ಸೋಮವಾರ, ಜನವರಿ 19, 2009

ಅಹಾ.. ಬೆಂದಕಾಳೂರು...!
ಹಗಲೆಲ್ಲ ದುಡಿಯಬಹುದು ಏರ್ ಕಂಡೀಶನ್ ಆಪೀಸ್ನಲ್ಲಿ,
ಕಿಸೆ ತುಂಬ ಹೊನ್ನಹುದು ಮಾಸದಂತ್ಯದಲಿ !
ನಿನ್ನ ಬಾಳಿನ ತುಂಬ ಅನ್ನ ನೊರೆ ಹಾಲು,
ನನ್ನ ಮಾತನು ಕೇಳು, ನನ್ನೊಡನೆ ಬಾಳು ... !!

ಅಂತ ನೀನು ಕರೆದೆಯಲ್ಲ... ಅಬ್ಬಬ್ಬ... ಎಷ್ಟ ಖುಃಷಿ ಆಯ್ಥು ಗೊತ್ತಾ...? ಏರ್ ಕಂಡೀಶನ್ office, ಕಿಸೆ ತುಂಬ ಕಾಸು, ನಿನ್ನ ಬಳುಕುವಾ ಹಾದಿಯಲಿ ಓಡಾಡಲು ನನಗೊಂದು ಕಾರು... ಅಹಾ.. ಆಕಾಶಕ್ಕೆ ಮೂರೇ ಗೇಣು...! ಮತ್ತೆ ಅನ್ನ-ಸಾಂಬಾರ್ ವಿಷ್ಯ..., ನೊರೆ ಹಾಲೇನು ಬೇಡ ನಂಗೆ... ಹಾಲು ಬಿಳೀ ಇದ್ರೇ ಸಾಕಪ್ಪಾ... (ನೊರೆ ಹಾಲು ನೋಡಿದ್ರೆ ನಂಗೆ ಮುಖಕ್ಕೆ ಹಚ್ಚಿದ shaving cream ಥರ ಅನಿಸುತ್ತೆ!). ನಿನ್ನೆಡೆಗೆ ಬರುವವರನ್ನೆಲ್ಲ ಕೈ ಬೀಸಿ ಕರೀತಿಯಲ್ಲಾ... ಬರುವವರೆಲ್ಲ ಬಣ್ಣ ಬಣ್ಣದ ಕನಸುಗಳನ್ನು, ಮನಸು ತುಂಬಾ ಉಲ್ಲಾಸವನ್ನು, ಸಂಸಾರ ತುಂಬಾ ಆಹ್ಲಾದವನ್ನು, ಕೈ ತುಂಬಾ ಸಂಬಳವನ್ನು ಜೀವನ ತುಂಬಾ ಖುಃಷಿಯನ್ನು ನೆನೆ-ನೆನೆದು ಬರುತಾರಲ್ಲಾ... ನಿನ್ನ ಅತಿ ವೇಗದ ಜೀವನಕ್ಕೆ ಮಾರು ಪೋಗದವರ್ ಯಾರ್ ಅಂತ ಹೇಳಲಿ ? ನೀನಿರೋದೇ ಹಾಗಲ್ವಾ...!

ಮೋಹದೊಳು ಮಾಯೆಯೋ,
ಮಾಯೆಯೊಳು ಮೊಹವೋ...
ಬೆಂಗಳೂರೊಳಗೆ ಜನರೊ,
ಜನರೊಳು ಬೆಂಗಳೂರೋ...!


ದಾಸರೇನಾದದರೂ ಇದ್ದಿದ್ದರೆ ಹಾಡಿ ಹೊಗಳುತ್ತಿದ್ದರೆನೋ...! ನಿನ್ನ ಕುಡಿ ನೋಟ ಸಾಕು ಹಳ್ಳಿಯ ರೈತರ ಹಾಗು ಅವರ ಮಕ್ಕಳ ಮುಗ್ಧ(!) ಮನಸ್ಸನ್ನು ನಿನ್ನೆಡೆಗೆ ಕನವರಿಸಲು... ಅಹಾ ನಿನ್ನ ವಶೀಕರಣ ತಂತ್ರವೇ... ಸಣ್ಣವನಿದ್ದಾಗ ಅಮ್ಮ ಹೇಳಿಸುತ್ತಿದ್ದ ಜೇಡ-ನೊಣದ ಹಾಡೊಂದು ನೆನಪಾಗುತ್ತಿದೆ.. "ಬಾ ನೊಣವೇ, ಬಾ ನೊಣವೇ ಬಾ ನನ್ನ ಮನೆಗೆ.. ಬಾನಿನೊಳು ಹಾರಿ ಬಲು ದನಿವಾಯ್ತು ನಿನಗೆ.. ". ಕಾಸರಗೋಡು, ಮಂಗಳೂರು ಕಡೆಗಳಲ್ಲೆಲ್ಲ ತೋಟ ನೋಡಿಕ್ಕೊಳ್ಳೊರೇ ಇಲ್ಲದಾಗಿದೆ... ರಾಯಚೂರು ಬೀದರವಂತು ನಿನ್ನೆಡೆಗೆ ಗುಳೇ ಎದ್ದಿದೆ... ಮಲೆನಾಡಲ್ಲಂತೂ ಕನ್ಯೆಯರು ಬೆಂಗಳೂರ ಹುಡುಗರೇ ಬೇಕೆಂದು ರಂಪ ಮಾಡ್ತಾರಂತೆ...! ಅಹಾ.. ನೀನಗೆ ಯಾರಿಟ್ಟರೀ ಹೆಸರು...? ಬೆಂದ ಕಾಳೂರು... ನಂಗನ್ಸುತ್ತೆ.. ನೀನಿನ್ನೂ ಬೆಂದಿಲ್ಲ... ಸುಂದರಿಯಾದ ಲಲನೆಯಂತೆ ಮೈ ತುಂಬಿ ತುಳುಕುವ ನದಿಯಂತೆ ವೇಗವಾಗಿ ಓಡುವ ಹಿಂಗಾರಿನ ಮೋಡದಂತೆ ಜಟಾಧಾರಿಯಾಗಿ ಸುರಿಯುವ ಮಲೆನಾಡ ಮಳೆಯಂತೆ ಅನುರಣಿಯಾಗಿ ಚಾಚಿಕ್ಕೊಂಡ ಚಾರ್ಮಾಡಿ ಘಾಟಿನ ಕುಸಿದು ಮತ್ತೆ ಎದ್ದು ಬರುವ ಸಿಮೆಂಟ್ ರೋಡಿನಂತೆ ಕಾಣಿಸ್ತಿದ್ದೀಯಾ... !

ಕೈತುಂಬಾ ಕಾಸಿರಲು ಮನತುಂಬ ಆಸೆ ಇರಲು
ITPL, electronic city ಯಲ್ಲಿ ಕೆಲಸ ಇರಲು
ವಾರಾಂತ್ಯದಲಿ ಅಡ್ಡಾಡಲು ಫೋರಮ್ ಮಾಲ್ ಇರಲು,
ಮೈಗಂಟಿಕ್ಕೊಳ್ಳಲೊಂದು ಫಿಗರ್ ಸಿಗುವುದು ಕಷ್ಟವೇ junk-ತಿಮ್ಮ !


ಅಂತ ಡಿವಿಜಿ ತಲೆ ಮೇಲೆ ಕೈ ಇತ್ತು, ಮತ್ತೊಂದು ಕಗ್ಗ ಬರೆತಿದ್ದರೆನೋ... ನಿನ್ನೋಳಗೊಮ್ಮೆ ಸುತ್ತಾಡಿ ಬರಲು BMTC ಬಸ್ಸಲ್ಲಿ ಡೈಲಿ ಪಾಸ್ ತೆಗೊಂಡ್ರೆ ಸಾಕಾಗೋಲ್ಲ... monthly ಪಾಸ್ಗೆ ಬೇಕಾಗ್ವಷ್ಟು ಬೆಳ್ದು ಬಿಟ್ಟಿದ್ದೀಯಲ್ಲ.. ಎಲ್ಲಿ ನೋಡಿದರಲ್ಲಿ ನಿನ್ನ ಮನ ಮೋಹಕ ಸೌಂದರ್ಯದಿಂದ ಪ್ರೇಮಿಗಳ ಅಡ್ಡವಾಗಿ ಬಿಟ್ಟಿದ್ದೀಯಲ್ಲ.. ಪಾರ್ಕುಗಳು ಮಾಲುಗಳು ಮಲ್ಟಿಪ್ಲೆಕ್ಸುಗಳು ನಿನ್ನ ಸೌಂದರ್ಯದ tool kit ಆಗ್ಬಿಟ್ಟಿದೆಯಲ್ಲ... fly overಗಳು ನಿನ್ನ ಆಭರಣದಂತೆ, ವಿಧಾನಸೌಧ ನಿನ್ನ ಮುಗುತಿಯಂತೆ, ಲಾಲ್ಬಾಗ್ ನಿನ್ನ ಹಚ್ಚ ಹಸುರಿನ iron ಮಾಡಿದ ಸೀರೆಯಂತೆ, ನಿನ್ನ ನೃತ್ಯದ ಮುದ್ರೆಗಳು ಬದಲಾಗುವಂತೆ ಮೆಜೆಸ್ಟಿಕ್, ನಿನ್ನ ಕಾಲಿನ ಅಂದವಾದ ನಡತೆಯಂತೆ ಕೃಷ್ಣ ರಾಜ ಮಾರ್ಕೆಟ್ಟು... ಅಯ್ಯೋ... ಪ್ರೇಮಿಗಳ ಪಾಲಿಗಂತೂ ನೀನು ಸ್ವರ್ಗ...!

1 ಕಾಮೆಂಟ್‌: