ಸೋಮವಾರ, ಸೆಪ್ಟೆಂಬರ್ 7, 2009

ನನ್ನ ಕಣ್ಣಿನೊಳಗೆ ನೀ ಇಣುಕಿ ನೋಡಬಹುದಿತ್ತಲ್ಲ?


ಆಗ ನಾನು ೭-೮ನೇ ತರಗತಿಲ್ಲಿದ್ದಿರಬೇಕು. ಅದೊಂದು ಆಗಸ್ಟ್ ತಿಂಗಳ ಶನಿವಾರ. ಶಾಲೆಯಲ್ಲಿ ಸ್ವತಂತ್ರೊತ್ಸವದ ಅಂಗವಾಗಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ದೇಶಭಕ್ತಿ ಗೀತೆ ಹಾಡಿ ಅಮ್ಮಣ್ಣಿ ಬಹುಮಾನ ಪಡೆದು ಬೀಗಿದ ದಿನ. ಅದೇ ಸ್ಪರ್ದೆಯಲ್ಲಿ ನಾನೂ ಹಾಡಿದ್ದರೂ, ಮಳೆಗಾಲ ಆದಿಯಲ್ಲಿ ಮಳೆಯ ಮುನ್ಸೂಚನೆ ಪಡೆದ ಕಪ್ಪೆಗಳು ವಟಗುಟ್ಟುವಂತೆ ಕೇಳಿಸುವ ನನ್ನ ಧ್ವನಿಯಿಂದ ತೀರ್ಪುಗಾರರೆಲ್ಲ ಮುಖ ಸಿಂಡರಿಸಿದ್ದು ನೆನಪಿದೆ. ಅಮ್ಮಣ್ಣೀ..., ನೀ ಪಡೆದ ಬಹುಮಾನವನ್ನು ನನಗೆ ತೋರಿಸಿ ತುಂಟ ನಗೆ ನಕ್ಕಿದ್ದಕ್ಕೆ ನನಗೆ ವಿಪರೀತ ಕಿರಿ ಕಿರಿ ಎನಿಸಿ ನಿನ್ನ ಜೊತೆ ಮತನಾಡದೇ ಠೂ ಬಿಟ್ಟಿದ್ದು ನೆನಪಾಗ್ತಿದೆ... ಒಂದು ವಾರ ನಿನ್ನ ಬಿಟ್ಟು ನಾನೊಬ್ಬನೇ ಶಾಲೆಗೆ ಹೋಗುವುದು, ಬರುವುದು ಮಾಡ್ತಿದ್ದೆ. ಆ ಒಂದು ವಾರ ನಾ ಹೇಗೆ ಕಳೆದೆ ಎಂದು ಮಾತ್ರ ಕೇಳಬೇಡ... ರಾತ್ರಿ ತಲೆದಿಂಬಿನೊಳಗೆ ಕಣ್ಣೀರ ಕೋಡಿ ಹರಿಸ್ತಿದ್ದೆ.
ಒಂದು ವಾರದ ನಂತರದ ಒಂದು ಶನಿವಾರ ಬೆಳಿಗ್ಗೆ ೮ರ ಹೊತ್ತಿಗೆ ನನ್ನ ಮನೆಗೆ ಬಂದಿದ್ದೆ. ನಾನು ಮಲಗೇ ಇದ್ದೆ. ಅಮ್ಮ ಬಂದು ಹೊದಿಕೆ ಕಿತ್ತು "ಹೊತ್ತು ನೆತ್ತಿಗೇರಿದೆ... ತಕಟ್ ಧಿಮ್ಮಿ ಬಂದಿದ್ದಾಳೆ... ಅವಳ್ ಎಷ್ಟು ಬೇಗ ಏಳ್ತಾಳೆ ನೋಡು... ". ನನ್ನಮ್ಮ ಇಟ್ಟ ಹೆಸರಲ್ವಾ ಅದು? ತಕಟ್ ಧಿಮ್ಮಿ...ನನ್ನಮ್ಮ ಮಾತ್ರವಲ್ಲ ಇನ್ನೂ ಹಲವರು ಹಾಗೇ ಕರಿತಿದ್ರು ನಿನ್ನ...ಸೀದ ನನ್ನ ಕೋಣೆಗೆ ಬಂದವಳೇ ಕೈಯಲ್ಲಿದ್ದ ಕುಂಟಾಂಗಿರ ಹಣ್ಣು(ನೇರಳೆ ಹಣ್ಣಿನ ಹಾಗೇ, ಗಾತ್ರದಲ್ಲಿ ಚಿಕ್ಕದು) ತೋರಿಸಿ "ಕೋಪಾನಾ...?" ಅಂದೆ.ಮುಖ ಆಚೆ ಮಾಡಿ ಮಗ್ಗಲು ತಿರುಗಿಸಿದೆ... ಆಮೇಲೆ ನೀ ನನ್ನ ಪಕ್ಕದಲ್ಲಿ ಕುಳಿತು ಕಂಬನಿ ಮಿಡಿದಾಗ ಆರ್ದ್ರವಾದವನು ನಾನು... ಇನ್ನೂ ಹಲ್ಲುಜ್ಜದಿದ್ದರೂ, ನೀ ಕೊಟ್ಟ ಕುಂಟಾಂಗಿರ ಹಣ್ಣಿನ ರುಚಿ ನೋಡಿದ್ದು ನೆನಪಾಗ್ತಿದೆ...
ಸ್ವಲ್ಪ ಹೊತ್ತು ಅದೂ ಇದೂ ಮಾತಾಡಿ ಸಿಟ್ಟೆಲ್ಲ ಇಳಿಸಿದ ಮೇಲೆ ಮೆಲ್ಲನೆ ನನ್ನ ಕೈ ಹಿಡಿದೆಳೆದು ದೇರಳೆ ಬೆಟ್ಟಕ್ಕೆ ಹೋಗಿ ನೆಲ್ಲಿಕ್ಕಾಯಿ ತರೋಣ ಅನ್ನುವ ಪ್ಲಾನ್ ಹಾಕಿದ್ದು ನೀನೇ ಅಲ್ವಾ...? ಮತ್ತೊಂದೆರಡು ನಿಮಿಷಕ್ಕೆ ಪ್ರಾತರ್ವಿಧಿಗಳನ್ನು ಮುಗಿಸಿ ಜೊತೆಗೇ ಕುಳಿತು ತಿಂಡಿ ತಿಂದದ್ದು, ಅಮ್ಮನಲ್ಲಿ ನಮ್ಮ ಪ್ಲಾನ್ ಹೇಳಿದಾಗ ಬೈಸಿಕ್ಕೊಂಡದ್ದು, ನಾನು ಅಮ್ಮನಲ್ಲಿ ಮುನಿಸಿಕ್ಕೊಂಡದ್ದು, ಆಮೇಲೆ ಅಮ್ಮ ದೇರಳೆ ಬೆಟ್ಟಕ್ಕೆ ಹೋಗಲು ಒಪ್ಪಿಗೆ ಕೊಟ್ಟಿದ್ದು...
೩ ಕಿಲೋಮೀಟರ್ ಗಳ ನಡಿಗೆಯ ನಂತರ ಬೆಟ್ಟದಲ್ಲಿರುವ ನೆಲ್ಲಿಕ್ಕಾಯಿ ಮರಗಳ ಮೇಲೆ ಹತ್ತಿ ಸಾಧ್ಯವಾದಷ್ಟು ಕಾಯಿಗಳನ್ನು ಕೊಯ್ದು ಖುಶಿ ಪಟ್ಟೆವು. ಇನ್ನೇನು ಹೊರಡಬೇಕುನ್ನುವಾಗ ಪಕ್ಕದಲ್ಲೇ ಪೊದೆಗಳಂಚಿನಲ್ಲಿ ಹಾವೊಂದು ಕಂಡು, ನಿನ್ನ ಕೈ ಹಿಡಿದೆಳೆದದ್ದು...ಬೆಟ್ಟ ಕೆಳಗಿಳಿಯುವಾಗ ನೀನು ಜಾರಿ ಬಿದ್ದದ್ದು, ಕೈ ಕಾಲಿಗೆ ಪರಚಿದ ಗಾಯ ಮಡ್ಕೊಂಡದ್ದು... ಕೈಹಿಡಿದೆಬ್ಬಿಸಿದಾಗ ನನ್ನ ತೋಳಿಗಾಸರೆಯಾಗಿ ನಿಂತು ಸುಧಾರಿಸಿಕ್ಕೊಂಡದ್ದು...
ಮುಂದೊಂದು ದಿನ ಶಾಲೆಗೆ ಜೊತೆಯಲ್ಲಿ ಹೋಗುವಾಗ ಕಾಲು ದಾರಿಯ ಪಕ್ಕದಲ್ಲೇ ಇದ್ದ ದೊಡ್ಡ ಮರವೊಂದರಲ್ಲಿದ್ದ ಬಳ್ಳಿಯಲ್ಲಿ ಕಂಡ ನೀಲಿ ಬಣ್ಣದ ಹೂವನ್ನು ನೀನು ಆಸೆ ಪಟ್ಟದ್ದು...ನಾನು ಅದು ಹೇಗೋ ಮರ ಹತ್ತಿ ಆ ಹೂವ ಕೊಯ್ದು ನಿನ್ನ ಮುಡಿಗೇರಿಸಿದ್ದು...!
ಸ್ವಾರಸ್ಯವೆಂದರೆ... ಆ ಮರ ಹತ್ತಿ, ಹೂವ ಕಿತ್ತಿದ್ದೆ... ಆದರೆ ಪಕ್ಕದಲ್ಲೇ ಜೇನುಗೂಡೊಂದು ಇತ್ತು...ಅವುಗಳಿಗೇನೂ ನೋವಾಗಿರಬೇಕು... ಮೂರ್ನಾಲ್ಕು ಜೇನು ಹುಳಗಳು ನನ್ನ ಮುಖಕ್ಕೆ ಮುತ್ತಿಕ್ಕಿದ್ದವು. ಅದು ಹೇಗೋ ಮರದಿಂದ ಕೆಳಗಿಳಿದಾಗ ನನ್ನ ಮುಖ ಊದಿಕ್ಕೊಂಡಿತ್ತು, ಸ್ವಲ್ಪ ಸಮಯದ ನಂತರ ಕಣ್ ರೆಪ್ಪೆ ಗಳೆರಡೂ ಮುಚ್ಚುವಷ್ಟು ಮುಖ ಊದಿಕ್ಕೊಂಡಿತ್ತು... ಆ ನೋವಿನಲ್ಲಿ ಹೂವನ್ನು ನಿನಗೆ ಕೊಟ್ಟೆನೋ ಇಲ್ಲವೋ ಅಂತ ನನಗೆ ಸರಿಯಾಗಿ ನೆನಪಿಲ್ಲ ಅಮ್ಮಣ್ಣೀ...
ಆ ನೋವಿನಂತೆ ಈಗ, ನೀ ನನ್ನ ಅರ್ಥ ಮಾಡದೆ ಹೋದೆಯಲ್ಲ ಅನ್ನುವ ನೋವು ಕಾಡುತ್ತಿದೆ ಅಮ್ಮಣ್ಣೀ...

ನಿನ್ನಲ್ಲಿ ನೇರವಾಗಿ ನಾ ಹೇಳದಿರಬಹುದು...
ಆದರೂ, ನನ್ನ ಉಸಿರೊಳಗೆ ನೀ ಹುಡುಕಬಹುದಿತ್ತಲ್ಲ್ಲ?
ನನ್ನ ಮಾತಲ್ಲಿ ನೀ ಕಾಣದಿರಬಹುದು...
ಆದರೂ, ನನ್ನ ಕಣ್ಣೊಳಗೆ ನೀ ಇಣುಕಿ ನೋಡಬಹುದಿತ್ತಲ್ಲ?

ಭಾನುವಾರ, ಆಗಸ್ಟ್ 23, 2009

ಒಂಟಿತನದ ಕಾವಲಲ್ಲಿ...


ರಾಜರಾಜೇಶ್ವರಿ ದೇವಸ್ಥಾನದ ಪಕ್ಕದ ಬೀದಿಯಲ್ಲಿರುವ ವಿಶ್ವನಿಕೇತನ ಸಭಾಭವನ. ಮಂಗಳವಾರದ ಬೆಳಿಗ್ಗೆ ೯:೦೦ ರ ಮಂಗಳಕರಮಯ ಸಮಯ. ಅಮ್ಮಣ್ಣಿ ಇನ್ನೂ ಹಸೆಮಣೆಯ ಮೇಲೆ ಬಂದಿರಲಿಲ್ಲ, ಶ್ವೇತವರ್ಣದ ಪಂಚೆಯುಟ್ಟು, ಮೈ ಮೇಲೆ ಧೋತಿ ಮತ್ತು ತಲೆ ಮೇಲೆ ಪೇಟ ತೊಟ್ಟಿದ್ದ ವಿಕಾಸ್ ಒಬ್ಬರೇ ಕುಳಿತು ಪುರೋಹಿತರು ಮಾಡಿಸುತ್ತಿದ್ದ ಹೋಮದ ಧೂಪ ತಿನ್ನುತ್ತಾ ಎಡಗೈ ಬೆರಳುಗಳನ್ನು ಸುರುಟಿಕ್ಕೊಂಡು ಬಾಯಿ ಮೇಲೆ ಇಟ್ಟು ಮೆಲ್ಲನೆ ಕೆಮ್ಮುತ್ತಿದ್ರು. ಗಂಡು ಮತ್ತು ಹೆಣ್ಣಿನ ಕುಟುಂಬದವರು ಮತ್ತು ಆತ್ಮೀಯರು ಮಾತ್ರ ಬಂದಿದ್ದರು. ಬಹುಶ: ಊಟದ ಹೊತ್ತಿಗೆ ಮಿಕ್ಕವರೆಲ್ಲಾ ಬರಬಹುದು. ಪರಿಚಿತರಾದ ಅನೇಕರಲ್ಲಿ ಕುಶಲೋಪರಿ ನಡೆಸಿ, ಹಿಂದಿನ ಸಾಲಿನಲ್ಲಿ ಗೆಳೆಯ ಗಣೇಶನ ಜೊತೆ ಮಂದಸ್ಮಿತನಾಗಿ ಕುಳಿತಿದ್ದೆ. ಅದೂ ಇದೂ ಅಂತ ಮಾತಾಡುತ್ತಿದ್ದೆವು. ನನ್ನ ಮತ್ತು ಅಮ್ಮಣ್ಣಿಯ ಒಡನಾಟ ಒಳಪಟ್ಟಂತೆ ಬಹುತೇಕ ನನ್ನ ಅಂತರಂಗದ ವಿಶಯಗಳು ಆತ್ಮೀಯ ಗೆಳೆಯ ಗಣೇಶನಿಗೆ ಗೊತ್ತು.
ನಮ್ಮ ಮಾತುಕತೆಯ ನಡುವೆ ಹೊರ ಹೋಗೋಣ ಅಂತ ಹೇಳಿದೆ. ಅವನಿಗೆ ನನ್ನ ಮನದ ಇಂಗಿತ ಅರ್ಥ ಆಗಿದ್ದರಿಂದ ಅವನೇ ಮೊದಲು ಎದ್ದು ಹೊರ ಹೋಗಲು ಅನುವಾದ, ಜೊತೆಗೆ ನಾನೂ. ಹಿಂದಿನ ದಿನ ಹಿತವಾಗಿ ಮಳೆ ಬಂದಿದ್ದರಿಂದ ಧೂಳಿಲ್ಲದ ರಸ್ತೆ ಮೇಲೆ ವಾಹನಗಳು ಓಡಾಡುತ್ತಿದ್ದವು.
"ಬಾಲ್ಕನಿ ಮೇಲೆ ಹೋಗೋಣವಾ?" ಗಣೇಶ ನನ್ನನ್ನು ಕೇಳಿದ. ನಾನು ಹೂಂಗುಟ್ಟಿದೆ.
ಬಾಲ್ಕನಿಯ ಮೇಲೆ ಐದಾರು ಪ್ಲಾಸ್ಟಿಕ್ ಕುರ್ಚಿಗಳು, ಯಾರೋ ಬೆಳಗಿನ ತಿಂಡಿ ಕಾಫಿ ಕುಡಿದ ಪ್ಲೇಟುಗಳು, ಹಗುರವಾಗಿ ಯಾರ ಪರಿವೆಯೂ ಇಲ್ಲದೆ ಮನ ಬಂದಲ್ಲಿಗೆ ಹಾರಾಡುವ ಮೋಡಗಳ ನಡು ನಡುವೆ ಆವಾಗಾವಾಗ ಇಣುಕುವ ಸೂರ್ಯನ ಕಿರಣ, ಯಾವ ಉದ್ವೇಗವೂ ಇಲ್ಲದೆ ಹದವಾಗಿ ಬೀಸುವ ಗಾಳಿ.ಕಣ್ಣಳತೆಯ ದೂರದ ಮಾಧ್ಯಮಿಕ ಶಾಲೆಯೊಂದರಲ್ಲಿ ಸಮವಸ್ತ್ರದಲ್ಲಿದ್ದ ೨೦೦ ರಷ್ಟಿದ್ದ ಮಕ್ಕಳ ಗುಂಪೊಂದು ಸಾಲಾಗಿ ನಿಂತು ಅದೇನೋ ಗುನುಗುತ್ತಿತ್ತು. ಕಿವಿ ನಿಮಿರಿಸಿದೆ, ಆದರೂ ಅರ್ಥವಾಗಲಿಲ್ಲ; ಪ್ರತಿಜ್ನೆ ಇರಬಹುದೇನೋ.
ಕುರ್ಚಿಯಲ್ಲಿ ಕುಳಿತಾಗ ಪಕ್ಕದಲ್ಲೇ ಕಂಬಕ್ಕೆ ಅಲಂಕಾರಕ್ಕಾಗಿ ಇರಿಸಿದ್ದ ಬಳ್ಳಿಯೊಂದು ನನ್ನ ಕಿವಿಯ ಕೆಳಭಾಗಕ್ಕೆ ಕೆನ್ನೆಯನ್ನು ಸವರಿ, ಏನೋ ಒಂಥರಾ ಮುದ ನೀಡಿತು. ನನ್ನ ಮನದ ದುಗುಡವನ್ನು ನೇವರಿಸಿ ಸಾಂತ್ವನ ನೀಡಿದಂತೆ, ಆ ಕ್ಷಣಕ್ಕೆ ಆ ಬಳ್ಳಿಯ ಮೇಲೆ ಆಪ್ಯಾಯಮಾನವಾಗಿ, ಚಳಿಗಾಲದ ಮುಂಜಾವುಗಳಲ್ಲಿ ಎಲೆಯ ಮೇಲಿನ ಮಂಜಿನ ಹನಿಯಂತೆ ಎಡಗಣ್ಣಿನ ಅಂಚಿನಿಂದ ಒಂದೇ ಒಂದು ಹನಿ ಮೆಲ್ಲನೆ ಜಿನುಗಿತು.
ಆಗ ನಾನು ಏಳನೇ ತರಗತಿ. ನನ್ನ ಮತ್ತು ನಿನ್ನ ಮನೆ ಒಂದೆರಡು ಫರ್ಲಾಂದು ದೂರ ಮಾತ್ರವಿದ್ದುದರಿಂದ ಒಂದುವರೆ ಕಿಲೋಮೀಟರ್ ದೂರದ ಶಾಲೆಗೆ ನಾವಿಬ್ಬರೂ ಜೊತೆಯಾಗಿ ನಡೆದು ಹೋಗುವ ರೂಢಿಯಾಗಿತ್ತು. ತಿಂಗಳ ಯಾವುದೆಂದು ನೆನಪಾಗುತ್ತಿಲ್ಲ, ಅದೊಂದು ಶುಕ್ರವಾರ. ಮಿಕ್ಕೆಲ್ಲ ದಿನಗಳಲ್ಲಿ ಶಾಲಾ ಸಮವಸ್ತ್ರ ಕಡ್ಡಾಯವಾದ್ದರಿಂದ, ಶುಕ್ರವಾರ ಮಾತ್ರ ಬಣ್ಣದ ವಸ್ತ್ರಗಳ ಮೊರೆ ಹೋಗಬಹುದಿತ್ತು. ನೀನು ಆವತ್ತು ಬಿಳೀ ಬಣ್ಣದ ಚೂಡಿದಾರ-ಧಾರಿಯಾಗಿ ಹೊರಟಿದ್ದಿ. ಉದ್ದನೆಯ ಕೇಶಕ್ಕೆ ಎರಡು ಜಡೆಯ ಹಾಕಿ ಮೇಲಗಡೆ ನಸು ಕೆಂಪು ಗುಲಾಬಿಯೋ ಇಲ್ಲಾ ಕಡು ಹಳದಿ ಸೇವಂತಿಗೆ ಹೂವೋ; ಹೂದೋಟದಲ್ಲಿ ಹೂವೇ ಇಲ್ಲದ ಸಮಯದಲ್ಲಿ ಸುವಾಸನೆಯುಳ್ಳ ಪಾಚದ ಎಲೆಯನ್ನು ಮುಡಿಸಿ, ಮಳೆಗಾಲದಲ್ಲಿ ಕೇದಗೆಯ ಹೂವನ್ನು ಒಂದು ಸಲ ಮಡಚಿ ಕ್ಲಿಪ್ ಮಾಡಿ ನಿನ್ನಮ್ಮ ನಿನ್ನ ಮುಡಿಗೇರಿಸುತ್ತಿದ್ದರು. ಅಲ್ವಾ?
ಎಂದಿನಂತೆ ಅಂದೂ ಜೊತೆಯಾಗೇ ಹೊರಟಿದ್ದೆವು. ಸುಬ್ಬಾ ಭಟ್ಟರ ತೋಟದ ಪಕ್ಕದ ದಾರಿ ಕಳೆದು ದಿಣ್ಣೆಯನ್ನು ಏರಿ, ರಸ್ತೆ ಪಕ್ಕದ ಪೇರಳೆ ಮರದಲ್ಲಿ ಕಾಯಿ ಇದೆಯೇ ಎಂದು ದಿಟ್ಟಿಸಿ ನೋಡಿ ಮುಂದಕ್ಕೆ ಶಾಂತಕ್ಕನ ಮನೆಯ ಪಕ್ಕದ ತಿರುವಿಗೆ ತಲುಪಿದ್ದೆವು. ಬಹುಶ: ಅರ್ಧ ದಾರಿ ಕ್ರಮಿಸಿದ್ದೆವೇನೋ, ಇದ್ದಕ್ಕಿದ್ದಂತೆ ನೀನು ಹೊಟ್ಟೆ ನೋವಾಗುತ್ತಿದೆಯೆಂದು ಹೇಳಿ ಅಳುತ್ತಿದ್ದಾಗ, ಮನೆಲೆಕ್ಕ(Home Work)ವನ್ನು ಮಾಡದ್ದಕ್ಕಾಗಿ ದೇಸಾಯಿ ಮೇಷ್ಟ್ರ ಬೆತ್ತದ ರುಚಿಯ ಗುಂಗಿನಲ್ಲಿದ್ದ ನಾನು ನಿನ್ನ ನೋಡಿದಾಗ, ಕಿಬ್ಬೊಟ್ಟೆಯ ಕೆಳಗೆ ಕೆಂಪನೆಯ ಚಿತ್ತಾರದಿಂದ ನಿನ್ನ ಬಟ್ಟೆಗಳೆಲ್ಲ ಕಂಗೊಳಿಸಿ, ಬಿಳಿ ಬಣ್ಣದ ಮೇಲೆ ರೌದ್ರತೆಯ ನರ್ತನವಾಡಿದಂತೆ ಅನಿಸಿತ್ತು.
"ಹಾ... ಏನಾಯ್ತು?.. ಅಬ್ಬಾ.. ತುಂಬಾ ರಕ್ತ... ಬಿದ್ದು ಬಿಟ್ಯಾ...?" ಅಂತ ನಾ ದಿಗಿಲಲ್ಲಿ ಕೇಳಿದಾಗ, ಕುಕ್ಕರಗಾಲಲ್ಲೇ ಕುಳಿತು, ಬಾಯಿ ಮೇಲೆ ಬೆರಳಿಟ್ಟು, ಶಬ್ದ ಮಾಡದಂತೆ ಸೂಚಿಸಿದ್ದಿ.
ಒಂದೆರಡು ನಿಮಿಷಗಳ ನಂತರ ಎದ್ದು ನಿಂತು "ನನ್ನನ್ನು ಮನೆ ತನಕ ಬಿಟ್ಟು ಬಿಟ್ತೀಯಾ...?" ಎಂದಿದ್ದೆಯಲ್ಲ.
"ಸರಿ... ಏನಾಯ್ತು? ಬಿದ್ದು ಬಿಟ್ಯಾ? ತುಂಬಾ ನೋಯ್ತಾ ಇದೆಯಾ...? ಶಂಕರ ವೈದ್ಯರಲ್ಲಿ...." ಎನ್ನುವ ಮೊದಲೇ ನನ್ನ ಮಾತನ್ನು ತುಂಡರಿಸಿ
"ಏನೂ ಆಗಿಲ್ಲ... ನಿಂಗೆ ಅದೆಲ್ಲ ಅರ್ಥ ಆಗಲ್ಲ... ನನ್ನನ್ನು ಮನೆ ತನಕ ಬಿಡ್ತೀಯಾ...?"
ಆಮೇಲೆ ನಿನ್ನನ್ನ ಹಿಂಬಾಲಿಸಿದೆ. ಆದ್ರೆ ಹಿಂತಿರುಗುವಾಗ ಯಾವಾಗಿನ ದಾರಿ ಬಿಟ್ಟು, ದೇವಯ್ಯನ ಮನೆಯ ಪಕ್ಕದ ಓಣಿಯಲ್ಲಿ ಇಳಿದು ಮತ್ತೆ ರಾಮಣ್ಣನ ತೋಟದಲ್ಲೇ ಆಗಿ ಸುಬ್ಬಾ ಭಟ್ಟರ ತೋಟಕ್ಕೆ ತಲುಪಿದಾಗ ಪುನಹ ಕೇಳಿದೆ.
"ಏನಾಯ್ತು...? "
"ಅದೆಲ್ಲ ನಿಂಗೆ ಅರ್ಥ ಆಗಲ್ಲ... ಸುಮ್ನೆ ಬಾ ನನ್ ಜೊತೆ"
ಅರ್ಥವಾಗಲ್ಲ ಅಂದೆಯಲ್ಲ. ಯಾಕೆ ಅರ್ಥ ಆಗಲ್ಲ? ಕ್ರಿಕೆಟ್ ನಲ್ಲಿ ವೈಡ್ ಬಾಲ್ ಅಂದ್ರೆ ಏನು ಅಂತ ನಿನಗೆ ನಾನೇ ಕಲಿಸಿ ಕೊಟ್ಟಿದ್ದಲ್ಲವಾ? ಲೆಕ್ಕದಲ್ಲಿ ಭಾಗಾಕರವನ್ನು ನಿನಗೆ ನಾನೇ ತಾನೇ ಹೇಳಿ ಕೊಟ್ಟದ್ದು? ಅಂಥ ನನಗೆ ಅರ್ಥವಾಗದಿರುವುದು ಏನಿದೆ?
ನಿನ್ನ ಮನೆ ತಲುಪಿದಾದ ನಿನ್ನಮ್ಮ ನನ್ನನ್ನು ಪಕ್ಕಕ್ಕೆ ಕರೆದು "ಯಾರಲ್ಲೂ ಹೇಳಬೇಡ ಹೀಗಾಯಿತೆಂದು..." ಎಂದರು.
ಹೇಗಾಯಿತೆಂದು ಕೇಳೋಣವೆನಿಸಿದರೂ ಕೇಳಲಿಲ್ಲ. ಒಳಗಡೆ ಹೋಗಿ ಬಾಳೆ ಎಲೆಯೊಂದರಲ್ಲಿ ಹೋಳಿಗೆ ತಂದು ನನ್ನ ಕೈಯಲ್ಲಿರಿಸಿ ತಲೆ ನೇವರಿಸಿ ಕಳಿಸಿ ಕೊಟ್ಟಿದ್ದರು ನಿನ್ನಮ್ಮ.
ಶಾಲೆಗೆ ಹೋದಾಗಲೂ ಏನೋ ಒಂದು ಗೋಜಲು ಗೋಜಲು. ಯಾಕೆ ಎಲ್ಲ ಮುಚ್ಚಿಡುತ್ತಿದ್ದಾರೆ? ಮಲಗಿದಾಗಲೂ ನಿದ್ರೆ ಬಾರದೆ, ನಿನಗೇನಾಗಿರಬಹುದೆಂದು ಸಂಕಟ ಪಟ್ಟು ಅಡುಗೆ ಮನೆಯಲ್ಲಿ ಪಾತ್ರೆ ತೊಳೆಯುತ್ತಿದ್ದ ಅಮ್ಮನಲ್ಲಿ ವಿಷಯ ಹೇಳಿದಾಗ, ಬಲಕೈಯನ್ನು ಸೀರೆಯ ಸೆರಗಲ್ಲಿ ಒರಸಿ ನನ್ನ ತಲೆಯ ನೇವರಿಸಿ "ಮುಂದೆ ದೊಡ್ಡವನಾದಾಗ ನಿನಗೆಲ್ಲ ಅರ್ಥವಾಗುತ್ತೆ..." ಎಂದು ನಸು ನಕ್ಕು, ಪಾತ್ರೆ ತೊಳೆಯುವುದರಲ್ಲೇ ಮಗ್ನರಾದರು.
ಆ ರಾತ್ರೆ ಇಡೀ ನಿದ್ರೆ ಬರದೆ ಚಡಪಡಿಸುತ್ತಿದ್ದೆನು. ಆವತ್ತು ನನಗೆ ಪ್ರಪ್ರಥಮವಾಗಿ ಒಂಟಿಯೆಂದೆನಿಸಿತ್ತು. ಯಾರೂ ನನ್ನ ಬಳಿ ಮಾತನಾಡ ಬಯಸುತ್ತಿಲ್ಲವೆಂದೆನಿಸಿತ್ತು.
ಇಂದು ಪುನಹ ಹಾಗೇ ಒಂಟಿಯೆಂದೆನಿಸುತ್ತಿದೆ ಅಮ್ಮಣ್ಣೀ...

ಒಂಟಿಕಾಲ ಮೇಲಿನಲ್ಲಿ
ತುಂಬಿ ಬಂದ ನೋವಿನಲ್ಲಿ
ಒಂಟಿತನದ ಕಾವಲಲ್ಲಿ
ನಂದುವುದೇತಕೀ ದೀಪವು?

ಉಸಿರ ದನಿ ಕೇಳದಿರದು
ಉಗುಳು ನುಂಗಿ ಬದುಕುತಿಹುದು
ಬತ್ತಿ ಹೋದ ಗಂಟಲಲ್ಲಿ
ಒತ್ತಿ ಒತ್ತಿ ನೆನೆಯುತಿಹುದು

ಆಸರೆಯ ಅರಸುತಿಹೆನು
ಕಿರು ಬೆರಳೇ ಸಾಕು
ಹಕ್ಕಿಗೆ ಹಾರಾಡುವ ಆಸೆ
ಮರಿ ಚಿಗುರ ಕನಸೇ?

ಗುರುವಾರ, ಜುಲೈ 30, 2009

ನಿನ್ನ ಕಂದಮ್ಮಗಳು ನನ್ನನ್ನೇನಾದ್ರು ’ಮಾಮಾ’ ಅಂತ ಕರೆದರೆ...?




ನಿನ್ನೆ ಬಳುಕುವ ಹಾದಿಯ ಆ ತಿರುವಿನಲ್ಲಿ ಬರುತ್ತಿದ್ದಾಗ ಅನಿರೀಕ್ಷಿತವಾಗಿ ನೀನು ಸಿಕ್ಕಿದ್ದೆಯಲ್ಲ... ಸಿಕ್ಕಿದ ತಕ್ಷಣ ಒಂದು ಮುಗುಳು ನಗೆ... ವಾವ್... ಕೊಚ್ಚೆ ತಳದ ತಟಾಕದಲ್ಲಿ, ನೈದಿಲೆ ಅರಳಿದಾಗ ಚಂದ್ರಮ ಹೇಗೆ ಸಂಭ್ರಮಿಸುತ್ತನೋ ಹಾಗೇ ಏನೇನೋ ಕಾರಣಗಳಿಂದ ನಾನು ತೀರ ದುಗುಡದಲ್ಲಿದ್ದರೂ ಆ ನಗುವ ಕಂಡು ಪುಳಕಿತಗೊಂಡಿದ್ದೆ... ಕೆನ್ನೆಯ ಕೆಂಪು ರಂಗಿನಿಂದಲೇ ನೀನು ತುಂಬಾ ಸಂಭ್ರಮದಲ್ಲಿರುವುದು ತಿಳಿಯುತ್ತಿತ್ತು.
"ತುಂಬಾ ಖುಶಿಯಲ್ಲಿದ್ದೀಯಲ್ಲ... ಎನ್ ವಿಶೇಷ ?" ಅಂತ ಕೇಳಿದ್ದಕ್ಕೆ ಸಣ್ಣದಾಗಿ ಕಣ್ಣು ಮುಚ್ಚಿ, ತುಟಿ ಮತ್ತು ಹುಬ್ಬುಗಳನ್ನು ಕಂಪಿಸಿಕ್ಕೊಂಡು ನಿನ್ನ ಅಂತರಂಗದ ಸೌಂದರ್ಯವನ್ನೆಲ್ಲಾ ಮುದ್ದು ಮುಖದಲ್ಲಿ ಹೊರ ಸೂಸಿದ್ಯಲ್ಲಾ... ಅಬ್ಬಾ.. ಆಗ ನಾನು ನನ್ನನ್ನೇ ಮರೆತಿಲ್ಲ ಅಂತ ಅನ್ನುವುದಾದರೂ ಹೇಗೆ...?
"ಮದ್ವೆ ಆಗ್ತಿದ್ದೇನೆ... ವಿಕಾಸ್ ಅಂತ... ಹಾಸನದವರು... ಲಂಡನ್ ನಲ್ಲಿ ಇದಾರೆ..." ಆಮೇಲೆ ನಾನೂ ಮಾತನಾಡಲಿಲ್ಲ... ನೀನೂ... ಹಾಗೇ ಮೂರ್-ನಾಲ್ಕು ನಿಮಿಷ... !
"ನಿಂಗೆ ನಾನೇ ಹುಡುಗಿ ಹುಡುಕಿ ಕೊಡ್ತೇನೆ ಮಾರಾಯ... ಎಂಥ ಹುಡುಗಿ ಬೇಕು ಹೇಳು...?!" ಅಂತ ನಗ್ತಾ ಕೇಳಿದ್ಯಲ್ಲ...(ನಿಜವಾಗ್ಲೂ ನಕ್ಕು ಬಿಟ್ಯಾ?... ಯಕೋ ಗೊತ್ತಾಗ್ತಿಲ್ಲ...)
ಮನಸ್ಸಿನಲ್ಲಿ ಏನೇನೋ ಹೇಳ್ಬೇಕೂಂತ ಆಯ್ತು ಕಣೇ... ಆದ್ರೆ ಅದ್ಯಾವ್ದೂ ಮಾತುಗಳಾಗಿ ಬರಲಿಲ್ಲ...

ಮೀನಿನಂತ ಕಣ್ಣುಳ್ಳವಳು... ಬೆಣ್ಣೆಯಂತ ಕೆನ್ನೆಯವಳು... ಗುಲಾಬಿಯ ಎಸಳಿನಂತ ತುಟಿಯವಳು... ಹಲಸಿನ ಹಣ್ಣಿನ ಸಣ್ಣ ಸೋಳೆಯ ಹಾಗಿರುವ ಮೂಗಿನವಳು... ಉದುರುವ ಮಂಜಿನ ಹಾಗೆ ಮಾತನಾಡಬಲ್ಲವಳು... ಉರಿಯುವ ಬೆಂಕಿಯಂತೆ ನನ್ನ ಪ್ರೀತಿಸುವವಳು... ನದಿಯ ಹರಿಯುವ ನೀರಿನಂತೆ ಓಡಾಡಬಲ್ಲವಳು... ನನ್ನೆದೆಗೆ ಒರಗಿ ನನ್ನ ಕೆಡಕುಗಳನ್ನು ಹೆಕ್ಕಿ ತೆಗೆಯುವವಳು... ಒಲುಮೆಯಿಂದ ನನ್ನೆದೆಯ ಗುಬ್ಬಚ್ಚಿ ಗೂಡಿಗೆ ಅನನ್ಯ ಪ್ರೀತಿ ತುಂಬುವವಳು... ನನ್ನನ್ನು ಪ್ರೀತಿಸಿ ಕೊಲ್ಲುವವಳು... ನನ್ನ ಉಸಿರ ಮಿಡಿತಕ್ಕೆ ನಾಚಿ ನೀರಾಗುವವಳು... ನನ್ನೆದೆಯ ಕೊಳದಲ್ಲಿ ಮೀನಾಗುವವಳು... ಹೀಗಿರಿವವರು ಬೇಕು...ಇದಾರಾ? ಅಂತ ಕೇಳೋಣಾ ಅಂದ್ಕೊಂಡ್ರೂ ಮಾತುಗಳಾಗಲಿಲ್ಲ ಅಮ್ಮಣ್ಣೀ...

ಆಮೇಲೆ ಒಂದೆರಡು ಫರ್ಲಾಂಗು ನಡೆದು ರಂಗಣ್ಣನ ಹೋಟೆಲ್ ನಲ್ಲಿ ಕಾಫಿ ಹೀರಿ ಬೀಳ್ಕೊಡುವವರೆಗೂ ಮೌನ. ಕೇವಲ ಒಂದು ’ಬೈ’ ಯಲ್ಲಿ ನಮ್ಮ ಭೇಟಿಯ ಪರ್ಯವಸಾನ.ಅದೆಷ್ಟೋ ವರ್ಷ ನಾವಿಬ್ರೂ ಜೊತೆಯಾಗಿ ಶಾಲೆ ಕಾಲೇಜುಗಳಿಗೆ ಹೋದವರು... ಹೇಳದೆಯೇ ಅರ್ಥಮಾಡಿಕ್ಕೊಂಡವರು...
ಅಲ್ಲಾ... ಅರ್ಥ ಆಗದೇ ಹೋಯಿತೇ...?
ಇಲ್ಲ... ಅರ್ಥವಾಗಿತ್ತು... ಅರ್ಥ ಆಗದಿದ್ದರೆ, ಮತ್ಯಾಕೆ, ಭೇಟಿಯಾದಾಗ ಒಂದೆರಡು ನಿಮಿಷ ಬಿಟ್ರೆ, ಮತ್ತೆಲ್ಲ ನಾವಿಬ್ರೂ ಮೌನವಾಗಿದ್ದುದು...? ... ನಿಜವಾಗ್ಲೂ ಅರ್ಥವಾಗಿತ್ತು... ಅಲ್ವಾ ಅಮ್ಮಣ್ಣಿ...?

ಈವಾಗ ನೀನ್ ಸಿಗಲ್ಲಾಂತ ನನೇನು ದು:ಖ ಪಡ್ತಿಲ್ಲ... ಆದ್ರೆ ನಿನ್ನ ಬಗೆಗಿನ ಅನುಭೂತಿ ಇದೆಯಲ್ಲ... ಅದು ಸಾಕು... ಯಾವತ್ತಾದ್ರು ಒಂದು ಮೆಸ್ಸೇಜ್ ಬಂದ್ರೆ, ನನ್ನ ಮುಖ ಅರಳ್ಬಹುದು... ಯಾವಗಾದ್ರು ಒಂದು ಮಿಸ್ಡ್ ಕಾಲ್ ಬಂದ್ರೆ, ನಾನಿನ್ನೂ ನಿಂಗೆ ನೆನಪಿದ್ದೇನಲ್ಲಾ ಅಂತ ಖುಶಿಪಡ್ಬಹುದು...ಯಾವುದಾದ್ರು ಮದ್ವೆ-ಮುಂಜಿಯಲ್ಲಿ ನನ್ನ ಕಣ್ಣುಗಳು ನಿನ್ನ ಹುಡುಕಬಹುದು... ಆಗ ನಿನ್ನ ಕಂಕುಳಲ್ಲೊಂದು ಸಣ್ಣ ಪುಟ್ಟನೋ, ಪುಟ್ಟಿಯೋ ಕಂಡಾಗ ನಾನು ಹಿರಿ ಹಿರಿ ಹಿಗ್ಗಬಹುದು... ನಿನ್ನ ಕಂದಮ್ಮಗಳು ನನ್ನನ್ನೇನಾದ್ರು ’ಮಾಮಾ’ ಅಂತ ಕರೆದರೆ, ಪ್ರೀತಿಯಿಂದ ಅವುಗಳ ತಲೆ ನೇವರಿಸಿ ಚಾಕೋಲೇಟ್ ಕೊಡಿಸಬಹುದು...

ನೀನು ಮದುವೆ ಆದ್ರೂ ನಿನ್ ಮೇಲಿನ ಪ್ರೀತಿ ಕಮ್ಮಿ ಆಗಲ್ಲ... ನೀನು ಸದಾ ಹಾಗೇ, ಬೆಚ್ಚನೆ ನನ್ನ ಕನಸಲ್ಲಿ ಬರಬಹುದು... ನಂಗೇನೂ ಬೇಜಾರಾಗಲ್ಲ ಅಮ್ಮಣ್ಣೀ... ನಿನ್ ಬಗ್ಗೆ ಅನನ್ಯ ಪ್ರೀತಿ ನನ್ನೆದೆಯ ತುಂಬಾ ಹರಡಿ ಬಿಡ್ತೇನೆ... ಅಲ್ಲಿ, ನೀನಿಲ್ಲಾಂತ ದು:ಖ ಇರಲ್ಲ... ಆದ್ರೆ, ನೀನಿರ್ತಿದ್ರೆ ಏನೇನ್ ಮಾಡ್ತಿದ್ದೆ ಅನ್ನೋ ಕಲ್ಪನೆಗಳು ಹಚ್ಚ ಹಸಿರಾಗಿರುತ್ತೆ... ನಿನ್ನ ಬಗ್ಗೆ ಅಭಿಮಾನ ಇರುತ್ತೆ.. ನಿನ್ನ ಬಗ್ಗೆ ಕಾಳಜಿ ಇರುತ್ತೆ...

ಸೋಮವಾರ, ಜುಲೈ 27, 2009

ಬಾಗಿಲಿಗೆ ಮಾತ್ರ ನೀ ಯಾಕೆ ಬೀಗ ಜಡಿದೆ...?


[ಅರ್ಪಣೆ : ಬರೆಯಲಾರದ ನನ್ನ ಬರೆಸಿಯೇ ತೀರುವೆನೆಂಬ ಹುಂಬಿಗೆ ಬಿದ್ದು, ಛಾಯಾಚಿತ್ರ ಕಳಿಸಿ ಪ್ರಚೊದಿಸಿ, ಯಶವ ಗಳಿಸಿದ ಆತ್ಮೀಯ ಸ್ನೇಹಿತ ವಿಷ್ಣುವಿಗೆ]



ಮನದಲ್ಲಿ ಜೋಕಾಲಿ
ಮುಗಿಲೆಲ್ಲ ನಸು ನೀಲಿ
ಹಸಿರ ಹಾದಿಯ ಅಂಚಿನಲಿ
ಸದಾ ನಿನ್ನ ಛಾಯೆಯಿರಲಿ

ಅಂಗೈಯೊಳಗೆ ಕಿರುಬೆರಳ
ಕನಸ ಕಂಡಿರುವ ನನ್ನ ಮನ
ನಿನ್ನ ಕಣ್ಣಂಚಿಗಿನ ಹನಿಯ
ಒರತೆ ಕಾಣದಿದ್ದೀತೇ?

ದಾಟಲಾರದ ಪ್ರವಾಹವೇನಿದೆ
ಬಂಧನವ ಹೊಕ್ಕುಳಲಿ ತೇಲಿ ಬಿಟ್ಟು
ಮಳೆಯ ಕರಿ ಮುಗಿಲು ಕವಿದಂತೆ
ನಿನ್ನಿರುಳ ನೀನೇ ಮುಸುಕಿದಂತೆ

ಹೂ ಬಿಡದ ಹಸುರಿಲ್ಲ
ಹರಿಯಲಾಗದ ನೀರಿದೆಯೇ?
ತಿಳಿಯಾಗದ ಕೊಳವಿಲ್ಲ
ತಿಳಿಸಲಾಗದ ಮಾತು ಮಾತ್ರ ಇದೆಯೇ?

ಮನಸೆಲ್ಲ ಮುದುಡಿ
ಮನೆಯ ಗೋಡೆಗಳೆಲ್ಲ ಒಡೆದು
ಬಾಗಿಲಿಗೆ ಮಾತ್ರ ನೀ
ಯಾಕೆ ಬೀಗ ಜಡಿದೆ...?

ಸೋಮವಾರ, ಜೂನ್ 22, 2009

ನನ್ನೆದೆಯ ಕದ ತೆರೆದು ಸ್ವಲ್ಪ ಇಣುಕಿ ನೋಡು


ನಾನು ಎಷ್ಟೊಂದು ಕನಸುಗಳನ್ನು ಕಟ್ಟಿಕ್ಕೊಂಡಿದ್ದೆ ಗೊತ್ತಾ...?
ಬೀದಿಯ ಹಾದಿಯಲಿ ನಡೀವಾಗ, ಊಟ ಮಾಡುವಾಗ, ಸ್ನಾನ ಮಾಡುವಾಗ, ಅಷ್ಟೇಕೆ ದೈನಂದಿನ ಎಲ್ಲ ಚಟುವಟಿಕೆಗಳಲ್ಲಿ ನನ್ನೊಳಗೆ ನೀನಿರ್ತಿದ್ದೆ...
ಬೆಳಿಗ್ಗೆ ಎದ್ದಾಗ ಅಂದ್ಕೊಳ್ತಿದ್ದೆ...ನೀನಿರ್ತಿದ್ರೆ ನನ್ನೆದುರಿಗೆ, ಒಂದು ಕಾಫಿ ಕಪ್ ಹಿಡಿದು... ಓಹ್...
ನಿನ್ನೆ ರಾತ್ರೆ ನಾನು ಮತ್ತು ಅಮ್ಮ ಹೋಟೆಲ್ ಗೆ ಹೋಗಿದ್ದಾಗ ನೆನಪಾಗಿತ್ತು.... ನೀನಿದ್ದಿದ್ರೆ ನನ್ ಜೊತೆ, ಲಲ್ಲೆಗೆರೆದು ಕಾಡಿ
ಇನ್ನೊಂದು ಐಸ್-ಕ್ರೀಮ್ ತಿನ್ಬೇಕು ಅಂತಿದ್ದೆ...
ನಾನು ಶೇವಿಂಗ್ ಮಾಡುವ ಸಮಯದಲ್ಲೇನಾದ್ರು ನೀನು ಪಕ್ಕದಲ್ಲಿದ್ರೆ, ಶೇವಿಂಗ್ ಕ್ರೀಂನಿಂದ ಆವರಿಸಿಕ್ಕೊಂಡ ನನ್ನ ಗಲ್ಲವನ್ನು ನಿನ್ನ ಕೆನ್ನೆಗೆ ತಾಗಿಸಿ ನಿನ್ನಿಂದ ಒಂದೆರಡು ಒದೆ ಇಸ್ಕೊಳ್ ಬೇಕು...!
ಬೆಳಿಗ್ಗೆ ಸ್ನಾನ ಮಾಡಿ ಬಂದು ನನ್ನ ತಲೆಯನ್ನು ಜೋರಾಗಿ ಆಚೆ-ಈಚೆ ತಿರುಗಿಸಿ ಕೂದಲಿನ ನೀರನ್ನೆಲ್ಲಾ ನಿನ್ ಮೇಲೆ ಎರಚಿಕ್ಕೊಂಡು ನಿನ್ನಿಂದ ಬೈಸ್ಕೋಬೇಕು... ನೀನು ಬೈದಿದ್ದಕ್ಕೆ ಮುಸ್ಸಂಜೆ ತನಕ ನಿಮ್ಮೇಲೆ ಹುಸಿ ಮುನಿಸ ತೋರಬೇಕು... ನನಗಿಷ್ಟವಾದ "ಮುನಿಸು ತರವೇ.. ಮುಗುದೇ..." ಹಾಡು ಹಾಡಿ ನೀ ನನ್ನ ಮುದಗೊಳಿಸಿದಾಗ, ನನ್ನೆದೆಗೆ ನಿನ್ನ ಮುಖವಾನಿಸಿ ಅಪ್ಪಿ ನಿನ್ನ ಹಣೆಗೊಂದು ಚುಂಬನವೀಯಬೇಕು...
ನೀನೇನಾದ್ರು ಕೆಲಸ ಮಾಡುವಾಗ ನಿನ್ನ ಹಿಂದಿನಿಂದ ಬಂದು ನಿನ್ನನ್ನೆಳೆದು ನವಿರಾಗಿ ನಿನ್ನ ಕತ್ತಿಗೆ ಮುತ್ತಿಕ್ಕಬೇಕು...
ನೀ ಅಡುಗೆ ಮಾಡುವಾಗ ನಿನ್ನ ಜಡೆ ಎಳೆಯಬೇಕು...
ನಿನ್ನ ಮುದ್ದು ಮೊಗವನ್ನು ನನ್ನೆದೆಯಲ್ಲಿ ಹುದುಗಿಸಿ, ನಿನ್ನ ಕೆನ್ನೆ ನೇವರಿಸಿ ನನ್ನ ಪ್ರೀತಿಯನ್ನು ಹಂಚಬೇಕು....
ನಿನ್ನನ್ನು ಆವಾಗಾವಾಗ ರೇಗಿಸ್ಕೊಂಡು... ನೀನು ಮುನಿಸು ತೋರಿಸಿದಾಗ ನಿನ್ನನ್ನು ಲಲ್ಲೆ ಗೆರೆಯಬೇಕು... ನಿನ್ನ ಸೆರಗ ಹಿಡಿದು
ರಂಪ ಮಾಡಬೇಕು...
ಸಂಜೆ ನಾ ಆಫೀಸಿಂದ ಬರುವಾಗ ತಡವಾದ್ರೆ, ನೀ ಮುನಿಸದಂತೆ ಒಂದು ಮೊಳ ಮಲ್ಲಿಗೆ ಹೂವನ್ನು ತಂದು ನಿನ್ನ ಮುಡಿಗೇರಿಸಿ, ಸಿಹಿ ಮುತ್ತೊಂದನ್ನು ಇಸ್ಕೊಳ್ಬೇಕು....
ನಿನ್ನ ಮಡಿಲಲ್ಲಿ ನಾ ಮಲಗಿದಾಗ, ನೀನು ಹಾಡುವ ಲಾಲಿ ಹಾಡಿನ ಮಧುರ ಲಯಕ್ಕೆ ನಾ ಮಾರು ಹೋಗಿ ಇಂದ್ರಿಯಗಳ ಎಲ್ಲೆ ಮೀರಿ
ನಿದ್ದೆ ಮಾಡ್ಬೇಕು...
ನೀ ಮಾಡುವ ಕಾಫಿ, ಟೀಗೆ ಸಕ್ಕರೆ ಕಮ್ಮಿಯೆಂದು ಕಾಫಿ ಜೊತೆ ನಿನ್ನ ತುಟಿಯಿಂದ ತಸು ಸಕ್ಕರೆ ಹೀರಬೇಕು...!

ದೂರದಿಂದ ಇಬ್ಬನಿಯ
ಇಳೆಯಂತೆ ಹೋಗದಿರು
ನನ್ನೆದೆಯ ಕದ ತೆರೆದು
ಸ್ವಲ್ಪ ಇಣುಕಿ ನೋಡು

ಸೋಮವಾರ, ಮೇ 25, 2009

ಬದುಕು


ಅಕ್ಕ ತುರಾತುರಿಯಲ್ಲಿ ನಿನ್ನೆ ಬೆಳ್ಳಂ-ಬೆಳಗ್ಗೆದ್ದು ಊರಿಗೆ ಹೋಗಿದ್ದಾಳೆ. ಸುಮಾರು ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಅಕ್ಕನ ಮಗಳು ಭೂಮಿಕಾಳ ಶಾಲಾ ಫೀಸ್ ಕಟ್ಟುವ ಪ್ರಹಸನ ಅಚಾನಕ್ ಆಗಿ ನನ್ನ ಹೆಗಲ ಮೇಲೆ ಬಿದ್ದಿತ್ತು. ಶಾಲೆಗೆ ಹೋದಾಗ ೫ ಅಡಿ ಉದ್ದದ ಎಕ್ವೇರಿಯಂ ಕಂಡು ವಿಸ್ಮಿತನಾಗಿ, ಅದರ ಪಕ್ಕದಲ್ಲೇ ಕುಳಿತೆ. ಬಣ್ಣ ಬಣ್ಣದ ಮೀನುಗಳನ್ನು ನೋಡಲು ಚಂದವೋ ಚಂದ.

ಅಹಾ... ಕಪ್ಪು ಬಣ್ಣದ ಆ ಸುಂದರಿಯಾದ ಬಳಕುವ ಮೈಯ, ಮಿಟುಕುವ ಕಣ್ಣುಗಳ ಮೀನನ್ನು ನೋಡುತ್ತಿದ್ದಂತೆ ನನ್ನ ಮೈಯಲ್ಲಿ ಮಿಂಚೊಂದು ಝುಂ ಎಂದಿತು! ಅವಳು ಯರನ್ನೋ ಹುಡುಕುತ್ತಿದ್ದಂತೆ ತೋರುತ್ತಿತ್ತು... ನನ್ನನ್ನೇ...? ಇಲ್ಲಪ್ಪಾ... ಇರಲಿಕ್ಕಿಲ್ಲ... ನನ್ನದೇನಿದ್ದರೂ ವನ್ ವೇ...! ಅವಳ ರೆಕ್ಕೆಗಳ ಬಡಿತದ ಅಲೆಗಳಿಗೆ ನಾ ಎದೆಯೊಡ್ಡಬೇಕೆನಿಸುತ್ತಿತ್ತು. ಅಬ್ಬಾ..., ಶಾಲೆಯಲ್ಲಿರುವ ಅರಿವಾಗಿ ಭಾವ ತೀವ್ರತೆಗೆ ತಡೆಯೊಡ್ಡಿತ್ತು...! 

ಅದೋ ಅಲ್ಲಿ..., ಕಾರಿನ ಚಕ್ರದ ಕೆಳಗೆ ಬಿದ್ದು ಚಪ್ಪಟೆಯಾದ ಪೆಪ್ಸಿ ಬಾಟಲಿಯಂತಿರುವ ಮೈಯ ತುಂಬಾ ಕಪ್ಪು-ಬಿಳಿ ಪಟ್ಟೆಯ ಮೀನೊಂದು ಸೂಪರಿಟೆಂಡೆಂಟ್ ನಂತೆ ಕೈ ಕಟ್ಟಿ ಮೆಲ್ಲ-ಮೆಲ್ಲನೆ ಠೀವಿಯಿಂದ ಬಂದು ಹೋಯಿತು... 

Finding nemo ಚಲನಚಿತ್ರದ nemo ಥರವಿರುವ ಒಂದು ಪುಟ್ಟ ಮೀನು  ಅಲ್ಲಲ್ಲಿ ಬಗ್ಗಿ ನೋಡುತ್ತಾ, ಏನೋ ಹೊಸತನವನ್ನು ಹುಡುಕುತ್ತಿರುವಂತೆ ಓಡಾಡುತ್ತಿತ್ತು.  

ನೋಡ- ನೋಡುತ್ತಿದ್ದಂತೆ ತೊಂಡೆಕ್ಕಾಯಿಯಷ್ಟಕ್ಕಿರುವ ಕೇಸರಿ ಬಣ್ಣದ ಮೀನೊಂದು ನನ್ನೆಡೆಗೆ ಬಂದು, ಗುಲು-ಗುಂಜಿಯಷ್ಟಕ್ಕಿರುವ ಅದರ ಬಾಯಿಯಿಂದ ಪುಂಖಾನು-ಪುಂಖವಾಗಿ ಗೊಣಗತೊಡಗಿತು. ಗಾಜಿನ ತಡೆಗೋಡೆಯಿದ್ದಿದ್ದರಿಂದ ನನಗೆ ಅಸ್ಪಷ್ಟವಾಗಿ ಕೇಳಿಸುತ್ತಿತ್ತಷ್ಟೆ. ಬಹುಶ: ಅದರ ಸ್ವಾತಂತ್ರ ಕಳೆದುಕ್ಕೊಂಡದ್ದಕ್ಕೆ ಅದು ಬಯ್ಯುತ್ತಿದ್ದಿರಬೇಕು. "ಲೋ... ನನ್ನ ಸ್ವಾತಂತ್ರಹರಣವನ್ನು ಆಸ್ವಾದಿಸುವ ನಿನ್ನ ಜನುಮಕ್ಕೆ ನನ್ನ ಧಿಕ್ಕಾರವಿರಲಿ...  ಇನ್ನೊಂದು ಜನ್ಮಾಂತ ನನಗೇನಾದ್ರು ಇದ್ರೆ, ನಿನ್ನನ್ನೂ ಇದೇ ರೀತಿ ಬಂಧನದಲ್ಲಿರಿಸುತ್ತೇನೆ..." ಮುಂದೇನೇನೋ ಭಾಷಾ ನಿಘಂಟುವಿನ ಹೊರಗಿನಿಂದ ಶಬ್ದಗಳ ಬಳಕೆ ಮಾಡಿ ಬೈದದ್ರಿಂದ ಇಲ್ಲಿ ಹೇಳಲಾಗ್ತಿಲ್ಲ... ಹೆನ್ರಿ ಶಾರ್ರಿಯರ್ ನ ಪಾಪಿಲೋನ್ ನೆನಪಿಗೆ ಬಂದಿತ್ತು.

ವಿಧಿಯ ಹೊರೆಗಳನು ತಪ್ಪಿಸಿಕೊಳುವನೆಲ್ಲಿಹನು?
ಬೆದರಿಕೆಯನದರಿಂದ ನೀಗಿಪನು ಸಖನು |
ಎದೆಯನುಕ್ಕಾಗಿಸಾನಿಸು ಬೆನ್ನ, ತುಟಿಯ ಬಿಗಿ
ವಿಧಿಯಗಸ, ನೀಂ ಕತ್ತೆ - ಮಂಕುತಿಮ್ಮ ||

ನಾನು ನನ್ನಿಂದಾದ ಸಮಾಧಾನ ಹೇಳಿದೆ ಆ ಮೀನಿಗೆ...
ನಿನ್ನ ವಿಧಿಯೊಳಗೆ ನೀ ಕತ್ತೆ, ನನ್ನ ವಿಧಿಯೊಳಗೆ ನಾನೂ...


ಮಂಗಳವಾರ, ಏಪ್ರಿಲ್ 21, 2009

ಯಾಕೆ ಗೆಳತಿ... ನೀ ಹೀಗೆ ಜೀವ ಹಿಂಡುತಿ...?


ಪ್ರಿಯೇ,

ನಿನ್ನ ಮೊದಲ ಸಲ ನೋಡಿದೊಡೆ ನನ್ನ ಮೈ ಪುಳಕಗೊಳ್ಳಲಿಲ್ಲ...ನಿಜ, ಒಪ್ಪಿಕ್ಕೊಳ್ಳುವೆ... 
ನಿನ್ನ ಬಿಳೀ ಬಣ್ಣದ ಚೂಡಿಯಲ್ಲಿನ ಕಪ್ಪು ಚುಕ್ಕೆಗಳು ನಭೋ ಮಂಡಲದ ನಕ್ಷತ್ರಗಳಂತೆ ಕಂಡು ಬರಲಿಲ್ಲ... 
ನಿನ್ನ ಕಿವಿಯಲ್ಲಿ ನೇತಾಡುವ ಬಿಳಿಯ ಮುತ್ತಿನ ಮಣಿಗಳು ನನಗೆ ಜೋಗ್ ಜಲಪಾತದಲ್ಲಿ ಧುಮ್ಮಿಕ್ಕಿ ಬರುವ ಮಂಜಿನ ಕಣಗಳ ಹಾಗೆಯೂ ಕಾಣಲಿಲ್ಲ...  
ನಿನ್ನ ಕಣ್ಣಿನ ಮೇಲೆನ ತೀವಿದ ಹುಬ್ಬುಗಳೂ ನನಗೆ ಕಾಮನ ಬಿಲ್ಲಿನ ಹಾಗೆ ಕಾಣಲಿಲ್ಲ... 
ನಾನೇನು ಮಾಡಲಿ... ನನಗೆ ಹಾಗೆಲ್ಲ ಕಾಣಲಿಲ್ಲ ಎಂಬುದು ನನ್ನಾಣೆ ಸತ್ಯ... 

ನಿನ್ನ ಗುಂಗುರು ಕೂದಲನ್ನು ನೋಡಿ, ಕೂದಲೊಳಗೆ ಹೇನಾಗಬೇಕೆಂದೂ ಅನಿಸಲಿಲ್ಲ... 
ನಿನ್ನ ಮೃದುವಾದ ಕೈಗಳ ನೋಡಿ ಅಮ್ಮ ಕಡೆಯುವ ಮಜ್ಜಿಗೆಯೊಳಗಿನ ಬೆಣ್ಣೆಯ ನೆನಪೂ ಆಗಲಿಲ್ಲ... 
ನಂಗೆ ಗೊತ್ತು, ಹೀಗೆಲ್ಲ ಅನಿಸಿಲ್ಲ ಅಂದ್ರೆ ನಿಂಗೆ ನನ್ನ ಇಷ್ಟ ಅಗೋಲ್ಲಾ ಅಂತ... ನಿನ್ನಲ್ಲಿ ನಾ ಹೇಗೆ ಸುಳ್ಳು ಹೇಳಲಿ...? ನಾನೇನು ಮಾಡಲಿ... ನನಗೆ ಹಾಗೆಲ್ಲ ಅನಿಸಲಿಲ್ಲ ಎಂಬುದು ನಿಜವಾಗಿದ್ದಾಗ...

ನಿನ್ನ ಮೈ ಮಾಟ ನನ್ನ ಆಕಷಿಸಲಿಲ್ಲ... 
ನಿನ್ನ ತುಟಿಗಳ ನೋಡಿ ನಂಗೆ ಚೆರ್ರಿ ಹಣ್ಣಿನ ನೆನಪಾಗಲಿಲ್ಲ... ಕನಿಷ್ಟ ಪಕ್ಷ ಟೊಮೇಟೊ ಹಣ್ಣಿನ ನೆನಪಾದ್ರೂ ಆಗ್ಬೇಕಿತ್ತು... 
ನಿಮ್ಮ ಸೊಂಟ ನೋಡಿದಾಗ ಸಿಂಹಿಣಿಯ ಕಟಿ ನೆನಪಾಗಬೇಕಿತ್ತು... ಅದೂ ಆಗಲಿಲ್ಲ... ಛೇ... ಏನು ಮಾಡಲಿ...?
ನಿನ್ನ ಕೊರಳ ನೋಡಿ ನವಿರಾಗಿ ಮುತ್ತಿಕ್ಕಬೇಕೆಂದು ಅನಿಸಬೇಕಿತ್ತು... ಅದೂ ಅನಿಸಲಿಲ್ಲ...
ಮೊದಲ ನೋಟದಲ್ಲೇ ನೀನು ನನ್ನವಳಗಬೇಕೆಂದು ನಾನು ದಂಬಾಲು ಬೀಳಬೇಕಿತ್ತು... ನಾ ಬೀಳಲಿಲ್ಲ... ನಿಜ...

ಆದ್ರೆ,

ನೀ ನಿನ್ನಲ್ಲಿ ಮಾತನಾಡಿದ ಕ್ಷಣದಿಂದ ನಾ ಬಂದಿ... 
ನನ್ನಲ್ಲೆ ನಿನ್ನೋಳಗೆ ನಾ ಬಂದಿ...
ನಿನ್ನ ನಗುವಿನ ಗೆಲುವಿನಲೇ ನಾ ಬಂದಿ...


ನೆನಪಿದೆಯಾ, ಆ ಮೊದಲ ದಿನ ನಾವು ಸುಮ್ ಸುಮ್ನೇ ಜಗಳ ಆಡಿದ್ದು... ಆ ಮೇಲೆ ಒಂದಾದದ್ದು....?  ಆ ಜಗಳಕ್ಕೆ ನಾ ಬಂದಿ...
ನೇರವಾಗಿ ನೋಡದೆ, ಕುಡಿಗಣ್ಣಿನ ನಸು ನಾಚಿದ ನೋಟಕ್ಕೆ, ನಾ ಅನುಭವಿಸಿದ ಸಂಜೆಗೆಂಪಿನ ಮಧುರ ಭಾವಕ್ಕೆ ನಾ ಬಂದಿ...
ಊರಿನಿಂದ ಬಾಳೆ ಎಲೆಯಲ್ಲಿ ಮಾಡಿದ ಪತ್ರೊಡೆ ತಂದು ನನ್ನ ಕರೆದು ಕೊಟ್ಟ ಆ ನಿನ್ನ ಹೃದಯದ ಆರ್ದ್ರತೆಗೆ ನಾ ಬಂದಿ...

ನಿನ್ನ ಜೊತೆ ಕಳೆದ ಆ ಎರಡು ತಾಸುಗಳೇ ನನಗೆ ಹಾಲು ಚೆಲ್ಲುವ ಬೆಳದಿಂಗಳಾಗಿರುವಾಗ...ಆ ಕ್ಷಣಗಳಿಗೇ ನಾ ಬಂದಿ...
ನಾ ಕಾಪಿ ಹೀರಿದ ಶಬ್ದಕ್ಕೆ ನೀ ನಕ್ಕಾಗ ಮನಸೆಲ್ಲ ಮುತ್ತುಗಳ ಮಾಲೆಯ ನೆನಪಾದಾಗ... ಅವುಗಳಿಗೆ ನಾ ಬಂದಿ...
ಮನಸು ಬೇಸರವಾಗಿದೆಯೆಂದು ನನಗೆ ಫೋನಾಯಿಸುವಾಗ ನಿನ್ನ ದನಿಗೇ ನಾ ಬಂದಿ...

ಆವಾಗಾವಾಗ ಮುಚ್ಚಿ ತೆರೆಯುವ ನಿನ್ನ ಕಣ್ ರೆಪ್ಪೆಗಳ ನಡುವಿನ ಮಿಂಚಿನ ಮಿಡಿತಕ್ಕೆ ನಾ ಬಂದಿ... 
ಮಣಿಯೊಂದು ನಿನ್ನ ಗೆಜ್ಜೆಯಿಂದ ದೂರ ಸರಿದಾಗ, ನಿನಗರಿವಿಲ್ಲದಂತೇ ನಾ ಎತ್ತಿಟ್ಟುಕ್ಕೊಂಡು ರಾತ್ರೆ ನೋಡಿ ಪುಳಕಗೊಡಾಗ, ಆ ಮಣಿಗೇ ನಾ ಬಂದಿ..
ನಿನ್ನಪ್ಪ ಬೈದದ್ದಕ್ಕೆ ನನ್ಹತ್ರ ಬಂದು ತಲೆಯೊರಗಿ ಒಂದು ಹಿಡಿ ಕಣ್ಣೀರಾದಾಗ, ಆ ಕಣ್ಣೀರಿಗೇ ನಾ ಬಂದಿ...

ನಿನ್ನುಸಿರು ನನ್ನ ಕೆನ್ನೆಯ ಬಳಿ ಹಾಯ್ದಾಗ, ಕಣ್ ಮುಚ್ಚಿ ನಾ ಅನುಭವಿಸಿದ ಆ ಕ್ಷಣಗಳಿಗೆ ನಾ ಬಂದಿ... 
ಗಾಳಿಯಲಿ ಹಾರಿ ಬಂದು ನನ್ನ ಮುಖದ ಮೇಲೆ ಮೃದುವಾಗಿ ಸರಿದ ನಿನ್ನ ದುಪ್ಪಟ್ಟಾದ ನೂಲಿನೆಳೆಗಳಿಗೆ ನಾ ಬಂದಿ...
ಸಂಜೆಯಲಿ ಮುಗಿಲ ಮದ್ಯದಲಿ ತೊರೆಯೊಡೆದು ಬಂದ ಸುಧೆಗೆ ಒದ್ದೆಯಾದಾಗ ಆ ಮಳೆರಾಯನ ಕೃಪೆಗೆ ನಾ ಬಂದಿ..

ನಿನ್ನ ಕೈಹಿಡಿದು ಮಳೆಗಾಲದ ತೊರೆಯ ದಾಟುವಾಗ ಆ ಝರಿಯ ಒರೆತಕ್ಕೇ ನಾ ಬಂದಿ... 
ಬಯಲಂಚಿನಲಿ ನಿನ್ನ ಕಾಲುಳುಕಿದಾಗ ನಿನ್ನಾಸರೆಯಾಗುವ ನನ್ನ ಅವಕಾಶಕ್ಕೆ ನಾ ಬಂದಿ...
ಕಣ್ಣಿನಲಿ ಕಸ ಬಿದ್ದು ನನ್ನ ಪರದಾಟ ಕಂಡು ನೀ ಬಂದು ತೆಗೆದಾಗ ನಿನ್ನ ಕರವಸ್ತ್ರಕ್ಕೆ  ನಾ ಬಂದಿ... 

ನೀ ನುಡಿದ ಮಾತುಗಳೇ ನನಗೆ ಹಾಡುಗಳಾದಾಗ...
ನೀ ಹೇಳಿದ ಹಾಡುಗಳೇ ನನಗೆ ಸ್ಪೂರ್ತಿಯಾದಾಗ...
ಮೌನದಲಿ ಮತಾದಾಗ, ನಿನಗೇ ನಾ ಬಂದಿ....

ಇತಿ,
-ನಿನ್ನವನು