ಬುಧವಾರ, ಮೇ 23, 2012

ಮೌಲ್ಯ

ಮಳೆಗಾಲದ ಒರತೆಯಂತೆ ಧಾರಾಳ ಕೊಟ್ಟಾಗ
ನೆನಪಿರದ ಮೌಲ್ಯ;ನೀರಿನಂತೆ ಪ್ರೀತಿ...
ಧರೆಯೆಲ್ಲ ಬಸಿದು, ಬಾಯೆಲ್ಲ ಒಣಗಿ
ಕತ್ತಲಾದಾಗ ನೆನಪಾಯಿತೇ?!

ಸೋಮವಾರ, ಮೇ 14, 2012

ವಾಸ್ತವ

ನೀರು ನಿಂತ ನೆಲದ ಮೇಲೆ ಹಸಿರು ಬೆಳೆದಿದೆ
ಗಾಳಿ ತಂದ ಕಂಪಿನಲ್ಲಿ ಮನವು ನಲಿದಿದೆ
ರಾತ್ರಿ ಬಂದ ನಿದ್ದೆಯಲ್ಲಿ ಕನಸು ಕಂಡಿದೆ, 
ಆದ್ರೆ, 
ಅಪ್ರೈಸಲ್ ಬಂದ ಲೆಟರ್ ನಲ್ಲಿ ಮುಖ ಒರಸಿದೆ...!!

ಮಂಗಳವಾರ, ಫೆಬ್ರವರಿ 14, 2012

ಸಂಗೀತ



ಒಲವಿಗೊಂದು ಕುಂಚ ಹಿಡಿದು
ಉಬ್ಬು ತಬ್ಬು ತಿದ್ದಿ ತೀಡಿ
ನಲಿವಿಗೊಂದು ಏಣಿಯಿಟ್ಟು
ಕುಂಟೆ ಬಿಲ್ಲೆ ಆಟ ಆಡಿ
ಜತೆಗೆ ಮೆರೆದ ಕ್ಷಣ ಕ್ಷಣ...

ಮಂಗಳವಾರ, ಜುಲೈ 20, 2010

ಜೊತೆಗೊಂದಿಷ್ಟು ಹಳೆಯ ನೆನಪನ್ನು ಹೊತ್ತು ತರುವ ಗೆಳೆಯ



ಗೆಳತಿಯೊಬ್ಬಳು ಊರಿಗೆ ಹೋಗಿ ಮರಳಿ ಬಂದಾಗ ಒಂದಷ್ಟು ಜಿಟಿ-ಜಿಟಿ ಮಳೆಯ ನೆನಪನ್ನು ಹೊತ್ತು ತಂದಿದ್ದಳು. ನೀನೂ ಒಮ್ಮೆ ಹೋಗಿ ಬಾ.. ಆ ಮಳೆಯ ರೌದ್ರತೆಯ ರಮಣೀಯತೆಯನ್ನೂ, ನರ್ತನದ ತೀವ್ರತೆಯನ್ನು ನೋಡಿ ಬಾ... ಅಂತ ಹೇಳಿ, ನನ್ನ ಚಿಕ್ಕಂದಿನ ಮಳೆಯ ಜೊತೆಗಿನ ಚಿತ್ತಾರದ ನೆನಪುಗಳ ಬುತ್ತಿಗೆ ಒರೆಯಿಕ್ಕುವಂತೆ ಮಾಡಿದ್ದಳು.

ಮಳೆಗಾಲದ ಮೊದಲ ದಿನಗಳ ಭಾರೀ ಗುಡುಗಿನ ಸದ್ದಿಗೆ ಹೆದರಿ ಅಮ್ಮನ ಸೆರಗು ಹಿಡಿದದ್ದು, ಅಪ್ಪನ ಎದೆಗೆ ಒರಗಿ ಕಣ್ಣು ಪಿಳಿ ಪಿಳಿ ಮಾಡಿದ್ದು... ಮೊದಲ ಸಲ ಕೋಲ್ಮಿಂಚು ನೋಡಿ ಎರಡೂ ಕೈ ತಟ್ಟಿ ಕೇಕೆ ಹಾಕಿದ್ದು... ಶಾಲೆಗೆ ಹೊಸ ಕೊಡೆ(ಛತ್ರಿ) ಬೇಕೆಂದು ಹಟ ಹಿಡಿದದ್ದು... ಹೊಸ ಕೊಡೆ ಸಿಕ್ಕಾಗ ಅದನ್ನು ಬಿಡಿಸಿ ಮಡಸಿ ಖುಶಿ ಪಟ್ಟಿದ್ದು... ಅದೇ ಖುಶಿಯಲ್ಲಿ ಮಳೆಗಾಗಿ ಕಾದದ್ದು... ಬಿಸಿಲ ಜೊತೆ ಮಳೆ ಬಂದಾತ ’ಕೋಳಿಗೂ ಮಂಗಂಗೂ ಮದುವೆ’ ಅಂತ ಗೆಳೆಯರಲ್ಲಿ ಹೇಳಿ ನಕ್ಕಿದ್ದು... ಬೆಳಗಾದಾಗ ಬೆಚ್ಚಗಿದ್ದ ಬಾನು, ಶಾಲೆಗೆ ಹೊರಡಲನುವಾದಾಗ ತ್ರಿವಿಕ್ರಮನ ಬೇತಾಳನಂತೆ ಬಂದೇ ಬರುವ ಮಳೆ.. ಅದೇ ರೀತಿ ಶಾಲೆಯಿಂದ ಮನೆಗೆ ಹೊರಡಲನುವಾದಾಗ ಆವರ್ತಿಸುವ ಮಳೆರಾಯನ ಆಟ... ಅವನಿಗೊಂದಿಷ್ಟು ಹಿಡಿ ಶಾಪ ಹಾಕುವ ನಮ್ಮ ಗೆಳೆಯರ ಹಿಂಡು... ಆದರೂ ಬೇಸರಿಸದೆ ಆ ಜಡಿ ಮಳೆಯಲ್ಲಿ ಕೊಡೆ ಬಿಡಿಸಿ ಮನೆಗೆ ಹೊರಡೋ ತವಕ... ಎಂಟು ಕಡ್ಡಿಯ ಕೊಡೆಯ ಹಾಡು ಗುನುಗುತ್ತಾ, ಕೊಡೆಯನ್ನು ತಿರುಗಿಸುತ್ತಾ ಪಕ್ಕದಲ್ಲಿ ಬರುವ ಗೆಳೆಯನ ಮೈಗೆ ನೀರು ರಟ್ಟಿಸುತ್ತಾ(ಎರಚುತ್ತಾ)... ಅವನಿಂದ ಎರಚಿಸಿಕ್ಕೊಳ್ಳುತ್ತಾ... ಕಾಲಿನ ಸ್ಲಿಪ್ಪರ್ ಹಿಂಬಾಗಕ್ಕೆ ಸಿಕ್ಕ ಕೆಂಪು ನೀರು ನಮ್ಮ ಬಿಳೀ ಯುನಿಫೋರ್ಮ್ ಅಂಗಿಯ ಬೆನ್ನಿನ ಭಾಗಕ್ಕೆ ಎರಚಿ ಬಿಡಿಸುವ ಚಿತ್ತಾರ... ಹಂದಿಗೆ ಕೊಚ್ಚೆನೀರು ಹೇಗೆ ಇಷ್ಟವೋ ಹಾಗೇ ನಮಗೆ ಇಷ್ಟವಾಗುವ ಮಣ್ಣಿನ ಹಾದಿಯಲ್ಲಿ ಬರುವ ಕೆಂಪನೆಯ ಮಳೆಯನೀರು... ಕಾಲು ಹುಳ ಹಿಡಿಯುತ್ತೆ ಮಾರಾಯ ಅಂತ ಅಕ್ಕನಿಂದ ಬೈಸಿಕ್ಕೊಳ್ಳೋದು... ರಜಾ ದಿನಗಳಲ್ಲಿ ಕಾಗದದ ದೋಣಿಗಳನ್ನು ಮಾಡಿ ನೀರಿಗೆ ಬಿಟ್ಟು ಆಟವಾಡುತ್ತಿದ್ದ ಗೆಳೆಯರ ದಿಂಡು...

ವಾವ್... ಹೀಗೆ ಒಂದೋ ಎರಡೋ.. ಎಷ್ಟೊಂದು ನೆನಪುಗಳು...

ಮಳೆಗಾಲದ ಮೊದಲ ದಿನಗಳಲ್ಲಿ ಕೆಳಗೆ ಬಿದ್ದು ಮೊಳಕೆ ಒಡೆದ ಗೇರುಬೀಜ ತಿನ್ನಲು ನಡೆಯುವ ಪೈಪೋಟಿ... ಆಗಷ್ಟೇ ಬೇಸಗೆಯಲ್ಲಿ ಒಣಗಿಸಿ ಇಡುತ್ತಿದ್ದ ಹಲಸಿನ ಹಪ್ಪಳ ಸುಟ್ಟು ಕೊಡಲು ಅಮ್ಮನ ದಂಬಾಲು ಬೀಳುತ್ತಿದ್ದುದು... ಒಂದೆರಡು ಸುಟ್ಟು ಕೊಟ್ಟು ಆಮೇಲೂ ಬೇಕೆಂದಾಗ ಗದರಿಸುತ್ತಿದ್ದ ಅಮ್ಮ... ಅಮ್ಮನಿಗೆ ಗೊತ್ತಾಗದ ಹಾಗೆ ಅಟ್ಟಕ್ಕೆ ಹೋಗಿ ಹಸಿ ಹಸಿ ಹಲಸಿನ ಹಪ್ಪಳ ತಿನ್ನುತ್ತಿದ್ದ ತುಂಟತನ... ಮಳೆಗಾಲಲ್ಲಿ ನೀರು ಸೋರುತ್ತಿದ್ದ ಮಾಡಿನ ಕೆಳಗಿನ ತೆಂಗಿನ ಕಾಯಿಯಲ್ಲಿರುತ್ತಿದ್ದ ರುಚಿಯಾದ ಬೊಂಡು... ಮನೆಯ ಅಂಗಳದಲ್ಲೇ ಬೆಳೆಸುತ್ತಿದ್ದ ತರಕಾರಿ... ಮುಳ್ಳು ಸೌತೆಯ ಚಿಕ್ಕ ಎಳೆಯನ್ನು ಮನೆಯಲ್ಲಿ ಯಾರೂ ನೋಡದಂತೆ ಕೊಯ್ದು ಬೆಲ್ಲ ಸೇರಿಸಿ ತಿಂದದ್ದು...

ಹೂವಿನ ಗಿಡ ನೆಡಲು ಅಮ್ಮನ ಜೊತೆ ಹೋಗಿ ಕೈ ಕಾಲು ಮಣ್ಣಾಗಿಸಿ ಪಡುತ್ತಿದ್ದ ಖುಷಿ... ವಾವ್... ಆವಾಗ ಆ ಜಡಿ ಮಳೆಗೆ ಒದ್ದೆಯಾದಾಗ ’ನೆಗಡಿ ಶೀತ ಆಗುತ್ತೆ’ ಅಂತ ಗದರಿಸುತ್ತಿದ್ದ ಅಮ್ಮನ ಕಾಳಜಿ... ಮನೆಯ ಪಕ್ಕದ ಬಾವಿಯಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುವ ನೀರಿನ ಮಟ್ಟವನ್ನು ನೋಡಿ ಅಚ್ಚರಿ ಪಟ್ಟದ್ದು... ಗುಡ್ಡೆಯಲ್ಲಿ ಬರುವ ನೀರಿನ ಝರಿಯ ಒರತೆಯ ಬಗ್ಗೆ ವಿಸ್ಮಯದಿಂದ ಅಪ್ಪನನ್ನು ಕೇಳಿದ್ದು... ದಿನದಿಂದ ದಿನಕ್ಕೆ ಹೆಚ್ಚ ಹಸಿರಾಗುವ ಸುತ್ತುಮುತ್ತಲಿನ ಪ್ರಕೃತಿ... ರಾತ್ರೋ ರಾತ್ರೆ ದನದ ಕೊಟ್ಟಿಗೆಯಲ್ಲಿ ’ಅಂಬಾ..’ ಅಂತ ಸಣ್ಣ ನರಳಿಕೆಯೊಂದು ಕೇಳಿದಾಗ.. ಅಮ್ಮ ನೋಡಿ ಬಂದು ನನ್ನನ್ನೂ ಕರೆದುಕ್ಕೊಂಡು ಹೋಗಿ ಕರುವನ್ನು ತೋರಿಸಿದ್ದು...

ಹ ಹ್ಹ ಹ್ಹ್...

ಈ ಮಳೆಯೇ ಹೀಗೆ... ಅವನು ಕೇವಲ ಧರೆಗಿಳಿಯುವ ನೀರಲ್ಲ... ಜೊತೆಗೊಂದಿಷ್ಟು ಹಳೆಯ ನೆನಪನ್ನು ಹೊತ್ತು ತರುವ ಗೆಳೆಯ...

ಮಂಗಳವಾರ, ಮಾರ್ಚ್ 23, 2010

ಅಮ್ಮಣ್ಣಿಯ ನೆನಪು


ನಿದ್ದೆ ಇರದ ರಾತ್ರಿಗಳಲ್ಲಿ
ಅವಳ ಹೆಜ್ಜೆಯ ಗುರುತಿತ್ತು
ನಿದ್ದೆ ಬಂದ ರಾತ್ರಿಯಂತೂ
ಅವಳ ಕನಸೇ ಬಿದ್ದಿತ್ತು...

ಹಾದಿ ಬದಿಯ ಒಂಟಿ ನಡಿಗೆ
ಆಕೆಯ ನೆನಪ ತರುತಿತ್ತು
ಆ ಮಲ್ಲಿಗೆ ನಗು ನೆನಪಾದಾಗ
ನನ ಕಾಲು ಕುಂಟುತಿತ್ತು...

ಕನ್ನಡಿ ಮುಂದೆ ನಿಂತರಂತೂ
ಅವಳ ಕಣ್ಣೇ ಕಾಣುತಿತ್ತು
ಕಣ್ಣು ನನದೇನೇ ಎಂದರಿತಾಗ
ತುಟಿಯ ಅಂಚು ನಗುತಿತ್ತು...

ತಟ್ಟೆಯಲ್ಲಿ ತುತ್ತು ಅನ್ನ
ಅವಳಿಗಾಗಿ ಮೀಸಲಿರ್ತಿತ್ತು
ಹಸಿವೆ ತುಂಬ ಸಹಿಸಲಾಗದೆ
ನನ್ನ ಹೊಟ್ಟೆ ಸೇರ್ತಿತ್ತು...

ಐಸ್-ಕ್ರೀಂ ಸವಿಯುವಾಗ
ಅವಳ ಗಲ್ಲದ ನುಣುಪಿತ್ತು
ಅದು ಮೆಲ್ಲನೆ ಕರಗಿದಾಗ
ಅಲ್ಲಿ ನನ್ನ ತುಟಿ ಇತ್ತು...

ಶನಿವಾರ, ಮಾರ್ಚ್ 20, 2010

ವಿರಹಾಗ್ನಿ ಧಗ ಧಗಿಸುತಿದೆ




ಯಾವ ಜೀವನ ಪ್ರೀತಿಗೆ ಹೀಗೆ
ವಿರಹಾಗ್ನಿ ಧಗ ಧಗಿಸುತಿದೆ?
ಯಾವ ಹೃದಯಗಳ ಬಂಧನಕೆ
ಕಣ್ಣುಗಳು ಹೀಗೆ ಹುಡುಕಾಡುತಿದೆ?

ನಿನ್ನ ಮಾತನಾಡಿಸಿದ ಆ ನಿಮಿಷಗಳೇ ಮತ್ತೆ ಮತ್ತೆ ನೆನಪಾಗುತಿದೆ...
ಬೆಳದಿಂಗಳ ರಾತ್ರಿಯಲಿ ಹುಣ್ಣಿಮೆಯು ನಕ್ಕ ಹಾಗಿರುವ ಆ ನಿನ್ನ ಸುಂದರ ವದನದ ನೆನಪಾಗುತ್ತಿದೆ...
ಮೌನವೇ ಮಾತಾದಾಗ, ನಮ್ಮಿಬ್ಬರ ಮನಸಿನಾಳದ ಒಮ್ಮತದ ನಿರ್ಧಾರ ನೆನಪಾಗುತ್ತಿದೆ...

ಯಾಕೋ ಆ ಕ್ಷಣ ನಾನು ಏನೂ ಹೇಳದಿದ್ದರೂ ನೀ ತಿಳಿದುಕ್ಕೊಂಡೆ, ಜೊತೆಗೆ ನಾನೂ ಕೂಡ...
ಮತ್ತೆ ಮಾತನಾಡಲು ಅವಕಾಶವಿರಲಿಲ್ಲ... ನಿಜವಾ? ಅಧಿಕಾರವಿರಲಿಲ್ಲ ಅನ್ನು, ಅವಕಾಶ ಉಪಯೋಗಿಸಲಿಲ್ಲವೆನ್ನು...
ಮತ್ತದೇ ಮುಗುಳುನಗೆ ಕಾಣಲು ಅದೆಷ್ಟು ಬಾರಿ ಕಣ್ಣು ಮುಚ್ಚಿ ನಿನ್ನ ಧ್ಯಾನಿಸಿಲ್ಲ, ಹೇಳು?
ಈ ವಿರಹಾಗ್ನಿಯ ಉದ್ದ-ಅಗಲದ ಲೆಕ್ಕಕ್ಕೆ ಅದೇನು ಅಳತೆಗೋಲಿದೆ ಹೇಳು?

ಕಡು ಬೇಸಿಗೆಯಲ್ಲೂ
ಈ ಕಟುಕನ ಕಣ್ಣಿನಲ್ಲಿ
ಬತ್ತದೆ ಬರುವ ಹನಿಗಳ
ಈ ಒರತೆ ಸಾಲದೇ?

ಬುಧವಾರ, ಜನವರಿ 27, 2010

ಮರೆಯಲಾಗದ, ಮರಳಲಾಗದ ಆ ದಿನಗಳು...

"ಅಪ್ಪಾ... ನನಗೆ ಹೊಟ್ಟೆ ನೋವು... ತುಂಬಾ ನೋವಾಗ್ತಿದೆ ಆಪ್ಪಾ...."

ಕಣ್ಣಲ್ಲಿ ಸಣ್ಣಕ್ಕೆ ಎರಡು ಹನಿ ಇಳಿ ಬಿಟ್ಟು ತಂದೆಯವರನ್ನು ತಬ್ಬಿ ಹಿಡಿದಾಗ, ಅವರಿಗೆ ಅರ್ಥವಾಗುತ್ತಿತ್ತು... ಇದು ಶಾಲೆಗೆ ಹೊರಡಲಿಕ್ಕೆ ಹಿಂಜರಿಯುವ ಮನಸ್ಸಿನ ಮಿಡಿತ ಅಂತ...
"ಪುಟ್ಟಾ.. ಇರಲಿ ಬಿಡು.. ಪರ್ವಾಗಿಲ್ಲ... ಈವತ್ತು ಶಾಲೆಗೆ ಹೊಗ್ಬೇಡ..." ಅಂತ ಒಂದೇ ಮಾತಲ್ಲಿ ನನ್ನ ನೋವಿಗೆ ಸಾಂತ್ವನ ನೀಡ್ತಿದ್ರು... ೬ ವರ್ಷದ ನನಗೆ ಒಂದನೇ ತರಗತಿಯಲ್ಲಿ ಹೊಗಬೇಕಾದ್ರೆ ಪ್ರತಿ ದಿನ ಈ ಹೊಟ್ಟೆ ನೋವು ಕಾಡುತ್ತಿತ್ತು...!!

ನನಗೆ ಆ ಪ್ರೊಗ್ರೆಸ್ ರಿಪೋರ್ಟ್ ಸ್ಪಷ್ಟವಾಗಿ ನೆನಪಿವೆ... ಮೊದಲ ಕ್ವಾರ್ಟರ್ಲಿ ಪರೀಕ್ಷೆಯಲ್ಲಿ ೨ ನೇ ರಾಂಕ್.. ಎರಡನೇ ಕ್ವಾರ್ಟರ್ಲಿ ಪರೀಕ್ಷೆಯಲ್ಲಿ ೨೨ ನೇ ರಾಂಕ್... ಮೊದಲ ಕ್ವಾರ್ಟರ್ಲಿಯ ರಾಂಕ್ ಎರಡು ಬಾರಿ(೨ -> ೨೨) ರಿಪೀಟ್ ಆದದ್ದು ಮಾತ್ರ ಕಾಕತಾಳೀಯ...! ಆದ್ರೆ ಕಾರಣ ಮಾತ್ರ, ನನ್ನ ಪ್ರತಿದಿನ ಶಾಲೆಗೆ ಹೋಗುವ ಮೊದಲು ಬರುತ್ತಿದ್ದ ಹೊಟ್ಟೆನೋವು...! ಅಯ್ಯೋ.. ಎಂಥ ಹೊಟ್ಟೆ ನೋವು ಅನ್ನಿ... ಬೆಳಿಗ್ಗೆದ್ದು ಬ್ರಶ್ ಮಾಡಿ, ಸ್ನಾನ ಮಾಡಿ, ಯುನಿಫೋರ್ಮ್ ತೊಟ್ಟು ತಿಂಡಿ ತಿನ್ನುವವರೆಗೆ ಇಲ್ಲದ್ದು ಆಮೇಲೆ ಇದ್ದಕ್ಕಿದ್ದಂತೆ ಬರುತ್ತಿತ್ತು...! ೧ ನೇ ತರಗತಿಯಲ್ಲಿ ಸುಮಾರು ೫೦% ಶಾಲಾ ದಿನಗಳನ್ನು ನಾನು ಮನೆಯಲ್ಲೇ ಕಳೆದಿರಬಹುದೇನೋ..!

ಅಕ್ಕನೋ, ನೀಟಾಗಿ ಜಡೆ ಬಾಚಿ ಸರಿಯಾದ ಟೈಮ್ ಗೇ ಹೊರಡುತ್ತಿದ್ದಳು. ಅಮ್ಮನಿಗೆ ಪುರುಸೊತ್ತಿದ್ರೆ ಅಕ್ಕನಿಗೆ ಎರಡು ಜಡೆ ಹಾಕ್ತಿದ್ರು, ಪುರುಸೊತ್ತಿಲ್ಲಾ ಅಂದ್ರೆ ಒಂದೇ. ಮನೆಯ ಅಂಗಳದಲ್ಲೇ ಬೆಳೆದ ಜಾಜಿ ಮಲ್ಲಿಗೆಯೋ ಇಲ್ಲ ಸೇವಂತಿಗೆಯೋ, ಗುಲಾಬಿ ಹೂವೋ, ಹಿಂದಿನ ದಿನವೇ ಮಾಡಿಟ್ಟ ಅಬಲಿಗೆ ಹೂವಿನ ಮಾಲೆಯೋ ಯಾವುದೋ ಒಂದು ಸಿಕ್ಕಿಸಿದರೆ ಆಯ್ತು. ದಾಸವಾಳದ ಹೂವು ಮರದ ತುಂಬಾ ಆಗ್ತಿದ್ರೂ ಅದನ್ನು ಮಾತ್ರ ಮುಡೀತಿರ್ಲಿಲ್ಲ. ಆದ್ರೆ ಹಣೆಯಲ್ಲೊಂದು ನೀಟಾದ ಲಾಲ್-ಗಂಧ(ಪುಟ್ಟದಾದ ಕೆಂಪು ಚುಕ್ಕೆ!) ಇರಲೇ ಬೇಕಿತ್ತು. ಇಲ್ಲಾಂದ್ರೆ ಅಮ್ಮ ಬಿಡ್ತಿರ್ಲಿಲ್ಲ...!

ತೀರಾ ಹಳ್ಳಿಯಾದ್ರಿಂದ ಶಾಲೆಗೆ ಹೋಗಬೇಕೆಂದ್ರೆ ಒಂದೂವರೆ-ಎರಡು ಕಿಲೋಮೀಟರ್ ನಡೆದು ಹೋಗಬೇಕಿತ್ತು. ಅಕ್ಕನ ಜೊತೆ ಅಕ್ಕಪಕ್ಕದ ಮನೆಯವರೊಂದಿಗೆ ಪುಟ್ಟ-ಪುಟ್ಟ ಹೆಜ್ಜೆ ಇಟ್ಟು ನಡೆದೇ ಹೊಗುತ್ತಿದ್ದೆ. ಆವಾಗ ಸಣ್ಣ ಸಣ್ಣ ವಿಷಯವನ್ನೂ ನೋಡಿ ಖುಷಿ ಪಟ್ಟಿದ್ದೀನಲ್ಲಾ.

ಹೊಸತಾಗಿ ತಂದ ಶರ್ಟ್, ಆ ಸಣ್ಣ ಚಡ್ಡಿ... ಅಹಾ... ಅದೆಷ್ಟು ದಿನ ಅದನ್ನು ಹಾಕ್ಕೊಂಡು ಖುಶಿಪಟ್ಟಿಲ್ವಾ...?
ಅ ಛತ್ರಿ, ಅದರ ಬಣ್ಣದ ಹಿಡಿ. ಅಹಾ.. ಆ ಮಳೆಗೆ ಅದನ್ನು ತಿರುಗಿಸುತ್ತಾ ಮಳೆಗೆ ಅರ್ಧ ನೆನೆದುಕ್ಕೊಂಡು ಹೋಗಿಲ್ವಾ...?
ಬಣ್ಣದ ಚಪ್ಪಲಿ. ಆಹಾ... ಅದನ್ನು ಹಾಕ್ಕೊಂಡು ಎಷ್ಟೊಂದು ಠೀವಿಯಿಂದ ನಡೆದಾಡಲಿಲ್ಲ?

ಕಡು ಹಸುರು ಬಣ್ಣದ ಆ ಬಾಗ್... ಅದರೊಳಗೆ ಗರಿ ಗರಿಯಾದ ಹೊಚ್ಚ ಹೊಸ ಪಾಠ ಪುಸ್ತಕಗಳು... ಆ ಬಳಪ.. ಚಾಕ್ ಪೀಸ್.. ಆ ಬಳಪ ಒರಸಿಕ್ಕೊಳ್ಳಲು ನಮ್ಮ ತೋಟದಲ್ಲಿ ಬೆಳೆಯುವ ಒಂದು ಜಾತಿಯ ನೀರು ಕಡ್ಡಿ ಎಂಬ ಹುಲ್ಲನ್ನು ತೆಗೆದುಕ್ಕೊಂಡು ಹೋಗುತ್ತಿದ್ದೆವು. ಆ ಹುಲ್ಲಿನಲ್ಲಿ ನೀರಿನ ಅಂಶ ಚೆನ್ನಾಗಿದ್ದುದರಿಂದ ಬಳಪ ಫುಲ್ ಕ್ಲೀನ್...!
ಮಳೆಗಾಲದ ಮೊದಲ ದಿನಗಳಲ್ಲಿ ಶಾಲೆಗೆ ನಡೆದುಕ್ಕೊಂಡು ಹೋಗುತ್ತಿದ್ದಾಗ ಸಿಗುತ್ತಿದ್ದ ’ದೇವರ ತುಪ್ಪಲು’ ಅನ್ನುತ್ತಿದ್ದ ಕೆಂಪು ಬಣ್ಣದ ಸಣ್ಣ ಜೀವಿಯ ಮೈ ಬಣ್ಣ ನೋಡುವುದೇ ಒಂದು ಚಂದ...
ಶಾಲೆಯಲ್ಲಿ ಆಡುತ್ತಿದ್ದ ಕಬಡ್ಡಿ, ಲಗೋರಿ, ತಲೆಮಾ, ಅಪ್ಪಚ್ಚೆಂಡು, ಚಿನ್ನಿದಾಂಡು, ಕಣ್ಣು ಮುಚ್ಚಾಲೆ ಮುಂತಾದ ಸಾಂಪ್ರದಾಯಿಕ ಆಟಗಳೇ ಎಷ್ಟೊಂದು ಖುಷಿಕೊಡುತ್ತಿತ್ತು...
ಮನೆಯಲ್ಲಿ ಆಡುತ್ತಿದ್ದ ಚೆನ್ನಮಣೆ, ಜಿಬ್ಲಿ, ಗೇರುಬೀಜ ಚುಟ್ಟುವುದು, ಸ್ಯಾಟ್... ವಾವ್.. ಅದೆಲ್ಲ ಅಷ್ಟೊಂದು ಸುಂದರ ದಿನಗಳಾಗಿದ್ದವು...
ತೀರಾ ಅಪರೂಪವೆನ್ನುವಂತೆ ನಮ್ಮದೇ ವಯಸ್ಸಿನ ಹುಡುಗರು ಸೈಕಲ್ ತುಳಿದುಕ್ಕೊಂಡು ಬಂದರೆ, ಶಾಲೆಗೆಲ್ಲಾ ಅವನೇ ಹೀರೋ...
ಅಸೂಯೆ ಪಟ್ಟುಕ್ಕೊಂಡು ಅವನ್ನೇ ನೋಡೂತ್ತಿದ್ದೇವಲ್ವಾ...
ಪಯಸ್ವಿನಿ ನದಿಗೆ ಈಜಲು ಹೋಗುವುದೆಂದರೆ ಕುಣಿದು ಕುಪ್ಪಳಿಸುತ್ತಿದ್ದೆ...

ಒಂದನೇ ತರಗತಿಯಲ್ಲಿ ನನ್ನ ಅಮ್ಮಣ್ಣಿ ನನ್ ಪಕ್ಕದಲ್ಲೇ ಕುಳಿತುಕ್ಕೊಳ್ಳುತ್ತಿದ್ದಳು. ನಾವಿಬ್ರೂ ಜೊತೆಗೇ ಆಟವಾಡುತ್ತಿದ್ದೆವು. ಆಕೆ ಮನೆಯಿಂದ ತಿಂಡಿ ತಂದರೆ ನನ್ ಜೊತೆ ಹಂಚಿಕ್ಕೊಳ್ಳುತ್ತಿದ್ದಳು. ನಾನೂ ಹಾಗೇ, ಅಪ್ಪನ ಕಿಸೆಯಿಂದ ಕದ್ದ ದುಡ್ಡಿನಲ್ಲಿ ಆಕೆಗೂ ಮಿಟಾಯಿ, ಚೊಕೋಲೇಟ್ ಕೊಡಿಸುತ್ತಿದ್ದೆ(ಪಾಕೆಟ್ ಮನಿ ಅನ್ನುವ ಕಾಂಸೆಪ್ಟ್ ಇರಲಿಲ್ಲ ಬಿಡಿ ಆ ಕಾಲದಲ್ಲಿ, ಹೀಗೇನಾದ್ರು ಕಿತಾಪತಿ ಮಾಡಿದ್ರೆ ಮಾತ್ರ ಎರಡು ಚಿಲ್ರೆ ಕಾಸು ದಕ್ಕುತ್ತಿತ್ತು!). ಈವತ್ತು, ಹತ್ತಿಪ್ಪತ್ತು ವರುಷದ ನಂತರವೂ, ಆಕೆಯನ್ನು ನೆನೆಸಿಕ್ಕೊಳ್ಳುವ ಷ್ಟು ಆಕೆ ಆತ್ಮೀಯಳಾಗಿದ್ದಳು. ಆದರೆ ಒಂದನೇ ತರಗತಿಯ ವೆಕೇಷನ್ ಮುಗಿದು, ಎರಡನೇ ತರಗತಿಗೆ ಹೋದಾಗ ಆಕೆ ಕಾಣಲಿಲ್ಲ. ಒಂದು ದಿನ ನನ್ನ ಅಣ್ಣನಲ್ಲಿ ಆಕೆಯ ಬಗ್ಗೆ ವಿಚಾರಿಸಿದಾಗ, ಆಕೆಯ ಫ್ಯಾಮಿಲಿ ನಮ್ಮೂರ ಬಿಟ್ಟು ಬೇರೆ ಕಡೆ ಶಿಫ್ಟ್ ಆಗಿ ಹೋದುದಾಗಿ ಹೇಳಿದರು. ಅಮೇಲೆ ಆಕೆಯನ್ನು ಈವರೆಗೆ ನೋಡಿಲ್ಲ. ಈವತ್ತೂ ಯವುದಾದ್ರು ಗುಂಪನ್ನು ನೋಡಿದಾಗ ಆಕೆಯ ನೆನಪಾಗುತ್ತೆ. ನನ್ನ ಕಣ್ಣುಗಳು ಆಕೆಗಾಗಿ ಆ ಗುಂಪಿನಲ್ಲಿ ಹುಡುಕಾಡ್ತವೆ.

♫ ಈ ಕಂಗಳ ಮುಂಬಾಗಿಲು
ನಿನಗಾಗಿಯೆ ತೆರೆದಿರಲು
ತಡವೇತಕೆ ಅಮ್ಮಣ್ಣೀ
ನನ್ನಿದುರಿಗೆ ಬರಲು...

ನೀ ನನ್ನೆದುರಿಗೆ ಬರದಿರಬಹುದು. ಆದ್ರೆ, ನಾನಿನ್ನೂ ಅದೇ ಊರನವನೇ ಆಗಿರುವುದರಿಂದ, ಯಾರನ್ನಾದರೂ ಕೇಳಿ ನನ್ ಫೋನ್ ನಂಬರ್ ತೆಗೆದುಕ್ಕೊಂಡು, ನನಗೊಂದು ಕಾಲ್ ಮಾಡಬಹುದಿತ್ತಲ್ಲಾ... ಹೋಗ್ಲಿ, ಓರ್ಕುಟ್, ಫೇಸ್ ಬುಕ್ ನಲ್ಲಾದರೂ ಒಂದು ಪ್ರೊಫೈಲ್ ಕ್ರಿಯೇಟ್ ಮಾಡ್ಬಹುದಿತ್ತಲ್ಲಾ.ಯಾಕೆ ಅಮ್ಮಣ್ಣೀ ನನ್ ಹೃದಯದ ಮಿಡಿತ ಕೇಳಿಸಲ್ವಾ...?