ಅಕ್ಕ ತುರಾತುರಿಯಲ್ಲಿ ನಿನ್ನೆ ಬೆಳ್ಳಂ-ಬೆಳಗ್ಗೆದ್ದು ಊರಿಗೆ ಹೋಗಿದ್ದಾಳೆ. ಸುಮಾರು ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಅಕ್ಕನ ಮಗಳು ಭೂಮಿಕಾಳ ಶಾಲಾ ಫೀಸ್ ಕಟ್ಟುವ ಪ್ರಹಸನ ಅಚಾನಕ್ ಆಗಿ ನನ್ನ ಹೆಗಲ ಮೇಲೆ ಬಿದ್ದಿತ್ತು. ಶಾಲೆಗೆ ಹೋದಾಗ ೫ ಅಡಿ ಉದ್ದದ ಎಕ್ವೇರಿಯಂ ಕಂಡು ವಿಸ್ಮಿತನಾಗಿ, ಅದರ ಪಕ್ಕದಲ್ಲೇ ಕುಳಿತೆ. ಬಣ್ಣ ಬಣ್ಣದ ಮೀನುಗಳನ್ನು ನೋಡಲು ಚಂದವೋ ಚಂದ.
ಅಹಾ... ಕಪ್ಪು ಬಣ್ಣದ ಆ ಸುಂದರಿಯಾದ ಬಳಕುವ ಮೈಯ, ಮಿಟುಕುವ ಕಣ್ಣುಗಳ ಮೀನನ್ನು ನೋಡುತ್ತಿದ್ದಂತೆ ನನ್ನ ಮೈಯಲ್ಲಿ ಮಿಂಚೊಂದು ಝುಂ ಎಂದಿತು! ಅವಳು ಯರನ್ನೋ ಹುಡುಕುತ್ತಿದ್ದಂತೆ ತೋರುತ್ತಿತ್ತು... ನನ್ನನ್ನೇ...? ಇಲ್ಲಪ್ಪಾ... ಇರಲಿಕ್ಕಿಲ್ಲ... ನನ್ನದೇನಿದ್ದರೂ ವನ್ ವೇ...! ಅವಳ ರೆಕ್ಕೆಗಳ ಬಡಿತದ ಅಲೆಗಳಿಗೆ ನಾ ಎದೆಯೊಡ್ಡಬೇಕೆನಿಸುತ್ತಿತ್ತು. ಅಬ್ಬಾ..., ಶಾಲೆಯಲ್ಲಿರುವ ಅರಿವಾಗಿ ಭಾವ ತೀವ್ರತೆಗೆ ತಡೆಯೊಡ್ಡಿತ್ತು...!
ಅದೋ ಅಲ್ಲಿ..., ಕಾರಿನ ಚಕ್ರದ ಕೆಳಗೆ ಬಿದ್ದು ಚಪ್ಪಟೆಯಾದ ಪೆಪ್ಸಿ ಬಾಟಲಿಯಂತಿರುವ ಮೈಯ ತುಂಬಾ ಕಪ್ಪು-ಬಿಳಿ ಪಟ್ಟೆಯ ಮೀನೊಂದು ಸೂಪರಿಟೆಂಡೆಂಟ್ ನಂತೆ ಕೈ ಕಟ್ಟಿ ಮೆಲ್ಲ-ಮೆಲ್ಲನೆ ಠೀವಿಯಿಂದ ಬಂದು ಹೋಯಿತು...
Finding nemo ಚಲನಚಿತ್ರದ nemo ಥರವಿರುವ ಒಂದು ಪುಟ್ಟ ಮೀನು ಅಲ್ಲಲ್ಲಿ ಬಗ್ಗಿ ನೋಡುತ್ತಾ, ಏನೋ ಹೊಸತನವನ್ನು ಹುಡುಕುತ್ತಿರುವಂತೆ ಓಡಾಡುತ್ತಿತ್ತು.
ನೋಡ- ನೋಡುತ್ತಿದ್ದಂತೆ ತೊಂಡೆಕ್ಕಾಯಿಯಷ್ಟಕ್ಕಿರುವ ಕೇಸರಿ ಬಣ್ಣದ ಮೀನೊಂದು ನನ್ನೆಡೆಗೆ ಬಂದು, ಗುಲು-ಗುಂಜಿಯಷ್ಟಕ್ಕಿರುವ ಅದರ ಬಾಯಿಯಿಂದ ಪುಂಖಾನು-ಪುಂಖವಾಗಿ ಗೊಣಗತೊಡಗಿತು. ಗಾಜಿನ ತಡೆಗೋಡೆಯಿದ್ದಿದ್ದರಿಂದ ನನಗೆ ಅಸ್ಪಷ್ಟವಾಗಿ ಕೇಳಿಸುತ್ತಿತ್ತಷ್ಟೆ. ಬಹುಶ: ಅದರ ಸ್ವಾತಂತ್ರ ಕಳೆದುಕ್ಕೊಂಡದ್ದಕ್ಕೆ ಅದು ಬಯ್ಯುತ್ತಿದ್ದಿರಬೇಕು. "ಲೋ... ನನ್ನ ಸ್ವಾತಂತ್ರಹರಣವನ್ನು ಆಸ್ವಾದಿಸುವ ನಿನ್ನ ಜನುಮಕ್ಕೆ ನನ್ನ ಧಿಕ್ಕಾರವಿರಲಿ... ಇನ್ನೊಂದು ಜನ್ಮಾಂತ ನನಗೇನಾದ್ರು ಇದ್ರೆ, ನಿನ್ನನ್ನೂ ಇದೇ ರೀತಿ ಬಂಧನದಲ್ಲಿರಿಸುತ್ತೇನೆ..." ಮುಂದೇನೇನೋ ಭಾಷಾ ನಿಘಂಟುವಿನ ಹೊರಗಿನಿಂದ ಶಬ್ದಗಳ ಬಳಕೆ ಮಾಡಿ ಬೈದದ್ರಿಂದ ಇಲ್ಲಿ ಹೇಳಲಾಗ್ತಿಲ್ಲ... ಹೆನ್ರಿ ಶಾರ್ರಿಯರ್ ನ ಪಾಪಿಲೋನ್ ನೆನಪಿಗೆ ಬಂದಿತ್ತು.
ವಿಧಿಯ ಹೊರೆಗಳನು ತಪ್ಪಿಸಿಕೊಳುವನೆಲ್ಲಿಹನು?
ಬೆದರಿಕೆಯನದರಿಂದ ನೀಗಿಪನು ಸಖನು |
ಎದೆಯನುಕ್ಕಾಗಿಸಾನಿಸು ಬೆನ್ನ, ತುಟಿಯ ಬಿಗಿ
ವಿಧಿಯಗಸ, ನೀಂ ಕತ್ತೆ - ಮಂಕುತಿಮ್ಮ ||
ನಾನು ನನ್ನಿಂದಾದ ಸಮಾಧಾನ ಹೇಳಿದೆ ಆ ಮೀನಿಗೆ...
ನಿನ್ನ ವಿಧಿಯೊಳಗೆ ನೀ ಕತ್ತೆ, ನನ್ನ ವಿಧಿಯೊಳಗೆ ನಾನೂ...
ಸಮಾಧಾನದಿಂದಿರುವ ಮನಸ್ಸು ಯಾವಾಗಲೂ ಸಂತೋಷದಲ್ಲಿರುತ್ತದೆ! ಅಲ್ಲವೆ,ಗಿರಿ?
ಪ್ರತ್ಯುತ್ತರಅಳಿಸಿVery nice. I liked it. Good imagination
ಪ್ರತ್ಯುತ್ತರಅಳಿಸಿವಿಧಿಯಾಟ ಬಲ್ಲವರಾರು ಗಿರಿ? ತುಂಬಾ ಅರ್ಥಪೂರ್ಣ ಬರಹ.
ಪ್ರತ್ಯುತ್ತರಅಳಿಸಿ-ಧರಿತ್ರಿ
ಕಾರಿನ ಚಕ್ರದ ಕೆಳಗೆ ಬಿದ್ದು ಚಪ್ಪಟೆಯಾದ ಪೆಪ್ಸಿ ಬಾಟಲಿಯಂತಿರುವ... ಸೂಪರಿಟೆಂಡೆಂಟ್ ನಂತೆ ಕೈ ಕಟ್ಟಿ ಮೆಲ್ಲ-ಮೆಲ್ಲನೆ ಠೀವಿಯಿಂದ... ಹೀಗೆ ಬಳಸಿದ ಉಪಮೆಗಳು ಸಕತ್ತಾಗಿವೆ, ನನಗೂ ಹೀಗೆ ಮೀನುಗಳು ನಮ್ಮೋಂದಿಗೆ ಮಾತಾಡುತ್ತಿವೆಯೇನೊ ಅನಿಸುತ್ತಿತ್ತು, ನಮ್ಮ ಹಳೆ ಅಫೀಸಿನ ಅಕ್ವೇರಿಯಂ ನೋಡುತ್ತಿದ್ದಾಗ...
ಪ್ರತ್ಯುತ್ತರಅಳಿಸಿಸುನಾತ್, ಸ್ಮಿತಾ, ಧರಿತ್ರಿ ಹಾಗೂ ಪ್ರಭುರಾಜ್...
ಪ್ರತ್ಯುತ್ತರಅಳಿಸಿಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.. ಮತ್ತೊಮ್ಮೆ ಬನ್ನಿ...
-ಗಿರಿ