುಗಳೇ ನನಗೆ ಸ್ಪೂರ್ತಿಯಾದಾಗ...
ಮೌನದಲಿ ಮತಾದಾಗ, ನಿನಗೇ ನಾ ಬಂದಿ....

ಇತಿ,
-ನಿನ್ನವನು

19 ಕಾಮೆಂಟ್‌ಗಳು:

  1. ಗಿರಿ, ಅಧ್ಭುತ, ತುಂಬಾ ಸೊಗಸಾಗಿದೆ, ಅದರಲ್ಲೂ ಇ ಕೆಳಗಿನ ಸಾಲುಗಳು ತುಂಬಾ ಹಿಡಿಸಿತು

    ನಿನ್ನ ಕೈಹಿಡಿದು ಮಳೆಗಾಲದ ತೊರೆಯ ದಾಟುವಾಗ ಆ ಝರಿಯ ಒರೆತಕ್ಕೇ ನಾ ಬಂದಿ...
    ಬಯಲಂಚಿನಲಿ ನಿನ್ನ ಕಾಲುಳುಕಿದಾಗ ನಿನ್ನಾಸರೆಯಾಗುವ ನನ್ನ ಅವಕಾಶಕ್ಕೆ ನಾ ಬಂದಿ...
    ಕಣ್ಣಿನಲಿ ಕಸ ಬಿದ್ದು ನನ್ನ ಪರದಾಟ ಕಂಡು ನೀ ಬಂದು ತೆಗೆದಾಗ ನಿನ್ನ ಕರವಸ್ತ್ರಕ್ಕೆ ನಾ ಬಂದಿ...

    ಪ್ರತ್ಯುತ್ತರಅಳಿಸಿ
  2. @ಸಾಗರದಾಚೆಯ ಇಂಚರ

    ಗುರುಮೂರ್ತಿಯವರೇ,
    ನೀವು ಬರಹ ಮೆಚ್ಚಿದ್ದಕ್ಕೆ ಖುಶಿಯಾಯ್ತು... ಕಾಮೆಂಟಿಸಿದ್ದಕ್ಕೆ ಧನ್ಯವಾದಗಳು... ಮತ್ತೊಮ್ಮೆ ಬನ್ನಿ

    ಪ್ರತ್ಯುತ್ತರಅಳಿಸಿ
  3. ಗಿರಿ ಅದ್ಭುತ ಕಲ್ಪನೆ..ಎಂಥ ಭಾಷೆ, ಪದಬಳಕೆ!!? ನಿನ್ನ ಮೈಮಾಟ ಆಕರ್ಷಿಸಲಿಲ್ಲ ಎನ್ನುತ್ತಲೇ ಬದಕು, ಆಸೆ, ಹಂಬಲ, ಕನಸು, ಸಮಸ್ತ ಇಂದ್ರೀಯ ಭಾವಗಳು ಇವೆಲ್ಲವನ್ನೂ ಮೀರಿ ನಿಷ್ಕಲ್ಮಶ ಮನಸ್ಸಿನಿಂದ ಪ್ರೀತಿಸುವ ಪರಿಯನ್ನು ಈ ಕವನದಲ್ಲಿ ಅತ್ಯಂತ ಸೊಗಸಾಗಿ ನಿರೂಪಿಸಿಬಿಟ್ಟಿದ್ದೀರಿ. ಪ್ರೀತಿಯ ಭಾವಗಳನ್ನು ಇಷ್ಟೊಂದು ಚೆನ್ನಾಗಿ ನಿರೂಪಿಸಿದ್ರಲ್ಲಾ... ಶಹಭಾಷ್ ಗಿರಿ.

    "ಪ್ರೀತಿಯೊಂದೇ ನಮ್ಮ ಹೃದಯವನ್ನು ಮಾತಿಗೆ ಅತೀತವಾದ ಸಮಾಧಾನದಿಂದ ಸಂತೃಪ್ತಿಯಿಂದ ಬಿಮ್ಮನೆ ಬೆಚ್ಚಗೆಗೊಳಿಸುತ್ತದೆ. ಅದೂ ಪಡೆಯುವುದಕ್ಕಿಂತಲೂ ಕೊಡುವುದರಲ್ಲಿ ಹೆಚ್ಚು! ಮಿಕ್ಕದೆಲ್ಲ ಮಿಥ್ಯ, ಪ್ರೀತಿಯೊಂದೇ ಸತ್ಯ" ಗೌರೀಶ ಕಾಯ್ಕಿಣಿ ಅವರ ಈ ಸುಂದರ ಸಾಲುಗಳು ನೆನಪಾಗುತ್ತವೆ. ಇನ್ನಷ್ಟು ಬರೆಯಿರಿ. ಶುಭವಾಗಲೀ.

    ಪ್ರತ್ಯುತ್ತರಅಳಿಸಿ
  4. @shreevidya
    ಶ್ರೀವಿದ್ಯಾ..
    ನೀವು ಬರಹವನ್ನು ಮೆಚ್ಚಿದ್ದಕ್ಕೆ ಖುಶಿಯಾಯ್ತು... ಪತ್ರಿಕೆ ಪುರವಣಿಗಳಲ್ಲಿ ಕಾಣಲು ನಿಮಗಿರುವ ಹಂಬಲಕ್ಕೆ ನಾನು ಅಭಾರಿ... ಕಾಮೆಂಟಿಸಿದ್ದಕ್ಕೆ... ಧನ್ಯವಾದಗಳು...

    @yathi
    ಯತಿ...
    ಕಾಮೆಂಟಿಸಿದ್ದಕ್ಕೆ ಧನ್ಯವಾದಗಳು...

    @ಅನಾಮಧೇಯ
    ಅನಾಮಧೇಯರಿಗೆ ನಮಸ್ಕಾರಗಳು...
    ನೀವು ಬರಹ ಮೆಚ್ಚಿದ್ದಕ್ಕೆ ಹಾಗು ಅದರ ಭಾವವನ್ನು ಗುರುತಿಸಿ ಪ್ರೊತ್ಸಹಿಸಿದ್ದಕ್ಕೆ, ನಾನು ಅಭಾರಿ ನಿಮಗೆ... ಜೊತೆಗೆ ಗೌರೀಶ ಕಾಯ್ಕಿಣಿಯವರ ಸುಂದರವಾದ ಸಾಲುಗಳನ್ನು ಹೇಳಿ, ನನ್ನನ್ನು ಹರಸಿದ್ದಕ್ಕೆ ಧನ್ಯವಾದಗಳು...
    ನಿಮ್ಮ ನಾಮಧೇಯವನ್ನು ತಿಳಿಸಿದ್ದರೆ,ಇನ್ನೂ ಹೆಚ್ಚು ಖುಶಿಯಾಗುತ್ತಿತ್ತು... ಬಹುಶ: ಕಾಮೆಂಟಿಸುವ ಭಾವಂತದಲ್ಲಿ ಮರೆತಿರಬಹುದೇನೋ ಎಂದೆನಿಸುತ್ತದೆ... ಮತ್ತೊಮ್ಮೆ ಬನ್ನಿ...

    -ಗಿರಿ

    ಪ್ರತ್ಯುತ್ತರಅಳಿಸಿ
  5. ಗಿರಿ,

    ನಿಮ್ಮ ಈ ಲೇಖನ ಪದ್ಯವೋ, ಗದ್ಯವೋ..ಕಾವ್ಯವೋ ನಾನರಿಯೇ...ಅದರೆ ಅದರ ಅರ್ಥ ಅರಿಯಬಲ್ಲೆ...

    ಮೊದಲ ಭಾಗ ನೀವು ಬರೆದಿರುವುದು ಸಂಪೂರ್ಣ ಸುಳ್ಳು...

    ಮನಸ್ಸಿಗೆ ಬಂದ ಭಾವನೆಗಳನ್ನೆಲ್ಲಾ ಅದು ನಾನಾಗಲಿಲ್ಲ..ನಾನಾಗಲಿಲ್ಲ..ಅಂತ ಹೇಳಿದರೆ ಹೇಗೆ...ಬಂದ ಭಾವನೆಗಳನೆಲ್ಲಾ ಅನುಭವಿಸಿದ ನಾನಾಗಲಿಲ್ಲವೆನ್ನುವುದು ಸುಳ್ಳು...

    ನಿಜ ಒಪ್ಪಿಕೊಳ್ಳಿ...ನಾವೇನು ಕಿತ್ತುಕೊಳ್ಳುವುದಿಲ್ಲ...

    ಮತ್ತೆ ಎರಡನೇ ಭಾಗದಲ್ಲಿ ಕೆಲವು ಸಾಲು ಇಷ್ಟವಾದವು...

    "ಮಣಿಯೊಂದು ನಿನ್ನ ಗೆಜ್ಜೆಯಿಂದ ದೂರ ಸರಿದಾಗ, ನಿನಗರಿವಿಲ್ಲದಂತೇ ನಾ ಎತ್ತಿಟ್ಟುಕ್ಕೊಂಡು ರಾತ್ರೆ ನೋಡಿ ಪುಳಕಗೊಡಾಗ, ಆ ಮಣಿಗೇ ನಾ ಬಂದಿ.."

    ಈ ಸಾಲಿನಲ್ಲಿ ಮಣಿಗೇ ಬಂದಿಯಾದಿ ರಾತ್ರಿಯೆಲ್ಲಾ ನಿದ್ರೆ ಮಾಡದೇ ಏನು ಮಾಡಿದ್ರಿ ಅಂತಾನು ಬರೆದರೆ ನಮಗೂ ಗೊತ್ತಾಗುತ್ತೆ..ಇದು ಎಲ್ಲಾ ಸಾಲುಗಳಿಗೂ ಅನ್ವಯವಾಗುತ್ತೆ...

    ಹೀಗೆ ಬರೆಯುತ್ತಿರಿ ಧನ್ಯವಾದಗಳು..

    ಪ್ರತ್ಯುತ್ತರಅಳಿಸಿ
  6. ನಮಸ್ಕಾರ ಶಿವಣ್ಣಾ,

    ನೀವು ನನ್ನ ಬರಹವನ್ನು ವಿಮರ್ಶಿಸಿ ಕಾಮೆಂಟಿಸಿದ್ದಕ್ಕೆ ನಾನು ಅಭಾರಿ...

    ಬರಹಗಳ ಆಕರವನ್ನು, ಅದರ ಚೌಕಟ್ಟನ್ನು ಕುರಿತು ನಾನು ಓದಿಲ್ಲ/ತಿಳಿದಿಲ್ಲವಾದ್ದರಿಂದ ಈ ಬರಹ ಗದ್ಯ, ಕಾವ್ಯ ಅಥವಾ ಇನ್ನಾವುದೇ ಇತರ ರೀತಿಯಲ್ಲಿ ಒಳಪಟ್ಟಿದೆಯೇ ಎಂದು ನನಗೆ ಗೊತ್ತಿಲ್ಲ. ಕೇವಲ ನನಗನಿಸಿದ್ದನ್ನು, ನನ್ನ ಭಾವನೆಗಳನ್ನು ಬರಹ ರೂಪದಲ್ಲಿರಿಸಿದ್ದೇನೆ, ಅಷ್ಟೇ. ನೀವು ಅದರ ಅರ್ಥ ಅರಿಯಬಲ್ಲೆಯೆಂದು ಹೇಳಿದ್ದು ಕೇಳಿ ಖುಷಿಯಾಯ್ತು.

    ನಾನು ಬರೆದಿರುವ ಪೂರ್ವಾರ್ಧ ಭಾಗ ಸಂಪೂರ್ಣ ಸುಳ್ಳೆಂದು ನೀವು ಕಂಡುಹಿಡಿದಿರುವುದನ್ನು ನೋಡಿದಾಗ ನೀವೊಬ್ಬ ಒಳ್ಳೆಯ ಪತ್ತೇದಾರರೂ ಹೌದೆಂದು ಗೊತ್ತಾಗುತ್ತಿದೆ. ಶಿವಣ್ಣಾ, ನಿಮ್ಮ ಬಹುಮುಖ ಪ್ರತಿಭೆಗೆ ನನ್ನ ಅಭಿನಂದನೆಗಳು...!

    ನಮಗೆ ಬರುವ ಭಾವನೆಗಳು, ಭಾವನೆಗಳ ಪರಿಧಿಗಳು ಕೇವಲ ನಮ್ಮ ಅನುಭವದಿಂದ ಮಾತ್ರ ಬಂದಿರಬೇಕೆಂದು ನನಗೆ ಅನಿಸುತ್ತಿಲ್ಲ. ಇನ್ನೊಬ್ಬರ ಮಾತುಗಳು, ಕೃತಿಗಳು, ಭಾವಗೀತೆಗಳು, ಸಿನಿಮಾ, ಸಿನಿಮಾ ಹಾಡುಗಳು ಇವೆಲ್ಲಾ ಒಂದಲ್ಲಾ ಒಂದು ರೀತಿಯಲ್ಲಿ ನಮ್ಮನ್ನು ಅನುಭವವಾಗಿರದ/ಅನುಭವಿಸಲಾಗದ ಭಾವನೆಗಳು ಬರುವಂತೆ ಮಾಡುತ್ತವೆ ಎಂದು ನನ್ನ ಅನಿಸಿಕೆ. ನನ್ನ ವಯಕ್ತಿಕ ಭಾವನೆಗಳಲ್ಲಿ ಇದು ಬಹಳಷ್ಟು ಸತ್ಯ. ಈ ಮಾದ್ಯಮಗಳಿಂದಾಗಿ "ನಾನಾಗಲಿಲ್ಲ..." ಎಂದಿರುವ ಭಾವಗಳು ಲೋಕದಲ್ಲಿ ಜನಪ್ರಿಯವಾಗಿವೆ ಎಂದು ನನಗೆ ಅನಿಸಿರಬಹುದಲ್ಲಾ...?!
    ನಾನಾಗಲಿಲ್ಲ ಅನ್ನುವ ಭಾವವನ್ನೂ ನಾನು ಅನುಭವಿಸಿರಲೇಬೇಕೇ? ಶಿವಣ್ಣಾ, ಭಾವನೆಗಳು ನಿಜವಾಗಿರಬೇಕೆಂದೇನೂ ಇಲ್ಲ. ಈವಾಗ ನಾನು ಅಣ್ಣಾ ಎಂದು ನಿಮ್ಮನ್ನು ಕರೆಯುವುದೂ ಒಂದು ಭಾವನೆಯಲ್ವಾ? ನಿಜ... ...

    ನೀವು ಎರಡನೇ ಭಾಗದಲ್ಲಿ ಕೆಲವು ಸಾಲುಗಳನ್ನು ಇಷ್ಟಪಟ್ಟಿದ್ದನ್ನು ಕೇಳಿ ಖುಷಿಯಾಯ್ತು. ನೀವು ಈ ಮೊದಲು ನನ್ನ ಬರಹವೊಂದಕ್ಕೆ "ಬರಹ ತುಂಬಾ ಉದ್ದವಾಗಿದೆ, ಓದುಗರು ಚಿಕ್ಕದನ್ನು ಇಷ್ಟಪಡುತ್ತಾರೆ" ಎಂದು ಸಲಹೆ ನೀಡಿದ್ದನ್ನು ಈ ಬರಹ ಬರೆಯುವಾಗ ಮನಸ್ಸಿನಲ್ಲಿಟ್ಟಿದ್ದರಿಂದ, ಬರೆಯಲು ಬಹಳಷ್ಟಿದ್ದರೂ, ಬರಹ ಚಿಕ್ಕದಾಗಿರಲಿ ಎಂದು ಉತ್ತರಾರ್ಧ ಭಾಗದ ಸಾಲುಗಳಿಗೆ ಪೂರ್ಣವಿರಾಮ ಚಿನ್ಹೆಯನ್ನು ಬಳಸದೇ, ಸಾಲುಗಳಿಗೆ ಮೂರು ಚುಕ್ಕಿಗಳನ್ನಿಟ್ಟು ಓದುಗರ ಭಾವಕ್ಕೆ ಸಾಲುಗಳ ಬಾಕಿಯನ್ನಿರಿಸಿರುವುದರಿಂದ, ವಾಕ್ಯಗಳನ್ನು ಪೂರ್ಣಗೊಳಿಸಿರಲಿಲ್ಲ.

    ಕಾಮೆಂಟಿಸಿದ್ದಕ್ಕೆ ಧನ್ಯವಾದಗಳು... ಮತ್ತೊಮ್ಮೆ ಬನ್ನಿ...
    -ಗಿರಿ

    ಪ್ರತ್ಯುತ್ತರಅಳಿಸಿ
  7. ಅದ್ಬುತ ಬರಹ, ಓದುತ್ತ ಓದುತ್ತ ಅದೇ ಎಳೆದು ಕೊಂಡ್ ಹೋಯ್ತು

    ನಂಗು ಮೇಲ್ಗಡೆ ಶಿವ ಅವ್ರು ಹೇಳಿದ ಹಾಗೆ ಭಾವನೆಗಳು.. ಎಲ್ಲ ನಾನಾಗಲಿಲ್ಲ ಅಂತ ಹೇಳಿದ್ದು ಸ್ವಲ್ಪ ಸುಳ್ಳು ಅಂತ ಅನಿಸ್ತು

    ಆದರು ಯಾವ ಭಾವನೆಗಳು ನಿನ್ನನು ಬಂದಿ ಮಾಡಿತ್ತೋ, ಅವೆಲ್ಲ ತುಂಬಾ realistic ಆಗಿತ್ತು. Excellent.

    Keep up your Writing skills.

    ಪ್ರತ್ಯುತ್ತರಅಳಿಸಿ
  8. ಹೂವಿನ ಎಸಳನ್ನು ಪೋಣಿಸಿದಂತೆ ಬರೆದ ಸುಂದರ ಪ್ರೇಮ ಬರಹ ಮನಕ್ಕೆ ಮುದನೀಡಿತ್ತು. 'ನಾನಾಗಲಿಲ್ಲ'ಎನ್ನುತ್ತಲೇ ಹೆಣ್ಣಿನ ಅಂತರ್ಯದ ಸೌಂದರ್ಯದೊಂದಿಗೆ ಬಂಧಿಯಾದ ಪರಿಯನ್ನು ವಿವರಿಸಿದ ಪರಿ ಅನನ್ಯ. ಇಲ್ಲಿ ಸುಳ್ಳು-ಸತ್ಯಗಳ ಬಿಂಬವಿಲ್ಲ, ಬಹಿರಂಗದ ಆಕರ್ಷಣೆಗಿಂತ ಅಂತರಂಗದ ನೈಜ ಪ್ರೀತಿಯನ್ನು ಕಂಡ ಹುಡುಗನ ನಿರ್ಮಲ ಪ್ರೇಮವಿದೆ. ನೋಟಗಳಿಗೆ ಸಿಕ್ಕಿದ್ದು, ಕಿವಿಗೆ ಕೇಳಿಸಿದ್ದು..ಎಲ್ಲವೂ ನಿಮ್ಮ ಅದ್ಭುತ ಪರಿಕಲ್ಪನೆಗೆ ಹಿನ್ನೆಲೆ ಒದಗಿಸಿವೆ. ಅಭಿನಂದನೆಗಳು
    -ಧರಿತ್ರಿ

    ಪ್ರತ್ಯುತ್ತರಅಳಿಸಿ
  9. @ambarish
    ಅಂಬರೀಶ್,
    ಕಾಮೆಂಟಿಸಿದ್ದಕ್ಕೆ ಹಾಗೂ ವಿಮರ್ಶೆಗೆ ಧನ್ಯವಾದಗಳು... ಮತ್ತೊಮ್ಮೆ ಬನ್ನಿ

    @Narendra P. Sastry
    ನರೇಂದ್ರ,
    ಕಾಮೆಂಟಿಸಿದ್ದಕ್ಕೆ ಧನ್ಯವಾದಗಳು... ಮತ್ತೊಮ್ಮೆ ಬನ್ನಿ

    @ಧರಿತ್ರಿ
    ಧರಿತ್ರಿಯವರೇ,
    ಈ ಬರಹದಲ್ಲಿ ನಿಜ ಮತ್ತು ಸುಳ್ಳುಗಳ ಬಳಕೆ ಮಾಡಿರುವುದು, ನೀವು ಹೇಳಿದ ಹಾಗೇ ಹೆಣ್ಣಿನ ಬಾಹ್ಯ ಸೌಂದರ್ಯಕ್ಕಿಂತ ಮೇಲಿನ ಭಾವನೆಯ ಸಮಮರಸದತ್ತ ಇರುವ ದೃಷ್ಟಿಕೋನದಿಂದ ಮಾತ್ರ. ಕಾಮೆಂಟಿಸಿದುದಕ್ಕೆ ಧನ್ಯವಾದಗಳು... ಮತ್ತೊಮ್ಮೆ ಬನ್ನಿ

    @Radhu
    ರಾಧು,
    ನಿಮ್ಮ ಹೆಮ್ಮೆಗೆ ನಾನು ಅಭಾರಿ... ಕಾಮೆಂಟಿಸಿದ್ದಕ್ಕೆ ಧನ್ಯವಾದಗಳು... ಮತ್ತೊಮ್ಮೆ ಬನ್ನಿ

    -ಗಿರಿ

    ಪ್ರತ್ಯುತ್ತರಅಳಿಸಿ
  10. ಎಲ್ಲೋ ನಡೆದು ಹೋಗುತ್ತಿದ್ದಾಗ ಧಕ್ಕನೆ ನಿಂತು, ಅರೆ! ಎಲ್ಲೋ ನೋಡಿದ್ದೀನಲ್ಲಾ ಎನ್ನುವಂತಿದೆ ಬ್ಲಾಗ್.
    ಬೆಂಗಳೂರು ಮಳೆಯಲ್ಲಿ ನೆಂದು ನಿಮ್ಮ ಇರುಳದೀಪದ ಕೆಳಗೆ ಬೆಚ್ಚನೆಯ ಪದಗಳ ಮೋರೆ ಹೋದೆ. ಹೀಗೇ ಬರಹವಾಗುತ್ತಿರಿ...

    ಪ್ರತ್ಯುತ್ತರಅಳಿಸಿ
  11. @ಏಕಾಂತ
    ಲಕ್ಶ್ಮೀಕಾಂತ,
    ಪ್ರೊತ್ಸಾಹಿಸಿದ್ದಕ್ಕೆ ಧನ್ಯವಾದಗಳು. ಹೀಗೇ ಬರುತ್ತಾ ಇರಿ...

    ಪ್ರತ್ಯುತ್ತರಅಳಿಸಿ